ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: 19 ಆರೋಪಿಗಳ ಜಾಮೀನು ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 22 ಮೇ 2022, 4:26 IST
Last Updated 22 ಮೇ 2022, 4:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿಸಲಾಗಿರುವ 19 ಆರೋಪಿಗಳ ಜಾಮೀನು ಅರ್ಜಿಯನ್ನು ನಗರದ ಒಂದನೇ ಎಸಿಎಂಎಂ ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ.

ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಅಭ್ಯ‌ರ್ಥಿಗಳಾದ ಎಸ್.ಮಮತೇಶ್ ಗೌಡ, ಬಿ.ಗಜೇಂದ್ರ, ಸೋಮನಾಥ್ ಹಿರೇಮಠ, ಎಚ್‌.ಯು.ರಘುವೀರ್, ಯಶವಂತಗೌಡ, ಸಿ.ಎಸ್.ನಾಗೇಶ್‌ಗೌಡ, ಸಿ.ಎಸ್. ನಾರಾಯಣ, ಯಶವಂತ್ ದೀಪ್, ಜಿ.ಸಿ. ರಾಘವೇಂದ್ರ ಹಾಗೂ ಮಧ್ಯವರ್ತಿಗಳಾದ ಕೇಶವಮೂರ್ತಿ, ಶಶಿಧರ್, ಶರತ್ ಸೇರಿ ಹಲವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಧೀಶ ಆನಂದ್ ಚವ್ಹಾಣ್, ಎಲ್ಲರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ್ದಾರೆ.

ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದ ತನಿಖಾಧಿಕಾರಿ, ಸಿಐಡಿ ಡಿವೈಎಸ್ಪಿ ಬಿ.ಕೆ.ಶೇಖರ್ ಅವರು, ‘ನೇಮಕಾತಿ ವಿಭಾಗದ ಅಧಿಕಾರಿಗಳ ಜೊತೆ ಸೇರಿ ಅಕ್ರಮ ಎಸಗಲಾಗಿದೆ. ಇದು, ಗಂಭೀರ ಪ್ರಕರಣ. ಸಾಕ್ಷ್ಯ ನಾಶಗೊಳಿಸುವ ಸಾಧ್ಯತೆ ಇರುವ ಕಾರಣ ಜಾಮೀನು ನೀಡಬಾರದು’ ಎಂದು ಕೋರಿದ್ದರು.

ADVERTISEMENT

ಸಿಐಡಿ‌ ಪರ ಹಿರಿಯ‌ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಎ.ವಿ. ಮಧುಶ್ರಿ ವಾದಿಸಿದ್ದರು.

ಜಪ್ತಿ ಮಾಡಿದ್ದ ಹಣ ನ್ಯಾಯಾಲಯಕ್ಕೆ: ‘ಬಂಧಿತರಿಂದ ಜಪ್ತಿ ಮಾಡಿರುವ ₹ 2.46 ಕೋಟಿಯನ್ನು ನ್ಯಾಯಾಲಯದ ಸುಪರ್ದಿಗೆ ನೀಡಲು ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಈ ಪ್ರಕರಣದ ನಾಲ್ವರು ಅಭ್ಯರ್ಥಿಗಳು ಹಾಗೂ ಇತರರು ತಲೆಮರೆಸಿಕೊಂಡಿದ್ದು, ಪತ್ತೆಗೆ ಶೋಧ ನಡೆದಿದ್ದು, ವಿಶೇಷ ತಂಡ ರಚಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.