ADVERTISEMENT

ಸಿಎಂ ಆಯ್ಕೆಗೆ ಕ್ಷಣಗಣನೆ: ಬೊಮ್ಮಾಯಿ, ಬೆಲ್ಲದ ಹೆಸರು ಮುಂಚೂಣಿಗೆ?

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 12:42 IST
Last Updated 27 ಜುಲೈ 2021, 12:42 IST
ಶಾಸಕ ಅರವಿಂದ ಬೆಲ್ಲದ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ
ಶಾಸಕ ಅರವಿಂದ ಬೆಲ್ಲದ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ   

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಆಯ್ಕೆಗೆ ಕ್ಷಣಗಣನೆ ಆರಂಭವಾಗಿದ್ದು, ಮಾಜಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಶಾಸಕ ಅರವಿಂದ ಬೆಲ್ಲದ ಹೆಸರು ಮುಂಚೂಣಿಗೆ ಬಂದಿದೆ.

ಬಿ.ಎಸ್‌. ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾಗಿರುವ ಮುಖ್ಯಮಂತ್ರಿ ಹುದ್ದೆಗೆ ಹೊಸ ನಾಯಕನನ್ನು ಆಯ್ಕೆಮಾಡುವ ಪ್ರಕ್ರಿಯೆ ರಾತ್ರಿ 7 ಗಂಟೆಯಿಂದ ಆರಂಭವಾಗಲಿದೆ. ನಗರದ ಕ್ಯಾಪಿಟಲ್‌ ಹೋಟೆಲ್‌ನಲ್ಲಿ ನಡೆಯುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ನಾಯಕನ ಆಯ್ಕೆ ನಡೆಯಲಿದೆ.

ಮುಖ್ಯಮಂತ್ರಿ ಆಯ್ಕೆಗೆ ಪಕ್ಷದ ವೀಕ್ಷಕರಾಗಿ ನೇಮಕಗೊಂಡಿರುವ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌ ಮತ್ತು ಕಿಶನ್‌ ರೆಡ್ಡಿ ಬೆಂಗಳೂರು ತಲುಪಿದ್ದಾರೆ. ಪಕ್ಷದ ರಾಜ್ಯ ಘಟಕದ ಉಸ್ತುವಾರಿಯಾಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಕೂಡ ಬಂದಿದ್ದಾರೆ.

ADVERTISEMENT

ಕೇಂದ್ರದಿಂದ ಬಂದಿರುವ ಮೂವರು ನಾಯಕರೂ ಯಡಿಯೂರಪ್ಪ ಅವರನ್ನು ಭೇಟಿಮಾಡಿ, ವಾಪಸಾಗಿದ್ದಾರೆ. ರಾತ್ರಿ 7 ಗಂಟೆಗೆ ಸಭೆ ಆರಂಭವಾಗಲಿದ್ದು, ಅಲ್ಲಿಯೇ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ. ಬುಧವಾರವೇ ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭವೂ ನಡೆಯುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಆಯ್ಕೆಗೆ ಹಲವರ ಹೆಸರುಗಳು ಪರಿಶೀಲನೆಯಲ್ಲಿವೆ. ಲಿಂಗಾಯತ ಸಮುದಾಯದವರಿಗೇ ಮುಖ್ಯಮಂತ್ರಿ ಹುದ್ದೆ ನೀಡುವ ತೀರ್ಮಾನಕ್ಕೆ ಬಿಜೆಪಿ ಹೈಕಮಾಂಡ್‌ ಬಂದಿದೆ. ಅಂತಿಮವಾಗಿ ಬಸವರಾಜ ಬೊಮ್ಮಾಯಿ ಅಥವಾ ಅರವಿಂದ ಬೆಲ್ಲದ ಅವರ ನಡುವೆ ಒಬ್ಬರನ್ನು ಆಯ್ಕೆಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಸಂಸದ ಶಿವಕುಮಾರ ಉದಾಸಿ, ಶಾಸಕ ಮುರುಗೇಶ ನಿರಾಣಿ ಸೇರಿದಂತೆ ಹಲವರ ಹೆಸರುಗಳು ಚರ್ಚೆಗೆ ಬಂದಿದ್ದವು.

ನೂತನ ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿ ಸಂಶದೀಯ ಮಂಡಳಿ ನಿರ್ಧಾರ ಕೈಗೊಂಡು, ವೀಕ್ಷಕರ ಮೂಲಕ ಸಂದೇಶ ರವಾನಿಸಿದೆ. ವೀಕ್ಷಕರು ತಂದಿರುವ ಸಂದೇಶಕ್ಕೆ ಪೂರಕವಾಗಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.