ADVERTISEMENT

ಕೋವಿಡ್ ಲಸಿಕೆ: ಭವಿಷ್ಯದಲ್ಲಿ ‘ಬೂಸ್ಟರ್’ ಡೋಸ್‌ ಬೇಕಾಗಬಹುದೆಂದ ವಿಜ್ಞಾನಿ

ಡೆಕ್ಕನ್ ಹೆರಾಲ್ಡ್
Published 18 ಆಗಸ್ಟ್ 2021, 14:34 IST
Last Updated 18 ಆಗಸ್ಟ್ 2021, 14:34 IST
ಸಾಂದರ್ಭಿಕ ಚಿತ್ರ (ಕೃಪೆ– ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ– ಐಸ್ಟಾಕ್)   

ಮುಂಬೈ: ಮುಂದಿನ ದಿನಗಳಲ್ಲಿ ಕೋವಿಡ್–19 ಲಸಿಕೆಯ ‘ಬೂಸ್ಟರ್’ ಡೋಸ್ (ಸೋಂಕಿನ ವಿರುದ್ಧ ಪ್ರತಿರೋಧ ಶಕ್ತಿ ಕುಂದದಂತೆ ಮತ್ತೊಂದು ಡೋಸ್ ಲಸಿಕೆ ಪಡೆಯುವುದು) ಪಡೆಯುವಂತೆ ಶಿಫಾರಸು ಮಾಡುವ ಸಾಧ್ಯತೆ ಇದೆ. ಆ ಕುರಿತ ಅಧ್ಯಯನಗಳು ನಡೆಯುತ್ತಿವೆ ಎಂದು ಪುಣೆ ಮೂಲದ ಐಸಿಎಂಆರ್–ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ನಿರ್ದೇಶಕಿ ಡಾ. ಪ್ರಿಯಾ ಅಬ್ರಹಾಂ ತಿಳಿಸಿದ್ದಾರೆ.

‘ಬೂಸ್ಟರ್ ಡೋಸ್ ಬಗ್ಗೆ ವಿದೇಶಗಳಲ್ಲಿ ಅಧ್ಯಯನ ನಡೆಯುತ್ತಿದೆ. ಕನಿಷ್ಠ ಏಳು ಲಸಿಕೆಗಳನ್ನು ಬೂಸ್ಟರ್ ಡೋಸ್ ಅಧ್ಯಯನದಲ್ಲಿ ಬಳಸಲಾಗಿದೆ. ಆದರೆ, ಹೆಚ್ಚಿನ ದೇಶಗಳು ಲಸಿಕೆ ಪಡೆಯುವವರೆಗೆ ಬೂಸ್ಟರ್ ಡೋಸ್‌ಗೆ ವಿಶ್ವ ಆರೋಗ್ಯ ಸಂಸ್ಥೆ ತಡೆ ನೀಡಿದೆ. ಯಾಕೆಂದರೆ ಶ್ರೀಮಂತ ಮತ್ತು ಬಡ ರಾಷ್ಟ್ರಗಳ ನಡುವೆ ಲಸಿಕಾಕರಣದಲ್ಲಿ ಭಾರಿ ಅಂತರವಿದೆ. ಭವಿಷ್ಯದಲ್ಲಿ ಬೂಸ್ಟರ್ ಡೋಸ್‌ಗೆ ಶಿಫಾರಸು ಮಾಡುವ ಸಾಧ್ಯತೆ ಇದೆ’ ಎಂದು ಅವರು ಹೇಳಿದ್ದಾರೆ.

ಅಜಾಗರೂಕತೆಯಿಂದಾಗಿ ಭಿನ್ನ ಲಸಿಕೆಗಳನ್ನು ಎರಡು ಪ್ರಮಾಣದಲ್ಲಿ ನೀಡುವ ಪರಿಸ್ಥಿತಿಯೂ ಸೃಷ್ಟಿಯಾಗಿತ್ತು. ಈ ರೀತಿ ಭಿನ್ನ ಲಸಿಕೆಯ ಎರಡು ಡೋಸ್ ಪಡೆದವರೂ ಸುರಕ್ಷಿತವಾಗಿರುವುದು ವೈರಾಲಜಿ ಸಂಸ್ಥೆಯು ಸಂಗ್ರಹಿಸಿದ ಮಾದರಿಗಳಿಂದ ತಿಳಿದುಬಂದಿದೆ. ಅಂಥವರಲ್ಲಿ ಯಾವುದೇ ಅಡ್ಡಪರಿಣಾಮ ಕಂಡುಬಂದಿಲ್ಲ ಹಾಗೂ ಪ್ರತಿರೋಧ ಶಕ್ತಿ ಸ್ವಲ್ಪ ಉತ್ತಮವಾಗಿರುವುದು ತಿಳಿದುಬಂದಿದೆ. ಹೀಗಾಗಿ ಖಂಡಿತವಾಗಿಯೂ ಇದರಿಂದ ಆರೋಗ್ಯ ಸುರಕ್ಷತೆಗೆ ಸಮಸ್ಯೆಯಾಗದು. ಈ ಬಗ್ಗೆ ನಾವು ಹೆಚ್ಚಿನ ಅಧ್ಯಯನ ಮಾಡುತ್ತಿದ್ದೇವೆ ಮತ್ತು ಕೆಲವೇ ದಿನಗಳಲ್ಲಿ ಇನ್ನಷ್ಟು ವಿವರಗಳನ್ನು ನೀಡಲಿದ್ದೇವೆ’ ಎಂದು ಪ್ರಿಯಾ ಅಬ್ರಹಾಂ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಒಟಿಟಿ ಚಾನೆಲ್ ‘ಇಂಡಿಯಾ ಸೈನ್ಸ್‌’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.