ADVERTISEMENT

ಏನು ಮಾಡುವುದು ಜ್ವರ, ನೆಗಡಿ, ಕೆಮ್ಮು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 21:30 IST
Last Updated 13 ಮಾರ್ಚ್ 2023, 21:30 IST
ದ
   

ಸದ್ಯದ ಋತುವಿನಲ್ಲಿ ಸರಿಸುಮಾರು ಪ್ರತಿಯೊಬ್ಬರನ್ನೂ ಕಾಡುವ ಸಮಸ್ಯೆ ಜ್ವರ, ಕೆಮ್ಮು ನೆಗಡಿ. ಕೆಲವರನ್ನು ಸೋಕಿಯೂ ಸೋಕದಂತೆ ಹಾದುಹೋಗುವ ಈ ಸಮಸ್ಯೆಗಳು ಹಲವರನ್ನು ಜರ್ಬಾಗಿ ಕಾಡಿ ಹೈರಾಣು ಮಾಡುತ್ತವೆ. ನೂರು ಡಿಗ್ರಿ ಫ್ಯಾರನ್’ಹೀಟ್ ಆಸುಪಾಸಿನ ಜ್ವರ, ಆಲಸಿತನ, ಮೈ-ಕೈ ನೋವು, ತಲೆಶೂಲೆ, ರುಚಿಯಲ್ಲಿ ವ್ಯತ್ಯಾಸ, ನೆಗಡಿ, ಮೂಗು ಕಟ್ಟುವಿಕೆ, ಒಣಕೆಮ್ಮು, ಗಂಟಲು ಒಣಗುವಿಕೆ, ಘ್ರಾಣ ಸಾಮರ್ಥ್ಯ ಕುಂದುವಿಕೆ, ತಲೆಸುತ್ತು ಮೊದಲಾದ ಲಕ್ಷಣಗಳು ಕಂಡ ಹಲವರಿಗೆ ಅನೇಕ ವೈದ್ಯರು ‘ಒಮ್ಮೆ ಕೋವಿಡ್-19 ಪರೀಕ್ಷೆ ಮಾಡಿಸಿ’ ಎಂದು ಹೇಳಿದಾಗ ‘ಮತ್ತೆ ಕೋವಿಡ್ ಸಮಸ್ಯೆ ಮರುಕಳಿಸುತ್ತಿದೆಯೇ?’ ಎನ್ನುವ ಅನುಮಾನವೂ ಕಾಡುತ್ತದೆ.

ಪ್ರತಿಯೊಂದು ಋತುವಿನ ಬದಲಾವಣೆಯ ವೇಳೆಯೂ ಕೆಲವು ಆರೋಗ್ಯಸಮಸ್ಯೆಗಳು ವಾತಾವರಣದಲ್ಲಿ ಹರಡುತ್ತವೆ. ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುವ ವೇಳೆ ಕೆಮ್ಮು, ನೆಗಡಿಯುಕ್ತ ಜ್ವರಗಳು ಬಹಳಷ್ಟು ಜನರಲ್ಲಿ ಕಾಣುತ್ತವೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ಸೋಂಕು. ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಹೊರಬರುವ ಸಣ್ಣ ಹನಿಗಳು ಸುತ್ತಮುತ್ತಲಿನ ಆರು ಅಡಿ ಪರಿಧಿಯಲ್ಲಿ ಕೆಲಕಾಲ ಗಾಳಿಯಲ್ಲಿ ತೇಲುತ್ತವೆ. ಇಂತಹ ಹನಿಗಳಲ್ಲಿ ರೋಗಕಾರಕ ಕ್ರಿಮಿಗಳು ಮನೆ ಮಾಡಿರುತ್ತದೆ. ಸೋಂಕಿತ ವ್ಯಕ್ತಿಯ ಸುತ್ತಮುತ್ತಲಿರುವ ನಿರೋಗಿ ವ್ಯಕ್ತಿಯ ಶ್ವಾಸನಾಳಗಳನ್ನು ಉಸಿರಿನ ಮೂಲಕ ಪ್ರವೇಶಿಸುವ ಈ ಹನಿಗಳಲ್ಲಿನ ಕೀಟಾಣುಗಳು ಅವರಲ್ಲೂ ಸೋಂಕಿಗೆ ಕಾರಣವಾಗುತ್ತದೆ. ಅಲ್ಲದೆ, ಸೋಂಕಿತ ವ್ಯಕ್ತಿಯ ಶ್ವಾಸದ್ರವಗಳನ್ನು ಹೊಂದಿದ ಬಟ್ಟೆಗಳು, ವಸ್ತುಗಳನ್ನು ಮುಟ್ಟಿದ ನಿರೋಗಿಗಳು ಹಾಗೆಯೇ ತಮ್ಮ ಮೂಗು, ಬಾಯಿಗಳನ್ನು ಸ್ಪರ್ಶಿಸಿದರೆ, ಅದರ ಮೂಲಕವೂ ಕೀಟಾಣುಗಳು ಹರಡಬಹುದು. ನಗರ ಪ್ರದೇಶಗಳ ಸಣ್ಣ ಜಾಗಗಳಲ್ಲಿ ಬಹಳ ಮಂದಿ ಅಡಕವಾಗುವ ಸಂದರ್ಭಗಳಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗನೆ ಸೋಂಕು ಹರಡುವುದು ಸಾಮಾನ್ಯ.

ಋತುಬದಲಾವಣೆಯ ಕಾಲದ ಶೀತ, ಕೆಮ್ಮು, ಜ್ವರದ ಲಕ್ಷಣಗಳು ಬಹುಮಟ್ಟಿಗೆ ತಂತಾನೇ ಗುಣವಾಗುವ ಆರೋಗ್ಯ ಸಮಸ್ಯೆಗಳು. ಕೆಲವರಲ್ಲಿ ಈ ಸೋಂಕು ಬ್ಯಾಕ್ಟೀರಿಯಾಗಳಿಗೆ ಆಹ್ವಾನ ನೀಡುತ್ತದೆ. ಅಂತಹವರಲ್ಲಿ ಆ್ಯಂಟಿಬಯೋಟಿಕ್ ಔಷಧಗಳ ಅಗತ್ಯ ಕಾಣಬಹುದು. ಇದನ್ನು ವೈದ್ಯರು ನಿರ್ಧರಿಸಬೇಕೆ ಹೊರತು, ರೋಗಿಗಳು ತಾವಾಗಿಯೇ ಅನಗತ್ಯ ಚಿಕಿತ್ಸೆ ಮಾಡಿಕೊಳ್ಳಬಾರದು. ಆ್ಯಂಟಿಬಯೋಟಿಕ್ ಔಷಧಗಳ ಅಡ್ಡಪರಿಣಾಮಗಳು ಹಲವಾರು. ಜೊತೆಗೆ, ಅಗತ್ಯವಿಲ್ಲದೆಡೆ ಆ್ಯಂಟಿಬಯೋಟಿಕ್ ಔಷಧಗಳನ್ನು ಬಳಸಿದರೆ ಅವುಗಳಿಗೆ ಪ್ರತಿರೋಧ ಬೆಳೆಯುತ್ತದೆ. ಮುಂದೊಂದು ದಿನ ಅಗತ್ಯ ಬಿದ್ದಾಗ ಅಂತಹ ಆ್ಯಂಟಿಬಯೋಟಿಕ್ ಔಷಧ ಬಳಸಿದರೂ ಅದರ ಪರಿಣಾಮ ಆಗುವುದಿಲ್ಲ. ಈ ಬಗ್ಗೆ ಕಟ್ಟೆಚ್ಚರ ಅಗತ್ಯ. ಇದರ ಹೊರತಾಗಿ ಈ ಲಕ್ಷಣಗಳಿಗೆ ತೀವ್ರತರ ಚಿಕಿತ್ಸೆಯ ಅಗತ್ಯವಿಲ್ಲ.

ADVERTISEMENT

ಆದರೆ, ಈ ಮೊದಲೇ ಆರೋಗ್ಯ ಪರಿಸ್ಥಿತಿ ನಾಜೂಕಾಗಿರುವ ಕೆಲವರಲ್ಲಿ ಶೀತ, ಕೆಮ್ಮು, ಜ್ವರದ ಲಕ್ಷಣಗಳು ತೀವ್ರ ಕಾಯಿಲೆಗೆ ಕಾರಣವಾಗಬಹುದು. ಉದಾಹರಣೆಗೆ, ಹೃದಯ ವೈಫಲ್ಯದ ರೋಗಿಗಳು, ಆಸ್ತಮಾ ಪೀಡಿತರು, ಮಧುಮೇಹಿಗಳು, ಶ್ವಾಸಕೋಶದ ಸಮಸ್ಯೆಗಳಿಂದ ಬಳಲುವವರು, ಕ್ಯಾನ್ಸರ್ ಚಿಕಿತ್ಸೆ ಪಡೆಯುವವರು, ಯಕೃತ್ತಿನ ಅಥವಾ ಮೂತ್ರಪಿಂಡಗಳ ದೀರ್ಘಕಾಲಿಕ ಸಮಸ್ಯೆ ಉಳ್ಳವರು – ಹೀಗೆ ಕೆಲವರಲ್ಲಿ ಶೀತ, ನೆಗಡಿ, ಜ್ವರಗಳ ಕಾರಣದಿಂದ ಇಳಿಮುಖವಾಗುವ ಆಂತರಿಕ ರೋಗನಿರೋಧಕ ಶಕ್ತಿ ಇತರ ಕಾಯಿಲೆಗಳನ್ನು ತಂದು ಪರಿಸ್ಥಿತಿಯ ಉಲ್ಬಣಕ್ಕೆ ಕಾರಣವಾಗಬಹುದು. ಪ್ರಸ್ತುತ ಇಂತಹ ಲಕ್ಷಣಗಳು ಕೋವಿಡ್-19 ಸೋಂಕನ್ನು ಬಹಳ ಮಟ್ಟಿಗೆ ಹೋಲುವುದರಿಂದ ವೈದ್ಯರು ಕೋವಿಡ್ ಪರೀಕ್ಷೆಯನ್ನು ಮಾಡುವಂತೆ ಸೂಚಿಸಬಹುದು. ಇದು ರೋಗಿಗಳ ಆತಂಕಕ್ಕೆ ಕಾರಣವಾಗುತ್ತದೆ.

ಶೀತ, ಕೆಮ್ಮು ಜ್ವರದ ಕಾರಣದಿಂದ ಉಂಟಾಗುವ ಕಾಯಿಲೆ ತ್ರಾಸವೆನಿಸಿದರೂ, ದೀರ್ಘಕಾಲಿಕ ಕಾಯಿಲೆಗಳಿಲ್ಲದ ಆರೋಗ್ಯವಂತರಲ್ಲಿ ಇದರ ಚಿಕಿತ್ಸೆ ಸರಳ. ಬಹುತೇಕ ಮಂದಿಯ ಆಂತರಿಕ ರೋಗನಿರೋಧಕ ಶಕ್ತಿಯೇ ಈ ಕಾಯಿಲೆಯನ್ನು ತಹಬಂದಿಯಲ್ಲಿ ಇಡುತ್ತದೆ. ಮುಖ್ಯವಾಗಿ ವಿಶ್ರಾಂತಿ, ಸಾಕಷ್ಟು ದ್ರವಾಹಾರ, ಕುಡಿಯಲು ಬೆಚ್ಚಗಿನ ನೀರಿನ ಬಳಕೆ, ಜ್ವರನಿವಾರಕ ಗುಳಿಗೆಗಳ ಮಿತವಾದ ಸೇವನೆ, ಉಪ್ಪುನೀರಿನಲ್ಲಿ ಗಂಟಲನ್ನು ಮುಕ್ಕಳಿಸುವುದು, ಒಳ್ಳೆಯ ನಿದ್ರೆ ಮೊದಲಾದುವುಗಳು ಸಾಕಾಗುತ್ತವೆ. ಇದು ಸಾಂಕ್ರಾಮಿಕ ಕಾಯಿಲೆಯಾದ್ದರಿಂದ ಸೋಂಕಿತರು ಸಾಧ್ಯವಾದಷ್ಟೂ ಇತರರಿಂದ ಅಂತರ ಕಾಯ್ದುಕೊಳ್ಳಬೇಕು; ಕೆಮ್ಮುವಾಗ ಮತ್ತು ಸೀನುವಾಗ ತಮ್ಮ ಮೂಗು-ಬಾಯಿಗಳನ್ನು ಬಟ್ಟೆ ಅಥವಾ ಟಿಶ್ಯೂ ಕಾಗದದಿಂದ ಮುಚ್ಚಿಕೊಳ್ಳಬೇಕು. ಶೀತ, ಕೆಮ್ಮು, ಜ್ವರದ ಲಕ್ಷಣಗಳು ಒಂದೆರಡು ದಿನಗಳಲ್ಲಿ ಇಳಿಮುಖವಾಗುವ ಸೂಚನೆಗಳು ಕಾಣದಿದ್ದರೆ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯಬೇಕು.

ಪರೀಕ್ಷೆಯ ಕಾಲದಲ್ಲಿ ಆತಂಕದ ಕಾರಣದಿಂದಲೇ ಹಲವಾರು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ತರಗತಿಯಲ್ಲಿ ಮಕ್ಕಳು ಒಟ್ಟಾಗಿ ಕೂರುವುದರಿಂದ ಅವರಲ್ಲಿ ಶೀತ, ಕೆಮ್ಮು, ಜ್ವರಗಳ ಪರಸ್ಪರ ವಿನಿಮಯವಿರುತ್ತದೆ. ಇದರಿಂದ ಸಂಭವಿಸುವ ಮಕ್ಕಳ ಗೈರುಹಾಜರಿ ಪರೀಕ್ಷೆಗಳ ಕಾಲದ ಶಾಲೆಯ ಕೆಲಸಗಳ ಹೊಂದಾಣಿಕೆಯನ್ನು ಸಡಿಲವಾಗಿಸುತ್ತದೆ. ಇದು ಪೋಷಕರಲ್ಲಿ ಇನ್ನಿಲ್ಲದ ಆತಂಕಕ್ಕೆ ಕಾರಣವಾಗುತ್ತದೆ. ಪರೀಕ್ಷೆಗಳ ಆಸುಪಾಸಿನಲ್ಲಿ ಶೀತ, ಕೆಮ್ಮು, ಜ್ವರ ಕಂಡಾಗ ಕಾಯಿಲೆಯ ಲಕ್ಷಣಗಳನ್ನು ನಿರ್ಲಕ್ಷಿಸದೆ ಶೀಘ್ರವಾಗಿ ಮಕ್ಕಳ ವೈದ್ಯರನ್ನು ಕಾಣುವುದು ಸೂಕ್ತ.

ಋತು-ಸಂಬಂಧಿ ಶೀತ, ಕೆಮ್ಮು, ಜ್ವರ ಇತರ ಕಾಯಿಲೆಗಳ ಲಕ್ಷಣವನ್ನು ಬಹುವಾಗಿ ಹೋಲುವುದರಿಂದ ಆತಂಕದ ಅಗತ್ಯವಿಲ್ಲದಿದ್ದರೂ ಎಚ್ಚರಿಕೆ ಅಗತ್ಯ. ಸರಳ ಚಿಕಿತ್ಸೆಯಿಂದ ಕಾಯಿಲೆಯ ಲಕ್ಷಣಗಳು ಗುಣವಾಗದವರು, ರೋಗನಿರೋಧಕ ಶಕ್ತಿ ಕುಂಠಿತರಾದವರು, ಒಂದು ವರ್ಷದೊಳಗಿನ ಮಕ್ಕಳು, 65 ವರ್ಷ ದಾಟಿದವರು, ಗರ್ಭಿಣಿಯರು, ಬಾಣಂತಿಯರು, ನಿಯಮಿತ ಆಸ್ಪಿರಿನ್ ಗುಳಿಗೆ ಸೇವಿಸುವವರು, ಮುಂತಾದವರು ಈ ಋತು-ಸಂಬಂಧಿ ಕಾಯಿಲೆ ಕಂಡಾಗ ತಡಮಾಡದೆ ವೈದ್ಯರನ್ನು ಕಾಣಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.