ADVERTISEMENT

ಸಮಾನತೆಯ ಬೆಳಕು: ನಾರಾಯಣ ಗುರು

ಛಾಯಾಪತಿ
Published 13 ಸೆಪ್ಟೆಂಬರ್ 2019, 3:41 IST
Last Updated 13 ಸೆಪ್ಟೆಂಬರ್ 2019, 3:41 IST
ನಾರಾಯಣ ಗುರು
ನಾರಾಯಣ ಗುರು   

ಅದ್ವೈತದರ್ಶನದ ಹಿನ್ನೆಲೆಯಲ್ಲಿ ಸಮಾಜಸುಧಾರಣೆಯನ್ನು ಮಾಡಿದ ನಮ್ಮ ಕಾಲದ ಮಹಾದಾರ್ಶನಿಕ ನಾರಾಯಣ ಗುರು (1854–1928).

ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆಯ ರೋಗವನ್ನು ಪರಿಹರಿಸಲು ನಾರಾಯಣ ಗುರುಗಳು ಆರಿಸಿಕೊಂಡ ಮಾರ್ಗ ಧರ್ಮ ಮತ್ತು ಅಧ್ಯಾತ್ಮ. ಅವರ ‘ದರ್ಶನಮಾಲಾ’, ‘ಆತ್ಮೋಪದದೇಶ ಶತಕಂ’, ‘ವೇದಾಂತಸೂತ್ರ’, ‘ಅದ್ವೈತದೀಪಿಕಾ’ ಮುಂತಾದ ಹಲವು ಕೃತಿಗಳು ಅದ್ವೈತತತ್ತ್ವವನ್ನು ಎತ್ತಿಹಿಡಿಯುವಂಥವು.

ಇರುವುದು ಒಂದೇ ಸತ್ಯ; ಅದನ್ನು ಯಾವ ಹೆಸರಿನಿಂದಲಾದರೂ ಕರೆಯಿರಿ: ಆತ್ಮ, ಬ್ರಹ್ಮ, ಪರಮಾತ್ಮ, ಚೈತನ್ಯ – ಹೀಗೆ ಯಾವುದು ಆಗಬಹುದು. ಏಕೆಂದರೆ ಆ ‘ತತ್ತ್ವ’ ನಾಮ–ರೂಪಗಳಿಗೆ ಅತೀತವಾದದ್ದು. ಆದರೆ ಎಲ್ಲರಲ್ಲೂ ಎಲ್ಲೆಲ್ಲೂ ಎಲ್ಲ ಕಾಲದಲ್ಲೂ ಇರುವಂಥ ಶಾಶ್ವತಸತ್ಯವೇ ಅದು – ಎನ್ನುವುದು ಅದ್ವೈತದ ಸಾರ.

ADVERTISEMENT

ಇರುವುದು ಒಂದೇ ತತ್ತ್ವವಾದುದರಿಂದ ಭೇದಭಾವಕ್ಕೆ ಅವಕಾಶವೇ ಇಲ್ಲ; ಜಾತಿ–ಮತಗಳ ಗೊಡವೆ ಆ ಶುದ್ಧತತ್ತ್ವಕ್ಕೆ ಇಲ್ಲ. ಎಲ್ಲರಲ್ಲೂ ಒಂದೇ ಪರಮಾತ್ಮವಸ್ತು ಇರುವಾಗ ಮನುಷ್ಯರಲ್ಲಿ ಒಬ್ಬರು ಮೇಲು, ಇನ್ನೊಬ್ಬರು ಕೀಳು ಎಂಬ ವಿಂಗಡಣೆಗೆ ಅವಕಾಶವಾದರೂ ಎಲ್ಲಿ? ಹೀಗಾಗಿ ಇಡಿಯ ಮನುಕುಲ ಆ ಚೈತನ್ಯದ ಸ್ವರೂಪವೇ ಹೌದು. ಸಮಾಜದಲ್ಲಿ ಜಾತಿಯ ಕಾರಣದಿಂದ ಶ್ರೇಷ್ಠ–ಕನಿಷ್ಠ ಎಂಬ ಗೋಡೆಗಳನ್ನು ಎಬ್ಬಿಸುವುದು ಅಧಾರ್ಮಿಕವೂ ಆಧ್ಯಾತ್ಮಿಕತೆಗೆ ವಿರೋಧವೂ ಹೌದು ಎಂದು ಘೋಷಿಸಿ, ಸಮಾಜಸುಧಾರಣೆಗೆ ಅಧ್ಯಾತ್ಮಸ್ಪರ್ಶದ ಅಪೂರ್ವ ಕಾಂತಿಯನ್ನು ಒದಗಿಸಿದವರು ನಾರಾಯಣ ಗುರುಗಳು.

ಅವರು ದಾರಿದ್ರ್ಯವನ್ನು ಅರ್ಥೈಸಿದ ರೀತಿಯೂ ಅನನ್ಯವಾಗಿದೆ. ಹಣವಿಲ್ಲದಿರುವುದೇ ಬಡತನವಲ್ಲ; ಅವಿದ್ಯೆ, ಕೆಟ್ಟ ಚಟಗಳು, ಕೆಟ್ಟ ಆಲೋಚನೆಗಳು ಕೂಡ ದಾರಿದ್ರ್ಯದ ಇನ್ನೊಂದು ರೂಪವೇ ಹೌದು ಎಂದು ಉಪದೇಶಿಸಿದರು. ಶಿವ ಎನ್ನುವುದು ಅಂತರಂಗ–ಬಹಿರಂಗದ ಒಳಿತಿಗೆ ಸಂಕೇತ ಎಂದು ಜನರಿಗೆ ಮನವರಿಕೆ ಮಾಡಿಸಿದರು. ಅವರು ದೇವಾಲಯಗಳನ್ನೂ ಕಟ್ಟಿಸಿದರು; ಅಮೂರ್ತವಾದ ತಾತ್ವಿಕತೆಯನ್ನೂ ಬೋಧಿಸಿದರು. ಜನರ ಅಜ್ಞಾನಕ್ಕೆ ಕಾರಣವಾದ ಎಲ್ಲ ವಿವರಗಳ ವಿರುದ್ಧವೂ ಅವರು ಹೋರಾಟವನ್ನು ಮಾಡಿದರು. ಜಾತಿವೈಷಮ್ಯ, ಮೂಢನಂಬಿಕೆ, ಪ್ರಾಣಿವಧೆ, ಅಸ್ಪೃಶ್ಯತೆ – ಹೀಗೆ ಸಮಾಜದ ಎಲ್ಲ ರೋಗಗಳಿಗೂ ಅವರು ಧರ್ಮ ಮತ್ತು ಅಧ್ಯಾತ್ಮದಲ್ಲಿಯೇ ಔಷಧವನ್ನು ಕಂಡುಕೊಂಡದ್ದು ವಿಶೇಷ.

ನಾರಾಯಣಗುರುಗಳು 1854ರ ಆಗಸ್ಟ್‌ 28ರಂದು, ಎಂದರೆ ಮಲಯಾಳಿ ಶಕವರ್ಷ 1030, ಸಿಂಹಮಾಸದ ಶತಭಿಷ ನಕ್ಷತ್ರದ ಚತುರ್ದಶಿಯ ನಾಲ್ಕನೆಯ ಓಣಂನ ದಿನದಂದು ಜನಿಸಿದರು; ಹುಟ್ಟೂರು ಕೇರಳದ ತಿರುವನಂತಪುರದಿಂದ ಸುಮಾರು ಹತ್ತು ಕಿ. ಮೀ. ದೂರದಲ್ಲಿರುವ ಚೆಂಬಳಂತಿ ಗ್ರಾಮ. ತಂದೆ ಮಾಡಾನ್‌ ಆಶಾನ್‌; ತಾಯಿ ಕುಟ್ಟಿಯಮ್ಮ.

ನಾರಾಯಣ ಗುರುಗಳು ಸಂಸ್ಕೃತ, ತಮಿಳು ಮತ್ತು ಮಲಯಾಳಂಗಳಲ್ಲಿ ಅಗಾಧ ಪಾಂಡಿತ್ಯವನ್ನು ಸಂಪಾದಿಸಿದ್ದವರು. ಸಮಾಜ ಸುಧಾರಣೆಯ ಜೊತೆಗೆ ಹತ್ತಾರು ಕೃತಿಗಳನ್ನು ರಚಿಸಿದರು. ಶಂಕರಾಚಾರ್ಯರ ದರ್ಶನದಿಂದ ಪ್ರಭಾವಿತರಾದವರು. ಸಮಾಜ ಹಲವು ಅನಿಷ್ಟಗಳಿಗೆ ಧರ್ಮವೇ ಕಾರಣವಾಗಿರುವಾಗ, ಅದೇ ಧರ್ಮ ಅವುಗಳಿಗೆ ಪರಿಹಾರವನ್ನೂ ನೀಡಬಲ್ಲದು – ಎಂಬ ಅಪೂರ್ವ ಕಾಣ್ಕೆಯಿಂದ ಸಮಾಜದ ಕೊಳೆಯನ್ನು ಕಳೆಯಲು ತೊಡಗಿದ ಮಹಾಪುರುಷ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.