ADVERTISEMENT

ಅಹಿಂದ ಮತಗಳನ್ನು ತೆಗೆಯುವುದೇ ಬಿಜೆಪಿಗಿರುವ ಅಸ್ತ್ರ: ಸತೀಶ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 10:19 IST
Last Updated 21 ನವೆಂಬರ್ 2022, 10:19 IST
   

ಕೊಪ್ಪಳ: ‘ವಾಮಮಾರ್ಗದ ಮೂಲಕ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಹೊರಟಿರುವ ಬಿಜೆಪಿಗೆ ಅಹಿಂದ ಮತಗಳನ್ನು ಮತದಾರರ ಪಟ್ಟಿಯಿಂದ ತೆಗೆಯಿಸುವ ಅಸ್ತ್ರ ಮಾತ್ರ ಉಳಿದಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ರಾಜ್ಯದಲ್ಲಿ ಅಹಿಂದ ಮತದಾರರನ್ನು ಕಡಿಮೆ ಮಾಡಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಈ ನಿಟ್ಟಿನಲ್ಲಿ ಜಾಗೃತಿ ವಹಿಸಬೇಕಾಗಿದೆ’ ಎಂದರು.

ಹಿಂದೂ ಪದದ ಅರ್ಥದ ವಿವಾದದ ನಂತರ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲಿ ತಮ್ಮನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿರುವುದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ ‘ಸೂಲಿಬೆಲಿ ಸುಳ್ಳಿನ ವಿಶ್ವವಿದ್ಯಾಲಯವು ಕುಲಪತಿ. ಈ ಹಿಂದೆ ಹೇಳಿದ ಚಿನ್ನದ ರಸ್ತೆ ಎಲ್ಲಿದೆ? ಲ್ಯಾಪ್‌ಟಾಪ್‌ನಲ್ಲಿ ಚಿಕಿತ್ಸೆ ನೀಡುವುದು ಎಲ್ಲಿದೆ? ಅಂಥವರ ಸವಾಲುಗಳಿಗೆ ಉತ್ತರಿಸುವ ಅಗತ್ಯವಿಲ್ಲ. ಹಿಂದು ಆಶ್ಲೀಲ ಪದ ಹೇಳಿಕೆ ವಿಷಯ ಈಗ ಮುಗಿದ ಅಧ್ಯಾಯ’ ಎಂದರು.

ADVERTISEMENT

ಬಳ್ಳಾರಿಯಲ್ಲಿಯ ಎಸ್‌ಟಿ ಸಮಾವೇಶದಲ್ಲಿ ಶ್ರೀರಾಮುಲು ಆಕ್ರೋಶ ಭರಿತ ಮಾತುಗಳಿಗೆ ಪ್ರತಿಕ್ರಿಯಿಸಿ ‘ರಾಮುಲು ಆಕ್ರೋಶಭರಿತವಾಗಿ ಮಾತನಾಡಬಾರದು. ಬಿಜೆಪಿಯವರು ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳನ್ನು ಬಂದ್ ಮಾಡಿದ್ದಾರೆ. ಸಮಾವೇಶದ ನಂತರ ಬಿಜೆಪಿಗೆ ಲಾಭವಾಗುತ್ತದೆಯೇ ಎನ್ನುವುದರ ಬಗ್ಗೆ ಮೇ ಬಳಿಕ ಗೊತ್ತಾಗುತ್ತದೆ’ ಎಂದರು.

ಸಿದ್ದರಾಮಯ್ಯ ಕೊಪ್ಪಳ ಜಿಲ್ಲೆಯ ಐದು ಕ್ಷೇತ್ರದ ಅಭ್ಯರ್ಥಿಗಳ ಘೋಷಣೆ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ‘ಕೆಲವು ಮಾಜಿ ಶಾಸಕರಿರುತ್ತಾರೆ. ಅವರಿಗೆ ಟಿಕೆಟ್ ತಪ್ಪಿಸಲು ಆಗುವುದಿಲ್ಲ. ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್‌ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ’ ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ ‘ಸಿದ್ದರಾಮಯ್ಯ ಅವರು ಅಭ್ಯರ್ಥಿಗಳ ಘೋಷಣೆ ಮಾಡಿರುವುದು ಮಾಜಿ ಹಾಗೂ ಹಾಲಿ ಶಾಸಕರಿಗೆ ಟಿಕೆಟ್ ನೀಡಬಹುದು ಎನ್ನುವ ಊಹೆ ಮೇಲೆ ಇರಬಹುದು. ಅಂತಿಮ ತೀರ್ಮಾನ ಹೈಕಮಾಂಡ್‌ ಮಾಡುತ್ತದೆ. ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಿಸಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.