ADVERTISEMENT

PV Web Exclusive | ಬಾಗೇಪಲ್ಲಿಯ ‘ರಾಕ್ ಗಾರ್ಡನ್’ನಲ್ಲಿ ಒಂದು ಸುತ್ತು

ರಾಹುಲ ಬೆಳಗಲಿ
Published 2 ಸೆಪ್ಟೆಂಬರ್ 2020, 8:41 IST
Last Updated 2 ಸೆಪ್ಟೆಂಬರ್ 2020, 8:41 IST
ಬಾಗೇಪಲ್ಲಿ ತಾಲ್ಲೂಕಿನ ಮಾಡಪ್ಪಲ್ಲಿ ಗ್ರಾಮದ ದೇವಿಕುಂಟೆ ಬೆಟ್ಟದ ಬಳಿಯಿರುವ ಬಂಡೆಗಲ್ಲುಗಳು
ಬಾಗೇಪಲ್ಲಿ ತಾಲ್ಲೂಕಿನ ಮಾಡಪ್ಪಲ್ಲಿ ಗ್ರಾಮದ ದೇವಿಕುಂಟೆ ಬೆಟ್ಟದ ಬಳಿಯಿರುವ ಬಂಡೆಗಲ್ಲುಗಳು   

‘ಅತ್ತ ಆಂಧ್ರಪ್ರದೇಶ, ಇತ್ತ ಕರ್ನಾಟಕದ ಗಡಿ ಕೊಂಡಿಯಂತಿರುವ ಬಾಗೇಪಲ್ಲಿ ಅಸಲಿಗೆ ಹೋರಾಟದ ಪ್ರದೇಶ. ರಾಜ್ಯ-ರಾಷ್ಟ್ರದ ಯಾವುದೆ ಭಾಗದಲ್ಲಿ ಅಸಹನೆ-ಅನ್ಯಾಯ ನಡೆದ ಸುಳಿವು ಸಿಕ್ಕರೆ ಸಾಕು, ಇಲ್ಲಿ ಅದರ ವಿರುದ್ಧ ಧ್ವನಿಯೇಳುತ್ತದೆ. ಹಸಿರು ಪ್ರದೇಶ ಕಡಿಮೆಯಿದ್ದಷ್ಟೇ ಸಕಲ ಸೌಕರ್ಯಗಳು ಇಲ್ಲಿ ವಿರಳ. ಆದರೆ, ಇವೆಲ್ಲವೂಗಳಿಗಿಂತ ಬಾಗೇಪಲ್ಲಿ ಹೆಚ್ಚು ಆಪ್ತವಾಗುವುದೆ ಬೇರೊಂದು ಕಾರಣಕ್ಕೆ’.

ಹೀಗೆ ಹೇಳಿ ಮಾತು ಮುಗಿಸಿದ್ದು ಬಾಗೇಪಲ್ಲಿ ತಾಲ್ಲೂಕಿನ ಮಾಡಪ್ಪಲ್ಲಿ ಎಂಬ ಗ್ರಾಮದ ಯುವಕ ನರಸಿಂಹಮೂರ್ತಿ. ಅದೇನು ಅಂಥದ್ದು ಎಂದು ಕುತೂಹಲದಿಂದ ಕೇಳಿದಾಗ, ಅವರು ಕರೆದೊಯ್ದು ನಿಲ್ಲಿಸಿದ್ದು, ದೇವಿಕುಂಟೆ ಎಂಬ ಬೃಹತ್ ಬೆಟ್ಟದ ಎದುರು. ಇನ್ನಷ್ಟು ದೂರ ನಡೆದು ಸೂಕ್ಷ್ಮವಾಗಿ ನೋಡಿದಾಗ, ಅಲ್ಲಿ ಕಂಡಿದ್ದು ಬಂಡೆಗಲ್ಲುಗಳ ಗೂಡು. ಆಗ ಹಿಂಬದಿಯಿಂದ ಮೆಲುಧ್ವನಿಯಲ್ಲಿ ಕೇಳಿ ಬಂದ ಸಾಲು: ಬಾಗೇಪಲ್ಲಿ ಆಪ್ತವಾಗುವುದೆ ಇಲ್ಲಿನ ಬಂಡೆಗಲ್ಲುಗಳಿಂದ. ಇದು ಒಂದರ್ಥದಲ್ಲಿ ‘ರಾಕ್‌ ಗಾರ್ಡನ್’ (ಬಂಡೆಗಲ್ಲುಗಳ ಉದ್ಯಾನ).

ಸುತ್ತಮುತ್ತಲೂ ಕಣ್ಣು ಹಾಯಿಸಿದಾಗ, ನಿಸರ್ಗ ನಿರ್ಮಿತ ‘ರಾಕ್‌ ಗಾರ್ಡನ್’ ಎಂದು ದೃಢಪಡಿಸಲು ಬಂಡೆಗಲ್ಲುಗಳು ತುದಿಗಾಲಲ್ಲಿ ನಿಂತಂತೆ ಕಂಡು ಬಂದವು. ನೂರಾರು ಮಂದಿ ಜೊತೆಗೂಡಿ ಬೃಹತ್ ಬಂಡೆಗಳನ್ನು ಒಂದೊಂದಾಗಿ ಜೋಡಿಸಿಟ್ಟಂತೆ ಭಾಸವಾಯಿತು. ಬಂಡೆಯೊಂದು ಆನೆ ರೂಪದಲ್ಲಿ ಕಂಡು ಬಂದರೆ, ಮತ್ತೊಂದು ಬಂಡೆಯು ಆಮೆಯಂತೆ ಗೋಚರಿಸಿತು. ಬೆಟ್ಟದ ತುದಿಯಿಂದ ಇನ್ನೇನೂ ಉರುಳಿ ಬೀಳುವಂತೆ ಬಂಡೆಯೊಂದು ಭೀತಿ ಮೂಡಿಸಿದರೆ, 'ಭೂಮಿ ಬಾಯಿಬಿಟ್ಟರೂ-ಆಕಾಶ ಕಳಚಿ ಬಿದ್ದರೂ' ಸ್ವಲ್ಪವೂ ಅಳುಕುವುದಿಲ್ಲ ಎಂಬ ಆತ್ಮವಿಶ್ವಾಸದಲ್ಲಿ ಬಂಡೆ ನಿಂತಂತೆ ಕಂಡಿತು.

ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಯಾವುದೇ ಮೂಲೆಗೆ ಹೋದರೂ ಕೊಂಚ ಅಪರಿಚಿತ ಅನ್ನಿಸಿದರೂ ಬಂಡೆಗಲ್ಲುಗಳು ಮಾತ್ರ ಬಿಸಿಲಿನ ಆರ್ಭಟದ ನಡುವೆಯೂ ತಂಪಾದ ಅನುಭೂತಿ ನೀಡುತ್ತವೆ. ತಮ್ಮ ಮೇಲೆ ಏರಿ ಇಡೀ ಜಗತ್ತು ಆಸ್ವಾದಿಸಲು ಆಹ್ವಾನಿಸುತ್ತವೆ. ಅವುಗಳ ಇತಿಹಾಸ ಕೆಲವೇ ವರ್ಷಗಳದ್ದಲ್ಲ. ಶತಶತಮಾನಗಳ ನಂಟಿದೆ. ಪಾಳೇಗಾರರು-ರಾಜಮನೆತನಗಳ ಆಳ್ವಿಕೆಯಲ್ಲದೆ ಅದಕ್ಕೂ ಹಿಂದಿನ ದಿನಗಳಿಂದಲೂ ಇಲ್ಲಿನ ಬಂಡೆಗಲ್ಲುಗಳು ಅಸ್ತಿತ್ವ ಹೊಂದಿವೆ. ದೇಶದ ಸ್ವಾತಂತ್ರ್ಯ ಹೋರಾಟ, ರಾಜ್ಯಗಳ ರಚನೆ, ಗಡಿಭಾಗಗಳ ವಿಸ್ತರಣೆ ಸೇರಿದಂತೆ ಆಯಾ ಕಾಲಘಟ್ಟದಲ್ಲಿ ಅವು ಅಚ್ಚಳಿಯದ ಸಾಕ್ಷಿಯಾಗಿವೆ.

ಲಭ್ಯವಿರುವ ಫಲವತ್ತಾದ ಜಮೀನಿನಲ್ಲೇ ಕೃಷಿ ಚಟುವಟಿಕೆ ಮಾಡುವ ಬಾಗೇಪಲ್ಲಿ ಜನರಿಗೆ ಬಂಡೆಗಳೊಂದಿಗೆ ಗಾಢ ನಂಟು. ತಮ್ಮ ಊರಿನ ಆಸ್ತಿ ಮತ್ತು ಹೆಮ್ಮೆಯೆಂದೇ ಭಾವಿಸುವ ಅವರು ಬಂಡೆಗಲ್ಲುಗಳಿಗೆ ಸ್ವಲ್ಪವೂ ಧಕ್ಕೆಯಾಗದಿರಲಿ ಎಂದು ಕಾಳಜಿ ತೋರುತ್ತಾರೆ. ಬಂಡೆಗಲ್ಲುಗಳ ಮೇಲೆ ಏನನ್ನೂ ಸಹ ಬೆಳೆಯಲು ಆಗದಿರಬಹುದು ಅಥವಾ ಅವುಗಳಿಂದ ನೀರು ಉತ್ಪನ್ನವಾಗದಿರಬಹುದು.

ಆದರೆ, ವಾರಕ್ಕೊಮ್ಮೆ ಅಥವಾ ನೆನಪಾದಾಗಲೊಮ್ಮೆ ಅಲ್ಲಿನ ಕುಟುಂಬ ಸದಸ್ಯರು, ಯುವಕರು ಮತ್ತು ಮಕ್ಕಳು ಮನೆಯಿಂದ ಬುತ್ತಿ ಕಟ್ಟಿಕೊಂಡು ಬಂಡೆಗಲ್ಲುಗಳ ಬೆಟ್ಟವನ್ನು ಏರಲು ಹೊರಟು ಬಿಡುತ್ತಾರೆ. ಅಲ್ಲಿ-ಇಲ್ಲಿ ಕಾಲಿಡುತ್ತ ಬಂಡೆಗಲ್ಲುಗಳು ಏರುವುದೆಂದರೆ, ಅವರಿಗೆ ಪುಟ್ಟ ಕೆರೆಯೊಂದರಲ್ಲೇ ಈಜುವುದಷ್ಟೇ ಸಲೀಸು. ಬೆಟ್ಟವನ್ನು ತುತ್ತುದಿಗೇರಿ, ಬೆವರು ಹರಿಸಿ ಸುತ್ತಲೂ ಕಣ್ಣು ಹಾಯಿಸುತ್ತ ‘ಬಾಗೇಪಲ್ಲಿ' ಎಂದು ಜೋರಾಗಿ ಕೂಗಿದಾಗಲೇ ಅವರಿಗೆ ಸಮಾಧಾನ. ಸಕಾಲಕ್ಕೆ ಮಳೆ ಬಾರದಿದ್ದರೆ, ಬೆಟ್ಟದ ಮೇಲಿರುವ ಮರದತ್ತ ತೆರಳಿ ಪ್ರಾರ್ಥಿಸುತ್ತಾರೆ. ಹೀಗೆ ಮಾಡಿದ ಕೆಲ ದಿನಗಳಲ್ಲೇ ಮಳೆ ಬರುವುದು ಎಂಬ ನಂಬಿಕೆ ಅವರದ್ದು.

ದೇವಿಕುಂಟೆ ಬೆಟ್ಟದ ಸಮೀಪದಲ್ಲೇ ಇರುವ ಜಿ.ಚರ್ಲೊಪಲ್ಲಿ ಬೆಟ್ಟ, ಅಲ್ಲಿಂದ ಸ್ವಲ್ಪ ದೂರದಲ್ಲಿರುವ ಬಿಳ್ಳೂರು ಬೆಟ್ಟ, ಅಲ್ಲಿಂದ ಮತ್ತಷ್ಟು ಹೆಜ್ಜೆ ಹಾಕಿದರೆ ಕಾಣಸಿಗುವ ಗೊರ್ತಪಲ್ಲಿ ಬೆಟ್ಟ. ಹೀಗೆ ಒಂದೆರಡಲ್ಲ, ಬಾಗೇಪಲ್ಲಿಯ ಯಾವ ದಿಕ್ಕಿನಲ್ಲಿ ಹೋದರೂ ಅಲ್ಲಿ ಸ್ನೇಹದ ಹಸ್ತ ಚಾಚಿಕೊಂಡು ಬೆಟ್ಟಗಳು ನಿಂತಿವೆ. ಗುಮ್ಮನಾಯಕನ ಪಾಳ್ಯದ ಬಳಿಯಿರುವ ಬೆಟ್ಟಕ್ಕೆ ಹೋಗಿಬಿಟ್ಟರಂತೂ ಅದು ಬಂಡೆಗಲ್ಲುಗಳ ಸಾಮ್ರಾಜ್ಯ. ಅಲ್ಲಿ ಪಾಳೇಗಾರರು ನಿರ್ಮಿಸಿದ ಬೃಹತ್ ಕೋಟೆ ಅಚ್ಚರಿ ಮೂಡಿಸುತ್ತದೆ. ಕೋಟೆ ಪಾಳು ಬಿದ್ದಂತೆ ಕಂಡು ಬಂದರೂ ಒಂದೊಂದು ಕಲ್ಲು ಒಂದೊಂದು ಕತೆ ಹೇಳುತ್ತದೆ. ಅಲ್ಲಿ ಬೆಟ್ಟದ ಮೇಲಿರುವ ಪುಟ್ಟ ಪುಟ್ಟ ಹೊಂಡಗಳು ಬತ್ತುವುದಿಲ್ಲ. ವರ್ಷದ 12 ತಿಂಗಳು ನೀರು ಇರುತ್ತದೆ ಎಂಬುದೇ ವಿಶೇಷ.

ನರಸಿಂಹಮೂರ್ತಿ ಜೊತೆ ಬಂದಿದ್ದ ಸ್ನೇಹಿತ ವೆಂಕಟೇಶ, ‘ಬೆಟ್ಟವೊಂದನ್ನೇ ನೋಡಿದರೆ ಸಾಕೆ? ಅದರ ಮೇಲಿರುವ ಈಜುಕೊಳದಲ್ಲಿ ಈಜಾಡೋಣ ಬನ್ನಿ’ ಎಂದು ದೇವಿಕುಂಟೆ ಬೆಟ್ಟವನ್ನು ಹತ್ತಿಸಿಯೇ ಬಿಟ್ಟರು. ಸತತ ಎರಡು ಗಂಟೆ ಬೆಟ್ಟವನ್ನೇರಿ ತುದಿಯಲ್ಲಿ ನಿಂತಾಗ, ಕಂಡಿದ್ದು ನೈಸರ್ಗಿಕ ಈಜುಕೊಳ ಮತ್ತು ಚೆಂದನೆಯ ಕೋಟೆ. ನೀರಿನಲ್ಲಿ ಇಳಿದು ಕೆಲ ಹುಡುಗರು ಈಜಾಡಿದರೆ, ಕೆಲವರು ಪರಸ್ಪರ ನೀರನ್ನು ಚಿಮ್ಮಿಸುತ್ತ ನಲಿದಾಡಿದರು.

ಬೆಟ್ಟದಿಂದ ಇಳಿದು ಬರುವಾಗ, ಕೈ ಹಿಡಿದು ಒಂದು ಕ್ಷಣ ನಿಲ್ಲಿಸಿದ ವೆಂಕಟೇಶ, ‘ಮುಂದಿನ ವರ್ಷಗಳಲ್ಲಿ ನಾವು ಮತ್ತೆ ಹೀಗೆ ಬೆಟ್ಟ ಹತ್ತಲು ಆಗುವುದೋ ಇಲ್ವೊ ಗೊತ್ತಿಲ್ಲ. ಬಂಡೆಗಲ್ಲು ಮತ್ತು ಬೆಟ್ಟಗುಡ್ಡಗಳಿಲ್ಲದೆ ಬಾಗೇಪಲ್ಲಿ ಬರಡಾದರೆ, ನಾವು ಬದುಕಿದ್ದು ಸತ್ತಂತೆ’ ಎಂದು ಹೇಳುವಾಗ ಕಣ್ಣಂಚಿನಲ್ಲಿ ನೀರಿತ್ತು. ಏನಾಯಿತು ಎಂಬ ಆತಂಕ ನನಗೆ. ಯಾಕೆ ಹೀಗೆ ಹೇಳುತ್ತಿದ್ದೀರಿ ಎಂದು ಇನ್ನೇನೂ ಪ್ರಶ್ನಿಸುವವನಿದ್ದೆ.

ನಿಧಾನವಾಗಿ ಕೈ ಎತ್ತಿ ದೂರದಲ್ಲಿ ನಡೆಯುತ್ತಿದ್ದ ಬೆಟ್ಟಗಳನ್ನು ಕಡಿಯುವ ಕ್ವಾರಿಯತ್ತ ತೋರಿಸಿ, ವೆಂಕಟೇಶ ಸ್ವಲ್ಪ ಹೊತ್ತು ಮೌನವಾದರು. ಇದನ್ನು ಅರ್ಥ ಮಾಡಿಕೊಂಡ ನರಸಿಂಹಮೂರ್ತಿ, ‘ಬಂಡೆಗಲ್ಲುಗಳನ್ನು ಒಡೆಯಬೇಡಿ. ಅವು ನಮ್ಮ ಜೀವಸೆಲೆ. ಹಸಿರು ನೆಲ ಇಲ್ಲದ ನಮ್ಮ ಬಾಗೇಪಲ್ಲಿಗೆ ಬಂಡೆಗಲ್ಲುಗಳೇ ಜೀವಾಳ. ಬಂಡೆಗಲ್ಲುಗಳನ್ನು ಹಾಳು ಮಾಡದೆ ಮತ್ತು ಬೆಟ್ಟಗಳನ್ನು ಕಡಿಯದೆ ಬೇರೆ ಕೆಲಸ ಮಾಡಿಕೊಳ್ಳಿಯೆಂದು ಗ್ರಾಮಸ್ಥರೆಲ್ಲ ಸೇರಿ ಹಲವು ಬಾರಿ ಮನವಿ ಮಾಡಿದೆವು. ಹೋರಾಟ ನಡೆಸಿದೆವು. ಸರ್ಕಾರಕ್ಕೆ ದೂರು ಸಹ ನೀಡಿದೆವು. ಆದರೂ ಕಲ್ಲು ಗಣಿಗಾರಿಕೆ ನಿಂತಿಲ್ಲ’ ಎಂದು ನೋವು ತೋಡಿಕೊಂಡರು.

‘ಭೂಮಿ-ಆಕಾಶಕ್ಕೆ ಯಾವತ್ತೂ ಹೆದರದ ಬೆಟ್ಟಗಳು ಈಗ ಯಂತ್ರಗಳಿಗೆ ಪ್ರತಿರೋಧ ಒಡ್ಡುತ್ತ ಪುಡಿಪುಡಿಯಾಗುತ್ತಿವೆ. ಅವುಗಳನ್ನು ನೋಡಲಾಗದು' ಎಂದು ಅವರಿಬ್ಬರು ಮುನ್ನಡೆದರು. ಬಾಗೇಪಲ್ಲಿಗೆ ಜೀವ ನೀಡಿದ ಈ ಬೆಟ್ಟಗುಡ್ಡಗಳು, ಬಂಡೆಗಲ್ಲುಗಳು ಉಳಿದರೆ ಸಾಕು ಎಂಬ ಭಾವ ಅವರ ಮುಖದಲ್ಲಿ ಕಾಣುತಿತ್ತು.

ಅಂದ ಹಾಗೆ, ಬೆಂಗಳೂರಿನಿಂದ ಬಾಗೇಪಲ್ಲಿ ಅಷ್ಟೇನೂ ದೂರವಿಲ್ಲ. ಅಂತರ ಸುಮಾರು 80 ಕಿ.ಮೀ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ದೇವನಹಳ್ಳಿ, ಚಿಕ್ಕಬಳ್ಳಾಪುರ ಮಾರ್ಗವಾಗಿ ಸುಮಾರು ಎರಡೂವರೆ ಗಂಟೆಯಲ್ಲಿ ಬಾಗೇಪಲ್ಲಿ ತಲುಪಬಹುದು. ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ತಾಣ. ಬಂಡೆಗಲ್ಲುಗಳ ಉಗಮ, ವಿಶೇಷತೆ, ಆಕಾರ ಮುಂತಾದವುಗಳ ಬಗ್ಗೆ ಅಧ್ಯಯನ, ಸಂಶೋಧನೆ ಮಾಡುವವರಿಗೆ ಇದು ಪವಿತ್ರ ಕಾಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.