ADVERTISEMENT

ಆಹಾರದಲ್ಲಿ ಯಾವ ಖಾದ್ಯತೈಲ ಸೂಕ್ತ?

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 19:30 IST
Last Updated 27 ಡಿಸೆಂಬರ್ 2019, 19:30 IST
ಅಡುಗೆ ಎಣ್ಣೆ
ಅಡುಗೆ ಎಣ್ಣೆ   

ಸಾಸಿವೆ ಎಣ್ಣೆ, ಶೇಂಗಾ, ಸೂರ್ಯಕಾಂತಿ, ತೆಂಗಿನ ಎಣ್ಣೆಯಂತಹ ಸಸ್ಯಮೂಲದ ಖಾದ್ಯತೈಲ ನಮ್ಮ ಭಾರತದ ಆಹಾರ ಪದ್ಧತಿಯಲ್ಲಿ ದಿನನಿತ್ಯದ ಸಾಂಪ್ರದಾಯಕ ಆಹಾರವಾಗಿ ಬಳಕೆಯಾಗುತ್ತಿದೆ. ಆದರೂ ಕೂಡ ಸ್ಥಳೀಯವಾಗಿ ಉತ್ಪಾದಿಸಲಾಗುವ ಇಂತಹ ಎಣ್ಣೆಯಲ್ಲಿರುವ ಅಮೂಲ್ಯ ಅಂಶವನ್ನು ಬಹುತೇಕ ಮಂದಿ ಕಡೆಗಣಿಸುತ್ತಿದ್ದಾರೆ.

ಹಾರ್ವರ್ಡ್‌ ವಿಶ್ವವಿದ್ಯಾಲಯ ಬೆಂಬಲಿತ ‘ಈಟ್‌ ಲಾನ್ಸೆಟ್‌’ ನೀಡಿರುವ ವರದಿಯ ಪ್ರಕಾರ ದಿನನಿತ್ಯ ಒಬ್ಬ ವ್ಯಕ್ತಿ ಸೇವಿಸುವ ಎಣ್ಣೆ ಹಾಗೂ ಕೊಬ್ಬಿನಂಶ 10 ಟೀ ಚಮಚಕ್ಕೆ ಸೀಮಿತವಾಗಿರಬೇಕು. ‘ಈ ಗ್ರಹದ ಆರೋಗ್ಯಕರ ಡಯಟ್‌’ ಎಂದೇ ಬಿಂಬಿತವಾಗಿರುವ ಈ ವರದಿಯ ಪ್ರಕಾರ ಈ 10 ಟೀ ಚಮಚದ ಪ್ರಮಾಣದಲ್ಲಿ ಮನೆಯಲ್ಲೇ ತಯಾರಿಸಿದ ಆಹಾರದಲ್ಲಿರುವ ನಮಗೆ ಗೊತ್ತಿರುವಂತಹ ಕೊಬ್ಬಿನ ಜೊತೆಗೆ ಉಪಾಹಾರಗೃಹಗಳಲ್ಲಿ ಸೇವಿಸುವ ಆಹಾರ, ಮಳಿಗೆಗಳಲ್ಲಿ ಖರೀದಿಸಿ ತಿನ್ನುವ ಪ್ಯಾಕ್ಡ್‌ ಆಹಾರದಲ್ಲಿರುವ ನಮಗೆ ನಿಖರವಾಗಿ ಗೊತ್ತಿಲ್ಲದಂತಹ ಕೊಬ್ಬು ಸೇರಿದೆ. ಇದರಲ್ಲಿರುವ ಅರ್ಧಕ್ಕಿಂತ ಹೆಚ್ಚು ಎಣ್ಣೆ/ ಕೊಬ್ಬು ವಿವಿಧ ಸಸ್ಯಮೂಲದಿಂದ ಉತ್ಪಾದನೆ
ಯಾಗುವ ಅನ್‌ಸ್ಯಾಚುರೇಟೆಡ್‌ ಅಥವಾ ಅಸಂತೃಪ್ತ ಎಣ್ಣೆ/ ಕೊಬ್ಬಿನಿಂದ ಪಡೆದಂಥವು.

ಸಮತೋಲಿತ ಆಹಾರ

ADVERTISEMENT

ಇಡಿ ಧಾನ್ಯ, ಸಸ್ಯಮೂಲದ ಪ್ರೊಟೀನ್‌ (ಬೀನ್ಸ್‌, ಮಸೂರ, ಕಾಳು), ಮಾಂಸ ಮತ್ತು ಹೈನು ಉತ್ಪನ್ನ, ಹಣ್ಣು, ತರಕಾರಿಯಿಂದ ಕೂಡಿದ ಭಾರತೀಯ ಆಹಾರ ಪದ್ಧತಿಯು ಸಮತೋಲಿತ ಆಹಾರವಾಗಿದೆ ಎಂದು ವರದಿ ಹೇಳಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಸ್ಯಮೂಲದ ಕೊಬ್ಬಿಗೆ ಒತ್ತು ನೀಡಿದೆ. ಸಸ್ಯಜನ್ಯ ಆಹಾರೋತ್ಪನ್ನಗಳು ಹೆಚ್ಚಿರುವ ಹಾಗೂ ಪ್ರಾಣಿಜನ್ಯ ಆಹಾರ ಕಡಿಮೆ ಇರುವ ಸಮತೋಲಿತ ಆಹಾರ ಆರೋಗ್ಯವನ್ನು ಸುಧಾರಿಸಲು ಅವಶ್ಯಕ ಹಾಗೂ ಪರಿಸರದ ದೃಷ್ಟಿಯಿಂದಲೂ ಲಾಭಕರ.

ಒಳ್ಳೆಯ ಕೊಬ್ಬಿನಂಶ ಹೆಚ್ಚಿನ ಪ್ರಮಾಣದಲ್ಲಿರುವ ಬಹುತೇಕ ಸಸ್ಯಮೂಲದ ಖಾದ್ಯತೈಲ ಹೃದಯದ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಈ ಎಣ್ಣೆಯು ದೇಹದ ಜೀವಕೋಶಗಳು ಸರಿಯಾದ ರೀತಿಯಲ್ಲಿ ಚಟುವಟಿಕೆ ನಡೆಸಲು ಸೂಕ್ತವಾದ ಪೋಷಕಾಂಶ ಒದಗಿಸುತ್ತದೆ. ಸಂತೃಪ್ತ ಕೊಬ್ಬಿಗೆ ಪರ್ಯಾಯವಾಗಿ ಅಸಂತೃಪ್ತ ಕೊಬ್ಬನ್ನು ಬಳಸಿದರೆ ಆರೋಗ್ಯಕರ ಲಾಭಗಳು ಜಾಸ್ತಿ.

ಉದಾಹರಣೆಗೆ ಬೆಣ್ಣೆ (ಸಂತೃಪ್ತ ಕೊಬ್ಬು)ಯ ಬದಲು ಸೂರ್ಯಕಾಂತಿ ಎಣ್ಣೆ ಬಳಸುವುದರಿಂದ ರಕ್ತದಲ್ಲಿ ಕೆಟ್ಟ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು. ಆ ಮೂಲಕ ಹೃದ್ರೋಗ ಹಾಗೂ ಪಾರ್ಶ್ವವಾಯು ಸಮಸ್ಯೆಯ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಭಾರತದಲ್ಲಿ ಲಭ್ಯವಿರುವ ಬಹುತೇಕ ಸಸ್ಯಜನ್ಯ ಖಾದ್ಯತೈಲಗಳು ವಿಟಮಿನ್‌ ಎ ಮತ್ತು ಡಿ ಹೊಂದಿದ್ದು, ಇದನ್ನು ಆಹಾರದಲ್ಲಿ ಬಳಸಿದರೆ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಅಪಾಯಕಾರಿ ಟ್ರಾನ್ಸ್‌ ಫ್ಯಾಟಿ ಆ್ಯಸಿಡ್‌

ಟ್ರಾನ್ಸ್‌ ಫ್ಯಾಟಿ ಆ್ಯಸಿಡ್‌ (ಟಿಎಫ್‌ಎ) ಅತ್ಯಂತ ಅಪಾಯಕಾರಿ ಕೊಬ್ಬು. ಇದು ಜಾಗತಿಕವಾಗಿ ಹೃದ್ರೋಗ ಮತ್ತು ಪಾರ್ಶ್ವವಾಯು ಸಮಸ್ಯೆಗೆ ಪ್ರಮುಖ ಕಾರಣ. ಟಿಎಫ್‌ಎ ಸಾಮಾನ್ಯವಾಗಿ ಎರಡು ಮೂಲಗಳಿಂದ ಲಭ್ಯ– ಹೈಡ್ರೊಜನೇಟೆಡ್‌ ಸಸ್ಯಜನ್ಯ ಅಥವಾ ವನಸ್ಪತಿ (ಇಂಡಸ್ಟ್ರಿಯಲ್‌ ಟಿಎಫ್‌ಎ) ತೈಲ ಹಾಗೂ ಪ್ರಾಣಿಜನ್ಯ ಕೊಬ್ಬು. ಇವೆರಡೂ ಟ್ರಾನ್ಸ್‌ಫ್ಯಾಟ್‌ ರಕ್ತದಲ್ಲಿರುವ ಕೊಲೆಸ್ಟ್ರಾಲ್‌ ಮೇಲೆ ಅಡ್ಡ ಪರಿಣಾಮ ಬೀರುತ್ತವೆ ಹಾಗೂ ಈ ಮೂಲಕ ಹೃದಯದ ಸಮಸ್ಯೆಗಳನ್ನು ಹೆಚ್ಚಿಸುತ್ತವೆ.

ಈ ಟ್ರಾನ್ಸ್‌ ಫ್ಯಾಟ್‌ ಇರುವ ವನಸ್ಪತಿ ಎಣ್ಣೆಗೆ ಹೋಲಿಸಿದರೆ ಸಸ್ಯಜನ್ಯ ಖಾದ್ಯತೈಲಗಳು ಖಂಡಿತವಾಗಿ ಹಲವಾರು ಆರೋಗ್ಯಕರ ಅಂಶಗಳನ್ನು ಹೊಂದಿವೆ. ಈ ಕುರಿತು ಎಫ್‌ಎಸ್‌ಎಸ್‌ಎಐ ಕೂಡ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ 2022ರೊಳಗೆ ಈ ಟಿಎಫ್‌ಎ ಮುಕ್ತ ವಿಶ್ವವನ್ನಾಗಿ ಮಾಡುವ ಗುರಿ ಹೊಂದಿದೆ.

ಆರೋಗ್ಯದ ಕುರಿತು ಕಾಳಜಿಯಿದ್ದರೆ ಪರ್ಯಾಯ ಆಹಾರದ ಬಗ್ಗೆ ಯೋಚಿಸುವುದು ಒಳಿತು. ಕೆಲವು ಸಣ್ಣಪುಟ್ಟ ಬದಲಾವಣೆಗಳು ನಿಮ್ಮ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಜೊತೆಗೆ ಪರಿಸರದ ಮೇಲಿನ ಒತ್ತಡವನ್ನೂ ಕಡಿಮೆ ಮಾಡಬಹುದು.

ಎಣ್ಣೆ ಅಥವಾ ಇತರ ಆಹಾರ ಪದಾರ್ಥಗಳನ್ನು ಖರೀದಿಸುವಾಗ ಉತ್ಪನ್ನಗಳ ಪ್ಯಾಕೆಟ್‌ ಮೇಲಿರುವ ಬಳಸಿದ ಸಾಮಗ್ರಿಗಳ ಪಟ್ಟಿಯ ಮೇಲೆ ಕಣ್ಣಾಡಿಸಿ. ಟ್ರಾನ್ಸ್‌ ಫ್ಯಾಟ್‌ ಹಾಗೂ ಸಂತೃಪ್ತ ಕೊಬ್ಬಿನಂಶವಿರುವ ಉತ್ಪನ್ನಗಳ ಬದಲಾಗಿ ಸಸ್ಯಜನ್ಯ ಖಾದ್ಯತೈಲವಿರುವ ಆಹಾರೋತ್ಪನ್ನಗಳನ್ನು ಖರೀದಿಸಿ.

ಸಲಾಡ್‌ಗೆ ಡ್ರೆಸಿಂಗ್‌ ಮಾಡುವಾಗ ಸೋಯಾಬೀನ್‌, ಸಾಸಿವೆ, ಶೇಂಗಾ, ಭತ್ತದ ಹೊಟ್ಟು (ರೈಸ್‌ ಬ್ರ್ಯಾನ್‌), ಆಲಿವ್‌, ಕೊಬ್ಬರಿ, ಕುಸುಬೆ, ಸೂರ್ಯಕಾಂತಿ ಎಣ್ಣೆ ಬಳಸಬಹುದು.

ವನಸ್ಪತಿ ಬದಲು ಸಸ್ಯಜನ್ಯ ಎಣ್ಣೆ ಬಳಸಿದ ಕುಕ್ಕೀಸ್‌ ಮತ್ತು ಬಿಸ್ಕತ್‌ ತಿನ್ನಬಹುದು.

ಹೈನು ಉತ್ಪನ್ನದ ಕೊಬ್ಬು ಬಳಸದ ಐಸ್‌ಕ್ರೀಮ್‌/ ಡೆಸರ್ಟ್‌ ಹಾಗೂ ಚಾಕೊಲೇಟ್‌ಗೆ ಆದ್ಯತೆ ನೀಡಿ.

ವನಸ್ಪತಿ ತೈಲದಲ್ಲಿ ಕರಿಯದ ಅಥವಾ ಬೇಯಿಸದ ಬೇಕರಿ ಆಹಾರ/ ಹುರಿದ ಸ್ನ್ಯಾಕ್‌ ಸೇವಿಸಬಹುದು.

(ಲೇಖಕಿ ಎಐಐಎಂಎಸ್‌ ಮಕ್ಕಳ ರೋಗ ವಿಭಾಗದಲ್ಲಿ ಡಯಟೀಶಿಯನ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.