ADVERTISEMENT

ಸಹಜ ಸ್ಥಿತಿಯತ್ತ ಕರ್ನಾಟಕ: ಏನೆಲ್ಲಾ ಇರಲಿದೆ? ಏನೆಲ್ಲಾ ಇರುವುದಿಲ್ಲ?

ಎಲ್ಲೆಡೆ ನಿರಾಳ: ಕೊಡಗು, ಹಾಸನ – ನಿರ್ಬಂಧ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 20:07 IST
Last Updated 4 ಜುಲೈ 2021, 20:07 IST
ಸೋಮವಾರದಿಂದ ಈಜುಕೊಳಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿರುವ ಕಾರಣ ಬೆಂಗಳೂರಿನ ಬಸವನಗುಡಿಯ ಈಜುಕೊಳವನ್ನು ಸಿಬ್ಬಂದಿ ಭಾನುವಾರ ಸ್ವಚ್ಛಗೊಳಿಸಿದರು ಪ್ರಜಾವಾಣಿ ಚಿತ್ರ/ರಂಜು ಪಿ.
ಸೋಮವಾರದಿಂದ ಈಜುಕೊಳಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿರುವ ಕಾರಣ ಬೆಂಗಳೂರಿನ ಬಸವನಗುಡಿಯ ಈಜುಕೊಳವನ್ನು ಸಿಬ್ಬಂದಿ ಭಾನುವಾರ ಸ್ವಚ್ಛಗೊಳಿಸಿದರು ಪ್ರಜಾವಾಣಿ ಚಿತ್ರ/ರಂಜು ಪಿ.   

ಬೆಂಗಳೂರು: ಕೊಡಗು ಮತ್ತು ಹಾಸನ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದಾದ್ಯಂತ ಸೋಮವಾರ ಬೆಳಿಗ್ಗೆಯಿಂದ ಲಾಕ್‌ಡೌನ್‌ ಸಡಿಲಿಕೆಯಮೂರನೇ ಹಂತ ಜಾರಿಗೆ ಬರಲಿದೆ. ದೇವಸ್ಥಾನ, ಮಾಲ್‌ ತೆರೆಯಲು ಅವಕಾಶ ದೊರೆಯಲಿದ್ದು, ಬಹುತೇಕ ನಿರ್ಬಂಧಗಳು ರದ್ದಾಗಲಿವೆ.

ಕೋವಿಡ್ ಎರಡನೇ ಅಲೆಯು ರಾಜ್ಯವ್ಯಾಪಿ ಹರಡಿದ ಕಾರಣದಿಂದ ಮೇ 10ರಂದು ಲಾಕ್‌ಡೌನ್‌ ಜಾರಿಗೊಳಿಸಲಾಗಿತ್ತು. ಅಂದಿನಿಂದಲೂ ಬಂದ್‌ ಆಗಿದ್ದ ದೇವಸ್ಥಾನಗಳು ಸೋಮವಾರ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿವೆ. ಭಕ್ತರು ದೇವರ ದರ್ಶನವನ್ನಷ್ಟೇ ಪಡೆಯಲು ಅವಕಾಶವಿದ್ದು, ಯಾವುದೇ ಸೇವೆಗಳಿಗೆ ಅನುಮತಿ ಇರುವುದಿಲ್ಲ. ಮಾಲ್‌ಗಳಲ್ಲೂ ವ್ಯಾಪಾರ ವಹಿವಾಟು ನಡೆಸಲು ಅವಕಾಶ ದೊರೆಯಲಿದೆ. ದೇವಸ್ಥಾನಗಳು ಮತ್ತು ಮಾಲ್‌ಗಳನ್ನು ತೆರೆಯಲು ಕೋವಿಡ್‌ ಮಾರ್ಗಸೂಚಿಯ ಅನುಸಾರ ಸಿದ್ಧತೆ ಮಾಡಿಕೊಳ್ಳುತ್ತಿದ್ದ ದೃಶ್ಯಗಳು ರಾಜ್ಯದೆಲ್ಲೆಡೆ ಕಂಡುಬಂದಿವೆ.

ಬೆಳಿಗ್ಗೆ 5ರಿಂದ ರಾತ್ರಿ 9 ಗಂಟೆಯವರೆಗೆ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅವಕಾಶ ದೊರೆಯಲಿದೆ. ಇದರಿಂದಾಗಿ ರಾಜ್ಯದಾದ್ಯಂತ ವಾಣಿಜ್ಯ ಚಟುವಟಿಕೆಗಳು ಚುರುಕಾಗಲಿವೆ. ಇನ್ನು ವಾರಾಂತ್ಯದ ಕರ್ಫ್ಯೂ ಕೂಡ ರದ್ದಾಗಲಿದೆ. ರಾತ್ರಿ 9ರಿಂದ ಬೆಳಿಗ್ಗೆ 5ರವರೆಗೆ ‘ರಾತ್ರಿ ಕರ್ಫ್ಯೂ’ ಮಾತ್ರ ಇರಲಿದೆ. ಇದರಿಂದಾಗಿ ಆರ್ಥಿಕ ಚಟುವಟಿಕೆಗಳು ಬಿರುಸಾಗುವ ನಿರೀಕ್ಷೆ ಇದೆ.

ADVERTISEMENT

ಎಲ್ಲ ಸರ್ಕಾರಿ, ಖಾಸಗಿ ಕಚೇರಿಗಳು, ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಸಂಪೂರ್ಣ ಸಿಬ್ಬಂದಿಯನ್ನು ಬಳಸಿಕೊಂಡು ಚಟುವಟಿಕೆ ನಡೆಸಲು ಅವಕಾಶ ಲಭ್ಯವಾಗಲಿದೆ. ನಗರ ಮತ್ತು ಪಟ್ಟಣಗಳಿಂದ ಹಳ್ಳಿಗಳತ್ತ ವಲಸೆ ಹೋಗಿದ್ದವರಲ್ಲಿ ಕೆಲವು ಮಂದಿ ಸೋಮವಾರದಿಂದ ಪುನಃ ನಗರಗಳತ್ತ ಮುಖ ಮಾಡಲಿದ್ದಾರೆ.

ಸಾರ್ವಜನಿಕ ಸಾರಿಗೆ ಸಂಪೂರ್ಣ ಲಭ್ಯ: ರಾಜ್ಯದಾದ್ಯಂತ ಬಸ್‌ ಸೇವೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಲಿದೆ. ಎಲ್ಲ ಆಸನಗಳನ್ನೂ ಭರ್ತಿ ಮಾಡಿಕೊಂಡು ಬಸ್‌ ಓಡಿಸಲು ಅನುಮತಿ ನೀಡಿದ್ದು, ರಾಜ್ಯದ ಎಲ್ಲ ಸಾರಿಗೆ ನಿಗಮಗಳೂ ಹೆಚ್ಚಿನ ಸಂಖ್ಯೆಯ ಬಸ್‌ಗಳನ್ನು ರಸ್ತೆಗಿಳಿಸಲು ಸಿದ್ಧತೆ ಮಾಡಿಕೊಂಡಿವೆ.

ಖಾಸಗಿ ಬಸ್‌ಗಳೂ ಸೋಮವಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇವೆಗೆ ಲಭ್ಯವಾಗುವ ಸಾಧ್ಯತೆ ಇದೆ.

ಬೆಂಗಳೂರು ನಗರದಲ್ಲಿ ಮೆಟ್ರೊ ರೈಲು ಸೇವೆ ಪೂರ್ಣ ಪ್ರಮಾಣದಲ್ಲಿ ದೊರೆಯಲಿದೆ. ಬಿಎಂಟಿಸಿ ಬಸ್‌ಗಳ ಸಂಚಾರದಲ್ಲೂ ಸೋಮವಾರದಿಂದ ಹೆಚ್ಚಳ ಆಗಲಿದೆ. ರಾತ್ರಿ 9ರವರೆಗೂ ಮೆಟ್ರೊ ರೈಲು ಮತ್ತು ಬಿಎಂಟಿಸಿ ಬಸ್‌ಗಳನ್ನು ಓಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೆಟ್ರೊ ರೈಲು ಸೇವೆ ಬೆಳಿಗ್ಗೆ 7ರಿಂದ ರಾತ್ರಿ 8ರವರೆಗೆ ಲಭ್ಯವಿರಲಿದೆ.

ಮದುವೆ ಮತ್ತಿತರ ಕೌಟುಂಬಿಕ ಸಮಾರಂಭಗಳಿಗೆ ಇದ್ದ ನಿರ್ಬಂಧಗಳು ಇನ್ನು ಮತ್ತಷ್ಟು ಸಡಿಲಿಕೆ ಆಗಲಿವೆ. ಇದರಿಂದ ರಾಜ್ಯದಾದ್ಯಂತ ಶುಭ ಸಮಾರಂಭಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಮದ್ಯ ಮಾರಾಟಕ್ಕೆ ಇದ್ದ ನಿರ್ಬಂಧಗಳಲ್ಲೂ ಬದಲಾವಣೆ ತರಲಾಗಿದೆ.

ಕೊಡಗಿನಲ್ಲಿ ಈ ಹಿಂದೆ ಇದ್ದ ನಿರ್ಬಂಧಗಳು ಮುಂದುವರಿದರೆ, ಹಾಸನದಲ್ಲಿ ವಾರದಲ್ಲಿ ಮೂರು ದಿನ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ ನೀಡಲಾಗಿದೆ.

ಪ್ರಮುಖ ದೇವಸ್ಥಾನಗಳಲ್ಲಿ ಇಂದಿನಿಂದ ದರ್ಶನ: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಸೋಮವಾರದಿಂದ (ಜು. 5) ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಉಡುಪಿಯ ಕೃಷ್ಣ ಮಠ ಹಾಗೂ ಸವದತ್ತಿ ಯಲ್ಲಮ್ಮ ದೇವಸ್ಥಾನದ ಪ್ರವೇಶಕ್ಕೆ ನಿರ್ಬಂಧ ಮುಂದುವರಿದಿದೆ.

ಶೃಂಗೇರಿ ಶಾರದಾಂಬೆ ದೇಗುಲ, ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಮಂದಾರ್ತಿಯ ದುರ್ಗಾ ಪರಮೇಶ್ವರಿ ದೇವಸ್ಥಾನ, ಧರ್ಮಸ್ಥಳದ ಮಂಜುನಾಥೇಶ್ವರ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಏನೆಲ್ಲಾ ಇರಲಿದೆ?
* ಸರ್ಕಾರಿ, ಖಾಸಗಿ ಕಚೇರಿಗಳು, ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬಹುದು.

* ದೇವಸ್ಥಾನ, ಮಾಲ್‌, ವಾಣಿಜ್ಯ ಸಂಕೀರ್ಣಗಳು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿವೆ.

* ಮೆಟ್ರೊ, ಬಸ್‌ ಸೇರಿದಂತೆ ಸಾರ್ವಜನಿಕ ಸಾರಿಗೆಯಲ್ಲಿ ಶೇ 100ರಷ್ಟು ಸೀಟುಗಳ ಭರ್ತಿಗೆ ಅವಕಾಶ

* ಮದುವೆ ಮತ್ತಿತರ ಸಮಾರಂಭಗಳಿಗೆ 100 ಜನ ಮತ್ತು ಅಂತ್ಯಸಂಸ್ಕಾರದಲ್ಲಿ 20 ಜನ ಪಾಲ್ಗೊಳ್ಳಬಹುದು

* ಈಜು ಕೊಳ, ಕ್ರೀಡಾ ಸಂಕೀರ್ಣಗಳು ಕ್ರೀಡಾಪಟುಗಳಿಗೆ ಮಾತ್ರ ತೆರೆಯಲಿವೆ

*ಬಾರ್‌ಗಳಲ್ಲಿ ಕುಳಿತು ಮದ್ಯ ಸೇವನೆಗೆ ಅವಕಾಶ

ಏನೆಲ್ಲಾ ಇರುವುದಿಲ್ಲ?
*ಚಿತ್ರಮಂದಿರ, ಪಬ್‌ ತೆರೆಯುವಂತಿಲ್ಲ

* ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸಮಾರಂಭ ನಡೆಸುವಂತಿಲ್ಲ

* ಕ್ರೀಡಾಕೂಟಗಳಲ್ಲಿ ಪ್ರೇಕ್ಷಕರು ಪಾಲ್ಗೊಳ್ಳಲು ಅನುಮತಿ ಇಲ್ಲ

* ಶಾಲೆ, ಕಾಲೇಜುಗಳಲ್ಲಿ ಭೌತಿಕ ತರಗತಿಗಳನ್ನು ನಡೆಸುವಂತಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.