ADVERTISEMENT

'ಡೆಮೊ ಪೀಸ್' ಸಿನಿಮಾ ವಿಮರ್ಶೆ: ಬ್ರಹ್ಮವರ...ಬೋಧನೆಯ ಹಳೇ ಸ್ವರ

ವಿಶಾಖ ಎನ್.
Published 14 ಫೆಬ್ರುವರಿ 2020, 12:41 IST
Last Updated 14 ಫೆಬ್ರುವರಿ 2020, 12:41 IST
ಡೆಮೊ ಪೀಸ್’ ಚಿತ್ರದಲ್ಲಿ ಭರತ್ ಬೋಪಣ್ಣ, ಸೋನಾಲ್
ಡೆಮೊ ಪೀಸ್’ ಚಿತ್ರದಲ್ಲಿ ಭರತ್ ಬೋಪಣ್ಣ, ಸೋನಾಲ್    

lಚಿತ್ರ: ಡೆಮೊ ಪೀಸ್ (ಕನ್ನಡ)

lನಿರ್ಮಾಣ: ಸ್ಪರ್ಶ ರೇಖಾ, ವಿವೇಕ್ ಎ.

lನಿರ್ದೇಶನ: ವಿವೇಕ್‌ ಎ.

ADVERTISEMENT

lತಾರಾಗಣ: ಭರತ್ ಬೋಪಣ್ಣ, ಸೋನಾಲ್ ಮಾಂಟೆರೋ, ಚಕ್ರವರ್ತಿ ಚಂದ್ರಚೂಡ್.

ನೀತಿ ಹೇಳುವುದು, ಬೋಧನೆ ಮಾಡುವುದು ಭಾರತೀಯ ಸಿನಿಮಾದ ಬೇರುಗಳಲ್ಲಿ ಲಾಗಾಯ್ತಿನಿಂದ ಇರುವಂಥದ್ದೇ. ಆದರ್ಶ ಗುಣಗಳಲ್ಲಿ ನಾಯಕನನ್ನು ಅದ್ದಿ ತೆಗೆದಿಟ್ಟ ನಿರ್ದೇಶಕರು ಅಸಂಖ್ಯ. ಆದರೆ, ‘ಡೆಮೊ ಪೀಸ್’ ಸಿನಿಮಾದ ನಾಯಕ ಹಣದ ಹಿಂದೆ ಬಿದ್ದು, ಆಮೇಲೆ ಜ್ಞಾನೋದಯ ಪಡೆಯುವ ಪ್ರತಿನಾಯಕನಂತೆ. ನಾಯಕನನ್ನು ದುರ್ಗುಣ ಸಂಪನ್ನನನ್ನಾಗಿಸಿ, ಪ್ರೇಕ್ಷಕರು ಕಣ್ಣು ಕೀಲಿಸುವಂತೆ ಮಾಡುವ ‘ಆನ್ವಯಿಕ ತಂತ್ರ’ ಕೂಡ ಈಗ ಹೊಸತೇನೂ ಅಲ್ಲ. ಈ ಚಿತ್ರದಲ್ಲಿರುವುದೂ ಅದೇ.

ಮಧ್ಯಂತರಕ್ಕೆ ಮೊದಲು ನಾಯಕ ಸತ್ತೇಹೋದ ಎಂದು ವೈದ್ಯರು ಘೋಷಿಸುತ್ತಾರೆ. ಬೆಟ್ಟಿಂಗ್ ಜಾಲಕ್ಕೆ ಸಿಲುಕಿದ, ಪ್ರೇಮ ನಿವೆದನೆಯಲ್ಲಿ ಇಪ್ಪತ್ತೇಳು ಸಲ ವಿಫಲನಾದ ನಾಯಕ ಆತ್ಮಹತ್ಯೆಯ ವಿಫಲಯತ್ನದಲ್ಲೂ ಸಾಯುವುದನ್ನು ತಮಾಷೆಯಾಗಿಯೇ ಸ್ವೀಕರಿಸಬೇಕಲ್ಲ ಎಂದುಕೊಳ್ಳುವಷ್ಟರಲ್ಲಿ ಒಂದು ತಿರುವು. ಬ್ರಹ್ಮನ ಎದುರಲ್ಲಿ ನಾಯಕ. ಅವನಿಗೊಂದು ವರ; ಅದೂ ಇಂಗ್ಲಿಷ್‌ನಲ್ಲಿ ಮಾತನಾಡುವ ಬ್ರಹ್ಮನಿಂದ. ‘ಕೈಯಿಟ್ಟೆಡೆಯೆಲ್ಲ ಹಣ ಸಿಗಲಿ... ಆದರೆ ಈ ವರ ಶಾಪವೂ ಆಗಬಹುದು’ ಎಂಬ ಎಚ್ಚರಿಕೆ. ಮರಳಿ ಜೀವ ಪಡೆಯುವ ನಾಯಕನ ಬದುಕಿನಲ್ಲಿ ಏನೆಲ್ಲ ಸ್ಥಿತ್ಯಂತರಗಳಾಗುತ್ತವೆ ಎನ್ನುವುದರ ಮೂಲಕ ನಿರ್ದೇಶಕರು ಬೋಧನೆಗೆ ಇಳಿಯುತ್ತಾರೆ. ತಾವು ಕೊಡುವ ವರದ ಈ ಪ್ರಯೋಗಕ್ಕೆ ಖುದ್ದು ಬ್ರಹ್ಮನೇ ‘ಡಮ್ಮಿ ಪೀಸ್’ ಎಂದು ಹೆಸರಿಡುವ ಮೂಲಕ ಆಧುನಿಕಬ್ರಹ್ಮನಾಗುತ್ತಾನೆ. ಹೀಗಾಗಿ ಇದನ್ನು ಈ ಕಾಲದ ದುರ್ಬಲ ‘ನೀತಿಚಿತ್ರ’ ಎನ್ನಲು ಅಡ್ಡಿಯಿಲ್ಲ.

ಧಾರಾವಾಹಿ ನಟ ಭರತ್ ಬೋಪಣ್ಣ ಹಿರಿತೆರೆಯಲ್ಲಿ ಮೊದಲ ಸಲ ನಾಯಕರಾಗಿದ್ದಾರೆ. ಟ್ರಿಮ್‌ ಮಾಡಿದ ಅವರ ಗಡ್ಡಕ್ಕೆ ಅಂಟಿಕೊಂಡ ಸುಂದರ ವದನದಲ್ಲಿ ಭಾವಗೆರೆಗಳು ಇನ್ನಷ್ಟೇ ಮೂಡಬೇಕಿವೆ. ನಾಯಕಿ ಸೋನಾಲ್ ಪಾತ್ರವೇ ಕೊಲಾಜ್‌ನಂತಿದೆ. ಅವರ ಗ್ಲ್ಯಾಮರ್‌ಗೆ ಇಲ್ಲಿ ಕೆಲಸಗಳಿಲ್ಲ. ಚಿತ್ರಕಥೆಯ ಬಂಧಕ್ಕೆ ಹೊರತೇ ಆದಂತೆ ಕಾಣಿಸುವ ಹಾಡುಗಳು, ಹೊಡೆದಾಟಗಳನ್ನು ‘ಮೈನಸ್’ ಮಾಡಿದರೆ ಸಿನಿಮಾವಧಿ ಸಾಕಷ್ಟು ಕಡಿಮೆಯಾದೀತು. ನಾಯಕನ ಸುತ್ತಲಿನ ಸ್ನೇಹಿತರು ಹಾಗೂ ಎದುರಿನ ಖಳರೆಲ್ಲ ‘ಕ್ಯಾರಿಕೇಚರ್‌’ಗಳಾಗಿಬಿಟ್ಟಿದ್ದಾರೆ.

ತಾಯಿ ಪಾತ್ರಧಾರಿಯಾಗಿರುವ ಸ್ಪರ್ಶ ರೇಖಾ ಮೊದಲ ಸಲ ನಿರ್ಮಾಪಕಿಯಾಗಿರುವ ಈ ಸಿನಿಮಾದ ಉದ್ದೇಶವೇನೋ ಚೆನ್ನಾಗಿದೆ. ಹೀಗಿದ್ದೂ ನಗಿಸುವುದಾಗಲೀ, ಅಳಿಸುವುದಾಗಲೀ ಸುಲಭವಲ್ಲ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.