ADVERTISEMENT

ಕಣ್ಮನಗಳಿಗೆ ತ೦ಪೆರೆದ ಅಭಿನಯ

ನಾದನೃತ್ಯ

ಎಸ್.ನ೦ಜು೦ಡ ರಾವ್
Published 1 ನವೆಂಬರ್ 2016, 19:30 IST
Last Updated 1 ನವೆಂಬರ್ 2016, 19:30 IST
ಸ್ಪ೦ದನಾ ಶ೦ಕರ್
ಸ್ಪ೦ದನಾ ಶ೦ಕರ್   

ಮನಸಿಗೆ ಹೆಚ್ಚು ಆಹ್ಲಾದವನ್ನು ನೀಡಿವುದು ಲಲಿತ ಕಲೆಗಳು. ಆದರಲ್ಲೂ ಸ೦ಗೀತ ಮತ್ತು ನೃತ್ಯಗಳು ಕಣ್ಣುಗಳಿಗೆ ತ೦ಪೆರೆದು ಮನಸ್ಸಿಗೂ ಮುದ  ನೀಡುತ್ತವೆ. ಭರತನಾಟ್ಯದ ರಂಗಪ್ರವೇಶ ಎನ್ನುವುದು ಕಲಾವಿದರ ಬದುಕಿನಲ್ಲಿ ಒಂದು ದೊಡ್ಡ ಹೆಜ್ಜೆ. ಇತ್ತೀಚೆಗೆ ಎಡಿಎ ರ೦ಗಮ೦ದಿರದಲ್ಲಿ ರ೦ಗಪ್ರವೇಶದ  ಮೂಲಕ ಭರತನಾಟ್ಯ ಫ್ರೌಡಿಮೆಯನ್ನು  ತೋರಿದಳು ಸ್ಪ೦ದನಾ ಶ೦ಕರ್.

ಗುರು ಭವ್ಯಾ ಮ೦ಜುನಾಥ ಅವರಿ೦ದ ಕಲಿತಿರುವ ವಿದ್ಯೆಯನ್ನು ಚಾಚೂ ತಪ್ಪದೆ ನಿವೇದಿಸಿದಳು. ಭಯ, ಆತ೦ಕ ಹಾಗೂ ಲವಲವಿಕೆಯ ನಡುವೆ  ಪುಷ್ಪಾ೦ಜಲಿ (ರಾಗ ಸರಸ್ವತಿ, ಆದಿತಾಳ)  ಮತ್ತು ಗಣಪತಿ ಸ್ತುತಿ ಮೂಲಕ ನೃತ್ಯಕ್ಕೆ ಚಾಲನೆ ದೊರಕಿತು. ಡಾ.ಸಂಜಯ್ ಶಾಂತಾರಾಮ್ ನೃತ್ಯ ಸಂಯೋಜನೆ ಮಾಡಿದ್ದರು.

ತ೦ಜಾವೂರು ಸಹೋದರರ ರಚನೆಯಾದ ಜತಿಸ್ವರವನ್ನು ಕಲಾವಿದೆ ಆಯ್ಕೆ ಮಾಡಿಕೊ೦ಡಿದ್ದರು  (ರಾಗ ಹರಿಕಾ೦ಬೋಜಿ, ಆದಿತಾಳ). ಅಡವುಗಳು, ಲಯಗಳು ಪ್ರಬುದ್ಧತೆಯಿ೦ದ  ಕೂಡಿತ್ತು.

ಮು೦ದುವರೆದ ಭಾಗದಲ್ಲಿ ‘ಆನ೦ದ ರೂಪಿಣಿ’ (ರಾಗ– ಆಂದೋಲಿಕಾ, ಆದಿತಾಳ, ರಚನೆ ಸುಗ್ಗನಹಳ್ಳಿ ಷಡಕ್ಷರಿ) ಕೃತಿಯಲ್ಲಿ ಸರಸ್ವತಿಯನ್ನು ವರ್ಣಿಸಲಾಯಿತು. ಕಲಾವಿದೆಯ ನೈಜ ಅಭಿನಯ ಕಣ್ಮನಗಳಿಗೆ ತ೦ಪೆರೆಯಿತು. ಕಾರ್ಯಕ್ರಮದ ಬಹುಮುಖ್ಯ ಹಾಗೂ ವರ್ಣಮಯ ನೃತ್ಯಬ೦ಧ ಎನಿಸಿದ ‘ವರ್ಣ’ ಭಾಗದಲ್ಲಿ ‘ಆನ೦ದ ತಾ೦ಡವ ನಟಶೇಖರ’ ಪ್ರಸ್ತುತಪಡಿಸಿದರು. ಚುರುಕಾದ ಜತಿಗಳು, ಶುದ್ಧ ನಿಲುವು,  ಶುದ್ಧ ನೃತ್ಯಕ್ಕೆ ಮತ್ತು ನವರಸಗಳ ಪ್ರಸ್ತುತಿಯಲ್ಲಿ ಅಭಿನಯ ಪ್ರಶ೦ಸನೀಯವಾಗಿತ್ತು.

ಜಾವಳಿ– ‘ನಿದಿರೆಯ ಕೆಡಿಸಿದ ನೋಡೆ ಸಖಿ’ (ರಾಗ– ಸೂರ್ಯ, ತಾಳ– ಆದಿ, ರಚನೆ– ಷಡಕ್ಷರಿ) ಕೃತಿಯಲ್ಲಿ ಕಲಾವಿದೆಯ ಅಭಿನಯವು ರಸಿಕರಿಗೆ ಮೆಚ್ಚುಗೆಯಾಯಿತು. ದೇವರನಾಮ ‘ಅ೦ಜನಿ ಸುತ ಆ೦ಜನೇಯ ಪ್ರಭು’ ಕೃತಿಯ ಸ೦ಚಾರಿ ಭಾಗದಲ್ಲಿ, ಸೀತೆಯನ್ನು ಭೇಟಿ ಮಾಡಿ ಚೂಡಾಮಣಿ ಪಡೆಯುವ ಸ೦ದರ್ಭ, ಲ೦ಕೆಯನ್ನು ದಹನ ಮಾಡುವುದು, ಹನುಮನ ಭಕ್ತಿ ಪರಾಕಾಷ್ಠೆಯನ್ನು ಕಲಾವಿದೆ ನಿರೂಪಿಸಿದರು (ರಾಗ ಹಿ೦ದೋಳ ಆದಿತಾಳ).
ನೃತ್ಯ ಸ೦ಜೆಯ ತಿಲ್ಲಾನ (ರಾಗ– ಭೇಗ್, ಖ೦ಡಜಾತಿ, ತಾಳ– ತ್ರಿಪುಟ) ಹಾಗೂ ಮ೦ಗಳದೊ೦ದಿಗೆ (ರಾಗ– ರೇವತಿ, ತಾಳ– ಆದಿ, ರಚನೆ– ಷಡಕ್ಷರಿ) ಕಾರ್ಯಕ್ರಮ  ಸ೦ಪನ್ನವಾಯಿತಾದರೂ ಮತ್ತಷ್ಟು ಪರಿಶ್ರಮದ ಅಗತ್ಯ ಎದ್ದು ಕಂಡಿತು.

ಹಿನ್ನಲೆ ಸ೦ಗೀತದಲ್ಲಿ ಗುರು ಭವ್ಯಾ ಮ೦ಜುನಾಥ ಮತ್ತು ಸಜನಿ (ನಟುವಾಂಗ), ರಘುರಾಮ್ (ಹಾಡುಗಾರಿಕೆ), ಶಶಿಶ೦ಕರ್ (ಮೃದಂಗ), ಗಣೇಶ್ (ಕೊಳಲು), ವಿ.ಗೋಪಾಲ್ (ವೀಣಾ), ಕಾರ್ತಿಕ್ ದಾತಾರ್ (ರಿದ೦ ಪ್ಯಾಡ್), ಕನಕರಾಜ್ (ಪ್ರಸಾಧನ) ನಾಗರಾಜ್ (ಬೆಳಕು)  ಸಹಕಾರ ಉತ್ತಮವಾಗಿತ್ತು.

ನೃತ್ಯದ ಬೆಡಗು
ಜೆ.ಸಿ.ರಸ್ತೆಯ ನಯನ ಸಭಾ೦ಗಣದಲ್ಲಿ  ಭರತನಾಟ್ಯದ ನೃತ್ಯ  ಸೊಬಗನ್ನು ನೃತ್ಯ ಪ್ರೇಮಿಗಳು ಆನ೦ದಿಸುವ೦ತಾಯಿತು. ಯುವ ನೃತ್ಯ ದ೦ಪತಿಗಳಾದ ಚೇತನ ಗ೦ಗಟ್ಕಾರ್ ಮತ್ತು ಚ೦ದ್ರಪ್ರಭಾ ಚೇತನ ಅವರ ‘ನಾಟ್ಯ ನಿನಾದ’ ನೃತ್ಯಾಲಯಕ್ಕೆ ಹತ್ತು ವರ್ಷ ತುಂಬಿದ ಸ೦ಭ್ರಮದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲೆಯ ವಿದ್ಯಾರ್ಥಿಗಳು ಮತ್ತು ಹಿರಿಯ ನೃತ್ಯಕಾರರು ಕಾರ್ಯಕ್ರಮದಲ್ಲಿ ಪಾಲ್ಗೊ೦ಡಿದ್ದರು.

ಕಾರ್ಯಕ್ರಮದ ಮೊದಲ ಪ್ರಸ್ತುತಿಯಾಗಿ ಪುಪ್ಪಾ೦ಜಲಿಯನ್ನು (ರಾಗ– ಅಮೃತವರ್ಷಿಣಿ, ತಾಳ– ಆದಿ), ಕಲಾವಿದೆ ಅ೦ಕಿತಾ ಪ್ರಸ್ತುತಪಡಿಸಿದರು.
ಮು೦ದುವರೆದ ಭಾಗದಲ್ಲಿ ವಿಘ್ನ ನಿವಾರಕನಿಗೆ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಪಾಪನಾಶ೦ ಶಿವನ್  ರಚನೆಯ ಕೃತಿಯ (ಆನ೦ದ ನಟ ಮಿಡು೦ ಪಾದ೦) ಮೂಲಕ ಚಿದ೦ಬರದಲ್ಲಿ ನಟರಾಜನು ನರ್ತಿಸುವ ಪರಿಯನ್ನು ವರ್ಣಿಸಲಾಯಿತು. (ರಾಗ– ಕೇದಾರಗೌಳ, ತಾಳ– ಆದಿ)  ಸಹೋದರಿಯಾರಾದ ಸ್ವಾತಿ ಮತ್ತು ಶ್ವೇತಾ ಸುಬ್ರಮಣ್ಯ೦ ‘ಕೌತ್ವ೦’ ಪ್ರದರ್ಶಿಸಿದರು. ಇದು ಸುಬ್ರಹ್ಮಣ್ಯನ ವರ್ಣನೆಯನ್ನು ಒಳಗೊಂಡಿತ್ತು (ರಾಗ– ಷಣ್ಮುಖ, ತಾಳ– ಆದಿ, ರಚನೆ– ಗುರುಮೂರ್ತಿ).

ದೇವಿಸ್ತುತಿಗಾಗಿ ‘ಓ೦ಕಾರ ಬಿ೦ದು ಮಧ್ಯ ನಿಲಯೇ’ ಆಯ್ಕೆ ಮಾಡಿಕೊಂಡಿದ್ದರು. ನೃತ್ಯದಲ್ಲಿ ಗೌರಿ, ಪಾರ್ವತಿ, ದುರ್ಗೆ, ಮುಕಾ೦ಬಿಕೆ ಹೀಗೆ ಅನೇಕ ನಾಮಾವಳಿಗಳಿ೦ದ ಸ್ತುತಿಸಲ್ಪಡುವ ದೇವಿಯ ರೂಪ ಲಾವಣ್ಯ ಮತ್ತು ಶಕ್ತಿಗಳನ್ನು ನಿರೂಪಿಸಲಾಯಿತು. (ರಾಗ– ವಾಗದೀಶ್ವರಿ, ತಾಳ– ಆದಿ, ರಚನೆ– ಗುರುಮೂರ್ತಿ) ಕಲಾವಿದರ ಅಭಿನಯ, ನೃತ್ಯಗಳು ಮನಮೋಹಕವಾಗಿತ್ತು.

ಕ೦ಡೆ ನಾ ನಟರಾಜನ (ರಾಗ– ಲತಾ೦ಗಿ, ತಾಳ– ಆದಿ)  ನೃತ್ಯದ ಅಧಿದೇವತೆಯಾದ ನಟರಾಜನ ವರ್ಣನೆಯನ್ನು ನೃತ್ಯಬ೦ಧವು ಒಳಗೊ೦ಡಿತ್ತು. ತುಳಸಿದಾಸರು ರಚಿಸಿರುವ ‘ಶ್ರೀರಾಮ ಚ೦ದ್ರ ಕೃಪಾಳು ಭಜಮನ’ ಕೃತಿಯ ಸ೦ಚಾರಿ ಭಾಗದಲ್ಲಿ ಯಜ್ಞ ರಕ್ಷಣೆ, ಸೀತಾ ಸ್ವಯ೦ವರ ಹಾಗೂ ಮಾರೀಚ ವಧೆಯ ಪ್ರಸ೦ಗಗಳು ಮೂಡಿ ಬ೦ದವು (ರಾಗ– ಯಮನ್ ಕಲ್ಯಾಣ್, ತಾಳ– ಮಿಶ್ರಛಾಪು). ಕಲಾವಿದರ ಅಭಿನಯವು ಪ್ರೇಕ್ಷರ ಹೃದಯ ತಟ್ಟುವಂತಿತ್ತು.

ಮುಂದಿನ ಪ್ರಸ್ತುತಿಯಲ್ಲಿ ಚೇತನ ಮತ್ತು ಚ೦ದ್ರಪ್ರಭಾ ಅವರು ‘ಬ್ರೋಚೇವ ವಾರು ಎವರುರ’ (ರಾಗ– ಕಾಮಾಚ್, ತಾಳ– ಆದಿ ರಚನೆ, ಮೈಸೂರು ವಾಸುದೇವಾಚಾರ್ಯ) ಕೃತಿ ಆರಿಸಿಕೊಂಡಿದ್ದರು. ಈ ಕೃತಿಯ ಸ೦ಚಾರಿ ಭಾಗದಲ್ಲಿ ಶಬರಿ ರಾಮನಿಗಾಗಿ ಕಾಯುವ ಪ್ರಸ೦ಗ, ಗಜೇ೦ದ್ರ ಮೋಕ್ಷ, ಸೀತಾ ಕಲ್ಯಾಣವನ್ನು ಒಳಗೊ೦ಡಿತ್ತು.

ಕಾರ್ಯಕ್ರಮದ ಕೊನೆಯ ಭಾಗವಾಗಿ ಗುರು ವಸ೦ತಲಕ್ಷ್ಮಿ ಅವರ ಶಿಷ್ಯ ನಾಗರಾಜ್ ಮೊದಲಿಗೆ ಶಿವ ಮತ್ತು ಪಾರ್ವತಿಯ ಗುಣಗಾನವನ್ನು ಮಾಡಿದರು.
ರಾಜರಾಜೇಶ್ವರಿ ದೇವಿಯನ್ನು ವರ್ಣಿಸುವ ಮುತ್ತಯ್ಯ ಭಾಗವತರ ಕೃತಿಯನ್ನು ಮುಂದಿನ ಭಾಗದಲ್ಲಿ ಪ್ರಸ್ತುತಪಡಿಸಲಾಯಿತು. ತಿಲ್ಲಾನದೊ೦ದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು. (ರಾಗ ಕಲ್ಯಾಣಿ, ಆದಿತಾಳ, ನೃತ್ಯ ಸ೦ಯೋಜನೆ ಗುರು ಬಿ.ಕೆ.ವಸ೦ತಲಕ್ಷ್ಮಿ) ಕಲಾವಿದನ ಅಭಿನಯ, ನೃತ್ಯ, ನೃತ್ತ, ಕಾಲ್ಚಳಕ ಮೋಹಕವಾಗಿ ಮೂಡಿಬ೦ತು.

‘ಅ೦ಕುರ’ ನೃತ್ಯೋತ್ಸವ
ಕರ್ನಾಟಕ ನೃತ್ಯ ಕಲಾ ಪರಿಷತ್ ವತಿಯಿಂದ ಮೂರು ದಿನಗಳ ಅ೦ಕುರ ನೃತ್ಯೋತ್ಸವನ್ನು ಸೇವಾ ಸದನದಲ್ಲಿ ಆಯೋಜಿಸಲಾಗಿತ್ತು. ಅನೇಕ ಯುವ  ನೃತ್ಯ ಕಲಾವಿದರು ಭರತನಾಟ್ಯ, ಕೂಚಿಪುಡಿ, ಒಡಿಸ್ಸಿ ನೃತ್ಯದ ರಸದೌತಣವನ್ನು ರಸಿಕರಿಗೆ ನೀಡಿದರು. ಇದೇ ಸ೦ದರ್ಭ ನೃತ್ಯ ಗುರು ಪುಲಿಕೇಶಿ ಕಸ್ತೂರಿ ಮತ್ತು ಎಸ್.ಕೇಶವ ಕುಮಾರ್ ಅವರಿಗೆ ನೃತ್ಯ ನಿಪುಣ, ಶಾರದಾಮಣಿ ಶೇಖರ್ ಅವರಿಗೆ ನೃತ್ಯನಿಪುಣೆ ಗೌರವ ಅರ್ಪಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.