ADVERTISEMENT

FACT CHECK: ಇರಾನ್‌ನ ನೈತಿಕ ಪೊಲೀಸ್ ವ್ಯವಸ್ಥೆ ರದ್ದು?

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 0:30 IST
Last Updated 7 ಡಿಸೆಂಬರ್ 2022, 0:30 IST
FACT CHECK: ಇರಾನ್‌ನ ನೈತಿಕ ಪೊಲೀಸ್ ವ್ಯವಸ್ಥೆ ರದ್ದು: ದಾರಿ ತಪ್ಪಿಸಿದ ಮಾಧ್ಯಮಗಳು
FACT CHECK: ಇರಾನ್‌ನ ನೈತಿಕ ಪೊಲೀಸ್ ವ್ಯವಸ್ಥೆ ರದ್ದು: ದಾರಿ ತಪ್ಪಿಸಿದ ಮಾಧ್ಯಮಗಳು   

ಇರಾನ್‌ನಲ್ಲಿ ಮಹಿಳೆಯರು ಕಡ್ಡಾಯವಾಗಿ ಹಿಜಾಬ್ ಧರಿಸುವುದರ ಮೇಲ್ವಿಚಾರಣೆಯ ಜವಾಬ್ದಾರಿ ಹೊತ್ತುಕೊಂಡಿದ್ದ ‘ನೈತಿಕ ಪೊಲೀಸ್‌ ವ್ಯವಸ್ಥೆ’ಯನ್ನು ರದ್ದುಪಡಿಸಲಾಗಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಇರಾನ್‌ನ ಅಟಾರ್ನಿ ಜನರಲ್ ಮೊಹಮ್ಮದ್ ಜಾಫರ್ ಮೊಂಟಜರಿ ಅವರು ಸುದ್ದಿಗೋಷ್ಠಿಯಲ್ಲಿ ನೀಡಿದ್ದ ಹೇಳಿಕೆಯನ್ನು ಬಿಬಿಸಿ, ಎಎಫ್‌ಪಿ ಮೊದಲಾದ ಮಾಧ್ಯಮ ಸಂಸ್ಥೆಗಳು ಉಲ್ಲೇಖಿಸಿದ್ದವು. 80ರ ದಶಕದಲ್ಲಿ ಹಿಜಾಬ್ ಕಡ್ಡಾಯ ಪಾಲನೆಯ ಮೇಲೆ ನಿಗಾ ವಹಿಸಲು ‘ಗಶ್ಟ್‌–ಎ–ಇರ್ಷಾದ್’ ಎಂಬ ಪಡೆಯನ್ನು ರಚಿಸಲಾಗಿತ್ತು. ಹಿಜಾಬ್ ಧರಿಸದ ಕಾರಣಕ್ಕೆ ಮಹ್ಸಾ ಅಮೀನಿ ಎಂಬ ಯುವತಿ ನೈತಿಕ ಪೊಲೀಸ್ ಪಡೆಯ ವಶದಲ್ಲಿದ್ದಾಗ ಮೃತಪಟ್ಟಿದ್ದರು. ಇದರ ವಿರುದ್ಧ ಇರಾನ್‌ನಲ್ಲಿ ಎರಡು ತಿಂಗಳಿನಿಂದ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯಿಂದ ಎಚ್ಚೆತ್ತ ಇರಾನ್ ಸರ್ಕಾರವು ನೈತಿಕ ಪೊಲೀಸ್ ಪಡೆಯನ್ನು ರದ್ದುಪಡಿಸಿದೆ ಎಂದು ವರದಿಯಾಗಿದೆ. ಆದರೆ ಇದು ತಪ್ಪು ವರದಿ.

ಮೊಂಟಜರಿ ಅವರ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿ ವರದಿ ಮಾಡಿವೆ ಎಂದು ‘ಲಾಜಿಕಲ್ ಇಂಡಿಯನ್ ವೆಬ್‌ಸೈಟ್’ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ. ಮೊಂಟಜರಿ ಅವರು ಈ ನಿರ್ಧಾರ ತೆಗೆದುಕೊಳ್ಳುವ ಪೊಲೀಸ್ ಮುಖ್ಯಸ್ಥ ಅಲ್ಲ. ನೈತಿಕ ಪೊಲೀಸ್ ವ್ಯವಸ್ಥೆಯನ್ನು ಯಾರು ರದ್ದುಮಾಡಿದರು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿಲ್ಲ. ಇರಾನ್ ಸರ್ಕಾರದ ಬೇರಾವುದೇ ಅಧಿಕಾರಿಯಿಂದ ಈ ವಿಷಯವನ್ನು ದೃಢಪಡಿಸಿಕೊಳ್ಳದೇ ಮಾಧ್ಯಮಗಳು ವರದಿ ಮಾಡಿವೆ. ಇರಾನ್ ಪತ್ರಕರ್ತೆ ನತಾಶಾ ಫತೇ ಸೇರಿದಂತೆ ಹಲವು ಪತ್ರಕರ್ತರು ಈ ವಿಚಾರವನ್ನು ಅಲ್ಲಗಳೆದು ಟ್ವೀಟ್ ಮಾಡಿದ್ದಾರೆ. ಇರಾನ್‌ನ ಸರ್ಕಾರಿ ಮಾಧ್ಯಮವೂ ಅಧಿಕಾರಿಯ ಹೇಳಿಕೆಯನ್ನು ಅಲ್ಲಗಳೆದಿದೆ. ಹೀಗಾಗಿ, ನೈತಿಕ ಪೊಲೀಸ್ ವ್ಯವಸ್ಥೆ ರದ್ದುಪಡಿಸಿದ ಸುದ್ದಿ ನಿಜವಲ್ಲ ಎಂದು ವೆಬ್‌ಸೈಟ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT