ಇನ್ನು ಮುಂದೆ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಇನ್ನು ಮುಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಪ್ರಮಾಣ ಮಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಣ್ಣ ಬ್ರಿಗೇಡ್‌ ಚಟುವಟಿಕೆ ನಿಲ್ಲಿಸಬೇಕು ಎಂದು ಈ ಹಿಂದೆ ಗೃಹ ಸಚಿವ ಅಮಿತ್‌ ಶಾ ಅವರು ನನ್ನನ್ನು ದೆಹಲಿಗೆ ಕರೆಯಿಸಿ ಸೂಚನೆ ನೀಡಿದ್ದಾರೆ. ಹೀಗಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಆ ಕಡೆ ತಲೆಹಾಕುವುದಿಲ್ಲ ಎಂದರು.

ಪಕ್ಷ ಏನು ಜವಾಬ್ದಾರಿ ನೀಡುತ್ತದೆಯೋ ಅದನ್ನು ನಿರ್ವಹಿಸಲು ಸಿದ್ಧನಿದ್ದೇನೆ. ಉಪ ಮುಖ್ಯಮಂತ್ರಿಯಾಗು ಎಂದರೆ ಆಗುತ್ತೇನೆ. ಇಲ್ಲವೇ, ಸಚಿವನಾಗು ಎಂದರೆ ಆಗುತ್ತೇನೆ. ಅದೂ ಇಲ್ಲವೇ ಪಕ್ಷದ ಜವಾಬ್ದಾರಿ ನಿರ್ವಹಿಸು ಎಂದರೆ ಅದನ್ನು ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು.

ಎರಡು‌, ಮೂರು ದಿನಗಳಲ್ಲಿ ಸಚಿವ ಸಂಪುಟ ರಚನೆಯಾಗಲಿದೆ. ಗೊಂದಲ ಶೀಘ್ರ ಬಗೆಹರಿಯಲಿದೆ ಎಂದರು. 

ಕವಡೆ ಕಾಸಿನ ಕಿಮ್ಮತ್ತು ಇಲ್ಲ: ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅಥವಾ ಸಚಿವರನ್ನಾಗಿ ಮಾಡಿ ಎಂದು ತಮ್ಮ ಶಿಷ್ಯರ ಬಗ್ಗೆ ಪ್ರೀತಿಯಿಂದ ಮಠಾಧಿಪತಿಗಳು ಹೇಳುವುದು ತಪ್ಪಲ್ಲ. ಆದರೆ, ಬಿಜೆಪಿಗೆ ಬೆದರಿಕೆ ಹಾಕುವುದು ತಪ್ಪು. ಯಡಿಯೂರಪ್ಪ ಅವರನ್ನು ಇಳಿಸಿದರೆ ಬಿಜೆಪಿ ಸರ್ವನಾಶವಾಗುತ್ತದೆ ಎಂಬುದು ಸರಿಯಲ್ಲ. ಮಠಾಧೀಶರು ಶಾಪ ಹಾಕೋ ರೀತಿ ಮಾತನಾಡುವುದು ಸರಿಯಲ್ಲ. ಸ್ವಾಮೀಜಿಗಳ ಬೆದರಿಕೆ ಬಿಜೆಪಿಯಲ್ಲಿ ನಡೆಯೋದಿಲ್ಲ. ಯಾವುದೇ ಸ್ವಾಮೀಜಿಗಳ ಬೆದರಿಕೆಗೆ ಬಿಜೆಪಿಯಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಹೇಳಿದರು.

ಪೂರ್ಣ ಬಹುಮತದ ಸರ್ಕಾರ ರಚನೆ ಗುರಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿಯಾಗಿದೆ ಎಂದರು.

ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿ ಆದರೂ ಪೂರ್ಣ ಬಹುಮತದ ಸರ್ಕಾರ ರಚನೆ ಸಾಧ್ಯವಾಗಿರಲಿಲ್ಲ. ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಒಂದಷ್ಟು ಗೊಂದಲಗಳು ಇದ್ದವು, ಇದೀಗ ಎಲ್ಲ ಗೊಂದಲಗಳು ಪೂರ್ಣವಾಗಿ ಬಗೆಹರಿದಿವೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಂದಿನ ಒಂದು ವರ್ಷ 10 ತಿಂಗಳು ರಾಜ್ಯದ ಜನತೆ ಮೆಚ್ಚುವ ರೀತಿ ಉತ್ತಮ ಆಡಳಿತ ನೀಡಲಾಗುವುದು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡಿ, ಸ್ವಂತ ಶಕ್ತಿಯಿಂದ ಸರ್ಕಾರ ರಚನೆ ಮಾಡಲಾಗುವುದು ಎಂದು ಹೇಳಿದರು.

ಯತ್ನಾಳ ಹಾಳಾಗುತ್ತಾರೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಬಹಿರಂಗವಾಗಿ ಹೇಳಿಕೆ ಕೊಟ್ಟು ಅವರೇ ಹಾಳಾಗುತ್ತಾರೆ. ಬಹಿರಂಗ ಹೇಳಿಕೆ ಕೊಟ್ಟು ದೊಡ್ಡ ಮನಷ್ಯವಾಗಲು ಸಾಧ್ಯವಿಲ್ಲ. ಅವರು ಬಹಿರಂಗ ಹೇಳಿಕೆ ನೀಡಿದರೆ ಯಾವುದೇ ಗೊಂದಲ ಆಗುವುದಿಲ್ಲ. ಅವರು ನನ್ನ ಆತ್ಮೀಯ ಸ್ನೇಹಿತರಿದ್ದಾರೆ. ಈ ಬಗ್ಗೆ ಅವರೊಂದಿಗೆ ನಾನು ಮಾತನಾಡುತ್ತೇನೆ ಎಂದು ಹೇಳಿದರು.

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಕರ್ನಾಟಕ ರಾಜ್ಯ ಬೀಜ, ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜಗೌಡ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.