ADVERTISEMENT

ಶುಕ್ರವಾರ, 1–9–1967

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2017, 19:30 IST
Last Updated 31 ಆಗಸ್ಟ್ 2017, 19:30 IST

ದುಷ್ಟ ಕೋಮುಶಕ್ತಿಗಳ ನಿಗ್ರಹ ಅಗತ್ಯ

(ನಾರಾಯಣಸ್ವಾಮಿ ಅವರಿಂದ)

ನವದೆಹಲಿ, ಆ. 31– ಸಂಪುಟದಲ್ಲಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಐಕ್ಯಮತ್ಯದ ತುರ್ತು ಅಗತ್ಯವನ್ನು ಕುರಿತು ಒತ್ತಿ ಹೇಳಿದ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು, ಸಂಪುಟದಲ್ಲಿ ಒಡಕುಂಟಾಗಿದೆಯೆಂಬ ಭಾವನೆ ದೇಶದಲ್ಲಿ ಬೆಳೆಯುತ್ತಿರುವು ದನ್ನು  ಪ್ರಸ್ತಾಪಿಸಿ, ಸಹೋದ್ಯೋಗಿಗಳು ಸಮಸ್ಯೆಗಳನ್ನು ಕುರಿತು ಬಿಚ್ಚು ಮನಸ್ಸಿನ ಅಭಿಪ್ರಾಯ ವ್ಯಕ್ತಪಡಿಸಬೇಕೆಂದು ಕೇಳಿದರೆಂದು ವರದಿಯಾಗಿದೆ.

ADVERTISEMENT

ದೇಶದಲ್ಲಿನ ಕಾನೂನು ಮತ್ತು ಶಿಸ್ತುಪಾಲನೆಯ ಪರಿಸ್ಥಿತಿಯನ್ನು ಕುರಿತು ಸಂಪುಟವು ಗಾಢವಾಗಿ ಚರ್ಚಿಸಿತು.

ಕೇಂದ್ರ ಮಂತ್ರಿ ಮಂಡಲದ ಅನೌಪಚಾರಿಕ ಸಭೆ ಇಂದು ಐದು ಗಂಟೆಗಳ ಕಾಲ ಸಮಾವೇಶಗೊಂಡಿತ್ತು.

ಕೆರಳಿದ ಕೋಮುವಾರು ಭಾವನೆ, ದೇಶದಲ್ಲಿ ಬೆಳೆಯುತ್ತಿರುವ ಹಿಂಸಾಚಾರ ಮತ್ತು ರಾಜಧನವನ್ನು ರದ್ದು ಮಾಡುವ ವಿವಾದಾತ್ಮಕ ಪ್ರಶ್ನೆಗಳನ್ನು ಕುರಿತು ಈ ಅನೌಪಚಾರಿಕ ಸಭೆಯಲ್ಲಿ ಚರ್ಚಿಸಲಾಯಿತು.

ಚಳವಳಿ ನಿಲ್ಲಿಸಲು ಕಾಶ್ಮೀರಿ ಪಂಡಿತರಿಗೆ ಸಾದಿಕ್ ಕರೆ

ಶ್ರೀನಗರ, ಆ. 31– ಕಾಶ್ಮೀರಿ ಪಂಡಿತರು ತಮ್ಮ ಚಳವಳಿಯನ್ನು ನಿಲ್ಲಿಸಬೇಕೆಂದೂ ಚಳವಳಿ ನಿಂತಿತೆಂದರೆ ಅವರ ಕುಂದು ಕೊರತೆಗಳ ಪರಿಹಾರಕ್ಕೆ ಎಲ್ಲ ಗಮನ ಕೊಡಬಹುದೆಂದೂ ಮುಖ್ಯಮಂತ್ರಿ ಶ್ರೀ ಜಿ.ಎಂ. ಸಾದಿಕ್ ಅವರು ಇಂದು ರಾಜ್ಯ ವಿಧಾನಸಭೆಯಲ್ಲಿ ತಿಳಿಸಿದರು.

‘ಕೋಮುವಾರು ಗಲಭೆಗಳಿಗೆ ಯಾವುದೇ ಅವಕಾಶ ನೀಡದಿರಲು ಸರ್ಕಾರ ದೃಢ ನಿರ್ಧಾರ ಹೊಂದಿದೆ. ಜನಗಳ ಐಕ್ಯತೆಗೆ ಭಂಗ ತರುವ ಯಾವುದೇ ಪ್ರಯತ್ನವನ್ನು ಭಗ್ನಗೊಳಿಸಲಾಗುವುದು’ ಎಂದು ಅವರು ಕಳೆದ ಕೆಲವು ದಿನಗಳ ಗಲಭೆಗಳು ಹಾಗೂ ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರವು ಕೈಗೊಂಡಿರುವ ಕ್ರಮಗಳನ್ನು ವಿವರಿಸುತ್ತಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.