ADVERTISEMENT

ಆಳ–ಅಗಲ: ಸುಪ್ರೀಂ ಕೋರ್ಟ್‌ ಮಹಿಳಾ ನ್ಯಾಯಮೂರ್ತಿ ಒಬ್ಬರೇ!

ಪ್ರಜಾವಾಣಿ ವಿಶೇಷ
Published 15 ಮಾರ್ಚ್ 2021, 19:30 IST
Last Updated 15 ಮಾರ್ಚ್ 2021, 19:30 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ಲಿಂಗ ತಾರತಮ್ಯ ಎಂಬುದು ದೊಡ್ಡ ಪಿಡುಗಿನಂತೆ ನಮ್ಮ ದೇಶವನ್ನು ಕಾಡುತ್ತಿದೆ. ಲಿಂಗ ಸಮಾನತೆಗಾಗಿ ನಡೆದ ಹೋರಾಟಗಳ ಪರಿಣಾಮವಾಗಿ ಸ್ವಲ್ಪ ಮಟ್ಟಿನ ಜಾಗೃತಿಯು ಇತ್ತೀಚಿನ ದಿನಗಳಲ್ಲಿ ಮೂಡಿದೆ. ಆದರೆ, ನಮ್ಮ ಉನ್ನತ ನ್ಯಾಯಾಂಗ ವ್ಯವಸ್ಥೆಯಲ್ಲಿಯೇ ಮಹಿಳೆಯರಿಗೆ ಅತ್ಯಂತ ಕಡಿಮೆ ಪ್ರಾತಿನಿಧ್ಯ ಇದೆ ಎಂಬುದು ಕಹಿ ಸತ್ಯ. ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರು ಕಳೆದ ಶನಿವಾರ ನಿವೃತ್ತರಾಗುವುದರೊಂದಿಗೆ ಸುಪ್ರೀಂ ಕೋರ್ಟ್‌ನಲ್ಲಿ ಉಳಿದಿರುವ ಮಹಿಳಾ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಒಬ್ಬರೇ.

‘ಇಂದೂ ಮಲ್ಹೋತ್ರಾ ಅವರ ನಿವೃತ್ತಿಯೊಂದಿಗೆ ಒಬ್ಬರು ಮಹಿಳಾ ನ್ಯಾಯಮೂರ್ತಿ ಮಾತ್ರ ಸುಪ್ರೀಂ ಕೋರ್ಟ್‌ನಲ್ಲಿ ಉಳಿಯುತ್ತಾರೆ. ಒಂದು ಸಂಸ್ಥೆಯಾಗಿ, ಸುಪ್ರೀಂ ಕೋರ್ಟ್‌ಗೆ ಇದು ಗಾಢ ಚಿಂತೆಯ ವಿಚಾರ. ಈ ವಿಚಾರದಲ್ಲಿ ಗಂಭೀರ ಆತ್ಮಾವಲೋಕನ, ಚಿಂತನೆ ನಡೆಯಬೇಕು. ಭಾರತದ ಸಾಮಾನ್ಯ ಜನರ ಜೀವನವನ್ನು ರೂಪಿಸುವ ಮತ್ತು ಜೀವನದ ಮೇಲೆ ಪರಿಣಾಮ ಬೀರುವ ಸಂಸ್ಥೆಯು ಇನ್ನಷ್ಟು ಉತ್ತಮವಾಗಿರಬೇಕಿದೆ. ನ್ಯಾಯಾಲಯದಲ್ಲಿಯೂ ದೇಶದ ವೈವಿಧ್ಯವು ಪ್ರತಿಫಲನಗೊಳ್ಳಬೇಕು’ ಎಂದು ಇಂದೂ ಮಲ್ಹೋತ್ರಾ ಅವರಿಗೆ ವಿದಾಯ ಹೇಳುವ ಸಮಾರಂಭದಲ್ಲಿ ಮಾತನಾಡಿದ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಳವಾಗಬೇಕು ಎಂಬ ಕೂಗು ಈ ಹಿಂದೆಯೂ ಕೇಳಿ ಬಂದಿತ್ತು. ‘ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ಸಂವೇದನಾರಹಿತವಾಗಿ ವರ್ತಿಸುವುದು ಪೂರ್ಣವಾಗಿ ನಿವಾರಣೆ ಆಗಬೇಕಿದ್ದರೆ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಬೇಕು’ ಎಂದು ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರು ಕಳೆದ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಹೇಳಿದ್ದರು.

ADVERTISEMENT
ಇಂದಿರಾ ಬ್ಯಾನರ್ಜಿ

ಸುಪ್ರೀಂ ಕೋರ್ಟ್‌ನ 70 ವರ್ಷಗಳ ಇತಿಹಾಸದಲ್ಲಿ ಮಹಿಳಾ ಪ್ರಾತಿನಿಧ್ಯವು ಆರೋಗ್ಯಕರವಾಗಿ ಎಂದೂ ಇರಲೇ ಇಲ್ಲ. ಈವರೆಗೆ ಎಂಟು ಮಹಿಳೆಯರು ಮಾತ್ರ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸ್ಥಾನಕ್ಕೆ ಏರಿದ್ದಾರೆ. ಮೊದಲ ಮಹಿಳಾ ನ್ಯಾಯಮೂರ್ತಿಯನ್ನು ಕಾಣಲುಸುಪ್ರೀಂ ಕೋರ್ಟ್‌ ಸ್ಥಾಪನೆಯಾಗಿ 40 ವರ್ಷ ಬೇಕಾಗಿತ್ತು. ಫಾತಿಮಾ ಬೀವಿ ಅವರು 1989ರಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕವಾದ ಮೊದಲ ಮಹಿಳೆ. ಅವರ ಬಳಿಕ ಏಳು ಮಂದಿ ಈ ಹುದ್ದೆಗೆ ಏರಿದ್ದಾರೆ. ನ್ಯಾಯಮೂರ್ತಿಗಳಾದ ಸುಜಾತಾ ಮನೋಹರ್‌, ರುಮಾ ಪಾಲ್‌, ಜ್ಞಾನಸುಧಾ ಮಿಶ್ರಾ, ರಂಜನಾ ಪ್ರಕಾಶ್‌ ದೇಸಾಯಿ, ಭಾನುಮತಿ, ಇಂದೂ ಮಲ್ಹೋತ್ರಾ ಮತ್ತು ಇಂದಿರಾ ಬ್ಯಾನರ್ಜಿ. ಇವರಲ್ಲಿ ಯಾರಿಗೂ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಏರುವ ಅವಕಾಶ ಸಿಕ್ಕಿಲ್ಲ. 2018ರಲ್ಲಿ ಇಂದಿರಾ ಬ್ಯಾನರ್ಜಿ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿದಾಗ ಸುಪ್ರೀಂ ಕೋರ್ಟ್‌ನ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ 3ಕ್ಕೆ ಏರಿತ್ತು. ಇದು ಈವರೆಗಿನ ಗರಿಷ್ಠ ಸಂಖ್ಯೆ.

ಹೈಕೋರ್ಟ್‌ಗಳ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ದೇಶದ 26 ಹೈಕೋರ್ಟ್‌ಗಳಲ್ಲಿ 1,079 ನ್ಯಾಯಮೂರ್ತಿಗಳಿದ್ದು ಅವರಲ್ಲಿ 82 ಮಂದಿ ಮಾತ್ರ ಮಹಿಳೆಯರು. ಹಿಮಾ ಕೊಹ್ಲಿ ಅವರು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಈಗ ಇರುವ ಏಕೈಕ ಮಹಿಳೆ.ತೆಲಂಗಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಜನವರಿ 7ರಂದು ಅವರು ಅಧಿಕಾರ ವಹಿಸಿಕೊಂಡರು.

ಸುಪ್ರೀಂ ಕೋರ್ಟ್‌ಗೆ ಮಂಜೂರಾಗಿರುವ ನ್ಯಾಯಮೂರ್ತಿಗಳ ಸಂಖ್ಯೆ 34. ಈಗ 29 ನ್ಯಾಯಮೂರ್ತಿಗಳಿದ್ದಾರೆ. ಹಾಗಾಗಿ, ಮಹಿಳಾ ಪ್ರಾತಿನಿಧ್ಯವನ್ನು ಅಲ್ಪವಾದರೂ ಹೆಚ್ಚಿಸಲು ಈಗ ಅವಕಾಶ ಇದೆ.

‘ಆಯ್ಕೆ ಪ್ರಕ್ರಿಯೆ, ಕುಟುಂಬದ ಹೊಣೆ ಕಾರಣ’

ಉನ್ನತ ನ್ಯಾಯಾಲಯಗಳಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆ ಇರಲು ಆಯ್ಕೆ ಪ್ರಕ್ರಿಯೆಯೇ ಕಾರಣ ಎನ್ನುತ್ತವೆ ಹಲವು ಅಧ್ಯಯನ ವರದಿಗಳು. ಜತೆಗೆ ಭಾರತದ ಕೌಟುಂಬಿಕ ವ್ಯವಸ್ಥೆಯೂ ಇದಕ್ಕೆ ಒಂದು ಪ್ರಮುಖ ಕಾರಣ ಎಂದು ಈ ವರದಿಗಳು ವಿವರಿಸಿವೆ.

ಭಾರತದಲ್ಲಿ ಕಾನೂನು ಪದವಿ ಅಧ್ಯಯನದಲ್ಲಿ ಮಹಿಳೆಯರ ಪ್ರಾತಿನಿಧ್ಯವು ಪುರುಷರಿಗೆ ಸಮಾನವಾಗಿ ಇಲ್ಲದಿದ್ದರೂ, ತೀರಾ ಕಡಿಮೆಯೇನೂ ಅಲ್ಲ. 2019ರಲ್ಲಿ ದೇಶದಾದ್ಯಂತ ಕಾನೂನು ಪದವಿಗೆ ನೋಂದಣಿ ಮಾಡಿಸಿದವರಲ್ಲಿ ಮಹಿಳೆಯರ ಪ್ರಮಾಣ ಶೇ 44ರಷ್ಟು. ಆದರೆ ಅದೇ ವರ್ಷ ವಕೀಲರಾಗಿ ನೋಂದಣಿ ಮಾಡಿಸಿದವರಲ್ಲಿ ಮಹಿಳೆಯರ ಪ್ರಮಾಣ ಶೇ 15ರಷ್ಟು ಮಾತ್ರ. ಆದರೆ, ಕೆಳಹಂತದ ನ್ಯಾಯಾಲಯಗಳಿಗೆ ನ್ಯಾಯಾಧೀಶರಾಗಿ ಆಯ್ಕೆಯಾದ ಮಹಿಳೆಯರ ಪ್ರಮಾಣವು ಇದಕ್ಕಿಂತಲೂ ಹೆಚ್ಚು. 2007ರಿಂದ 2017ರ ಅವಧಿಯಲ್ಲಿ ದೇಶದಾದ್ಯಂತ ಕೆಳಹಂತದ ನ್ಯಾಯಾಲಯಗಳಲ್ಲಿ ಇದ್ದ ಮಹಿಳಾ ನ್ಯಾಯಾಧೀಶರ ಪ್ರಮಾಣ ಶೇ 36ರಷ್ಟು. ಇದಕ್ಕೆ ಆಯ್ಕೆ ಪ್ರಕ್ರಿಯೆಯೇ ಪ್ರಮುಖ ಕಾರಣ ಎನ್ನಲಾಗಿದೆ.

ಭಾರತದಲ್ಲಿ ಕೆಳಹಂತದ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕಾತಿಯು, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನಡೆಯುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಮಹಿಳೆಯರು ಈ ಹುದ್ದೆಗಳಿಗೆ ಗಣನೀಯ ಪ್ರಮಾಣದಲ್ಲಿ ಆಯ್ಕೆಯಾಗಿ ಬರುತ್ತಿದ್ದಾರೆ. ಆದರೆ, ರಾಜ್ಯ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗೆ ಕೊಲೀಜಿಯಂ ವ್ಯವಸ್ಥೆ ಮೂಲಕ ನೇಮಕಾತಿ ನಡೆಯುತ್ತದೆ. ಕೊಲೀಜಿಯಂ ಆಯ್ಕೆ ಮಾಡುವ, ನ್ಯಾಯಾಧೀಶರುಗಳೇ ಉನ್ನತ ನ್ಯಾಯಾಲಯಗಳ ನ್ಯಾಯಮೂರ್ತಿಗಳಾಗಿ ಆಯ್ಕೆಯಾಗುತ್ತಾರೆ. ಕೊಲೀಜಿಯಂ ವ್ಯವಸ್ಥೆಯಲ್ಲಿ ಯಾವುದೇ ಸ್ಪರ್ಧೆಯ ಪ್ರಕ್ರಿಯೆ ಇರುವುದಿಲ್ಲ. ಹೀಗಾಗಿ ಸ್ಪರ್ಧಾತ್ಮಕ ವಿಧಾನದ ಮೂಲಕ ಮಹಿಳೆಯರು ಈ ಹುದ್ದೆಗಳಿಗೆ ಪೈಪೋಟಿ ನಡೆಸುವ ಅವಕಾಶವೇ ಇಲ್ಲ. ಹೀಗಾಗಿಯೇ ಈ ಹಂತದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗದೇ ಹೋಗುತ್ತದೆ. ಅದರ ಪರಿಣಾಮವಾಗಿ ಉನ್ನತ ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ. ಉನ್ನತ ನ್ಯಾಯಾಲಯಗಳಿಗೆ ನ್ಯಾಯಮೂರ್ತಿಗಳ ನೇಮಕದಲ್ಲಿ ಕೊಲೀಜಿಯಂ ಪದ್ಧತಿಗೆ ಬದಲಾಗಿ, ಸ್ಪರ್ಧಾತ್ಮಕ ಪರೀಕ್ಷೆ ವ್ಯವಸ್ಥೆ ಜಾರಿಗೆ ಬಂದರೆ ಮಹಿಳೆಯರ ಪ್ರಾತಿನಿಧ್ಯ ಹೆಚ್ಚುತ್ತದೆ ಎನ್ನುತ್ತದೆ ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ.

ಇಂದೂ ಮಲ್ಹೋತ್ರಾ

ಮಹಿಳಾ ವಕೀಲರು ಜಿಲ್ಲಾ ನ್ಯಾಯಾಲಯಗಳಿಗೆ ನ್ಯಾಯಾಧೀಶರಾಗಿ ಆಯ್ಕೆಯಾಗಲು ಅವಕಾಶವಿದೆ. ಆದರೆ, ಕನಿಷ್ಠ ಸತತ ಏಳು ವರ್ಷ ವಕೀಲರಾಗಿ ಸೇವೆ ಸಲ್ಲಿಸಿದ ಮಹಿಳೆಯರಷ್ಟೇ ನೇರವಾಗಿ ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರಾಗಬಹುದು. ಇದು ಅತ್ಯಂತ ದೊಡ್ಡ ತೊಡಕು. ಕೌಟುಂಬಿಕ ಜವಾಬ್ದಾರಿಗಳ ಕಾರಣಕ್ಕೆ ಮಹಿಳೆಯರು ಸತತ ಏಳು ವರ್ಷ ವಕೀಲರಾಗಿ ಸೇವೆ ಸಲ್ಲಿಸುವುದು ಕಷ್ಟವಾಗುತ್ತದೆ. ಈ ಹಂತದಲ್ಲೂ ಸಾಕಷ್ಟು ಮಹಿಳಾ ವಕೀಲರು ಜಿಲ್ಲಾ ನ್ಯಾಯಾಧೀಶರಾಗುವ ಅವಕಾಶ ಕಳೆದುಕೊಳ್ಳುತ್ತಾರೆ. ಜಿಲ್ಲಾ ನ್ಯಾಯಾಧೀಶರಾಗುವಲ್ಲಿ ಇರುವ ಈ ತೊಡಕು, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗುವವರೆಗೆ ಮುಂದುವರಿಯುತ್ತದೆ. ಜತೆಗೆ ಕೌಟುಂಬಿಕ ಜವಾಬ್ದಾರಿಯ ಕಾರಣಕ್ಕೆ ಹಲವು ಮಹಿಳೆಯರು ಅರ್ಧದಲ್ಲಿಯೇ ವೃತ್ತಿಯನ್ನು ತ್ಯಜಿಸುತ್ತಾರೆ. ಬಹುತೇಕ ಸಂದರ್ಭದಲ್ಲಿ ಮಹಿಳೆಯರು ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಬರುವುಷ್ಟರಲ್ಲೇ ಸಾಕಷ್ಟು ವಯಸ್ಸಾಗಿರುತ್ತದೆ. ಹೈಕೋರ್ಟ್‌ ನ್ಯಾಯಮೂರ್ತಿಗಳಾಗಲು ಅರ್ಹತೆ ಪಡೆಯುವ ಮುನ್ನವೇ ವೃತ್ತಿಜೀವನ ಮುಗಿದಿರುತ್ತದೆ. ಹೀಗಾಗಿ ಉನ್ನತ ನ್ಯಾಯಪೀಠಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಬೆರಳೆಣಿಕಯಷ್ಟು ಮಾತ್ರ ಎಂದು ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ವಿಶ್ಲೇಷಿಸಿದೆ.

ಸಮಾನ ಪ್ರಾತಿನಿಧ್ಯ ಹಳೆಯ ಬೇಡಿಕೆ

ಸುಪ್ರೀಂ ಕೋರ್ಟ್‌ನಲ್ಲಿ 1922ರಿಂದಲೇ ಮಹಿಳಾ ವಕೀಲರು ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ಮಹಿಳಾ ವಕೀಲರ ಸಂಖ್ಯೆ ಕಡಿಮೆ ಇತ್ತಾದರೂ ಇತ್ತೀಚಿನ ವರ್ಷಗಳಲ್ಲಿ ಪುರುಷ ವಕೀಲರ ಸಂಖ್ಯೆಗೆ ಸರಿಸಮನಾಗಿ ಮಹಿಳಾ ವಕೀಲರಿದ್ದಾರೆ. ಆದರೆ, ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ಯಾಕೆ ಈ ವ್ಯತ್ಯಾಸವಾಗಿದೆ ಎಂಬ ಪ್ರಶ್ನೆ ಇತ್ತೀಚಿನದ್ದೇನೂ ಅಲ್ಲ.

‘ನ್ಯಾಯಾಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯದ ಕೊರತೆಯು, ನ್ಯಾಯದೇಗುಲದಲ್ಲೇ ಲಿಂಗ ತಾರತಮ್ಯ ಹಾಸುಹೊಕ್ಕಾಗಿದೆ ಎಂಬ ಪ್ರಶ್ನೆ ಏಳುವಂತೆ ಮಾಡಬಹುದು. ಈ ಅಸಮಾನತೆಯನ್ನು ಸರಿಪಡಿಸಬೇಕು’ ಎಂದುಸುಪ್ರೀಂ ಕೋರ್ಟ್‌ನ ಮಹಿಳಾ ವಕೀಲರ ಸಂಘದ ಮೂಲಕಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠಕ್ಕೆ 2015ರಲ್ಲಿ ಮನವಿ ಸಲ್ಲಿಸಲಾಗಿತ್ತು.

ಮಹಿಳಾ ವಕೀಲರ ಈ ವಾದವನ್ನು 2015ರಲ್ಲಿಯೇ ಸಂವಿಧಾನ ಪೀಠವು ಒಪ್ಪಿತ್ತು. ‘ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ದಶಕಗಳಿಂದ ಅಸಮಾನತೆ ನಡೆದುಕೊಂಡು ಬಂದಿದೆ. ಪುರುಷ ಮತ್ತು ಮಹಿಳಾ ನ್ಯಾಯಮೂರ್ತಿಗಳ ಅನುಪಾತವು ಸಮಾನವಾಗಿರಬೇಕು’ ಎಂದು ಸಂವಿಧಾನ ಪೀಠದ ಮುಖ್ಯಸ್ಥರಾಗಿದ್ದ ಜೆ.ಎಸ್‌. ಖೇಹರ್ ಹೇಳಿದ್ದರು.

ಸಂವೇದನೆಯ ಕೊರತೆ

ಮಹಿಳಾ ಪ್ರಾತಿನಿಧ್ಯದ ಕೊರತೆಯ ಕೆಟ್ಟ ಪರಿಣಾಮವು ನ್ಯಾಯಾಧೀಶರು ನೀಡುವ ತೀರ್ಪುಗಳಲ್ಲಿಯೂ ಪ್ರತಿಫಲಿಸುತ್ತದೆ. ಉದಾಹರಣೆಗೆ, ಮಧ್ಯಪ್ರದೇಶದ ನ್ಯಾಯಾಧೀಶರೊಬ್ಬರು ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಯ ಕೈಗೆ ಸಂತ್ರಸ್ತ ಮಹಿಳೆ ರಾಖಿ ಕಟ್ಟಬೇಕು ಎಂದು ಆದೇಶಿಸಿ, ಆರೋಪಿಗೆ ಜಾಮೀನು ನೀಡಿದ್ದರು. ಈ ಆದೇಶ ಸಾಕಷ್ಟು ಟೀಕೆಗೂ ಒಳಗಾಯಿತು. ಭಾರತದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿ, ನ್ಯಾಯಾಧೀಶರಿಗೆ ಲಿಂಗ ಸಂವೇದನೆಯ ಶಿಕ್ಷಣ ನೀಡುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟಿದ್ದರು.

‘ದುರದೃಷ್ಟವಶಾತ್, ಸಂತ್ರಸ್ತ ಮಹಿಳೆಯರ ಬಗ್ಗೆ ನ್ಯಾಯಾಧೀಶರು ಅಸೂಕ್ಷ್ಮತೆ ಪ್ರದರ್ಶಿಸಿದ ಹಲವಾರು ಉದಾಹರಣೆಗಳಿವೆ. ಇಲ್ಲಿ ಮಹಿಳಾ ಸಂವೇದನೆಯ ಕೊರತೆ ಎದ್ದುಕಾಣುತ್ತದೆ.ಸಾಮಾನ್ಯವಾಗಿ, ನ್ಯಾಯಾಧೀಶರು ಅತ್ಯಾಚಾರಕ್ಕೊಳಗಾದವರ ಬಗ್ಗೆ ರೂಢಿಗತ ಗ್ರಹಿಕೆಯನ್ನೇ ಹೊಂದಿರುತ್ತಾರೆ’ ಎಂದು ದೆಹಲಿಯ ನ್ಯಾಷನಲ್ ಲಾ ಯುನಿವರ್ಸಿಟಿ ನಡೆಸಿದ ಅಧ್ಯಯನ ಹೇಳಿದೆ.

ಪ್ರಾತಿನಿಧ್ಯ ಕೊರತೆಯಿಂದ ಆಗುವ ಸಮಸ್ಯೆಗಳು: ನ್ಯಾಯಾಧೀಶರ ಹುದ್ದೆಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆಯಿಂದ ಹಲವು ಸಮಸ್ಯೆಗಳು ಎದುರಾಗುತ್ತವೆ. ಕೋರ್ಟ್‌ಗಳ ಮೇಲೆ ಜನರ ವಿಶ್ವಾಸ ಕಡಿಮೆಯಾಗಲು ಮಹಿಳೆಯರ ಪ್ರಾತಿನಿಧ್ಯ ಅಗತ್ಯ ಪ್ರಮಾಣದಲ್ಲಿ ಇಲ್ಲದಿರುವುದು ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ತಮಗೆ ಏನೇ ಅನ್ಯಾಯವಾದರೂ ಕೋರ್ಟ್‌ಗೆ ಹೋಗಿ ನ್ಯಾಯ ಕೇಳಲು ದೇಶದ ಮಹಿಳೆಯರು ಹಿಂದೇಟು ಹಾಕುತ್ತಾರೆ. ಕೋರ್ಟ್‌ಗಳಲ್ಲಿ ಮಹಿಳಾ ನ್ಯಾಯಾಧೀಶರು ಇಲ್ಲ ಎಂಬುದೂ ಇದಕ್ಕೊಂದು ಕಾರಣ. ಆದರೆ ಕೋರ್ಟ್‌ಗಳಲ್ಲಿ ತಮ್ಮ ಕಷ್ಟ ಆಲಿಸಬಲ್ಲ ಮಹಿಳೆಯೊಬ್ಬರು ಇದ್ದಾರೆ ಎಂಬುದೇ ಎಷ್ಟೋ ಮಹಿಳೆಯರಿಗೆ ನ್ಯಾಯ ಸಿಗುವ ವಿಶ್ವಾಸ ಮೂಡಿಸಬಲ್ಲದು. ಆಗ ನ್ಯಾಯಾಲಯಗಳಿಗೆ ನ್ಯಾಯಕೋರಿ ಬರುವ ಮಹಿಳೆಯರ ಸಂಖ್ಯೆಯೂ ಹೆಚ್ಚಾಗುತ್ತದೆ.

ಮೀಸಲಾತಿ ಸಾಧ್ಯವೇ?

ಸಂವಿಧಾನದ 124 ಹಾಗೂ 217ನೇ ವಿಧಿಯ ಅನ್ವಯ,ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗೆ ಕೊಲೀಜಿಯಂ ಮೂಲಕ ನ್ಯಾಯಮೂರ್ತಿಗಳ ನೇಮಕ ಆಗುತ್ತದೆ. ಯಾವುದೇ ಜಾತಿ ಅಥವಾ ಪಂಗಡಗಳಿಗೆ ನೇಮಕಾತಿಯಲ್ಲಿ ಮೀಸಲಾತಿ ನೀಡಬೇಕು ಎಂದು ಈ ವಿಧಿಗಳು ಹೇಳುವುದಿಲ್ಲ. ಆದರೆ ಕೆಳಹಂತದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದಂತೆ ಕೆಲವು ರಾಜ್ಯಗಳಲ್ಲಿ ಮೀಸಲಾತಿ ಜಾರಿಯಲ್ಲಿದೆ. ಆಯಾ ಹೈಕೋರ್ಟ್‌ಗಳ ಜೊತೆ ಸಮಾಲೋಚಿಸಿ ಕೆಲವು ರಾಜ್ಯಗಳು ಮೀಸಲಾತಿ ನೀಡಿ ನ್ಯಾಯಾಧೀಶರ ನೇಮಕಾತಿಗೆ ಅನುವು ಮಾಡಿಕೊಟ್ಟಿವೆ.

ಆಧಾರ: ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌, ಕೇಂದ್ರ ಕಾನೂನು ಸಚಿವಾಲಯದ ವೆಬ್‌ಸೈಟ್‌, ಪಿಟಿಐ, ಆರ್ಟಿಕಲ್14.ಕಾಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.