ADVERTISEMENT

ತಾಯಿಗೆ ತಕ್ಕ ಮಗ: ನಿನ್ನೆಯ ಸಾರಿಗೆ ಇಂದಿನ ಕೊತ್ತುಂಬ್ರಿ ಸೊಪ್ಪು!

ಚಿತ್ರವಿಮರ್ಶೆ

ಪದ್ಮನಾಭ ಭಟ್ಟ‌
Published 16 ನವೆಂಬರ್ 2018, 9:55 IST
Last Updated 16 ನವೆಂಬರ್ 2018, 9:55 IST
"ತಾಯಿಗೆ ತಕ್ಕ ಮಗ' ಕೃಷ್ಣ ಅಜೇಯ್‌ರಾವ್‌, ಆಶಿಕಾ ರಂಗನಾಥ್‌
"ತಾಯಿಗೆ ತಕ್ಕ ಮಗ' ಕೃಷ್ಣ ಅಜೇಯ್‌ರಾವ್‌, ಆಶಿಕಾ ರಂಗನಾಥ್‌   

ಸಿನಿಮಾ: ತಾಯಿಗೆ ತಕ್ಕ ಮಗ
ನಿರ್ಮಾಣ: ಶಶಾಂಕ್ ಸಿನಿಮಾಸ್‌
ನಿರ್ದೇಶನ: ಶಶಾಂಕ್‌
ತಾರಾಗಣ: ಕೃಷ್ಣ ಅಜೇಯ್‌ರಾವ್‌, ಸುಮಲತಾ ಅಂಬರೀಶ್‌, ಆಶಿಕಾ ರಂಗನಾಥ್‌,ಭಜರಂಗಿ ಲೋಕಿ, ಅಚ್ಯುತ್ ಕುಮಾರ್

ಖಳನಟನಿಂದ ಪೆಟ್ಟುತಿಂದ ನಾಯಕ ಬಾಯಲ್ಲಿ ತುಂಬಿದ್ದ ರಕ್ತವನ್ನು ಪಿಚಿಕ್‌ ಎಂದು ಉಗುಳಿ ದೃಢವಾಗಿ ನಿಲ್ಲುತ್ತಾನೆ. ಅವನ ಕೈಮೇಲೆ ಅಮ್ಮನ ಚಿತ್ರದ ಹಚ್ಚೆ. ಅವನಿಗೆ ಕೋಪ ಬಂದರೆ ಕೈಯಲ್ಲಿನ ಎರಡು ನರಗಳು ಸರ್ರನೇ ಉಬ್ಬಿ ಮೇಲೇರುತ್ತವೆ. ಅನ್ಯಾಯ ಕಂಡರೆ ಪೊಲೀಸರನ್ನೂ ಬಿಡದೆ ಅರೆಬೆತ್ತಲಗೊಳಿಸಿ ಚಚ್ಚಿಹಾಕುವ ಶೂರ ಅವನು. ಅಮ್ಮನ ಮಾತೆಂದರೆ ವೇದವಾಕ್ಯ. ಮೊದಲ ನೋಟದಲ್ಲಿಯೇ ಅವನಿಗೆ ವೀಣೆ ಹಿಡಿದುಬರುವ ಕೆಂಡಸಂಪಿಗೆಯಂಥ ಹುಡುಗಿಯ ಮೇಲೆ ಪ್ರೇಮವಾಗುತ್ತದೆ. ಅವಳಿಗೆ ಇವನ ಮೇಲೆ ಪ್ರೇಮವಾಗಲೂ ತಡ ಇಲ್ಲ. ಆದರೆ ಇವನೊಳಗೆ ಯಾವಾಗಂದರಾವಾಗ ಕೊತಕೊತ ಕುದಿಯಲಾರಂಭಿಸುವ ಕೋಪವೇ ಅವರ ಪ್ರೇಮಕ್ಕೆ ಅಡ್ಡವಾಗುತ್ತದೆ. ಕೋಪ ಬಿಟ್ರೆ ಮಾತ್ರ ಪ್ರೀತಿ ಸಿಗುವುದು ಎಂಬ ಷರತ್ತಿಗೆ ಸಿಕ್ಕು ಹೃದಯದಲ್ಲಿ ಬಿರುಕು ಮೂಡುತ್ತದೆ.

ಈ ಮೇಲಿನ ಎಲ್ಲ ದೃಶ್ಯಗಳನ್ನು ಹಲವು ಸಿನಿಮಾಗಳಲ್ಲಿ ಈಗಾಗಲೇ ನೋಡಿರುವಂಥವೇ. ಯೋಗರಾಜ ಭಟ್ಟರು ಬರೆದಿರುವ ‘ಬದುಕು ನಿನ್ನೆಯ ಸಾರು; ಬೆರೆಸು ಕೊತ್ತುಂಬ್ರಿ ಸೊಪ್ಪು’ ಎಂಬ ಸಾಲನ್ನು ‘ತಾಯಿಗೆ ತಕ್ಕ ಮಗ’ ಸಿನಿಮಾಕ್ಕೆ ಧಾರಾಳವಾಗಿ ಅನ್ವಯಿಸಬಹುದು. ಚರ್ವಿತ ಚರ್ವಣ ಅಂಶಗಳನ್ನೇ ಇಟ್ಟುಕೊಂಡು ಅದಕ್ಕೆ ಹೊಸ ಕೊತ್ತುಂಬ್ರಿ ಸೊಪ್ಪು ಬೆರೆಸಿ, ಹಾಳಾಗದ ಹಾಗೆ ಕುದಿಸಿ ಬಡಿಸಿದ್ದಾರೆ ಶಶಾಂಕ್‌. ಇಲ್ಲಿ ಹೊಸ ರುಚಿ– ಗಂಧ ಇಲ್ಲದಿದ್ದರೂ ತಟ್ಟೆಯ ಚಂದಕ್ಕೆ ಮಾರುಹೋಗುವವರಿಗೆ ಊಟ ರುಚಿಸಬಹುದು.

ADVERTISEMENT

ಅಮ್ಮ ನ್ಯಾಯವಾದಿ. ಮಗಮೋಹನ್‌ದಾಸ್‌ ಮಹಾನ್‌ ಕೋಪಿಷ್ಟ. ಅವನ ಕೋಪ ಸ್ವಾರ್ಥದ್ದಲ್ಲ. ಅನ್ಯಾಯವನ್ನು ಕಂಡರೆ ಸಿಡಿದೇಳುವ ಪ್ರವೃತ್ತಿ ಅವನದ್ದು. ಅದಕ್ಕಾಗಿ ಕಾನೂನನ್ನೂ ಚಾಟಿಯ ಹಾಗೆ ಕೈಗೆತ್ತಿಕೊಂಡು ದುರುಳರನ್ನು ಶಿಕ್ಷಿಸಬಲ್ಲ. ಈ ಕಾರ್ಯದಲ್ಲಿ ಪ್ರಕರಣ ದಾಖಲಾದರೆ, ಕೋರ್ಟಿನಲ್ಲಿ ಅವನ ಪರ ವಾದಿಸಲು ಅಮ್ಮ ಸದಾ ಸಿದ್ಧ. ಪುಡಿ ರೌಡಿಗಳ ಪಟ್ಟಿಯನ್ನು ಮಗನಿಗೆ ಕೊಟ್ಟು ಬೆಂಡೆತ್ತಿಸುವ ಅವಳು, ಮಾಜಿ ಮಂತ್ರಿಯೊಬ್ಬನ ಮಗನ ವಿರುದ್ಧ ಮಾತ್ರ ಕೋರ್ಟಿನಲ್ಲಿಯೇ ಹೋರಾಡುವುದಾಗಿ ಪಣ ತೊಡಗುತ್ತಾಳೆ.

ಈ ಸಿನಿಮಾದಲ್ಲಿ ತೀರಾ ಅನಿರೀಕ್ಷಿತ ಆಗಿರುವುದೇನೂ ಘಟಿಸುವುದಿಲ್ಲ. ಅಲ್ಲಲ್ಲಿ ತಿರುವುಗಳು ಇವೆಯಾದರೂ ಅವು ಅಂಥ ಅಚ್ಚರಿ ಹುಟ್ಟಿಸುವುದಿಲ್ಲ. ಹಾಗೆಂದು ತೀರಾ ಬೋರೂ ಹೊಡೆಸುವುದಿಲ್ಲ.

ದೃಶ್ಯವೊಂದರಲ್ಲಿ ನಾಯಕ–ನಾಯಕಿ ಮತ್ತು ನಾಯಕನ ಅಮ್ಮ ಮೂರು ಜನ ಮಾರುಕಟ್ಟೆಯಲ್ಲಿ ನಿಂತಿರುತ್ತಾರೆ. ಒಬ್ಬ ಮುಸ್ಲಿಂ ಹುಡುಗ ನಾಯಕಿಯ ಸರ ಕದಿಯುತ್ತಾನೆ. ಅವನನ್ನು ಅಟ್ಟಿಸಿಕೊಂಡು ಹೋಗುವ ನಾಯಕನನ್ನು ಮತ್ತಿಷ್ಟು ಮುಸ್ಲಿಂ ಹುಡುಗರು ಸುತ್ತುವರಿಯುತ್ತಾರೆ. ನಾಯಕಿ ‘ಈ ಏರಿಯಾ ಸರಿ ಇಲ್ಲ, ಬಾ ಹೋಗೋಣ’ ಎಂದು ಕಿರುಚುತ್ತಾಳೆ. ‘ಒಳ್ಳೆ ಸಮಾಜ ಬೇಕು’ ಎಂದು ಬಯಸುವ ನಿರ್ದೇಶಕರಿಗೆ, ಅನಗತ್ಯವಾಗಿ ಒಂದು ಕೋಮಿನ ಜನ, ಅವರಿರುವ ಪರಿಸರ ಸರಿ ಇರುವುದಿಲ್ಲ ಎಂದು ಬಿಂಬಿಸುವುದು, ಕೋಮುಗಲಬೆಗಳಂಥ ಬಹುಸೂಕ್ಷ್ಮ ಸಂಗತಿಗಳನ್ನು ಅನುಕೂಲಸಿಂಧೂ ಕಾರಣಗಳಿಗಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂಬ ಎಚ್ಚರ ಇಲ್ಲದಿರುವುದು ಅಚ್ಚರಿ ಹುಟ್ಟಿಸುತ್ತದೆ.

ಭಗ್ನಪ್ರೇಮಿ, ಮುಗ್ಧ ಯುವಕನಾಗಿಯೇ ಹೆಚ್ಚು ಗಮನ ಸೆಳೆದಿದ್ದ ಕೃಷ್ಟ ಅಜೇಯ್‌ರಾವ್‌, ಇಲ್ಲಿ ತಾಯಿಗೆ ತಕ್ಕ ಮಗನಾಗಲು ಮೀಸೆ ಹುರಿಗಟ್ಟಿಸಿರುವುದಷ್ಟೇ ಅಲ್ಲ, ಕಣ್ಣ ನೋಟವನ್ನೂ ಹರಿತಗೊಳಿಸಿಕೊಂಡಿದ್ದಾರೆ. ಸದಾ ಸೆಟೆದುಕೊಂಡೇ ಇರುವ ಅವರ ದೇಹಕ್ಕೆ ವೀಣೆ ಹಿಡಿದು ಬರುವ ಸರಸ್ವತಿಯ (ಆಶಿಕಾ) ಲಾವಣ್ಯಕ್ಕೆ ಹೊಂದುವ ಹಾಗೆ ಬಾಗುವುದು ಕೊಂಚ ಕಷ್ಟವಾಗಿರುವುದೂ ತೆರೆಯಲ್ಲಿ ಕಾಣಿಸುತ್ತದೆ.

ಅಮ್ಮನ ಪಾತ್ರದಲ್ಲಿ ಸುಮಲತಾ ತಮ್ಮಲ್ಲಿನ್ನೂ ನಟನೆಯ ಕಾವು ಉಳಿದಿರುವುದನ್ನು ಸಾಬೀತುಗೊಳಿಸಿದ್ದಾರೆ. ಚಿತ್ರದಲ್ಲಿ ಗಮನಸೆಳೆಯುವ ಇನ್ನೊಬ್ಬ ನಟ ಭಜರಂಗಿ ಲೋಕಿ. ಖಳತನವೆಲ್ಲ ರಕ್ತಗತಗೊಳಿಸಿಕೊಂಡಿರುವ ಹಾಗೆ ನಟಿಸಿರುವ ಅವರೆದುರು ಕೆಲವೊಮ್ಮೆ ಉಳಿದವರು ಮಂಕಾಗುತ್ತಾರೆ. ಹೊಡಪೆಟ್ಟಿನ ಪ್ರತಾಪ, ಪ್ರೇಮದ ಪ್ರಲಾಪದ ಜತೆಗೆ ಕೊಂಚ ನಗೆಯೂ ಬೇಕು ಎಂಬ ಕಾರಣಕ್ಕೆ ಸಾಧುಕೋಕಿಲ ಎಪಿಸೋಡ್‌ ತುರುಕಿರದಿದ್ದರೆ ಸಿನಿಮಾ ಬಂಧ ಇನ್ನಷ್ಟು ಬಿಗಿಯಾಗಿರುತ್ತಿತ್ತು.

ಒಟ್ಟಾರೆ ಸಮಾಜ ಸುಧಾರಣೆಗೆ ರೆಬಲ್‌ ಆಗುವ ಹಳೆಯ ಪರಿಕಲ್ಪನೆಯನ್ನೇ ಮತ್ತೆ ಉಜ್ಜಿ ಕಟ್ಟಿರುವ ಈ ಚಿತ್ರ, ತರ್ಕಗಳನ್ನು ಬದಿಗಿಟ್ಟು ನೋಡಿದರೆ ಹೆಚ್ಚು ಸಹನೀಯವಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.