ADVERTISEMENT

PV Web Exclusive: ಓ ದೀದೀ, ಮಾಡೆಲ್ ಮತ್ತು ಅಡುಗೆ ಮನೆ...

ಮಂಜುಶ್ರೀ ಎಂ.ಕಡಕೋಳ
Published 10 ಜೂನ್ 2021, 14:02 IST
Last Updated 10 ಜೂನ್ 2021, 14:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಕರ್ನಾಟಕದ ಶಾಸಕರೊಬ್ಬರುಮಹಿಳಾ ಐಎಎಸ್ ಅಧಿಕಾರಿತಮ್ಮ ಮೇಲೆ ಮಾಡಿದ ಆರೋಪ ಸಾಬೀತಾಗದಿದ್ದಲ್ಲಿ ಆ ಅಧಿಕಾರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಮನೆಯಲ್ಲಿ ಅಡುಗೆ ಮಾಡಿಕೊಂಡಿರಲಿ’ ಎಂದಿದ್ದಾರೆ...

ಮಾಧ್ಯಮಗಳಲ್ಲಿ ಈ ಸುದ್ದಿಯನ್ನು ಓದಿದಾಗ ಅಚ್ಚರಿಯಾಗಲಿಲ್ಲ. ಬದಲಾಗಿ ಸಾರ್ವಜನಿಕ ಆಡಳಿತದಂಥ ಕ್ಷೇತ್ರಗಳಲ್ಲಿ ದುಡಿಯುವ ಹೆಣ್ಣುಮಕ್ಕಳನ್ನು ನೋಡುವ ಪರಿಭಾಷೆ ಇನ್ನೂ ಬದಲಾಗಿಲ್ಲ ಅನ್ನುವುದಕ್ಕೆ ಇದೊಂದು ನಿಚ್ಚಳ ಉದಾಹರಣೆ ಎನಿಸಿತು.

ಹೆಣ್ಣಿನ ಶಿಕ್ಷಣವೇನಿದ್ದರೂ ಗಂಡ–ಮಕ್ಕಳನ್ನು ಪ್ರೀತಿಸಿ ಆದರಿಸಲು ಇರುವಂಥದ್ದೇ ಹೊರತು, ಸಾರ್ವಜನಿಕ ಆಡಳಿತ ಸೇವೆಗಲ್ಲ ಎನ್ನುವ ಮನಸ್ಥಿತಿಯು ಪಿತೃಪ್ರಧಾನ ವ್ಯವಸ್ಥೆಯ ದ್ಯೋತಕ. ‘ಅಡುಗೆ ಮಾಡುವುದು, ಗಂಡ–ಮಕ್ಕಳ ಲಾಲನೆ ಪಾಲನೆ ಮಾಡುವುದು ಹೆಣ್ಣಿಗೆ ಹುಟ್ಟಿನಿಂದಲೇ ಡಿಎನ್ಎಯೊಳಗೆ ಅಡಕವಾಗಿ ಬಂದಿರುತ್ತವೆ’ ಎನ್ನುವಂಥ ಮನಸ್ಥಿತಿಯು ಬದಲಾಗದ ಮತ್ತು ಬದಲಾಯಿಸಿಕೊಳ್ಳಲಾರದ ಹೊರತು ಇಂಥ ಮಾತುಗಳನ್ನು ಮನೆಯೊಳಗಷ್ಟೇ ಅಲ್ಲ ಸಾರ್ವಜನಿಕವಾಗಿಯೂ ಕೇಳಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲಾಗದು. ಸಾಮಾನ್ಯ ಜನರಿಂದ ಹಿಡಿದು ಜನಪ್ರತಿನಿಧಿಗಳ ತನಕ ಇಂಥ ಮಾತುಗಳು ಪುನರಾವರ್ತಿತವಾಗುತ್ತಲೇ ಇರುತ್ತವೆ.

ADVERTISEMENT

ಕರ್ನಾಟಕವಷ್ಟೇ ಅಲ್ಲ, ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿದ ಜನಪ್ರತಿನಿಧಿಯೊಬ್ಬರು ಕೂಡಾ ತಮ್ಮ ಭಾಷಣದಲ್ಲಿ ಮಹಿಳಾ ರಾಜಕಾರಣಿಯೊಬ್ಬರನ್ನು ಉದ್ದೇಶಿಸಿ ‘ದೀದೀ ಓ ದೀದೀ’ ಎಂದು ವ್ಯಂಗ್ಯಭರಿತವಾಗಿ ಆಡಿದ ಮಾತುಗಳು ಜನಮಾನಸದಲ್ಲಿ ಇನ್ನೂ ಮಾಸಿಲ್ಲ. ‘ತನ್ನ ಹಕ್ಕುಗಳ ಬಗ್ಗೆ ಸದಾ ಜಾಗೃತನಾಗಿರುವ ಗಂಡಸು ಅದನ್ನು ಕಾಪಾಡಿಕೊಳ್ಳುವ ಹುನ್ನಾರಿನಲ್ಲಿ ಮಹಿಳೆಯ ಸ್ಥಾನಮಾನಗಳನ್ನು ಯಥಾಸ್ಥಿತಿಯಲ್ಲಿ ಇರಿಸುವುದರ ಬಗ್ಗೆ ಆಸಕ್ತನಾಗಿರುತ್ತಾನೆ ಇಲ್ಲವೇ ಮಹಿಳೆಯನ್ನು ಇನ್ನೂ ಕೆಳಮಟ್ಟದ ಸ್ಥಾನಕ್ಕೆ ಇಳಿಸುವ ಆಲೋಚನೆಯಲ್ಲಿರುತ್ತಾನೆ’ ಎನ್ನುವ ಖ್ಯಾತ ಸ್ತ್ರೀವಾದಿ ವುಲ್‌ಸ್ಟನ್‌ ಕ್ರಾಫ್ಟ್‌ ಅವರ ಮಾತುಗಳನ್ನು ಮೇಲಿನ ಘಟನೆಗಳಿಗೆ ಹೋಲಿಸಿ ನೋಡಬಹುದು.

‘ಅಡುಗೆ ಮಾಡಿಕೊಂಡಿರಲಿ’ ಎಂದಿರುವ ಶಾಸಕರು ಈ ಹಿಂದೆಯೂ ಮಹಿಳಾ ಅಧಿಕಾರಿಯನ್ನು ಉದ್ದೇಶಿಸಿ ‘ನಮಗೆ ನಮಗೆ ಬೇಕಿರುವುದು ರೋಲ್‌ ಮಾಡೆಲ್‌ ಅಧಿಕಾರಿ; ಮಾಡೆಲ್‌ ಅಲ್ಲ’ ಅಂದಿದ್ದರು. ಉದ್ಯೋಗಸ್ಥ ಮಹಿಳೆಯೊಬ್ಬರು ನೋಡಲು ಲಕ್ಷಣವಾಗಿದ್ದರೆ, ಅವರು ತೊಡುವ ಉಡುಗೆ ತೊಡುಗೆಗಳು ಉತ್ತಮ ಅಭಿರುಚಿಯುಳ್ಳದಾಗಿದ್ದ ಮಾತ್ರಕ್ಕೆ ಅವರನ್ನು ಮಾಡೆಲ್‌ಗೆ (ರೂಪದರ್ಶಿ) ಹೋಲಿಸುವುದು... ಮಹಿಳಾ ಅಧಿಕಾರಿಗಳಿಬ್ಬರ ನಡುವೆ ವೃತ್ತಿಸಂಬಂಧಿತ ಭಿನ್ನಾಭಿಪ್ರಾಯಗಳಿಗೆ ‘ಎರಡು ಜಡೆಗಳು ಒಂದೆಡೆ ಸೇರುವುದಿಲ್ಲ’, ‘ಹೆಣ್ಣಿಗೆ ಹೆಣ್ಣೇ ಶತ್ರು’ ಎನ್ನುವಂಥ ಮಾತುಗಳು ಅತಾರ್ಕಿಕವಷ್ಟೇ ಅಲ್ಲ, ಬಾಲಿಶವೂ ಹೌದು.
ಅದೇ ಪುರುಷನೊಬ್ಬ ಸಾರ್ವಜನಿಕ ಆಡಳಿತದಂಥ ಕ್ಷೇತ್ರದಲ್ಲಿದ್ದು ಚೆನ್ನಾಡಿ ಡ್ರೆಸ್ ಮಾಡಿಕೊಂಡು, ಶಿಸ್ತಿನಿಂದ ಇದ್ದರೆ... ಅವರನ್ನೂ ಮಾಡೆಲ್ ಪಟ್ಟಿಗೆ ಸೇರಿಸಲಾಗುತ್ತದೆಯೇ? ಪುರುಷ ಅಧಿಕಾರಿಗಳಿಬ್ಬರ ನಡುವಿನ ವೃತ್ತಿ ಸಂಬಂಧಿತ ಭಿನ್ನಾಭಿಪ್ರಾಯಗಳಿಗೆ ಯಾವ ಗಾದೆಯನ್ನು ಉದಾಹರಿಸಲಾಗುತ್ತದೆ?

ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗಳಲ್ಲಿದ್ದವರು ಮಹಿಳೆಯರು. ಈ ಇಬ್ಬರೂ ಆ ಸಂದರ್ಭದಲ್ಲಿ ಒಟ್ಟಾಗಿ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ್ದರು. ಆಗ ಎರಡು ಜಡೆಯ ಗಾದೆಯು ಸುಳ್ಳಾಗಲಿಲ್ಲವೇ? ಮಹಿಳೆಯರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದಾಗ ಜಡೆಗಳ ಗಾದೆ ತಕ್ಷಣಕ್ಕೆ ಯಾಕೆ ನೆನಪಾಗುತ್ತದೆ?

ಮಹಿಳೆಯೊಬ್ಬಳು ತನ್ನ ಸ್ವಂತ ಸಾಮರ್ಥ್ಯದಿಂದ ಉನ್ನತ ಹುದ್ದೆಗೇರಿದರೂ ಆಕೆಯನ್ನು ಕೌಟುಂಬಿಕ ವ್ಯವಸ್ಥೆಯೊಳಗೇ ಕೂಡಿ ಹಾಕುವಂಥದ್ದು ಆಕೆಯ ಬೆಳವಣಿಗೆಯ ಅವಕಾಶಗಳನ್ನು ಕಸಿಯುವಂಥದ್ದೇ ಆಗಿದೆ. ಪುರುಷ ಕೇಂದ್ರಿತ ವ್ಯವಸ್ಥೆಯಲ್ಲಿ ಮಹಿಳೆಯೊಬ್ಬಳು ಸ್ವತಂತ್ರವಾಗಿ ಆಲೋಚಿಸುವ ಮನಸ್ಥಿತಿಯವಳಾಗಿದ್ದು, ಸ್ವಸಾಮರ್ಥ್ಯದಿಂದ ಉನ್ನತ ಸ್ಥಾನಮಾನ ಮತ್ತು ಸಾರ್ವಜನಿಕ ಮನ್ನಣೆ ಪಡೆದಲ್ಲಿ ಆಕೆಯ ಸಾಧನೆಗಳನ್ನು ಅನುಮಾನದಿಂದ ಇಲ್ಲವೇ ಆಕೆಯ ತಂದೆ ಇಲ್ಲವೇ ಪತಿಯ ಯಶಸ್ಸಿನೊಂದಿಗೆ ಥಳುಕು ಹಾಕುವುದೂ ಇದೆ. ಇದ್ಯಾವುದಕ್ಕೂ ಆಕೆ ಬಗ್ಗದಿದ್ದರೆ ಆಕೆಯನ್ನು ಚಾರಿತ್ರ್ಯಹೀನಳೆಂದೂ ಜರಿಯುವ ಮೂಲಕ ಆಕೆಯನ್ನು ಮಾನಸಿಕವಾಗಿ ಧೃತಿಗೆಡಿಸುವ ಹುನ್ನಾರವೂ ನಡೆಯುತ್ತದೆ.

‘ವೈಚಾರಿಕ ನೆಲೆಯಲ್ಲಿ ಲೋಕವನ್ನು ಗ್ರಹಿಸುವ ಹಾಗೂ ತಮ್ಮ ಹಕ್ಕುಗಳನ್ನು ತಾವೇ ವ್ಯಾಖ್ಯಾನಿಸಿಕೊಳ್ಳುವ ಮೂಲಕ ಮಹಿಳೆಯರು ಸ್ವಾಯತ್ತತೆಯನ್ನು ಹೊಂದಬಲ್ಲರು’ ಎಂದು ಸ್ತ್ರೀವಾದಿ ವುಲ್‌ಸ್ಟನ್ ಕ್ರಾಫ್ಟ್‌ಳ ಹೇಳಿದ್ದರೂ, ಕೌಟುಂಬಿಕ–ಉದ್ಯೋಗ ಸ್ಥಳಗಳಲ್ಲಿ ತಮ್ಮ ಹಕ್ಕುಗಳನ್ನು ವ್ಯಾಖ್ಯಾನಿಕೊಳ್ಳುವುದು ಮಹಿಳೆಯರಿಗೆ ಸುಲಭದ ಮಾತಲ್ಲ.

ಕರ್ನಾಟಕದಲ್ಲಿನ ಜಿಲ್ಲೆಯೊಂದರಲ್ಲಿನ ಮಹಿಳಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವಿನ ಭಿನ್ನಾಭಿಪ್ರಾಯಗಳು, ಆರೋಪ–ಪ್ರತ್ಯಾರೋಪಗಳೇನೇ ಇರಲಿ. ಅವುಗಳು ಇಂದಲ್ಲ ನಾಳೆ ಕಾನೂನಿನ ಚೌಕಟ್ಟಿನೊಳಗೆ ಬಗೆಹರಿಯುತ್ತವೆ. ಆದರೆ, ಪಿತೃಪ್ರಧಾನ ಮನಸ್ಥಿತಿ ಹೊಂದಿರುವಂಥವರ ಮಿದುಳಿನೊಳಗೆ ಅಡಗಿರುವ ಹೆಣ್ಣೆಂದರೆ ಹೀಗೆ...ಅನ್ನುವಂಥದ್ದು ಯಾವ ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಯಬಲ್ಲದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.