ADVERTISEMENT

PV Web Exclusive: ‘ದ್ವೀಪ’ ಮತ್ತು ಸೇತುವೆ ನಿರ್ಮಾಣ ಕುರಿತ ಚರ್ಚೆ

ಸುಕೃತ ಎಸ್.
Published 15 ಅಕ್ಟೋಬರ್ 2020, 14:29 IST
Last Updated 15 ಅಕ್ಟೋಬರ್ 2020, 14:29 IST
ಶರಾವತಿ ನದಿಚಿತ್ರ ಕೃಪೆ: ಡಾ. ನಿಸರ್ಗ
ಶರಾವತಿ ನದಿಚಿತ್ರ ಕೃಪೆ: ಡಾ. ನಿಸರ್ಗ   
""
""
""
""
""

ಬಾಲ್ಯದಲ್ಲಿ ಅಜ್ಜಿ ಮನೆಗೆ ಹೋಗುವುದು ಎಂದರೆ, ಅದು ನಮಗೊಂದು ಸಾಹಸದ ಕೆಲಸ. ಸಾಗರದಿಂದ ಹೊಳೆಬಾಗಿಲುವರೆಗೆ ಏನೂ ತೊಂದರೆ ಇಲ್ಲದೇ ಹೋಗುತ್ತಿದ್ದೆವು. ಅಲ್ಲಿಂದ ಲಾಂಚ್‌ನಲ್ಲಿ ನದಿಯನ್ನು ದಾಟುವುದೇ ಆ ಕಷ್ಟದ ಕೆಲಸ. ಆಚೆಯ ದಡ ದಾಟಿದ ಮೇಲೆ ನಮ್ಮ ಹಳ್ಳಿ ತಲುಪುವುದು ಕೂಡ ಅಷ್ಟೊಂದು ತ್ರಾಸದಾಯಕ ಆಗಿರಲಿಲ್ಲ. ಬಸ್‌ನಲ್ಲಿ ಹೋದರೆ, ಬಸ್‌ ಲಾಂಚ್‌ ಏರುವುದಕ್ಕೂ ಮೊದಲು ಎಲ್ಲಾ ಪ್ರಯಾಣಿಕರು ಕೆಳಗಿಳಿದು, ಲಾಂಚ್‌ ಹತ್ತಬೇಕು, ಆಮೇಲೆ ಬಸ್‌ ಲಾಂಚ್‌ ಸೇರಿಕೊಳ್ಳುತ್ತದೆ. ನಾವು ಸಣ್ಣವರಿರುವಾಗ ಬಸ್‌ನಲ್ಲೇ ಕುಳಿತಿರುತ್ತಿದ್ದೆವು. ಒಂದು ವೇಳೆ ಬಸ್‌ನಿಂದ ಇಳಿದರೆ, ಲಾಂಚ್‌ ಇಳಿದು, ಬಸ್‌ ಹುಡುಕಿ ಹತ್ತುವುದು ಹರಸಾಹಸ. ಅಷ್ಟರಲ್ಲಿ ಬಸ್‌ ತಪ್ಪಬಹುದು ಎಂಬ ತಳಮಳ. ಸಣ್ಣ ವಯಸ್ಸು ಬೇರೆ.

ಆ ದಿನಗಳಲ್ಲಿ ಸಿಂಗದೂರು ಇಷ್ಟೊಂದು ಪ್ರಚಲಿತಕ್ಕೆ ಬಂದಿರಲಿಲ್ಲ. ಒಂದು ಸಣ್ಣ ಗುಡಿಯಿತ್ತು ಅಷ್ಟೆ. ಈಗ ರಾಜ್ಯದ ಪ್ರಮುಖ ದೇವಸ್ಥಾನವಾಗಿ ಬೆಳೆದಿದೆ. ರಾಜ್ಯದಾದ್ಯಂತ ಭಕ್ತರು ಬರುತ್ತಿದ್ದಾರೆ. ಹೊರ ರಾಜ್ಯಗಳಿಂದ ಬರುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕು ಹಲವು ಕಾರಣಗಳಿಗಾಗಿ ಪ್ರಸಿದ್ಧ. ಕಾಗೋಡು ಚಳವಳಿ, ಸಾಹಿತ್ಯ, ಸಂಗೀತ, ಕೆಳದಿ ಸಂಸ್ಥಾನ, ಮಲೆನಾಡು ಆದ್ದರಿಂದ ಪ್ರವಾಸಿ ತಾಣಕ್ಕೇನೂ ಕೊರತೆ ಇಲ್ಲ. ಪ್ರತೀ ಸೆಪ್ಟೆಂಬರ್‌ನಿಂದ ಅಕ್ಟೋಬರ್ ಅವಧಿಯಲ್ಲಿ ಜೋಗ ನೋಡಲು ಬರುವವರ ಸಂಖ್ಯೆ ಹೆಚ್ಚು. ಜೋಗ ನೋಡಲು ಬರುವವರು, ಒಂದು ಮ್ಯಾ‍ಪ್‌ ಹಾಕಿಕೊಂಡು ಬರುವುದು ರೂಢಿ. ಜೋಗ, ವರದಹಳ್ಳಿ ಕ್ಷೇತ್ರ, ಇಕ್ಕೇರಿ–ಕೆಳದಿ, ಸಿಗಂದೂರು ಹೀಗೆ...

ಲಾಂಚ್‌ ನದಿಯಲ್ಲಿ ಸಾಗುತ್ತಿರುವುದು
ಚಿತ್ರ ಕೃಪೆ: ಶಿಬಿ ಚಕ್ರವರ್ತಿ

ಸಿಗಂದೂರಿಗೆ ಬರುವ ಭಕ್ತರಿಗೆ, ಲಾಂಚ್‌ ಪ್ರಯಾಣ ಎಂದರೆ, ಅದೊಂದು ಮನೋರಂಜನೆಯ ಅನುಭೂತಿ. ಸಣ್ಣ ಸಣ್ಣ ಮಕ್ಕಳನ್ನೂ ಸಹ, ಚಲಿಸುತ್ತಿರುವ ಲಾಂಚ್‌ನ ಪಟ್ಟಿ ಮೇಲೆ ನಿಲ್ಲಿಸಿಕೊಂಡು, ನೀರು ತೋರಿಸುವುದು, ಮೀನು ತೋರಿಸುವುದು, ಸೆಲ್ಫಿ, ಫೋಟೊ ಹೀಗೆ. ಕೆಲವರು ಕವಳ, ಜರದಾ ಅಗೆದು, ಅದನ್ನು ನೇರವಾಗಿ ಶರಾವತಿಗೆ ಉಗುಳುತ್ತಿದ್ದರು.

ADVERTISEMENT

ಗ್ರಾಮಸ್ಥರ ವಾಹನಗಳನ್ನು ಲಾಂಚ್‌ನೊಳಗೆ ಹಾಕುವುದು ಎಂದರೆ, ಜೀವ ಪಣಕ್ಕಿಟ್ಟಂತೆ. ಹೊಸ ಗಾಡಿ ಖರೀದಿಸಿ ಲಾಂಚ್‌ನೊಳಗೆ ಏರಿಸಿದರೆ, ಒಂದೆರೆಡು ‘ಕಲೆ’ (ಸ್ಕ್ರಾಚ್‌)ಗಳು ಗ್ಯಾರಂಟಿ. ಗ್ರಾಮಸ್ಥರು ವಾಹನಗಳನ್ನು ಲಾಂಚ್‌ಗೆ ಏರಿಸುವುದನ್ನು ನೋಡುವಾಗ ಪ್ರವಾಸಿಗರಲ್ಲಿ ಅಸಹನೆ ಕಾಣುತ್ತಿತ್ತು. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿತ್ತು.

ಸರ್ಕಾರ ಕೊನೆಗೂ, ಗ್ರಾಮಸ್ಥರ ಗಾಡಿಗಳಿಗೆ ಮೊದಲ ಆದ್ಯತೆ ನೀಡಬೇಕು, ಲಾಂಚ್‌ನಲ್ಲಿ ಜಾಗ ಉಳಿದರೆ ಮಾತ್ರ ಪ್ರವಾಸಿಗರ ವಾಹನಗಳನ್ನು ಇಳಿಸಬಹುದು ಎಂದು ಹೇಳಿತು. ಇದರಿಂದ ಜಗಳಗಳು ಕಡಿಮೆಯೇನೊ ಆದವು. ಆದರೆ ಪೂರ್ತಿ ನಿಲ್ಲಲಿಲ್ಲ.

‘ನಮ್ಮ ತ್ಯಾಗದಿಂದ ಇವತ್ತು ರಾಜ್ಯದ ವಿವಿಧ ಭಾಗಗಳ ಜನರ ಮನೆಗಳಲ್ಲಿ ಬೆಳಕು ಹರಿದಿದೆ. ಆ ಕೃತಜ್ಞತೆಯೂ ಇಲ್ಲಿಗೆ ಪ್ರವಾಸಕ್ಕೆ ಬರುವವರಿಗೆ ಇಲ್ಲವಲ್ಲ. ಬಂದು ಜಗಳವಾಡುತ್ತಾರೆ. ನಮ್ಮ ಮನೆಗಳಿಗೆ ಹೋಗುವುದಕ್ಕೆ, ಬೇರೆ ಕಡೆಯಿಂದ ಬಂದವರ ಮರ್ಜಿ ಕಾಯಬೇಕಲ್ಲ’ ಎಂಬುದು ಗ್ರಾಮಸ್ಥರ ಬೇಸರಕ್ಕೆ ಕಾರಣ.

ಲಾಂಚ್‌ನ ಆ ಬದಿ ಇರುವ ಪ್ರದೇಶಕ್ಕೆ ಅಲ್ಲಿನ ಜನರೇ ‘ದ್ವೀಪ’ ಎಂದೂ ಹೆಸರಿಟ್ಟುಕೊಂಡಿದ್ದಾರೆ. ಇಲ್ಲಿಗೆ ಬರುವ ಬಸ್‌ ಒಂದರ ಹಿಂದೆ ಶ್ರೀಲಂಕಾ ಎಂದೂ ಬರೆದುಕೊಂಡಿದೆ. ಹಿಂದೆ ಹಿರೇಭಾಸ್ಕರ ಡ್ಯಾಂ ಇತ್ತು. ಅದರ ನಡುವೆಯೇ ರಸ್ತೆ ಇತ್ತು. ಅದು ಸಾಗರ ಕಡೆಗೆ ಬರಲು ಇದ್ದ ಒಂದು ಸಂಪರ್ಕ. ಅದನ್ನು ಮುಳುಗಿಸಿಯೇ ಲಿಂಗನಮಕ್ಕಿ ಅಣೆಕಟ್ಟನ್ನು ಕಟ್ಟಲಾಯಿತು. ಇದ್ದ ಒಂದು ಸಂಪರ್ಕ ಸೇತುವೂ ಕಡಿದುಹೋಯಿತು. ಆರಂಭದಲ್ಲಿ ಜಂಗಲ್‌ ‘ಸೌಲಭ್ಯ’ (ಎರಡು ದೋಣಿಯನ್ನು ಸೇರಿಸಿ, ಹಲಗೆ ಪಟ್ಟಿ ಕಟ್ಟಿ ಮಾಡಿದ ವ್ಯವಸ್ಥೆ) ಇತ್ತು. ಸರ್ಕಾರ, ಕ್ರಮೇಣ ಲಾಂಚ್‌ ಸೇವೆಯನ್ನು ಆರಂಭಿಸಿತು.

ಲಾಂಚ್‌ ಏರುತ್ತಿರುವ ಜನ
ಚಿತ್ರ ಕೃಪೆ: ಶಿಬಿ ಚಕ್ರವರ್ತಿ

ಸೇತುವೆ ಬೇಕು ಎಂದು ಗಟ್ಟಿದನಿಯ ಹೋರಾಟ ಪ್ರಾರಂಭವಾಗಿದ್ದು 1975–76ರಲ್ಲಿ. ಅಂದಿನಿಂದ ಸುದೀರ್ಘ ಹೋರಾಟದ ಫಲವಾಗಿ ಹತ್ತು ಹಲವು ಶಂಕುಸ್ಥಾಪನೆಗಳ ನಂತರ, ಕಳೆದ ವರ್ಷ ಸೇತುವೆ ಕಾಮಗಾರಿ ಆರಂಭವಾಗಿದೆ.

ಇತ್ತೀಚೆಗೆ ಮತ್ತೆ ಅಜ್ಜಿ ಮನೆಗೆ ಹೋಗಿದ್ದೆವು. ಲಾಂಚ್‌ನಲ್ಲೇ ಕುಳಿತು ಸೇತುವೆ ನಿರ್ಮಾಣದ ಕಾಮಗಾರಿ ನೋಡಿಕೊಂಡು ಸಾಗುತ್ತಿದ್ದೆವು. ನಮ್ಮ ವಾಟ್ಸ್‌ಆ್ಯಪ್‌ ಸ್ಟೇಟಸ್‌ಗೆ ಕಾಮಗಾರಿಗಳ ವಿಡಿಯೊ, ಫೋಟೊ ಹಾಕಿದೆವು. ಆ ಕಡೆಯ ದಂಡೆ ಸೇರುವುದರ ಒಳಗಾಗಿ, ‘ಪರಿಸರ ಹಾನಿಯಾಗುತ್ತಿದೆ. ದೊಡ್ಡ ದೊಡ್ಡ ಯಂತ್ರಗಳು ಶರಾವತಿಯನ್ನು ಹೇಗೆ ಬಗೆಯುತ್ತಿವೆ ನೋಡಿ’, ‘ಆಧುನಿಕರಣದ ಕರಾಳ ಮುಖಗಳು ಇವು’ ಎಂಬ ಸಂದೇಶಗಳು ಪ್ರತಿಕ್ರಿಯೆ ರೂಪದಲ್ಲಿ ಬಂದವು.

ಸೇತುವೆ ಕಾಮಗಾರಿ

ಸೇತುವೆ ನಿರ್ಮಾಣ ಕುರಿತು ನಡೆದ ಹೋರಾಟಗಳ ಪರಿವೇ ಇಲ್ಲದವರು ಒಬ್ಬರು, ‘ಅಲ್ಲಿನ ಜನ ಸೇತುವೆ ಬೇಕು ಎಂದು ಕೇಳಿಲ್ಲವಲ್ಲ. ಅಣೆಕಟ್ಟು ಕಟ್ಟಿ ಇಷ್ಟು ವರ್ಷಗಳಾಗಿವೆ. ಸೇತುವೆ ಇಲ್ಲದೇ ಇಷ್ಟು ವರ್ಷ ಬದುಕಿರಲಿಲ್ಲವೇ ದ್ವೀಪದ ಜನ. ಪರಿಸರ ನಾಶವಾಗುತ್ತದೆ. ಆಧುನಿಕತೆಯ ಗಾಳಿಯಿಲ್ಲದೇ ಸ್ವಚ್ಛಂದವಾಗಿದ್ದ ಪ್ರದೇಶದಲ್ಲಿ ಸೇತುವೆ ನಿರ್ಮಣ ಮಾಡಿ ಎಲ್ಲವನ್ನೂ ಹಾಳು ಮಾಡಲಾಗುತ್ತಿದೆ’ ಎಂದು ಕಾಮೆಂಟ್‌ ಮಾಡಿದರು.

ದ್ವೀಪ (ತುಮರಿ) ಭಾಗದಲ್ಲಿರುವ ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ಸ್ಥಳೀಯರಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿರುವುದಿಲ್ಲ. ಸಾಗರ ತಾಲ್ಲೂಕಿಗೆ ಸೇರುವ ಈ ಭಾಗದಿಂದ ತಾಲ್ಲೂಕು ಕೇಂದ್ರಕ್ಕೆ ಬರಬೇಕು ಎಂದರೆ, ಕನಿಷ್ಠ ಒಂದೂವರೆ ತಾಸುಗಳ ಪ್ರಯಾಣ (ಮಧ್ಯೆ ಲಾಂಚ್‌ ಮೂಲಕ) ಮಾಡಬೇಕು. ಸೇತುವೆ ಪೂರ್ಣವಾದರೆ, ಅಡೆತಡೆಯಿಲ್ಲದೆ ಮುಕ್ಕಾಲು ತಾಸಿನಲ್ಲಿ ತಾಲ್ಲೂಕು ಕೇಂದ್ರವನ್ನು ತಲುಪಬಹುದು.

ಲಾಂಚ್‌ಗಾಗಿ ಕಾಯುತ್ತಿರುವುದು
ಚಿತ್ರ ಕೃಪೆ: ಶಿಬಿ ಚಕ್ರವರ್ತಿ

ದ್ವೀಪ ಭಾಗದ ಶಾಲೆ, ಕಾಲೇಜು, ಆಸ್ಪತ್ರೆಗಳ ಸ್ಥಿತಿ ಯಾರಿಗೂ ಬೇಡ. ರಾತ್ರಿ ವೇಳೆ ಗಂಭೀರ ಕಾಯಿಲೆಯೇನಾದರೂ ಕಾಣಿಸಿಕೊಂಡರೆ, ಸಾಗರಕ್ಕೆ ತೆರಳಲು ಬೇರೆ ದಾರಿ ಇಲ್ಲ. ಲಾಂಚ್‌ ಸೌಲಭ್ಯ ಇರುವುದು ಸಂಜೆಯವರೆಗೆ ಮಾತ್ರ. ನಿಟ್ಟೂರಿಗೆ ಹೋಗಬೇಕು, ಅಲ್ಲಿಂದ ಹೊಸನಗರ, ಇಲ್ಲ ಘಟ್ಟದ ಕೆಳಗೆ ಇಳಿದು ಹೋಗಬೇಕು. ಸಾಗರಕ್ಕೆ ಬರಲು ಬೇರೆ ದಾರಿಗಳಿವೆ. ಬ್ಯಾಕೋಡು, ಕೋಗಾರು ಮೂಲಕ ಕಾರ್ಗಲ್‌ಗೆ ಬಂದು ಸಾಗರ ಬರುವುದು. ಈ ಎಲ್ಲಾ ದಾರಿಗಳು ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವ ರೀತಿಯಂಥವು. ಸಾಗರ ಈ ಭಾಗಕ್ಕೆ ಹೆಚ್ಚು ಸಮೀಪ (ಲಾಂಚ್‌ ಮಾರ್ಗದಲ್ಲಿ ಬಂದರೆ). ಆದರೆ, ಸೇತುವೆ ಇಲ್ಲ. ಹಳ್ಳಿಯ ಜನ ಇಷ್ಟು ವರ್ಷಗಳಿಂದ ಈ ಎಲ್ಲ ಅನಾನುಕೂಲತೆಗಳಿಗೆ ಒಗ್ಗಿಕೊಂಡಿದ್ದಾರೆ. ಅನಾರೋಗ್ಯದಂಥ ತುರ್ತು ಸಮಯದಲ್ಲಿ ಒಬ್ಬರಿಗೊಬ್ಬರು ಆಗಿಕೊಂಡು ಹೇಗೋ ಜೀವನ ಸಾಗಿಸುತ್ತಿದ್ದಾರೆ. ಮದುವೆ ಮಾಡಬೇಕು ಎಂದರೂ ಕಷ್ಟ. ಮದುವೆ ಮನೆಗೆ ಹೆಚ್ಚಿಗೆ ಹಾಲು ಬೇಕು ಎಂದರೂ, ಬೆಳಿಗ್ಗೆ ಮೊದಲ ಬಸ್ಸಿಗೆ ಸಾಗರದಿಂದ ಹಾಲು ಕಳುಹಿಸಿದರೆ ಇಲ್ಲಿಗೆ ಬರುತ್ತದೆ.

ಮದುವೆಗೆ ಹೆಣ್ಣು ಅಥವಾ ಗಂಡು ಸಿಗುವುದೂ ಈ ಭಾಗದ ಜನರಿಗೆ ಕಷ್ಟವೇ. ಲಾಂಚ್‌ ಎಲ್ಲ ದಾಟಿಕೊಂಡು ಯಾರು ಹೋಗುತ್ತಾರೆ? ಯಾವ ಸೌಲಭ್ಯವೂ ಇಲ್ಲದ ಅಲ್ಲಿಗೆ ನಮ್ಮ ಮಗಳನ್ನು ಮದುವೆ ಮಾಡಿ ಏಕಾದರೂ ಕಳುಹಿಸಬೇಕು? ಎಂದು ಹೇಳುವವರೇ ಹೆಚ್ಚು.

ರಾಜ್ಯಕ್ಕೆ ವಿದ್ಯುತ್‌ ಬೇಕು ಎಂದು ತಮ್ಮ ಮನೆ ಮಠಗಳನ್ನು ಬಿಟ್ಟು, (ಈಗಲೂ ಹಲವರಿಗೆ ಪರಿಹಾರ ಸಿಕ್ಕಿಲ್ಲ, ಸೂರೂ ಸಿಕ್ಕಿಲ್ಲ) ಎಲ್ಲೆಲ್ಲೂ ನೆಲೆಸಿ ಕಷ್ಟದ ಜೀವನ ಸಾಗಿಸುತ್ತಿರುವ ಜನರಿದ್ದಾರೆ. ಈ ದ್ವೀಪದ ಜನರಿಗೆ ವಿದ್ಯುತ್‌ ಕೂಡ ಮರೀಚಿಕೆಯಂತೆ ಇತ್ತು. ಮೊದಲು ಐದಾರು ದಿನಗಳ ಕಾಲ ವಿದ್ಯುತ್‌ ಪೂರೈಕೆ ಇರುತ್ತಿರಲಿಲ್ಲ. ಈಗ ಸ್ವಲ್ಪ ಪರಿಸ್ಥಿತಿ ಸುಧಾರಿಸಿದೆ.

ಲಾಂಚ್‌
ಚಿತ್ರ ಕೃಪೆ: ಶಿಬಿ ಚಕ್ರವರ್ತಿ

ಸಂಪರ್ಕ ಎನ್ನುವುದೇ ಅಭಿವೃದ್ಧಿ ಅಲ್ಲ. ಆದರೆ, ಅಭಿವೃದ್ಧಿಗೆ ಪೂರಕವಾದದ್ದು. ಜನರ ಜೀವನವನ್ನು ಉತ್ತಮ, ಸುಲಲಿತಗೊಳಿಸುವ ಸಾಧನ ಅದು. ನಾವು ಎಲ್ಲೋ ದೂರದಲ್ಲಿ ಕೂತು, ಅಲ್ಲಿನ ಜನರ ತ್ಯಾಗದಿಂದ ಸಿಕ್ಕ ವಿದ್ಯುತ್‌ ಬಳಸಿ, ಮೊಬೈಲ್‌ಗಳಿಗೆ ಚಾರ್ಚ್‌ ಹಾಕಿಕೊಂಡು, ಅದೇ ಮೊಬೈಲ್‌ನಿಂದ, ‘ಯಾರು ಸೇತುವೆ ಬೇಕು ಎಂದು ಕೇಳಿದ್ದರು, ಪರಿಸರ ನಾಶ, ಆಧುನಿಕತೆ ಬಂದು ಬಿಡುತ್ತದೆ’ ಎಂದರೆ, ಇದೆಂಥಾ ಕ್ರೌರ್ಯ. ನಮಗೆ ಎಲ್ಲ ಸೌಲಭ್ಯ ಬೇಕು. ಆದರೆ, ನಮ್ಮ ಪಕ್ಕದ ಪ್ರದೇಶದ ಜನರಿಗೆ ಯಾವುದೇ ಸೌಲಭ್ಯವೂ ಸಿಗಬಾರದು ಎಂದು ಬಯಸುವುದು ಎಷ್ಟು ಸರಿ?

ಅಭಿವೃದ್ಧಿ ಮತ್ತು ಪರಿಸರ ನಾಶ. ಈ ಕುರಿತು ಚರ್ಚೆಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ನಡೆಯುತ್ತಲೂ ಇದೆ. ಪರಿಸರ ನಾಶ ಸರಿಯಲ್ಲ. ಹಾಗೆಂದು ಅಭಿವೃದ್ಧಿಯನ್ನು ಕಡೆಗಣಿಸುವುದು ಕೂಡ ಸರಿಯಲ್ಲ. ಈ ಎರಡಕ್ಕೂ ಒಂದು ಮಧ್ಯೆ ಗೆರೆ ಎಳೆಯಲು ಸಾಧ್ಯವಿಲ್ಲ. ನಾವು ಎಲ್ಲ ಸೌಲಭ್ಯವನ್ನು ಬಳಸಿಕೊಂಡು ಬೇರೆ ಅವರಿಗೆ ಅದು ಸಿಗಬಾರದು, ಪರಿಸರ ನಾಶವಾಗುತ್ತದೆ ಎನ್ನುವುದು ಎಲ್ಲೋ ಒಂದು ಕಡೆ ಕ್ರೌರ್ಯವೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.