ADVERTISEMENT

ಮಳೆ ಅನಾಹುತ ಅಧಿವೇಶನದಲ್ಲಿ ಪ್ರಸ್ತಾಪ: ಸಿದ್ದರಾಮಯ್ಯ

ಕೆರೆ ಹೂಳು ಎತ್ತಿಲ್ಲ, ಒತ್ತುವರಿ ತೆರವು ಮಾಡಿಲ್ಲ– ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 19:59 IST
Last Updated 8 ಸೆಪ್ಟೆಂಬರ್ 2022, 19:59 IST
ಜಲಾವೃತ್ತವಾಗಿರುವ ಇಪ್ಸಿಲಾನ್ ಬಡಾವಣೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಸಿದ್ದರಾಮಯ್ಯ ಗುರುವಾರ ವೀಕ್ಷಿಸಿದರು  –ಪ್ರಜಾವಾಣಿ ಚಿತ್ರ
ಜಲಾವೃತ್ತವಾಗಿರುವ ಇಪ್ಸಿಲಾನ್ ಬಡಾವಣೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಸಿದ್ದರಾಮಯ್ಯ ಗುರುವಾರ ವೀಕ್ಷಿಸಿದರು  –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಗರದಲ್ಲಿ ಮಳೆ ಪ್ರವಾಹದಿಂದ ಉಂಟಾಗಬಹುದಾದ ಹಾನಿ ತಡೆಯಲು ರಾಜ್ಯ ಸರ್ಕಾರ ಯಾವುದೇ ಯೋಜನೆ ರೂಪಿಸಿಲ್ಲ. ಕೆರೆ ಹೂಳು ಎತ್ತುವ ಕೆಲಸವನ್ನೂ ಮಾಡಿಲ್ಲ. ಒತ್ತುವರಿಯನ್ನೂ ತೆರವುಗೊಳಿಸಿಲ್ಲ. ಇದರಿಂದ ಜನರಿಗೆ ಸಾಕಷ್ಟು ಸಮಸ್ಯೆಯಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಿರಂತರ ಮಳೆಯಿಂದ ಜಲಾವೃತವಾಗಿರುವ ವಿವಿಧ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಅಹವಾಲು ಆಲಿಸಿದ ಬಳಿಕ ಮಾತನಾಡಿದ ಅವರು, ‘ಮಳೆ ಅನಾಹುತ ವಿಚಾರವನ್ನೂ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ’ ಎಂದರು.

‘ಇಂಥ ಪರಿಸ್ಥಿತಿ ಹಿಂದೆಂದೂ ಬಂದಿಲ್ಲ. ಇದಕ್ಕೆಲ್ಲ ಹಿಂದಿನ ಸರ್ಕಾರ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಾರೆ. ನಮ್ಮ ಅವಧಿಯಲ್ಲಿ ರಾಜಕಾಲುವೆಗಳ ಒತ್ತುವರಿ ಸಮೀಕ್ಷೆ ಮಾಡಿಸಿದ್ದೆವು. ದಾಖಲೆಗಳೇ ಹೇಳುತ್ತವೆ. ಆದರೆ, ಈಗಿನ ಸರ್ಕಾರ ಏನು ಮಾಡಲಿಲ್ಲ’ ಎಂದು ದೂರಿದರು.

ADVERTISEMENT

‘ಮಹದೇವಪುರ ಕ್ಷೇತ್ರದಲ್ಲಿ ಹೆಚ್ಚಿನ ಅನಾಹುತಗಳಾಗಿದ್ದು, ಅಲ್ಲಿ‌ ಬಿಜೆಪಿಯ ಅರವಿಂದ ಲಿಂಬಾವಳಿ ಮೂರು ಬಾರಿ ಶಾಸಕರಾಗಿದ್ದಾರೆ. ಅವರೇ ಅಕ್ರಮವಾಗಿ ಅಪಾರ್ಟ್‌ಮೆಂಟ್‌ಗಳಿಗೆ ಪರವಾನಗಿ ಕೊಡಿಸಿದ್ದರಾ? ಅಕ್ರಮವಾಗಿ ಕಟ್ಟಡಗಳ ನಿರ್ಮಾಣ ಆಗಿದ್ದರೆ ಯಾಕೆ ಕ್ರಮ ಕೈಗೊಳ್ಳಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಮಲೂರು ಇಪ್ಸಿಲಾನ್ ಬಡಾವಣೆ, ಬೆಳ್ಳಂದೂರು ರಿಂಗ್ ರಸ್ತೆ ಇಕೋ ಸ್ಪೇಸ್ ಬಡಾವಣೆ, ರೈನ್ ಬೋ ಬಡಾವಣೆ ಮುಂತಾದ ಸ್ಥಳಗಳಿಗೆ ಅವರು ಭೇಟಿ ನೀಡಿದರು. ಜಲಾವೃತ್ತವಾಗಿರುವ ಇಪ್ಸಿಲಾನ್ ಬಡಾವಣೆಯಲ್ಲಿ ಟ್ಯೂಬ್ ಬೋಟ್‌ನಲ್ಲಿ ತೆರಳಿ ಸಿದ್ದರಾಮಯ್ಯ ಸುತ್ತಮುತ್ತಲಿನ ಪ್ರದೇಶಗಳನ್ನು ವೀಕ್ಷಿಸಿದರು. ಬಳಗೆರೆಯ ದಿಶಾ ಅಪಾರ್ಟ್‌ಮೆಂಟ್‌ನ ನಿವಾಸಿಗಳ ಸಮಸ್ಯೆ ಆಲಿಸಿದ ಅವರು, ಬಳಿಕ ಮುನ್ನೇಕೊಳಾಲ ಗ್ರಾಮಕ್ಕೆ ಭೇಟಿ ಅಲ್ಲಿನ ಕೊಳೆಗೇರಿ ನಿವಾಸಿಗಳಿಗೆ ಹೊದಿಕೆಗಳನ್ನು ವಿತರಿಸಿದರು.

ಸಿದ್ದಾಪುರದಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದ ಅಖಿಲಾ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಸಿದ್ದರಾಮಯ್ಯ, ಅಖೀಲಾ ಕುಟುಂಬಕ್ಕೆ ₹ 1 ಲಕ್ಷ ಪರಿಹಾರ ನೀಡಿದರು. ಅಲ್ಲದೆ, ಒತ್ತುವರಿ ವಿಚಾರವಾಗಿ ಅರವಿಂದ ಲಿಂಬಾವಳಿ ಜೊತೆ ವಾಗ್ವಾದ ನಡೆಸಿದ್ದ ರುತ್ ಸಗಾಯಿ ಮೇರಿ ಅಮೀಲಾ ಅವರ ಒಡೆತನದ ಕಾಂಪ್ಲೆಕ್ಸ್‌ ಅನ್ನು ವೀಕ್ಷಿಸಿದರು. ನಲ್ಲೂರ್ ಹಳ್ಳಿ ವೈಟ್‌ಫೀಲ್ಡ್ ರಸ್ತೆಯಲ್ಲಿ ಮಳೆ ನೀರು ನುಗ್ಗಿದ್ದ ಸುಮಾರು 300 ಮನೆಗಳಿರುವ ಬಿಎಂ ಗ್ಲೋರಿಟಾ ಅಪಾರ್ಟ್‌ಮೆಂಟ್ ವೀಕ್ಷಿಸಿದರು. ‌

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಕಾಂಗ್ರೆಸ್‌ ಕಾರ್ಯಕರ್ತರು ಜೊತೆಗಿದ್ದರು.

‘ಜನಸ್ಪಂದನದ ಬದಲು ಜಲಸ್ಪಂದನ ಮಾಡಲಿ’

ಬೆಂಗಳೂರು: ‘ರಾಜ್ಯ ಸರ್ಕಾರ ಬೆಂಗಳೂರಿನ ಐಟಿ ಕಾರಿಡಾರ್‌ನಲ್ಲಿ ಜಲಸಂಚಾರಕ್ಕಾಗಿ ಬೋಟ್ ಫ್ಯಾಕ್ಟರಿ ಆರಂಭಿಸುವುದು ಉತ್ತಮ. ಬಿಜೆಪಿಯವರು ಜನಸ್ಪಂದನದ ಬದಲು, ಮೊದಲು ಜಲಸ್ಪಂದನ ಕೆಲಸ ಮಾಡಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

‘ರಾಜ್ಯ ಸರ್ಕಾರಕ್ಕೆ ಬೆಂಗಳೂರಿನ ಬೆಲೆ ತಿಳಿದಿಲ್ಲ. ಬೆಂಗಳೂರು ಎಷ್ಟು ಜನರಿಗೆ ಉದ್ಯೋಗ ನೀಡಿದೆ ಎಂಬುದೂ ಗೊತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.