ADVERTISEMENT

ಅನಾರೋಗ್ಯದಲ್ಲಿ ಆಹಾರ

ಡಾ.ವಿಜಯಲಕ್ಷ್ಮಿ ಪಿ.
Published 10 ಮೇ 2021, 19:30 IST
Last Updated 10 ಮೇ 2021, 19:30 IST
a
a   

ಇಂದು ಇಡೀ ಪ್ರಪಂಚವನ್ನೇ ಕಾಡುತ್ತಿದೆ ಅನಾರೋಗ್ಯ. ಎಂದಿಗೆ ಇದರಿಂದ ಮುಕ್ತಿಯೋ ಗೊತ್ತಿಲ್ಲ. ಅನಾರೋಗ್ಯ ಬಾರದಂತೆ ತಡೆಯಲು ಅನೇಕ ಉಪಾಯಗಳನ್ನು ಪ್ರತಿಯೊಬ್ಬರೂ ಒಂದೊಂದು ವಿಧದಲ್ಲಿ ಪಾಲಿಸುತ್ತಿದ್ದಾರೆ. ಇಷ್ಟಾದರೂ ಅನಾರೋಗ್ಯ ಕಾಡದೇ ಬಿಡುತ್ತಿಲ್ಲ, ಹುಡುಕಿಕೊಂಡು ಬಂದು ಕಾಟ ಕೊಡುತ್ತಿದೆ! ಏನೆಲ್ಲಾ ಮಾಡಿದರೂ ಅನಾರೋಗ್ಯ ಕಾಡಿತು ಎಂದಾದರೆ, ಅದನ್ನು ಜಯಿಸಿ ಗೆಲ್ಲಲೇ ಬೇಕಲ್ಲವೇ? ಅಲ್ಪಪ್ರಮಾಣದ ಅಥವಾ ಸ್ವಲ್ಪ ಹೆಚ್ಚಾದರೂ ತಡೆಯುವ ಸ್ಥಿತಿಯಲ್ಲಿ ಇರುವ ಅನಾರೋಗ್ಯದ ಅವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗದೇ ಅರೋಗ್ಯವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿರುವವರಿಗೆ ಕಾಡುವ ಮೊದಲ ಪ್ರಶ್ನೆ ಎಂಥ ಆಹಾರವನ್ನು ಸೇವಿಸಬೇಕು? ಯಾವ ಆಹಾರದಿಂದ ತೊಂದರೆ ಆಗುತ್ತದೆ?

ರೋಗಲಕ್ಷಣಗಳ ತೀವ್ರತೆ ಇಲ್ಲದಿರುವವರು ಮನೆಯಲ್ಲೇ ಚಿಕಿತ್ಸೆ ಪಡೆಯುವಾಗ ತೆಗೆದುಕೊಳ್ಳಬೇಕಾದ ಆಹಾರವಿಧಾನ ಯಾವುದು ಎಂದರೆ:

ಅತಿಯಾದ ಬಾಯಾರಿಕೆ ಇದ್ದರೆ ಸೊಗದೇಬೇರು, ನೆಲ್ಲಿಕಾಯಿ, ಲಾವಂಚ, ಕೊನ್ನಾರಿಗಡ್ಡೆ – ಇವುಗಳನ್ನು ಸುಮಾರು ಎರಡು ಲೀಟರ್ ನೀರಿಗೆ ಅರ್ಧ ಚಮಚದಷ್ಟು ಪುಡಿಯನ್ನು ಹಾಕಿ ಕುದಿಸಿ ತಣಿದ ನಂತರ ಇದನ್ನು ಕುಡಿಯುವುದು. ನೀರು ಕುಡಿಯಬೇಕಾದ ಎಲ್ಲ ಸಂದರ್ಭದಲ್ಲಿಯೂ ಇದನ್ನೇ ಕುಡಿಯಬೇಕು.

ADVERTISEMENT

ಉರಿ ಸಹಿತವಾದ ಕೆಮ್ಮು ಅಥವಾ ಮೈ ಉರಿ ಇತ್ಯಾದಿಗಳಿದ್ದಾಗ ಶ್ರೀಗಂಧ, ತಾವರೆಹೂವನ್ನು ಕುದಿಸಿ ಕುಡಿಯುವುದು; ಕಫ ಬರುತ್ತಿದ್ದರೆ, ಶುಂಠಿಯನ್ನು ಜಜ್ಜಿ, ಬಿಸಿನೀರಿನಲ್ಲಿ ರಾತ್ರಿ ನೆನೆ ಇಟ್ಟು ಬೆಳಗ್ಗೆ ಕುಡಿಯುವುದು. ಅತಿಮಧುರದ ಬೇರನ್ನು ಜಗಿಯುವುದು ಅಥವಾ ಅತಿಮಧುರದ ಪುಡಿಯನ್ನು ಜೇನು ಅಥವಾ ತುಪ್ಪದಲ್ಲಿ ಕಲಸಿ ನೆಕ್ಕುವುದು.

ಅತಿಯಾದ ಸುಸ್ತು, ಮೈಕೈ ನೋವು, ಕಣ್ಣುರಿ, ಬಾಯಿರುಚಿ ಇಲ್ಲದಿರುವುದು ಇವುಗಳಿದ್ದಾಗ ನೆಲ್ಲಿಕಾಯಿಯನ್ನು ತುಪ್ಪದಲ್ಲಿ ಕಲೆಸಿ ನೆಕ್ಕಿ ಬಿಸಿನೀರು ಕುಡಿಯುವುದು. ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಕಿವುಚಿ ಅದರ ರಸವನ್ನು ಕುಡಿಯುವುದು, ಭತ್ತದ ಅರಳು, ಒಣದ್ರಾಕ್ಷಿ, ಖರ್ಜೂರ – ಇವುಗಳನ್ನು ಒಟ್ಟಿಗೆ ಕಡೆದು, ನೀರುಸೇರಿಸಿ ಪಾನಕದಂತೆ ಸೇವಿಸುವುದು.

ಹಸಿವೆಯಾಗುತ್ತಿಲ್ಲ, ಸ್ವಲ್ಪ ಜ್ವರ, ಅಜೀರ್ಣದಂತೆ ಎನಿಸುವುದು, ಹುಳಿತೇಗು ಬರುವುದು, ಸುಸ್ತು, ಕೆಮ್ಮು ಇತ್ಯಾದಿಗಳಿದ್ದಾಗ ದ್ರಾಕ್ಷಿ, ಅಮೃತಬಳ್ಳಿ, ಶುಂಠಿ, ಪರ್ಪಾಷ್ಟಕ – ಇವುಗಳನ್ನು ಚೆನ್ನಾಗಿ ಅರೆದು, ರಾತ್ರಿ ಕುದಿಸಿ ತಣಿಸಿದ ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಅದನ್ನು ಹಿಂಡಿ ಅದರ ರಸವನ್ನು ಸೇವಿಸುವುದು. ಕೇವಲ ಈರುಳ್ಳಿಯನ್ನು ನೀರಿನಲ್ಲಿ ಬೇಯಿಸಿ, ಉಪ್ಪು, ನಿಂಬೆರಸ ಹಾಕಿ ತುಪ್ಪ, ಸಾಸಿವೆ, ಜೀರಿಗೆ, ಇಂಗಿನ ಒಗ್ಗರಣೆ ಕೊಟ್ಟು ಅನ್ನದೊಟ್ಟಿಗೆ ಕಲೆಸಿ ತಿನ್ನುವುದು ಅಥವಾ ಹಾಗೇ ಕುಡಿದರೂ ಅನುಕೂಲವಾಗುತ್ತದೆ.

ತರಕಾರಿಗಳಲ್ಲಿ ಪ್ರಧಾನವಾಗಿ ಪಡವಲಕಾಯಿ, ಎಲೆ, ಹೀರೇಕಾಯಿ, ಬೂದುಗುಂಬಳ, ಸೋರೆಕಾಯಿ – ಇವುಗಳನ್ನು ತೊಗರಿಬೇಳೆ ಅಥವಾ ಹೆಸರುಬೇಳೆ ಮತ್ತು ನೆಲ್ಲಿಕಾಯಿ ಹಾಕಿ ಬೇಯಿಸಿ ದಾಲ್ ತೊವ್ವೆಯಂತೆ ಅಥವಾ ಸಾರಿನಂತೆ ತಯಾರಿಸಿ ಸೇವಿಸುವುದು. ಇದಕ್ಕೆ ಸಾಸಿವೆ ಜೀರಿಗೆ ಮತ್ತು ಇಂಗನ್ನು ಸೇರಿಸಿ ತುಪ್ಪದ ಒಗ್ಗರಣೆ ಕೊಡಬೇಕು.

ಉಸಿರು ತೆಗೆದುಕೊಳ್ಳುವಾಗ ಹಿಂಸೆ, ಉರಿ ಆಗುತ್ತಿದ್ದರೆ, ವಾಸನಾಗ್ರಹಣ ಇಲ್ಲದಿದ್ದರೆ ಮೂಗಿನ ಒಳಭಾಗಕ್ಕೆ ತುಪ್ಪವನ್ನು ಹಚ್ಚಿ ಜೋರಾಗಿ ನಾಲ್ಕಾರು ಬಾರಿ ಉಸಿರನ್ನು ಎಳೆದುಕೊಳ್ಳುವುದು, ಬಿಸಿನೀರಿನ ಹಬೆ ತೆಗೆದುಕೊಳ್ಳುವುದು. ಇದರಿಂದ ಉಸಿರಾಡಲು ಅನುಕೂಲವಾಗುತ್ತದೆ ಮತ್ತು ವಾಸನೆಯೂ ತಿಳಿಯುತ್ತದೆ.

ದಾಳಿಂಬೆ ಅಥವಾ ಕಪ್ಪು ದ್ರಾಕ್ಷಿಹಣ್ಣುಗಳನ್ನು ರುಬ್ಬಿ, ಸ್ವಲ್ಪ ನೀರು ಹಾಕಿ ಕುದಿಸಿ, ತಣಿದ ಮೇಲೆ ಶೋಧಿಸಿ ಕುಡಿಯುವುದರಿಂದ ದೇಹದ ಬಲವನ್ನು ಹೆಚ್ಚಿಸುತ್ತದೆ ಮತ್ತು ಸರಿಯಾಗಿ ಹಸಿವೆಯುಂಟಾಗುವಂತೆಯೂ ಮಾಡುತ್ತದೆ.

ನೆಲ್ಲಿಕಾಯಿ, ದಾಳಿಂಬೆಯನ್ನು ಭತ್ತದ ಅಥವಾ ಜೋಳದ ಅರಳಿನೊಟ್ಟಿಗೆ ಅರೆದು ಅದಕ್ಕೆ ತಕ್ಕಷ್ಟು ನೀರನ್ನು ಸೇರಿಸಿ, ಸಕ್ಕರೆ ಜೇನು ಸೇರಿಸಿ ಸೇವಿಸುವುದರಿಂದ ದೇಹದ ಬಲ ಹೆಚ್ಚುವುದರಲ್ಲಿ ಸಂಶಯವಿಲ್ಲ.

ಮೇಲೆ ಸೂಚಿಸಿದ ಆಹಾರಪದ್ಧತಿಗಳನ್ನು ಅನುಸರಿಸುವುದರಿಂದ ಅನುಕೂಲವಾದರೆ ಕೆಲವು ಪದಾರ್ಥಗಳು ಅನಾರೋಗ್ಯವನ್ನು ಹೆಚ್ಚಿಸುತ್ತವೆ. ವಿಪರೀತ ಉಪ್ಪು, ಖಾರ, ಹಸಿಮೆಣಸಿನಕಾಯಿ, ಕಾಳುಮೆಣಸಿನ ಪುಡಿ, ಬೆಳ್ಳುಳ್ಳಿ, ಹಾಲು-ಹಣ್ಣನ್ನು, ಹಾಲು-ಮೊಟ್ಟೆಯನ್ನು ಒಟ್ಟಿಗೆ ಸೇವಿಸುವುದು, ಹಾಲನ್ನಕ್ಕೆ ಉಪ್ಪು ಬೆರೆಸಿ, ಹಾಲಿಗೆ ಮೊಸರು ಅಥವಾ ಮಜ್ಜಿಗೆಯನ್ನು ಬೆರೆಸುವುದು, ಹಗಲು ಹೆಪ್ಪಿಟ್ಟ ಮೊಸರು, ತಣ್ಣಗಿರುವ ಪದಾರ್ಥ, ಫ್ರಿಜ್‌ನ ಆಹಾರ, ಹಸಿಹಣ್ಣು ತರಕಾರಿಗಳು, ಮಾಂಸಾಹಾರ, ಜೀರ್ಣಕ್ಕೆ ಹೊರೆಯಾಗುವಂತಹ ಆಹಾರ – ಇವುಗಳ ಸೇವನೆಯನ್ನು ವರ್ಜಿಸಬೇಕು.

ಹಾಗೆಯೇ ಗಾಳಿ, ಬಿಸಿಲಿನಲ್ಲಿ ಕುಳಿತುಕೊಳ್ಳುವುದು ಅಥವಾ ವ್ಯಾಯಾಮವನ್ನು ಮಾಡುವುದು, ಮಾನಸಿಕ ಒತ್ತಡ, ಆತಂಕ, ಭಯ, ಪ್ರತಿಯೊಂದು ವಿಷಯಕ್ಕೂ ಸಿಟ್ಟಾಗುವುದು,
ಅಳುವುದು – ಇವೆಲ್ಲವೂ ಅನಾರೋಗ್ಯವರ್ಧಕಗಳೇ ಆಗಿವೆ.

ಕೊನೆಯದಾಗಿ ಅರಿಸಿನ. ಇದರ ಅತಿಯಾದ ಬಳಕೆ ರಕ್ತವನ್ನು ಹೆಪ್ಪುಗಟ್ಟಿಸೀತು; ಮತ್ತು ಹಸಿ ಈರುಳ್ಳಿ ಉಸಿರು ಕಟ್ಟಿಸೀತು. ಇವುಗಳ ಉಪಯೋಗ ಅತಿಯಾಗಿ ಬೇಡ; ಎಚ್ಚರಿಕೆಯಿಂದ ಬಳಸಬೇಕು.

ವಿವೇಚನೆಯಿಂದ ನಮ್ಮ ಆಹಾರ–ಆಚಾರ–ವಿಚಾರಗಳನ್ನು ರೂಢಿಸಿಕೊಂಡು ಆರೋಗ್ಯವಂತರಾಗೋಣ. ನಮಗೆ ಆರೋಗ್ಯದ ವಿಷಯದಲ್ಲಾಗಲೀ ಆಹಾರದ ಬಗ್ಗೆಯಾಗಲೀ ಏನಾದರೂ ಸಂದೇಹಗಳು ಎದುರಾದರೆ ಕೂಡಲೇ ತಜ್ಞರನ್ನು ಸಂಪರ್ಕಿಸೋಣ. ಇಂದಿನ ವಿಷಮ ಸಂದರ್ಭದಲ್ಲಿ ನಮಗೆ ಬೇಕಾಗಿರುವುದು ಸರಿಯಾದ ತಿಳಿವಳಿಕೆ ಮತ್ತು ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಬಲ್ಲ ಮಾನಸಿಕ ಮತ್ತು ದೈಹಿಕ ಬಲ. ಇದಕ್ಕಾಗಿ ನಮ್ಮ ಆಹಾರ–ಆಚಾರ–ವಿಚಾರಗಳ ಪಾತ್ರ ತುಂಬ ದೊಡ್ಡದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.