ADVERTISEMENT

ಫ್ಯಾಕ್ಟ್‌ ಚೆಕ್‌: ಯುಪಿಎಗಿಂತ ಮೋದಿ ಸರ್ಕಾರ ಕಡಿಮೆ ತೆರಿಗೆ ಹಾಕುತ್ತಿದೆಯೇ?

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 19:31 IST
Last Updated 26 ಜುಲೈ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯುಪಿಎ ಸರ್ಕಾರದ ಅವಧಿಯಲ್ಲಿ ಸರಕುಗಳ ಮೇಲೆ ವಿಧಿಸಿದ್ದ ತೆರಿಗೆಗೂ, ಈಗಿನ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಸರಕುಗಳ ಮೇಲೆ ವಿಧಿಸಲಾಗುತ್ತಿರುವ ತೆರಿಗೆಗೂ ಹೋಲಿಕೆ ಮಾಡಿರುವ ಗ್ರಾಫಿಕ್ಸ್‌ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಯುಪಿಎ ಅವಧಿಯಲ್ಲಿ ಅತ್ಯಧಿಕ ತೆರಿಗೆ ವಿಧಿಸಲಾಗುತ್ತಿದ್ದ ಸರಕುಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಡಿಮೆ ತೆರಿಗೆ ಹಾಕುತ್ತಿದೆ ಎಂದು ಬಿಂಬಿಸಲಾಗಿದೆ.

ಈ ಗ್ರಾಫಿಕ್ಸ್‌ನಲ್ಲಿರುವ ಮಾಹಿತಿಯನ್ನು ವಿಶ್ಲೇಷಿಸಿರುವ ‘ದಿ ಕ್ವಿಂಟ್’, ಜನರ ದಾರಿತಪ್ಪಿಸುವುದು ಇದರ ಉದ್ದೇಶ ಎಂದು ತಿಳಿಸಿದೆ. ಯುಪಿಎ ಅವಧಿಯಲ್ಲಿ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಪದ್ಧತಿ ಇತ್ತು. ಸರಕುಗಳ ಮೇಲಿನ ತೆರಿಗೆಯು ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರುತ್ತಿತ್ತು. ಅಲ್ಲದೆ, ಅಂತರರಾಜ್ಯ ಮಾರಾಟಕ್ಕೆ ಕೇಂದ್ರ ಸರ್ಕಾರ ತೆರಿಗೆ ಹಾಕುತ್ತಿತ್ತು. ಹೀಗಾಗಿ ಪ್ರತಿ ಸರಕಿನ ಮೌಲ್ಯವು ಒಂದೇ ಆಗಿರುತ್ತಿರಲಿಲ್ಲ. ಆದರೆ 2017ರಲ್ಲಿ ಜಿಎಸ್‌ಟಿ ಜಾರಿಗೆ ಬಂದ ಬಳಿಕ ದೇಶದಾದ್ಯಂತ ಏಕ ರೀತಿಯ ತೆರಿಗೆ ಪದ್ಧತಿ ಜಾರಿಗೆ ಬಂದಿದೆ. ಯುಪಿಎ ಅವಧಿಯಲ್ಲಿ ಕೆಲವು ಸರಕುಗಳ ಮೇಲಿನ ವ್ಯಾಟ್ ದರ ಹೆಚ್ಚಿದ್ದರೂ, ಗ್ರಾಫಿಕ್ಸ್‌ನಲ್ಲಿ ಆಯ್ದ ಸರಕುಗಳನ್ನು ಮಾತ್ರ ತೋರಿಸಿ, ಎನ್‌ಡಿಎ ಅವಧಿಯಲ್ಲಿ ಕಡಿಮೆ ತೆರಿಗೆ ಇದೆ ಎಂದು ಬಿಂಬಿಸಲಾಗುತ್ತಿದೆ. ಗೋಧಿಹಿಟ್ಟು ಸೇರಿದಂತೆ ಇಲ್ಲಿ ಉಲ್ಲೇಖಿಸಿರುವ ಜಿಎಸ್‌ಟಿ ದರಗಳು ಪರಿಷ್ಕರಣೆಗೂ ಮೊದಲಿನ ದರಗಳು ಎಂದು ಕ್ವಿಂಟ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT