ADVERTISEMENT

ಇಂದಿನಿಂದ ಆನ್‌ಲೈನ್‌ನಲ್ಲಿ ಮಕ್ಕಳ ನಾಟಕಗಳ ಸುಗ್ಗಿ!

​ಪ್ರಜಾವಾಣಿ ವಾರ್ತೆ
Published 22 ಮೇ 2020, 19:30 IST
Last Updated 22 ಮೇ 2020, 19:30 IST
ಫಿಶ್‌ ಟ್ರೀ ಮೂನ್‌
ಫಿಶ್‌ ಟ್ರೀ ಮೂನ್‌   

ಬೆಂಗಳೂರು: ಲಾಕ್‌ಡೌನ್‌ ರಜೆ ಕಳೆಯಲು ಪರಿತಪಿಸುತ್ತಿರುವ ಮಕ್ಕಳ ಬೇಸರ ಕಳೆಯಲು ರಂಗಶಂಕರದ ಆಹಾ! ಮಕ್ಕಳ ಥಿಯೇಟರ್‌ ಆರು ಅತ್ಯುತ್ತಮ ಇಂಗ್ಲಿಷ್‌ ನಾಟಕಗಳನ್ನು ತನ್ನ ಯುಟ್ಯೂಬ್‌ ಚಾನೆಲ್‌ನಲ್ಲಿ ಪ್ರದರ್ಶಿಸಲಿದೆ.

ಮೇ 22ರಿಂದ 27ರವರೆಗೆ ಪ್ರತಿದಿನ ಸಂಜೆ ಐದು ಗಂಟೆಗೆ ಆನ್‌ಲೈನ್‌ನಲ್ಲಿ ನಾಟಕಗಳು ಪ್ರಸಾರವಾಗಲಿವೆ. ಇದಾದ ನಂತರ ಒಂದು ವಾರದವರೆಗೂ ಈ ನಾಟಕಗಳು ವೀಕ್ಷಣೆಗೆ ಚಾನೆಲ್‌ನಲ್ಲಿ ದೊರೆಯಲಿವೆ.

ಫಿಶ್‌ ಟ್ರೀ ಮೂನ್‌, ಸರ್ಕಲ್‌ ಆಫ್‌ ಲೈಫ್‌, ಚಿಪ್ಪಿ ದ ಚಿಪ್ಕಲಿ, ದ ಝಪ್ಪರ್‌ಡಾಕೆಲ್‌ ಆ್ಯಂಡ್‌ ದ ವೋಕ್‌, ರಾಬಿನ್‌ಸನ್‌ ಆ್ಯಂಡ್‌ ಕ್ರೂಸೊ, ದ ಗಾರ್ಬೆಜ್‌ ಮೌಸ್‌ ಈ ನಾಟಕಗಳು ಮಕ್ಕಳ ಮನರಂಜಿಸಲಿವೆ.

ADVERTISEMENT

ಭಾರತ ಮತ್ತು ಕೊರಿಯಾದ ಜಾನಪದ ಕತೆ ಮತ್ತು ಸಾಂಪ್ರದಾಯಿಕ ಕಲೆಗಳಿಂದ ಪ್ರೇರಣೆ ಪಡೆದ ‘ಫಿಶ್‌ ಟ್ರೀ ಮೂನ್‌’ ನಾಟಕವನ್ನು ಇಂಕೊ ಸೆಂಟರ್‌ ಅರ್ಪಿಸುತ್ತಿದೆ. ಇದು ಎರಡು ದೇಶಗಳ ನಡುವಿನ ಸಂಸ್ಕೃತಿ ಸಂಬಂಧದ ಕತೆ.

ಇನ್ನು ‘ಸರ್ಕಲ್‌ ಆಫ್‌ ಲೈಫ್’‌ ನಾಟಕವು ಮನುಷ್ಯ ಹುಟ್ಟಿನಿಂದ ಸಾವಿನವರೆಗೂ ನಡೆಸುವ ಹಲವಾರು ಹೋರಾಟ, ಜೀವನ ಪಯಣವನ್ನು ಆಪ್ತವಾಗಿ ಕಟ್ಟಿಕೊಡಲಿದೆ.

ಕಳೆದುಕೊಂಡ ತನ್ನ ಬಾಲದ ಹುಡುಕಾಟಕ್ಕಾಗಿ ಪುಟ್ಟ ಹಲ್ಲಿ ಮರಿಯೊಂದು ಪಡುವ ವ್ಯಥೆಯ ಕತೆಯೇ ‘ಚಿಪ್ಪಿ ದ ಚಿಪ್ಕಲಿ’. ಇದು ಭಾರತದ ಜಾನಪದ ಕತೆಯ ರಂಗರೂಪ.

ಬೆಕ್ಕಿನ ಆಗಮನದಿಂದ ಮನೆಯಿಂದ ಹೊರಬೀಳುವ ಪುಟ್ಟ ಇಲಿಯೊಂದು ಆಶ್ರಯ ಕಂಡುಕೊಂಡು, ಹೊಸ ಬದುಕು ಕಟ್ಟಿಕೊಳ್ಳಲು ಪಡುವ ಪಡಿಪಾಟವನ್ನು ‘ದ ಗಾರ್ಬೆಜ್‌ ಮೌಸ್‌’ ಮನಮುಟ್ಟುವಂತೆ ಹೇಳುತ್ತದೆ. ಇವೆರೆಡೂ ಮಕ್ಕಳಿಗೆ ತುಂಬಾ ಇಷ್ಟವಾಗುವ ನಾಟಕಗಳು.

ಆಕಸ್ಮಿಕವಾಗಿ ದ್ವೀಪವೊಂದರಲ್ಲಿ ಸಿಲುಕುವ ಎದುರಾಳಿ ಸೈನ್ಯದ ಸೈನಿಕರಿಬ್ಬರು ಪರಸ್ಪರರ ಭಾಷೆ ಗೊತ್ತಿರದಿದ್ದರೂ ಹೇಗೆ ಆಪ್ತ ಗೆಳೆಯರಾಗುತ್ತಾರೆ ಎನ್ನುವ ಕತೆಯೇ ‘ರಾಬಿನಸನ್‌ ಆ್ಯಂಡ್‌ ಕ್ರುಸೊ’.

ಈ ಹಿಂದೆ ರಂಗ ಶಂಕರದಲ್ಲಿ ಪ್ರದರ್ಶನಗೊಂಡಿದ್ದ ನಾಟಕಗಳ ಮುದ್ರಿತ ವಿಡಿಯೊಗಳನ್ನು ಲಾಕ್‌ಡೌನ್‌ ಸಮಯದಲ್ಲಿ ಮಕ್ಕಳ ಮನರಂಜನೆಗಾಗಿ ಈಗ ಮರು ಪ್ರಸಾರ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.