‘ನೀಟ್‌’ ಫಲಿತಾಂಶ ಪ್ರಕಟಿಸಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್

ಪಿಟಿಐ Updated:

ಅಕ್ಷರ ಗಾತ್ರ : | |

ಸುಪ್ರೀಂ ಕೋರ್ಟ್‌

ನವದೆಹಲಿ: ದೇಶದಾದ್ಯಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದಿದ್ದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ (ನೀಟ್‌) ಫಲಿತಾಂಶವನ್ನು ಪ್ರಕಟಿಸಲು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ (ಎನ್‌ಟಿಎ) ಸುಪ್ರೀಂ ಕೋರ್ಟ್‌ ಗುರುವಾರ ಅನುಮತಿ ನೀಡಿದೆ.

‘ನೀಟ್‌’ ಫಲಿತಾಂಶ ಘೋಷಿಸದಂತೆ ಮತ್ತು ಇಬ್ಬರು ಪರೀಕ್ಷಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವಂತೆ ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್, ಸಂಜೀವ್ ಖನ್ನಾ ಮತ್ತು ಬಿ.ಆರ್.ಗವಾಯಿ ಅವರನ್ನೊಳಗೊಂಡ ಪೀಠವು ತಡೆಯಾಜ್ಞೆ ನೀಡಿತು.

ಇಬ್ಬರು ಪರೀಕ್ಷಾರ್ಥಿಗಳಾದ ವೈಶಾನವಿ ಭೋಪಾಲಿ ಮತ್ತು ಅಭಿಷೇಕ್ ಶಿವಾಜಿ ಅವರ ಪ್ರಶ್ನೆ ಪತ್ರಿಕೆಗಳು ಮತ್ತು ಒಎಂಆರ್‌ ಪ್ರತಿಗಳು ಪರೀಕ್ಷೆಗೂ ಮುನ್ನಾ ಪರೀಕ್ಷಾ ಕೇಂದ್ರದಲ್ಲಿ ಬೆರೆತು ಹೋಗಿದ್ದವು. ಹೀಗಾಗಿ ಅವರಿಗೆ ಮತ್ತೊಮ್ಮೆ ಅವಕಾಶ ಕೊಡಬೇಕು. ಈ ಇಬ್ಬರ ಪರೀಕ್ಷಾ ಫಲಿತಾಂಶವನ್ನು ಸೆಪ್ಟೆಂಬರ್‌ 12ರಂದು ನಡೆಸಿದ ಪರೀಕ್ಷೆಯ ಫಲಿತಾಂಶದ ಜತೆಗೇ ಪ್ರಕಟಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿತ್ತು.

Advertising
Advertising

‘ನಾವು ಹೈಕೋರ್ಟ್ ತೀರ್ಪಿಗೆ ತಡೆ ನೀಡುತ್ತೇವೆ. ಎನ್‌ಟಿಎ ಫಲಿತಾಂಶವನ್ನು ಪ್ರಕಟಿಸಬಹುದು’ ಎಂದು ಎನ್‌ಟಿಎ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನ್ಯಾಯಪೀಠ ಹೇಳಿತು.

‘ದೀಪಾವಳಿ ರಜೆಯ ನಂತರ ಈ ಇಬ್ಬರು ವಿದ್ಯಾರ್ಥಿಗಳ ಬಗ್ಗೆ ತೀರ್ಮಾನಿಸುತ್ತೇವೆ. ಅಷ್ಟರಲ್ಲಿ ಈ ಕುರಿತು ಸಂಬಂಧಿಸಿದವರಿಗೆ ಪ್ರತಿಕ್ರಿಯಿಸಲು ನೋಟಿಸ್‌ ಜಾರಿ ಮಾಡುತ್ತೇವೆ’ ಎಂದ ಪೀಠವು, ‘ನಾವು 16 ಲಕ್ಷ ವಿದ್ಯಾರ್ಥಿಗಳ ಫಲಿತಾಂಶವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ’ ಎಂದು ತಿಳಿಸಿತು.

ಸೆಪ್ಟೆಂಬರ್‌ 12ರಂದು ದೇಶದ 202 ನಗರಗಳ 3,682 ಪರೀಕ್ಷಾ ಕೇಂದ್ರಗಳಲ್ಲಿ ನೀಟ್‌ ಪರೀಕ್ಷೆ ನಡೆದಿತ್ತು. 16,14,777 ಪರೀಕ್ಷಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ..