ADVERTISEMENT

ಆಳ–ಅಗಲ: ಕಚ್ಚಾ ತೈಲ, ಒಪೆಕ್‌ ಬದಲು ಅಮೆರಿಕದತ್ತ ಭಾರತ ಒಲವು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 19:31 IST
Last Updated 23 ಮಾರ್ಚ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವದಲ್ಲಿ ಅತಿಹೆಚ್ಚು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುವ ದೇಶಗಳ ಸಾಲಿನಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ. ದೇಶದಲ್ಲಿ ಪ್ರತಿನಿತ್ಯ ಅಗತ್ಯವಿರುವ ಕಚ್ಚಾತೈಲದ ಶೇ 84ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಈವರೆಗೆ ಕಚ್ಚಾತೈಲಕ್ಕಾಗಿ ಭಾರತವು ಮಧ್ಯಪ್ರಾಚ್ಯ ಮತ್ತು ಕೊಲ್ಲಿ ರಾಷ್ಟ್ರಗಳನ್ನು ಅವಲಂಬಿಸಿತ್ತು. ಈ ರಾಷ್ಟ್ರಗಳು ಒಪೆಕ್‌ (ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ) ಸದಸ್ಯ ರಾಷ್ಟ್ರಗಳಾಗಿವೆ. ಈಗಲೂ ಭಾರತಕ್ಕೆ ಆಮದಾಗುವ ಕಚ್ಚಾತೈಲದಲ್ಲಿ ಒಪೆಕ್ ರಾಷ್ಟ್ರಗಳದ್ದೇ ಸಿಂಹಪಾಲು. ಆದರೆ 2021ರ ಜನವರಿ ಮತ್ತು ಫೆಬ್ರುವರಿಯಲ್ಲಿ ಒಪೆಕ್ ದೇಶಗಳಿಂದ ಭಾರತವು ಆಮದು ಮಾಡಿಕೊಂಡ ಕಚ್ಚಾತೈಲದ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಅಮೆರಿಕದಿಂದ ಆಮದು ಮಾಡಿಕೊಂಡ ಕಚ್ಚಾತೈಲದ ಪ್ರಮಾಣದಲ್ಲಿ ಏರಿಕೆಯಾಗಿದೆ.

ಒಪೆಕ್ ರಾಷ್ಟ್ರಗಳು ಕಚ್ಚಾತೈಲದ ಬೆಲೆ ಏರಿಕೆ ಮಾಡಲು ಉತ್ಪಾದನೆ ಕಡಿತ ತಂತ್ರದ ಮೊರೆ ಹೋಗಿದ್ದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಕಚ್ಚಾತೈಲಕ್ಕಾಗಿ ಒಪೆಕ್ ದೇಶಗಳ ಮೇಲಿನ ಅವಲಂಬನೆಯನ್ನು ಕೇಂದ್ರ ಸರ್ಕಾರವು ಕಡಿಮೆಮಾಡುತ್ತಿದೆ. ಕಚ್ಚಾ ತೈಲ ಪೂರೈಕೆಯಲ್ಲಿನ ವ್ಯತ್ಯಯ ಮತ್ತು ಬೆಲೆಯಲ್ಲಿನ ಏರಿಕೆಯೇ ಇದಕ್ಕೆ ಪ್ರಮುಖ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. 2020ರಲ್ಲಿ ಕೋವಿಡ್‌ನ ಕಾರಣದಿಂದ ವಿಶ್ವದಾದ್ಯಂತ ತೈಲದ ಬೇಡಿಕೆ ಕುಸಿದಿತ್ತು. ಇದರಿಂದ ಕಚ್ಚಾತೈಲದ ಬೆಲೆಯೂ ಕುಸಿದಿತ್ತು. ಲಾಕ್‌ಡೌನ್‌ ತೆರವಿನ ನಂತರ ಕಚ್ಚಾತೈಲಕ್ಕೆ ಬೇಡಿಕೆಯೂ ಹೆಚ್ಚಿತು, ಬೆಲೆಯೂ ಏರಿಕೆಯಾಯಿತು. ಚಳಿಗಾಲದ ಆರಂಭದೊಂದಿಗೆ ವಿಶ್ವದ ಹಲವೆಡೆ ಕೋವಿಡ್‌-19ರ ಎರಡನೇ ಆಲೆಯೂ ಆರಂಭವಾಯಿತು. ಕಚ್ಚಾತೈಲದ ಬೇಡಿಕೆ ಮತ್ತು ಬೆಲೆ ಮತ್ತೆ ಕುಸಿಯಿತು. ಇದನ್ನು ಸರಿದೂಗಿಸುವ ಉದ್ದೇಶದಿಂದ ಒಪೆಕ್ ರಾಷ್ಟ್ರಗಳು ಕಚ್ಚಾತೈಲ ಉತ್ಪಾದನೆಯನ್ನು ಕಡಿತ ಮಾಡಿದವು. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಪೂರೈಕೆಯಲ್ಲಿ ವ್ಯತ್ಯಯವಾಯಿತು. ಇದರ ಪರಿಣಾಮವಾಗಿ ಕಚ್ಚಾತೈಲದ ಬೆಲೆ ಏರಿಕೆಯಾಯಿತು.

ADVERTISEMENT

ಒಪೆಕ್ ದೇಶಗಳು ಪೂರೈಕೆ ಮಾಡುತ್ತಿದ್ದ ಬ್ರೆಂಟ್‌ ಕಚ್ಚಾತೈಲದ ಬೆಲೆಗಿಂತಲೂ ಕಡಿಮೆ ಬೆಲೆಯಲ್ಲಿ ಅಮೆರಿಕದ ಡಬ್ಲ್ಯುಟಿಐ ಕಚ್ಚಾತೈಲ ಲಭ್ಯವಿತ್ತು. ಅಮೆರಿಕದಲ್ಲೂ ಬೇಡಿಕೆ ಕುಸಿದಿತ್ತು ಮತ್ತು ತೈಲ ಕಂಪನಿಗಳಲ್ಲಿ ಸಾಕಷ್ಟು ಸಂಗ್ರಹ ಇದ್ದ ಕಾರಣ, ಅಮೆರಿಕದ ಕಚ್ಚಾತೈಲವು ಕಡಿಮೆ ಬೆಲೆಗೆ ಬಿಕರಿಯಾಯಿತು. ಕಡಿಮೆ ಬೆಲೆಗೆ ಲಭ್ಯವಿದ್ದ ಕಾರಣ ಭಾರತವೂ ಅಮೆರಿಕದ ಕಚ್ಚಾತೈಲವನ್ನು ಖರೀದಿ ಮಾಡಿತು. 2020ರ ಡಿಸೆಂಬರ್‌ನಲ್ಲಿ ಭಾರತಕ್ಕೆ ಹೆಚ್ಚು ಕಚ್ಚಾತೈಲ ಪೂರೈಸಿದ ದೇಶಗಳ ಸಾಲಿನಲ್ಲಿ ಅಮೆರಿಕವು 5ನೇ ಸ್ಥಾನದಲ್ಲಿತ್ತು. 2021ರ ಜನವರಿಯಲ್ಲಿ ಅಮೆರಿಕವು, ಭಾರತಕ್ಕೆ ಹೆಚ್ಚು ಕಚ್ಚಾತೈಲ ಪೂರೈಸಿದ ದೇಶಗಳ ಸಾಲಿನಲ್ಲಿ ಮೂರನೇ ಸ್ಥಾನಕ್ಕೆ ಏರಿತು. ಫೆಬ್ರುವರಿಯಲ್ಲಿ ಅಮೆರಿಕವು ಎರಡನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

ಭಾರತಕ್ಕೆ ಹೆಚ್ಚು ಕಚ್ಚಾತೈಲ ಪೂರೈಸುವ ದೇಶಗಳ ಪಟ್ಟಿಯಲ್ಲಿ ಹಲವು ವರ್ಷಗಳಿಂದ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದ್ದ ಸೌದಿ ಅರೇಬಿಯಾವು, ಇದೇ ಅವಧಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿಯಿತು. ಬೆಲೆ ಹೆಚ್ಚಳದ ಕಾರಣ ಸೌದಿ ಅರೇಬಿಯಾದಿಂದ ಆಮದು ಮಾಡಿಕೊಳ್ಳುವ ಕಚ್ಚಾತೈಲದ ಪ್ರಮಾಣವನ್ನು ಭಾರತ ಕಡಿತ ಮಾಡಿತು. ಭಾರತಕ್ಕೆ ಹೆಚ್ಚು ಕಚ್ಚಾತೈಲ ಪೂರೈಕೆ ಮಾಡುವ ದೇಶಗಳ ಪಟ್ಟಿಯಲ್ಲಿ ಹಲವು ವರ್ಷಗಳಿಂದ ಇರಾಕ್ ಮೊದಲ ಸ್ಥಾನ ಕಾಯ್ದುಕೊಂಡಿದೆ. ಇರಾಕ್ ಈಗಲೂ ಮೊದಲ ಸ್ಥಾನದಲ್ಲೇ ಇದ್ದರೂ, ಅಲ್ಲಿಂದ ಆಮದು ಮಾಡಿಕೊಳ್ಳುವ ಕಚ್ಚಾತೈಲದ ಪ್ರಮಾಣವನ್ನು ಕೇಂದ್ರ ಸರ್ಕಾರ ಕಡಿತ ಮಾಡಿದೆ. 2020ರ ಫೆಬ್ರುವರಿಗೆ ಹೋಲಿಸಿದರೆ, 2021ರ ಫೆಬ್ರುವರಿಯಲ್ಲಿ ಇರಾಕ್‌ನಿಂದ ಆಮದು ಮಾಡಿಕೊಂಡ ಕಚ್ಚಾತೈಲದ ಪ್ರಮಾಣದಲ್ಲಿ ಶೇ 23ರಷ್ಟು ಇಳಿಕೆಯಾಗಿದೆ.

ಕಚ್ಚಾತೈಲದ ಉತ್ಪಾದನೆ ಕಡಿತ ಮಾಡಿದ್ದರಿಂದಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗುತ್ತಿದೆ. ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಆರ್ಥಿಕತೆಗೆ, ಈ ಬೆಲೆ ಏರಿಕೆಯಿಂದ ಅಡಚಣೆಯಾಗುತ್ತದೆ. ಹೀಗಾಗಿ ತೈಲ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಿ ಎಂದು ಭಾರತವು ಒಪೆಕ್ ಸಂಘಟನೆಗೆ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಒಪೆಕ್ ತಿರಸ್ಕರಿಸಿತು. 2020ರಲ್ಲಿ ಅಗ್ಗದ ಬೆಲೆಗೆ ಖರೀದಿಸಿದ ಕಚ್ಚಾತೈಲ ನಿಮ್ಮ ಸಂಗ್ರಹಾಗಾರಗಳಲ್ಲಿ ಇದೆ. ಅದನ್ನು ಬಳಸಿ ಎಂದು ಹೇಳಿತು. ಈ ಬೆಳವಣಿಗೆಯ ನಂತರ ಕೇಂದ್ರ ಸರ್ಕಾರವು, ಕಚ್ಚಾತೈಲ ಆಮದು ನೀತಿಯಲ್ಲಿಯೇ ಬದಲಾವಣೆ ಮಾಡಲು ಕ್ರಮ ತೆಗೆದುಕೊಂಡಿತು.

ಒಪೆಕ್‌ನ ಈ ತಿರಸ್ಕಾರದ ಬೆನ್ನಲ್ಲೇ, ‘ಮಧ್ಯಪ್ರಾಚ್ಯ ದೇಶಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾತೈಲದ ಪ್ರಮಾಣದಲ್ಲಿ ಇಳಿಕೆ ಮಾಡಿ’ ಎಂದು ಪೆಟ್ರೋಲಿಯಂ ಸಚಿವಾಲಯವು ಭಾರತದ ತೈಲ ಕಂಪನಿಗಳಿಗೆ ಆದೇಶಿಸಿದೆ. ಇದೇ ಮೇ ತಿಂಗಳಿನಿಂದ ಬೇರೆ ಮೂಲಗಳಿಂದ ಹೆಚ್ಚು ಕಚ್ಚಾತೈಲ ಖರೀದಿಸಲು ತೈಲ ಕಂಪನಿಗಳು ಕ್ರಮ ತೆಗೆದುಕೊಂಡಿವೆ. ಕಡಿಮೆ ಬೆಲೆಗೆ ಲಭ್ಯವಿರುವ ಕಾರಣ ಅಮೆರಿಕದ ಕಚ್ಚಾತೈಲವನ್ನೇ ಖರೀದಿಸುವ ಸಾಧ್ಯತೆಗಳು ಅಧಿಕವಾಗಿವೆ. ಅಮೆರಿಕದಿಂದ ಖರೀದಿಸುವ ಕಚ್ಚಾತೈಲದ ಬೆಲೆ ಕಮ್ಮಿ ಇದ್ದರೂ, ಸಾಗಣೆ ವೆಚ್ಚ ಅಧಿಕವಾಗಿರುವ ಕಾರಣ ಭಾರತದ ಗ್ರಾಹಕನಿಗೆ ಇದರಿಂದ ಗಣನೀಯ ಲಾಭವೇನೂ ಆಗುವುದಿಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

74 ದಿನಗಳಷ್ಟು ತೈಲ ದಾಸ್ತಾನು

ತನ್ನ ಬಳಕೆಯ ಬಹುಪಾಲು ತೈಲವನ್ನು ಆಮದು ಮಾಡಿಕೊಳ್ಳುವ ಭಾರತ, ದೇಶದ ಮೂರು ಕಡೆ ಬೃಹತ್ ತೈಲ ಸಂಗ್ರಹಾಗಾರಗಳನ್ನು ನಿರ್ಮಿಸಿಕೊಂಡಿದೆ. ಇದರಲ್ಲಿ ಎರಡು ಸಂಗ್ರಹಾಗಾರಗಳು ಕರ್ನಾಟಕದಲ್ಲಿದ್ದರೆ, ಒಂದು ಆಂಧ್ರಪ್ರದೇಶದಲ್ಲಿದೆ. ಪಶ್ಚಿಮ ಕರಾವಳಿಯ ಮಂಗಳೂರು ಹಾಗೂ ಉಡುಪಿಯ ಪಾದೂರಿನಲ್ಲಿ ಬೃಹತ್ ಸಂಗ್ರಹ ಕೇಂದ್ರಗಳಿವೆ. ಪೂರ್ವ ಕರಾವಳಿಯ ವಿಶಾಖಪಟ್ಟಣದಲ್ಲಿ ಮತ್ತೊಂದು ಇದೆ. ಈ ಮೂರರ ಒಟ್ಟು ಸಾಮರ್ಥ್ಯ ಸುಮಾರು 53 ಲಕ್ಷ ಟನ್.

ಕೇಂದ್ರ ಸರ್ಕಾರವು ಸ್ಥಾಪಿಸಿರುವ ವಿಶೇಷ ಉದ್ದೇಶದ ‘ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್’ (ಐಎಸ್‌ಪಿಆರ್‌ಎಲ್) ನಿರ್ವಹಣೆಯಲ್ಲಿ ಈ ಮೂರು ಸಂಗ್ರಹಾಗಾರಗಳು ಇವೆ. ಈ ಮೂರು ಕಡೆಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೀಸಲು ದಾಸ್ತಾನು ಮಾಡಲಾಗುತ್ತದೆ.

ಈ ಪೈಕಿ ವಿಶಾಖಪಟ್ಟಣದಲ್ಲಿ 13.3 ಲಕ್ಷ ಟನ್, ಮಂಗಳೂರಿನಲ್ಲಿ 15 ಲಕ್ಷ ಟನ್ ಹಾಗೂ ಪಾದೂರಿನಲ್ಲಿ 25 ಲಕ್ಷ ಟನ್ ತೈಲ ದಾಸ್ತಾನು ಮಾಡುವ ಸಾಮರ್ಥ್ಯವಿದೆ. ಒಡಿಶಾದ ಚಂಡಿಖೋಲದಲ್ಲಿ ಸುಮಾರು 40 ಲಕ್ಷ ಟನ್ ಸಾಮರ್ಥ್ಯದ ಸಂಗ್ರಹಾಗಾರ ನಿರ್ಮಾಣ ಹಂತದಲ್ಲಿದೆ.

ಈ ಮೂರು ಕಡೆಗಳಲ್ಲಿ ಇರುವ ದಾಸ್ತಾನು ಸುಮಾರು 9.5 ದಿನಗಳ ಕಚ್ಚಾ ತೈಲ ಅಗತ್ಯವನ್ನು ಪೂರೈಸುತ್ತದೆ ಎಂದು ಅಂದಾಜಿಸಲಾಗಿದೆ. ಇನ್ನು ದೇಶದ ತೈಲ ಕಂಪನಿಗಳು (ಒಎಂಸಿ) 64.5 ದಿನಗಳಿಗೆ ಆಗುವಷ್ಟು ಕಚ್ಚಾತೈಲ ಮತ್ತು ತೈಲೋತ್ಪನ್ನ ಶೇಖರಿಸಬಲ್ಲವು. ಹೀಗಾಗಿ ಪ್ರಸ್ತುತ 74 ದಿನಗಳ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನ ದಾಸ್ತಾನು ಮಾಡಬಹುದು.

2020ರ ಏಪ್ರಿಲ್/ಮೇ ತಿಂಗಳಲ್ಲಿ ತೈಲೋತ್ಪನ್ನಗಳಿಗೆ ಬೇಡಿಕೆ ಕಡಿಮೆ ಇತ್ತು. ಕಡಿಮೆ ಬೆಲೆಯ ಕಚ್ಚಾ ತೈಲದ ಲಾಭವನ್ನು ಪಡೆದುಕೊಂಡು, ಮೀಸಲು ಪೆಟ್ರೋಲಿಯಂ ಸಂಗ್ರಹಾಗಾರಗಳನ್ನು ಅವುಗಳ ಪೂರ್ಣ ಸಾಮರ್ಥ್ಯಕ್ಕೆ ಅನುಗುಣವಾಗಿ ಭರ್ತಿ ಮಾಡಲಾಗಿದೆ. ಇದರಿಂದ ಬೊಕ್ಕಸಕ್ಕೆ ಸುಮಾರು ₹5,000 ಕೋಟಿ ಉಳಿತಾಯವಾಗಿದೆ.

ಪರ್ಯಾಯ ಮೂಲಗಳ ಹುಡುಕಾಟ

ಕಚ್ಚಾ ತೈಲ ಉತ್ಪಾದನೆ ಹಾಗೂ ರಫ್ತನ್ನು ಹೆಚ್ಚಿಸುವಂತೆ ಭಾರತವು ಮಾಡಿದ್ದ ಮನವಿಯನ್ನು, ತೈಲ ರಫ್ತು ರಾಷ್ಟ್ರಗಳ ಸಂಘಟನೆ (ಒಪೆಕ್‌) ತಿರಸ್ಕರಿಸಿದ ಬಳಿಕ ಭಾರತವು ಕಚ್ಚಾ ತೈಲಕ್ಕಾಗಿ ಬೇರೆ ರಾಷ್ಟ್ರಗಳತ್ತ ಮುಖಮಾಡಿದೆ.

ಒಪೆಕ್‌ ಕೂಟದಲ್ಲಿ ಇಲ್ಲದ ಬೇರೆ ರಾಷ್ಟ್ರಗಳಿಂದ ಕಚ್ಚಾತೈಲ ಆಮದು ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ತೈಲ ಸಂಸ್ಕರಣಾ ಸಂಸ್ಥೆಗಳಿಗೆ ಸೂಚನೆಯನ್ನೂ ಸರ್ಕಾರ ನೀಡಿದೆ ಎನ್ನಲಾಗಿದೆ. ಮೇ ತಿಂಗಳ ವೇಳೆಗೆ ಮಧ್ಯಪ್ರಾಚ್ಯದಿಂದ ಭಾರತವು ಮಾಡುತ್ತಿರುವ ಆಮದಿನ ಪ್ರಮಾಣದಲ್ಲಿ ನಾಲ್ಕನೇ ಒಂದರಷ್ಟನ್ನು ಇಳಿಸಲು ತೈಲ ಸಂಸ್ಕರಣಾ ಕಂಪನಿಗಳು ಮುಂದಾಗಿವೆ. ಸೌದಿಯಿಂದ ಆಮದಾಗುವ ಕಚ್ಚಾ ತೈಲದ ಪ್ರಮಾಣವುಫೆಬ್ರುವರಿ ತಿಂಗಳಲ್ಲಿಯೇ ಗಣನೀಯವಾಗಿ ಇಳಿಕೆಯಾಗಿದೆ.

‘ತೈಲ ಆಮದು ನೀತಿಯಲ್ಲಿನ ಈ ಬದಲಾವಣೆಯಿಂದ ಆರಂಭದಲ್ಲಿ ಹೆಚ್ಚು ವೆಚ್ಚವಾಗುವ ಸಾಧ್ಯತೆ ಇದ್ದರೂ, ದೀರ್ಘಾವಧಿಯಲ್ಲಿ ದೇಶಕ್ಕೆ ಅನುಕೂಲವಾಗಲಿದೆ’ ಎಂದು ಮೂಲಗಳು ಹೇಳಿವೆ.

ಆದರೆ, ತನ್ನ ಅಗತ್ಯದ ಶೇ 84ಕ್ಕೂ ಹೆಚ್ಚಿನ ಕಚ್ಚಾ ತೈಲವನ್ನು ಆಮದು ಮಾಡುವ ಭಾರತಕ್ಕೆ ಇರುವ ಪರ್ಯಾಯಗಳು ಯಾವುವು? ಹೊಸದಾಗಿ ತೈಲೋತ್ಪಾದನೆಯನ್ನು ಆರಂಭಿಸಿರುವ ಗಯಾನಾದಿಂದ ಆಮದು ಮಾಡುವುದು ಸರ್ಕಾರದ ಮುಂದೆ ಇರುವ ಒಂದು ಪ್ರಸ್ತಾವವಾಗಿದೆ. ನೈಜೀರಿಯಾದಿಂದಲೂ ಆಮದನ್ನು ಹೆಚ್ಚಿಸುವ ಪ್ರಯತ್ನಗಳು ನಡೆದಿವೆ. ಅಮೆರಿಕದ ನಿಷೇಧಗಳ ಕಾರಣದಿಂದಾಗಿ ಇರಾನ್‌ನಿಂದ ತೈಲ ಆಮದು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಆದರೆ ಶೀಘ್ರದಲ್ಲೇ ಅದು ಪುನರಾರಂಭವಾಗಬಹುದು ಎಂಬ ವಿಶ್ವಾಸದಲ್ಲಿ ಭಾರತ ಇದೆ ಎಂದು ಮೂಲಗಳು ಹೇಳುತ್ತಿವೆ.

ಬ್ರೆಜಿಲ್‌ನಿಂದ ಕಚ್ಚಾತೈಲ ಆಮದು ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲೂ ಭಾರತ ಕ್ರಮ ಕೈಗೊಂಡಿದೆ. ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೊಕೆಮಿಕಲ್ಸ್‌ ಲಿ. (ಎಂಆರ್‌ಪಿಎಲ್‌) ಬ್ರೆಜಿಲ್‌ನಿಂದ 10 ಲಕ್ಷ ಬ್ಯಾರಲ್‌ ಕಚ್ಚಾ ತೈಲ ಖರೀದಿಯ ಒಪ್ಪಂದ ಮಾಡಿಕೊಂಡಿದೆ. ಮೇ ತಿಂಗಳಲ್ಲಿ ಇದು ಭಾರತಕ್ಕೆ ಬರಲಿದೆ. ಇದೇ ಮೊದಲ ಬಾರಿಗೆ ಬ್ರೆಜಿಲ್‌ನಿಂದ ಕಚ್ಚಾ ತೈಲ ಖರೀದಿಸಲಾಗಿದೆ.

ಇದಲ್ಲದೆ, ಹಿಂದೆ ತನಗೆ ತೈಲ ಸರಬರಾಜು ಮಾಡುತ್ತಿದ್ದ ಮಿತ್ರ ರಾಷ್ಟ್ರ ರಷ್ಯಾದ ಮೇಲೂ ಭಾರತ ಕಣ್ಣಿಟ್ಟಿದೆ. ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಸಂಸ್ಥೆಯು ರಷ್ಯಾದ ಜತೆಗಿನ ತನ್ನ ತೈಲ ಆಮದು ಒಪ್ಪಂದವನ್ನು ಈಗಾಗಲೇ ನವೀಕರಿಸಿಕೊಂಡಿದೆ.

ಆಧಾರ: ರಾಯಿಟರ್ಸ್, ಪಿಐಬಿ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.