ADVERTISEMENT

ಉತ್ಪಾದಕತೆ ಹೆಚ್ಚಬೇಕೆ? ಓಡುವ ಮನಸ್ಸಿಗೆ ಲಗಾಮು ಹಾಕಿ!

ಮನಸ್ವಿ
Published 21 ಡಿಸೆಂಬರ್ 2020, 19:30 IST
Last Updated 21 ಡಿಸೆಂಬರ್ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಸದಾ ಕಚೇರಿ ಕೆಲಸ, ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇರುತ್ತಿದ್ದ ಗೆಳತಿ ವಿಸ್ಮಯ ಕೆಲಸದಲ್ಲಿ ಚುರುಕು. ಆ ಕಾರಣಕ್ಕೆ ಸಣ್ಣ ವಯಸ್ಸಿನಲ್ಲೇ ಪ್ರಾಜೆಕ್ಟ್ ಮ್ಯಾನೇಜರ್ ಆಗಿಯೂ ಆಯ್ಕೆಯಾಗಿದ್ದಳು. ಹಿಡಿದ ಪ್ರಾಜೆಕ್ಟ್‌ಗಳನ್ನು ಛಲ ಬಿಡದೆ ಮಾಡಿ ಮುಗಿಸುತ್ತಿದ್ದ ಅವಳು ಈಗ ಮನೆಯಲ್ಲೇ ಕೆಲಸ ಮಾಡುವ ಕಾರಣ ಆಲಸಿಯಾಗಿದ್ದಾಳೆ. ಮೊದಲೆಲ್ಲಾ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದ ಆಕೆ ಈಗೀಗ ಕೆಲಸದ ನಡುವೆ ಫೇಸ್‌ಬುಕ್ ನೋಡುವುದು, ಷಾಪಿಂಗ್ ವೆಬ್‌ಸೈಟ್‌ಗಳನ್ನು ತಡಕಾಡುವುದು.. ಹೀಗೆ ಮನಸ್ಸನ್ನು ಎತ್ತೆತ್ತಲೊ ಹರಿಯಬಿಡುತ್ತಾಳೆ. ಇದು ಅವಳ ಕೆಲಸಕ್ಕೆ ಹಿನ್ನಡೆ ಉಂಟು ಮಾಡಿರುವುದು ಸುಳ್ಳಲ್ಲ.

ಇದು ಕೇವಲ ವಿಸ್ಮಯಳಲ್ಲಿ ಮಾತ್ರವಲ್ಲ, ಸಾಮಾನ್ಯವಾಗಿ ನಮ್ಮೆಲ್ಲರಲ್ಲೂ ಇಂತಹ ಸಮಸ್ಯೆ ಒಂದಲ್ಲ ಒಂದು ಬಾರಿ ಕಂಡು ಬರುವುದು ಸಹಜ. ಮನೆಯಿರಲಿ, ಕಚೇರಿಯಿರಲಿ ಯಾವುದೇ ಒಂದು ಕೆಲಸ ಅಥವಾ ಪ್ರಾಜೆಕ್ಟ್‌ ಅನ್ನು ಮುಗಿಸಲೇಬೇಕು ಎಂದು ದೃಢವಾಗಿ ಕುಳಿತಿರುತ್ತೇವೆ. ಆದರೆ ಮನಸ್ಸು ನಮ್ಮ ಮಾತು ಕೇಳುವುದಿಲ್ಲ. ಆಗಾಗ ಬೇರೆ ಯೋಚನೆಗಳು ಸುಳಿಯುತ್ತವೆ. ಫೇಸ್‌ಬುಕ್‌ ಲಾಗಿನ್‌ ಆಗುವುದು, ವಾಟ್ಸ್‌ಆ್ಯಪ್‌ನ ಗುಂಪಿನಲ್ಲಿ ಬರುವ ಸಂದೇಶಗಳನ್ನು ಓದುವುದು, ಷಾಪಿಂಗ್‌ ವೆಬ್‌ಸೈಟ್‌ಗಳಲ್ಲಿ ಕಣ್ಣು ಹಾಯಿಸುವುದು, ಯೂಟ್ಯೂಬ್‌ನಲ್ಲಿ ವಿಡಿಯೊಗಳನ್ನು ನೋಡುವುದು ಮಾಡುತ್ತಿರುತ್ತೇವೆ. ಮನಸ್ಸು ಚಂಚಲವಾಗಿ ಅತ್ತಿತ್ತ ಓಡಾಡುತ್ತಿರುತ್ತದೆಎಂದರೆ ಅದಕ್ಕೆ ಹಲವು ಕಾರಣಗಳಿರುತ್ತವೆ. ಆ ಕಾರಣಗಳು ನಮ್ಮ ಉತ್ಪಾದಕತೆಯ ಮೇಲೂ ಪರಿಣಾಮ ಬೀರುತ್ತವೆ.

ಮನಸ್ಸಿಗೆ ವಿರಾಮ ಅಗತ್ಯ

ADVERTISEMENT

ಯಾವುದೇ ಕೆಲಸ ಮಾಡುವಾಗ ಮನುಷ್ಯನ ದೇಹಕ್ಕಿಂತ ಮನಸ್ಸಿಗೆ ವಿರಾಮ ಸಿಗುವುದು ತುಂಬಾ ಮುಖ್ಯ. ಅಧ್ಯಯನವೊಂದರ ಪ್ರಕಾರ ಮೆದುಳಿಗೆ ಆಗಾಗ ವಿಶ್ರಾಂತಿ ನೀಡುವುದರಿಂದ ಅದು ಹೆಚ್ಚು ಪರಿಣಾಮಕಾರಿಯಾಗಿ ಹಾಗೂ ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ. ನಮ್ಮ ಬಾಹ್ಯ ಪ್ರಚೋದನೆಗಳು ಒಂದೇ ರೀತಿ ಕೆಲಸವನ್ನು ಮಾ ಡುತ್ತಿದ್ದರೆ ಮನಸ್ಸು ಯೋಚಿಸುವುದನ್ನು ನಿಲ್ಲಿಸುತ್ತದೆ. ಮಾಡುತ್ತಿರುವ ಕೆಲಸ ಬಿಟ್ಟು ಹೊಸತನ್ನು ಬಯಸುತ್ತದೆ. ಹಾಗಾಗಿ ಒಂದೇ ಕೆಲಸದ ಮೇಲೆ ಬಹಳ ಹೊತ್ತು ಗಮನ ಕೊಡಬೇಡಿ. ಒಂದು ಸಣ್ಣ ವಾಕ್‌, ನಿಂತಲ್ಲೇ ಸಣ್ಣಪುಟ್ಟ ವ್ಯಾಯಾಮ ಮಾಡುವುದು ಅಥವಾ ಬೇರೆ ಕೆಲಸದ ಮೇಲೆ ಗಮನ ಹರಿಸುವುದು ಮಾಡಿ ಎನ್ನುತ್ತಾರೆ ತಜ್ಞರು.

ಸಾಕಷ್ಟು ನಿದ್ದೆ ಅವಶ್ಯ

ಚೆನ್ನಾಗಿ ನಿದ್ದೆ ಮಾಡುವುದರಿಂದ ಮನುಷ್ಯನ ಮೆದುಳು ಹೆಚ್ಚು ಕ್ರಿಯಾಶೀಲವಾಗುತ್ತದೆ. ಒಬ್ಬ ಮನುಷ್ಯನಿಗೆ ದಿನದಲ್ಲಿ 8 ಗಂಟೆಗಳ ಕಾಲ ನಿದ್ದೆ ಅವಶ್ಯ ಎಂಬುದನ್ನು ನಾವು ಹಲವು ಬಾರಿ ಕೇಳಿರುತ್ತೇವೆ. ಆದರೆ ಹಲವರು ತಮ್ಮ ನಿದ್ದೆ ಮರೆತು ಕೆಲಸ ಮಾಡುತ್ತಾರೆ. ನಿದ್ದೆ ತಡೆಯಲು ಪದೇ ಪದೇ ಟೀ, ಕಾಫಿ ಕುಡಿಯುವುದು ಮಾಡುತ್ತಾರೆ. ಅಲ್ಲದೇ ವಾರವಿಡೀ ನಿದ್ದೆ ಬಿಟ್ಟು ಕೆಲಸ ಮಾಡಿ ವಾರಾಂತ್ಯದಲ್ಲಿ ದಿನವಿಡೀ ಮಲಗುತ್ತಾರೆ. ಆದರೆ ವಾರಾಂತ್ಯದಲ್ಲಿ 10 ಗಂಟೆಗಳ ಕಾಲ ಹೆಚ್ಚು ನಿದ್ದೆ ಮಾಡಿದರೂ ಅವರ ಮನಸ್ಸು ಪ್ರಫುಲ್ಲವಾಗಿರದೆ ಉತ್ಪಾದಕತೆ ಕಡಿಮೆಯಾಗುತ್ತದೆ ಎಂಬುದನ್ನು ಸಾಬೀತುಪಡಿಸಿದೆ ಹಾರ್ವಡ್‌ ಮೆಡಿಕಲ್ ಸ್ಕೂಲ್‌ನ ಅಧ್ಯಯನ.

ಆಹಾರ ಸೇವನೆಯ ಸಮಯ

ಹಲವರಿಗೆ ಬೆಳಗಿನ ತಿಂಡಿ ತಿನ್ನದೇ ನೇರವಾಗಿ ಮಧ್ಯಾಹ್ನದ ಊಟ ಮಾಡುವ ಅಭ್ಯಾಸ. ಬೆಳಿಗ್ಗೆಯಿಂದ ಹೊಟ್ಟೆ ಹಸಿದುಕೊಂಡು ಮಧಾಹ್ನದ ಊಟವನ್ನು ಹೆಚ್ಚೇ ತಿನ್ನುತ್ತಾರೆ. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ. ಹಸಿದುಕೊಂಡಿದ್ದು ಒಂದೇ ಸಲಕ್ಕೆ ಹೆಚ್ಚು ತಿನ್ನುವುದಕ್ಕಿಂತ ಆಗಾಗ ಸ್ವಲ್ಪ ಏನನ್ನಾದರೂ ತಿನ್ನುತ್ತಿರುವುದು ಒಳ್ಳೆಯದು. ಆಗಾಗ ದೇಹಕ್ಕೆ ಆಹಾರ ಸಿಗುವಂತೆ ಮಾಡುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುವ ಜೊತೆಗೆ ಮಾನಸಿಕವಾಗಿ ದೃಢವಾಗಿರುತ್ತೇವೆ.

ಆರೋಗ್ಯದಿಂದಿರುವುದು ಮುಖ್ಯ

ಕೆಲವೊಮ್ಮೆ ನಮ್ಮ ಆರೋಗ್ಯದ ಮೇಲೆ ಗಮನ ಹರಿಸದೇ ಇರುವುದು ಕೂಡ ನಮ್ಮಲ್ಲಿ ಉತ್ಪಾದಕತೆ ಕಡಿಮೆಯಾಗಲು ಕಾರಣವಾಗುತ್ತದೆ. ಆ ಕಾರಣಕ್ಕೆ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯದಿಂದಿರುವುದು ಅತೀ ಅಗತ್ಯ. ‌ದೈಹಿಕ ಹಾಗೂ ಮಾನಸಿಕ ಆರೋಗ್ಯ ಹದಗೆಟ್ಟರೆ ಅದು ನಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ.

ಆಹಾರದ ಆಯ್ಕೆ

ನಾವು ತಿನ್ನುವ ಆಹಾರವು ನಮ್ಮ ಗಮನಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನಂಬಲೇಬೇಕು. ಬಾಯಿಗೆ ರುಚಿ ಎನ್ನಿಸುವ ಆಹಾರವನ್ನು ಹೊಟ್ಟೆಯ ಅವಶ್ಯಕತೆಗಿಂತ ಜಾಸ್ತಿ ಸೇವಿಸುವುದು ಒಳ್ಳೆಯದಲ್ಲ. ಅಧಿಕ ಕೊಬ್ಬಿನಂಶ ಇರುವ ಆಹಾರ ಪದಾರ್ಥಗಳು ಮಾನಸಿಕವಾಗಿ ನಮ್ಮನ್ನು ಉತ್ಪಾದಕರನ್ನಾಗಿಸಲು ಬಿಡುವುದಿಲ್ಲ. ‌ಆದರೆ ಹಣ್ಣು–ತರಕಾರಿಗಳನ್ನು ಸೇವಿಸುವುದರಿಂದ ಮನಸ್ಸು ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಸದಾ ನಮ್ಮನ್ನು ಕೆಲಸದಲ್ಲಿ ತೊಡಗುವಂತೆ ಮಾಡಿ ಖುಷಿಯಿಂದಿರಿಸುತ್ತದೆಎನ್ನುತ್ತಾರೆ ಪೋಷಕಾಂಶ ತಜ್ಞ ವೀರೇಶ್‌ ಹಂಪಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.