ADVERTISEMENT

ತಪ್ಪು ಗ್ರಹಿಕೆಯಿಂದ ನಮ್ಮ ಮನೆ ಮೇಲೆ ದಾಳಿ ನಡೆದಿದೆ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 16:22 IST
Last Updated 27 ಮಾರ್ಚ್ 2023, 16:22 IST
ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ‘ಶಿಕಾರಿಪುರದಲ್ಲಿ ಲಂಬಾಣಿ ಸಮುದಾಯದ ಜನರು ನಮ್ಮ ಮನೆ ಮೇಲೆ ದಾಳಿ ಮಾಡಿರುವ ಘಟನೆ ತಪ್ಪು ಗ್ರಹಿಕೆಯಿಂದ ನಡೆದಿರುವಂತಿದೆ. ಘಟನೆಯ ಸಂಬಂಧ ಯಾರನ್ನೂ ಬಂಧಿಸದಂತೆ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದೇನೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

ತಮ್ಮ ಮನೆ ಮೇಲೆ ಕಲ್ಲು ತೂರಾಟ ನಡೆಸಿರುವ ಕುರಿತು ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ಬಂಜಾರ ಸಮುದಾಯದ ಕೆಲವು ಕಾರ್ಯಕರ್ತರು ನಮ್ಮ ಮನೆ ಮೇಲೆ ದಾಳಿ ನಡೆಸಿದ್ದಾರೆ. ತಾಂಡಾ ಅಭಿವೃದ್ಧಿ ನಿಗಮ ರಚನೆ, ಸಂತ ಸೇವಾಲಾಲ್‌ ಅವರ ಜನ್ಮಸ್ಥಳ ಸೂರಗೊಂಡನಕೊಪ್ಪದ ಅಭಿವೃದ್ಧಿ ಮಾಡಿದ್ದೇನೆ. ಅನೇಕ ವರ್ಷಗಳಿಂದ ಬಂಜಾರ ಸಮುದಾಯದ ಜನರು ನನ್ನೊಂದಿಗೆ ಇದ್ದಾರೆ. ಇಷ್ಟಾದರೂ ತಪ್ಪು ಗ್ರಹಿಕೆಯಿಂದ ಘಟನೆ ನಡೆದಿದೆ’ ಎಂದರು.

‘ಶಿಕಾರಿಪುರ ಶಾಂತಿಯುತ ಕ್ಷೇತ್ರ. ಅಭಿವೃದ್ಧಿಗಾಗಿ ದುಡಿದಿದ್ದೇನೆ. ಮನೆ ಮೇಲೆ ದಾಳಿ ಮಾಡಿರುವುದರಿಂದ ನೋವಾಗಿದೆ. ಘಟನೆಗೆ ಕಾರಣ ಎಂದು ಯಾರ ವಿರುದ್ಧವೂ ನಾನು ದೂರುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ಘಟನೆ ನಡೆದ ತಕ್ಷಣವೇ ಎಸ್‌ಪಿ ಮತ್ತು ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದೇನೆ. ಯಾರ ವಿರುದ್ಧವೂ ಕ್ರಮ ಕೈಗೊಳ್ಳದೆ ಶಾಂತ ರೀತಿಯಲ್ಲಿ ಸಮಸ್ಯೆ ಬಗೆಹರಿಸುವಂತೆ ತಿಳಿಸಿದ್ದೇನೆ. ಈ ರೀತಿಯ ಗೊಂದಲಕ್ಕೆ ಕಾರಣ ಏನು? ಏಕೆ ಈ ಘಟನೆ ನಡೆದಿದೆ ಎಂಬುದರ ಕುರಿತು ಸಮಾಲೋಚನೆ ನಡೆಸುವೆ’ ಎಂದು ಹೇಳಿದರು.

‘ನಾನು ನಾಲ್ಕು ಬಾರಿ ಮುಖ್ಯಮಂತ್ರಿ ಹುದ್ದೆಗೇರಲು ಬಂಜಾರ ಸಮುದಾಯದ ಬಂಧುಗಳು ಬೆಂಬಲ ನೀಡಿದ್ದರು. ಅವರ ಯಾವುದೇ ಸಮಸ್ಯೆ ಇದ್ದರೂ ಚರ್ಚೆಗೆ ನಾನು ಮತ್ತು ವಿಜಯೇಂದ್ರ ಸಿದ್ಧ. ಶಿಕಾರಿಪುರಕ್ಕೆ ತೆರಳಿ ಸಮುದಾಯದ ಪ್ರಮುಖರನ್ನು ಭೇಟಿಮಾಡಿ ಚರ್ಚಿಸುವೆ. ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ತೀರ್ಮಾನವನ್ನು ಶೇಕಡ 90ರಷ್ಟು ಜನರು ಸ್ವಾಗತಿಸಿದ್ದಾರೆ. ಸಣ್ಣಪುಟ್ಟ ಲೋಪಗಳಿದ್ದರೆ ಚರ್ಚಿಸಿ ಪರಿಹರಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.