ADVERTISEMENT

INTERVIEW | ಉಡುಪುಗಳಿಗೆ ಪರಂಪರೆ ಸ್ಪರ್ಶ ನೀಡಿದ ಅಂಜು ಮೋದಿ

ಸುಮನಾ ಕೆ
Published 15 ಅಕ್ಟೋಬರ್ 2019, 19:45 IST
Last Updated 15 ಅಕ್ಟೋಬರ್ 2019, 19:45 IST
   

ಖಾದಿ, ಕೈಮಗ್ಗವನ್ನು ಫ್ಯಾಷನ್‌ ಲೋಕಕ್ಕೆ ಪರಿಚಯಿಸಿದವರಲ್ಲಿ ವಸ್ತ್ರವಿನ್ಯಾಸಕಿ ಅಂಜು ಮೋದಿ ಕೂಡ ಒಬ್ಬರು. ಸಾಂಪ್ರದಾಯಿಕ ವಿನ್ಯಾಸಗಳಿಗೆ ಜನಪ್ರಿಯವಾಗಿರುವ ಅವರು, ಅನೇಕ ಚಿತ್ರಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದಾರೆ. ನಗರದ ಬೀಬಾ ಸ್ಟೋರ್‌ನಲ್ಲಿ ‘ಬೀಬಾ ಬೈ ಅಂಜು ಮೋದಿ’ ಉಡುಪುಗಳ ಸಂಗ್ರಹವನ್ನು ಅನಾವರಣಗೊಳಿಸಿದ ಬಳಿಕ ‘ಮೆಟ್ರೊ’ ಮಾತಿಗೆ ಸಿಕ್ಕರು

ನಿಮ್ಮ ಹೊಸ ಸಂಗ್ರಹದ ಬಗ್ಗೆ ಹೇಳಿ

ಹಬ್ಬಗಳ ಸರದಿ ಆರಂಭವಾಗಿದೆ. ಓಣಂ, ದಸರಾ, ದೀಪಾವಳಿ ಹೀಗೆ ಒಂದೊಂದಾಗಿ ಹಬ್ಬಗಳು ಬರುತ್ತಲೇ ಇರುತ್ತವೆ. ನನ್ನ ಹೊಸ ಸಂಗ್ರಹ ‘ಇನ್‌ಚಾಂಟೆಂಡ್‌ ಫಾರೆಸ್ಟ್‌’ ಹಬ್ಬಗಳಿಗಾಗಿಯೇ ವಿನ್ಯಾಸ ಮಾಡಿದವು. ಹೂವು, ಹಕ್ಕಿ, ಹಸಿರು ವಾತಾವರಣ ಮನಸ್ಸಿಗೆ ಯಾವಾಗಲೂ ಖುಷಿ ಕೊಡುತ್ತದೆ. ಈ ಸಂಗ್ರಹದ ವಿನ್ಯಾಸಕ್ಕೆ ಅದೇ ಸ್ಫೂರ್ತಿ. ಸರಳ ವಿನ್ಯಾಸ, ಗಾಢಬಣ್ಣಗಳನ್ನು ಬಳಸಿದ್ದೇನೆ. ಹವಳದ ಕೆಂಪು, ಸೂರ್ಯಕಾಂತಿ ಹೂವಿನ ಹಳದಿ, ಸಮುದ್ರ ನೀಲಿ, ಇಂಡಿಗೋ ನೀಲಿ, ರೂಬಿ ಮೆರೂನ್‌ ಬಣ್ಣದ ಉಡುಪು ಹಬ್ಬದ ಸಂಭ್ರಮ ಹೆಚ್ಚಿಸಲಿವೆ.

ADVERTISEMENT

ನೀವು ವಿನ್ಯಾಸ ಮಾಡುವಾಗ ಗಮನಿಸುವ ಅಂಶ?

ತಿಳಿ, ಗಾಢ ಎರಡೂ ರೀತಿಯ ಬಣ್ಣಗಳಲ್ಲೂ ನಾನು ವಿನ್ಯಾಸ ಮಾಡುತ್ತೇನೆ. ವಿನ್ಯಾಸಕ್ಕೂ ಮೊದಲು ಸಮಯ, ಸಂದರ್ಭ, ಜನರ ಮನಸ್ಥಿತಿ, ಪ್ರಸ್ತುತ ಟ್ರೆಂಡ್‌ಗಳನ್ನು ನೋಡುತ್ತೇನೆ. ಬಣ್ಣಗಳ ಕಾಂಬಿನೇಷನ್‌ ನನ್ನ ವಸ್ತ್ರವಿನ್ಯಾಸದ ವಿಶೇಷತೆ ಎನ್ನಬಹುದು. ಬಟ್ಟೆಗಳ ಆಯ್ಕೆ, ಎಂಬ್ರಾಯ್ಡರಿ, ಸ್ಟಿಚ್ಚಿಂಗ್‌ ಎಲ್ಲದರಲ್ಲಿಯೂ ನಾನೇ ಮುತುವರ್ಜಿ ವಹಿಸುತ್ತೇನೆ. ಕುರ್ತಾ, ಪಲಾಜೋ, ಸಲ್ವಾರ್‌, ಕುರ್ತಾ ವಿಥ್‌ ಸ್ಕರ್ಟ್‌, ಮಾಡರ್ನ್‌ ಟ್ರೆಂಡಿ ಸಲ್ವಾರ್‌ಗಳಲ್ಲಿ ಸಾಂಪ್ರದಾಯಿಕ ವಿನ್ಯಾಸಗಳಿಂದಲೇ ನನ್ನ ವಿನ್ಯಾಸ ಪ್ರಸಿದ್ಧಿ ಪಡೆದಿರೋದು.

ಸಿನಿಮಾಗಳಲ್ಲೂ ಕೆಲಸ ಮಾಡಿದ್ದೀರಿ?

ಇತ್ತೀಚೆಗೆ ಬಿಡುಗಡೆಯಾದ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲೂ ಕೆಲಸ ಮಾಡಿದ್ದೇನೆ. ಐತಿಹಾಸಿಕ ಸಿನಿಮಾಗಳಿಗೆ ಸುಮ್ಮನೇ ವಸ್ತ್ರ ವಿನ್ಯಾಸ ಮಾಡಲಾಗುವುದಿಲ್ಲ. ಕತೆ, ಪಾತ್ರ, ಸ್ಥಳದ ಇತಿಹಾಸ ತಿಳಿದುಕೊಂಡು ಕೆಲಸ ಮಾಡಬೇಕಾಗುತ್ತದೆ. ‘ರಾಮ್‌ ಲೀಲಾ’ ಸಿನಿಮಾಕ್ಕೆ ಗುಜರಾತ್‌ನ ಹಳೆಯ ಕಾಲದ, ಸಾಂಪ್ರದಾಯಿಕ ಉಡುಪುಗಳ ಬಗ್ಗೆ ಖುದ್ದು ಅಲ್ಲಿಗೇ ಹೋಗಿ ತಿಳಿದುಕೊಂಡೆ. ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾಕ್ಕೆ ಕಂಚಿಪುರ, ಸೇಲಂ, ವಿಜಯವಾಡ, ವೆಂಕಟಗಿರಿ ಮೊದಲಾದ ಸ್ಥಳಗಳಿಗೆ ಹೋಗಿದ್ದೆ. 1800ರ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿ ಜನರು ಹೇಗೆ ಉಡುಪು ತೊಡುತ್ತಿದ್ದರು, ಆಭರಣ ತೊಡುತ್ತಿದ್ದರು ಎಂಬ ಬಗ್ಗೆ ತಿಳಿದುಕೊಂಡು ವಿನ್ಯಾಸ ಮಾಡಿದ್ದೆ. ಐತಿಹಾಸಿಕ ಸಿನಿಮಾಗಳ ಉಡುಪುಗಳಿಗೆ ಪರಂಪರೆ, ಇತಿಹಾಸದ ಸ್ಪರ್ಶ ನೀಡಬೇಕಾಗುತ್ತದೆ.

ಈ ಕ್ಷೇತ್ರದ ಸವಾಲುಗಳು ಏನು?

ಮುಂಚೆ ಎಲ್ಲರೂ ಟೈಲರ್‌ ಹತ್ತಿರ ಹೋಗುತ್ತಿದ್ದರು. ಈಗ ಮಾಲ್‌, ಸ್ಟೋರ್‌ಗಳಿಗೆ ಹೋಗಿ ತಮಗೆ ಬೇಕಾದ ಬಟ್ಟೆ ಕೊಂಡುಕೊಳ್ಳುತ್ತಾರೆ. ಉಡುಪು ತೊಟ್ಟಾಗ ಸ್ಟೈಲ್‌ ಹಾಗೂ ಆರಾಮದಾಯಕವಾಗಿಯೂ ಇರಬೇಕು ಎಂಬುದು ಈಗಿನವರ ಮನಸ್ಥಿತಿ. ಅದಕ್ಕಾಗಿ ಸ್ಟೈಲ್‌, ಕಂಫರ್ಟೇಬಲ್‌, ಡಿಸೈನ್‌, ಟ್ರೆಂಡ್‌ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ವಿನ್ಯಾಸ ಮಾಡುವಾಗ ಎಲ್ಲಾ ವರ್ಗದ ಜನರು, ಸೀಸನ್‌ಗಳನ್ನು ಗಮನಿಸಬೇಕು. ‘ರಾಮ್‌ಲೀಲಾ’ ಹಾಗೂ ‘ಬಾಜಿರಾವ್‌ ಮಸ್ತಾನಿ’ ಸಿನಿಮಾಕ್ಕೆ ನಾನು ಶರಾರ ವಿನ್ಯಾಸ ಮಾಡಿದ್ದೆ. ನಂತರ ಆ ಬಗೆಯ ಉಡುಪುಗಳಿಗೂ ಬೇಡಿಕೆ ಹೆಚ್ಚಾಯಿತು. ನಾನು ವಿನ್ಯಾಸ ಮಾಡಿದ ಟ್ಯೂನಿಕ್‌ ವಿಥ್‌ ಪಲಾಜೋ, ಟ್ಯೂನಿಕ್‌ ವಿಥ್‌ ಜೀನ್ಸ್‌ ಭಾರಿ ಜನಪ್ರಿಯವಾಯಿತು.

ಸಿನಿಮಾ, ಸೆಲೆಬ್ರೆಟಿ ಹಾಗೂ ಸಾಮಾನ್ಯ ಜನರ ಉಡುಪುಗಳ ವಿನ್ಯಾಸ ಭಿನ್ನವೇ?

ಸಿನಿಮಾಗಳಿಗೆ ವಸ್ತ್ರವಿನ್ಯಾಸ ಮಾಡುವ ಮೊದಲು ಚಿತ್ರಕತೆ, ದೃಶ್ಯ, ಪಾತ್ರಗಳ ಬಗ್ಗೆ ನಿರ್ದೇಶಕರ ಜೊತೆ ಮಾತುಕತೆ ನಡೆಸುತ್ತೇನೆ. ನಂತರ ಐತಿಹಾಸಿಕ ಸಿನಿಮಾವಾದರೆ ಅದಕ್ಕೆ ತಕ್ಕಂತೆ ವಸ್ತ್ರವಿನ್ಯಾಸ ಮಾಡುವುದು ನನ್ನ ಕ್ರಮ. ಹೆಚ್ಚಿನ ಸಿನಿಮಾಗಳಿಗೆ ನಾನು ಸಾಂಪ್ರದಾಯಿಕ ಉಡುಪುಗಳನ್ನೇ ವಿನ್ಯಾಸ ಮಾಡಿದ್ದು. ಇನ್ನು ಸೆಲೆಬ್ರಿಟಿಗಳು ಕೆಲ ಐಡಿಯಾ, ವಿಷಯಗಳ ಜೊತೆಯೇ ಬಂದಿರುತ್ತಾರೆ. ಅವರು ನಮ್ಮನ್ನು ಕ್ರಿಯೇಟಿವ್‌ ಆಗಿ ಯೋಚಿಸುವಂತೆ ಮಾಡುತ್ತಾರೆ. ಆದರೆ ಸಾಮಾನ್ಯ ಜನರ ವಸ್ತ್ರವಿನ್ಯಾಸ ಮಾಡುವುದೇ ಚಾಲೆಂಜಿಂಗ್‌. ಯಾಕೆಂದರೆ ಅವರು ಸೆಲೆಬ್ರಿಟಿ, ಸಿನಿಮಾ ನೋಡಿ ಅಂತಹದೇ ವಿನ್ಯಾಸ ಬೇಕೆನ್ನುತ್ತಾರೆ. ಅವರ ದೇಹಾಕಾರ, ವಯೋಮಾನ ನೋಡಿ ಅವರಿಗೆ ವಿನ್ಯಾಸ ಮಾಡಬೇಕಾಗುತ್ತದೆ. ಈಗ ಫ್ಲಸ್‌ ಸೈಜ್‌ ಹೆಚ್ಚು ಸುದ್ದಿ ಮಾಡುತ್ತಿದೆ. ಅದೂ ಚಾಲೆಂಜಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.