ADVERTISEMENT

ಲೈಂಗಿಕ ದೌರ್ಜನ್ಯ ಆರೋಪ: ಮಠಕ್ಕೆ ದೌಡಾಯಿಸಿದ ಪೊಲೀಸರು, ಅಜ್ಞಾತ ಸ್ಥಳಕ್ಕೆ ಶರಣರು?

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 6:52 IST
Last Updated 29 ಆಗಸ್ಟ್ 2022, 6:52 IST
   

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ನಡೆಸಿದ ಅರೋಪಕ್ಕೆ ಗುರಿಯಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಜ್ಞಾತ ಸ್ಥಳಕ್ಕೆ ತೆರಳಿದ‌ ಅನುಮಾನ ವ್ಯಕ್ತವಾಗುತ್ತಿದ್ದು, ಪೊಲೀಸರು ಮಠಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಕರಣ ದಾಖಲಾದ ಬಳಿಕವೂ ಮಠದಲ್ಲಿಯೇ ತಂಗಿದ್ದ ಶರಣರು, ಸೋಮವಾರ ಮಠದಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ. ಮಠಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದ್ದು, ವಿವಿಧ ಸಮುದಾಯದ ಮುಖಂಡರು ಹಾಗೂ ಶಾಖಾ ಮಠದ ಸ್ವಾಮೀಜಿಗಳು ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.

ಸಂತ್ರಸ್ತ ಬಾಲಕಿಯರು ಮಕ್ಕಳ ಕಲ್ಯಾಣ ಸಮಿತಿ ಸಮಾಲೋಚಕರು ಹಾಗೂ ಪೊಲೀಸರ ಎದುರು ಭಾನುವಾರ ಹೇಳಿಕೆ ದಾಖಲು ಮಾಡಿದ್ದಾರೆ. ವೈದ್ಯಕೀಯ ಪರೀಕ್ಷೆ ಪೂರ್ಣಗೊಳಿಸಲಾಗಿದ್ದು ಸೋಮವಾರ ನ್ಯಾಯಾಧೀಶರ ಎದುರು ಹೇಳಿಕೆ ದಾಖಲು ಮಾಡುವ ಸಾಧ್ಯತೆ ಇದೆ. ಬಳಿಕ ಮಕ್ಕಳೊಂದಿಗೆ ಪೊಲೀಸರು ಸ್ಥಳ ಮಹಜರ್ ಗೆ ಮಠಕ್ಕೆ ಧಾವಿಸಲಿದ್ದಾರೆ. ಹೀಗಾಗಿ, ಪೀಠಾಧ್ಯಕ್ಷರು ಮಠ ತೊರೆದಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಇದರಿಂದ ಮಠದ ಭಕ್ತರಲ್ಲಿ ಆತಂಕ ಹೆಚ್ಚಾಗಿದೆ.

ADVERTISEMENT

ಗ್ರಾಮಾಂತರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಬಾಲಚಂದ್ರ ನಾಯ್ಕ್ ನೇತೃತ್ವದ ಪೊಲೀಸರ ತಂಡ
ಸೋಮವಾರ ಬೆಳಿಗ್ಗೆ ಮಫ್ತಿಯಲ್ಲಿ ಮಠಕ್ಕೆ ಧಾವಿಸಿತು. ಮಠದ ಆವರಣದಲ್ಲಿ ಸಂಚರಿಸಿ ಪರಿಶೀಲನೆ ನಡೆಸಿತು. ಕೆಲ ಪೊಲೀಸರನ್ನು ಮಠದ ಭದ್ರತೆಗೆ ನಿಯೋಜಿಸಲಾಗಿದೆ. ಪ್ರಕರಣ ದಾಖಲಾದ ಎರಡು ದಿನಗಳ ಬಳಿಕ ಮಠದ ಆವರಣದಲ್ಲಿ ಪೊಲೀಸರು ಕಾಣಿಸಿಕೊಂಡಿದ್ದಾರೆ.

ಉಸಿರಾಟದ ತೊಂದರೆ:

'ಆರೋಪದಿಂದ ಪೀಠಧ್ಯಕ್ಷರು ವಿಚಲಿತಗೊಂಡಿಲ್ಲ. ಪ್ರಕರಣನ್ನು ಕಾನೂನಾತ್ಮಕವಾಗಿ ಎದುರಿಸಲಿದ್ದಾರೆ. ಅವರು ಯಾವುದೇ ಕಾರಣಕ್ಕೂ ಅಜ್ಞಾತ ಸ್ಥಳಕ್ಕೆ ತೆರಳಿಲ್ಲ' ಎಂದು ಮಠದ ಸಲಹಾ ಸಮಿತಿ ಸದಸ್ಯ ಹಾಗೂ ವಕೀಲರೂ ಆಗಿರುವ ವಿಶ್ವನಾಥ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.

'ಭಾನುವಾರ ರಾತ್ರಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ವೈದ್ಯರು ಧಾವಿಸಿ ಆರೋಗ್ಯ ಪರಿಶಿಲಿಸಿದರು. ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ತೆರಳಿದ ಸಾಧ್ಯತೆ ಇದೆ' ಎಂದು ತಿಳಿಸಿದರು.

'ಪ್ರಕರಣದ ತನಿಖೆಗೆ ಶರಣರು ಸಂಪೂರ್ಣ ಸಹಕಾರ ನೀಡಲಿದ್ದಾರೆ. ಅವರು ಮಠದಲ್ಲೇ ಇರುತ್ತಾರೆ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ' ಎಂದು ಹೇಳಿದರು.

ಮಠದ ಭಕ್ತರಿಗೆ ಸಂದೇಶ:

ಮಠದ ಭಕ್ತರು ಮಧ್ಯಾಹ್ನ 1 ಗಂಟೆಗೆ ಆಗಮಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದು ಹರಿದಾಡುತ್ತಿದೆ. ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ವಾಟ್ಸ್ ಆ್ಯಪ್ ನಲ್ಲಿ ಸಂದೇಶ ನೀಡಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಹೆಚ್ಚು ಭಕ್ತರು ಮಠಕ್ಕೆ ಧಾವಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.