ADVERTISEMENT

'ಬಾಂಬೆ ಬೇಗಮ್ಸ್' ಪ್ರಸಾರ ನಿಲ್ಲಿಸಲು ನೆಟ್‌ಫ್ಲಿಕ್ಸ್‌ಗೆ ಮಕ್ಕಳ ಆಯೋಗ ತಾಕೀತು

ಏಜೆನ್ಸೀಸ್
Published 12 ಮಾರ್ಚ್ 2021, 8:48 IST
Last Updated 12 ಮಾರ್ಚ್ 2021, 8:48 IST
ಬಾಂಬೆ ಬೇಗಮ್ಸ್‌ ಪೋಸ್ಟರ್‌
ಬಾಂಬೆ ಬೇಗಮ್ಸ್‌ ಪೋಸ್ಟರ್‌   

ಮುಂಬೈ: ಹೊಸ ವೆಬ್‌ ಸರಣಿ 'ಬಾಂಬೆ ಬೇಗಮ್ಸ್' ಪ್ರಸಾರವನ್ನು ತಕ್ಷಣ ನಿಲ್ಲಿಸುವಂತೆ 'ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ' ನೆಟ್‌ಫ್ಲಿಕ್ಸ್‌ಗೆ ತಾಕೀತು ಮಾಡಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ.

ಬಾಂಬೆ ಬೇಗಮ್ಸ್‌ ವೆಬ್‌ ಸರಣಿಯಲ್ಲಿ ಮಕ್ಕಳು ಮಾದಕವಸ್ತು ಸೇವನೆ ಮಾಡುತ್ತಿರುವ ದೃಶ್ಯಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಆ ದೂರಗಳನ್ನು ಪರಿಶೀಲಿಸಿರುವ ಆಯೋಗವು ಬಾಂಬೆ ಬೇಗಮ್ಸ್‌ ಪ್ರಸಾರ ನಿಲ್ಲಿಸುವಂತೆ ನೆಟ್‌ಫ್ಲಿಕ್ಸ್‌ಗೆ ಹೇಳಿದೆ.

ನೆಟ್‌ಫ್ಲಿಕ್ಸ್‌ ಸಂಸ್ಥೆಗೆ ಗುರುವಾರ ನೋಟಿಸ್‌ ನೀಡಿರುವ ಆಯೋಗವು, ಬಾಂಬೆ ಬೇಗಮ್ಸ್‌ ವಿಚಾರವಾಗಿ ತನಿಖೆ ನಡೆಸಿ 24 ಗಂಟೆಗಳ ಒಳಗೆ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದೆ.

ADVERTISEMENT

ಒಂದು ವೇಳೆ, ನೆಟ್‌ಫ್ಲಿಕ್ಸ್‌ ಸಂಸ್ಥೆಯು ವರದಿ ನೀಡುವಲ್ಲಿ ವಿಫಲವಾದರೆ ಮುಂದಿನ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಆಯೋಗವು ಎಚ್ಚರಿಸಿದೆ.

ಅಪ್ರಾಪ್ತ ವಯಸ್ಕರು ಕೊಕೇನ್ ಬಳಸುತ್ತಿರುವುದರ ಬಗ್ಗೆ ಉಲ್ಲೇಖಿಸಿರುವ ಆಯೋಗವು,'ಈ ರೀತಿಯ ವಿಷಯವನ್ನು ಹೊಂದಿರುವ ಸರಣಿಯು ಯುವ ಮನಸ್ಸಗಳನ್ನು ಕಲುಷಿತಗೊಳಿಸುತ್ತದೆ. ಇದು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಶೋಷಣೆಗೂ ಕಾರಣವಾಗಬಹುದು' ಎಂದು ತಿಳಿಸಿದೆ.

ಬಾಂಬೆ ಬೇಗಮ್ಸ್‌ ವೆಬ್‌ ಸರಣಿಯು ಕಳೆದ ವಾರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡಗಡೆಯಾಗಿದೆ. ಐವರು ಮಹಿಳೆಯರು ಆಧುನಿಕ ಮುಂಬೈನ ಜೀವನಶೈಲಿಗೆ ಹೊಂದಿಕೊಂಡು ಬದುಕಿನಲ್ಲಿ ಮುಂದೆ ಬರಲು ಪ್ರಯತ್ನಿಸುವ ಬಗೆಗಿನ ಕಥಾಹಂದರವನ್ನು ವೆಬ್‌ ಸರಣಿ ಒಳಗೊಂಡಿದೆ.

ಈ ವೆಬ್‌ ಸರಣಿಯನ್ನು ಬೊರ್ನಿಲಾ ಚಟರ್ಜಿ ಮತ್ತು ಅಲಂಕೃತಾ ಶ್ರೀವಾಸ್ತವ್‌ ಅವರು ನಿರ್ದೇಶನ ಮಾಡಿದ್ದಾರೆ. ಪೂಜಾ ಭಟ್‌, ಸಹನಾ ಗೋಸ್ವಾಮಿ, ಆಧ್ಯಾ ಆನಂದ್‌ ಸೇರಿದಂತೆ ಹಲವರು ವೆಬ್‌ ಸರಣಿಯಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.