ADVERTISEMENT

ಲಿಂಗ ಸೂಕ್ಷ್ಮತೆಯತ್ತ ಒಂದು ಪುಟ್ಟ ಹೆಜ್ಜೆ...

ಪ್ರಜಾವಾಣಿ ವಿಶೇಷ
Published 3 ಸೆಪ್ಟೆಂಬರ್ 2021, 19:30 IST
Last Updated 3 ಸೆಪ್ಟೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಮಹಿಳೆಯರನ್ನು ಗೌರವಿಸುವುದು, ಲಿಂಗ ಸೂಕ್ಷ್ಮತೆ ಬೆಳೆಸಿಕೊಳ್ಳುವುದನ್ನು ಗಂಡು ಮಕ್ಕಳಿಗೆ ಕಲಿಸಬೇಕಾಗಿದೆ.

‘ಅತ್ಯಾಚಾರದ ಸುದ್ದಿಗಳನ್ನು ಕೇಳಿದಾಗಲೆಲ್ಲ ಆಘಾತದ ಜೊತೆ ಚಿಂತೆಯೂ ಹೆಚ್ಚಾಗ್ತಾ ಇದೆ’ ಎನ್ನುವ ಗೃಹಿಣಿ ಸೀಮಾಳ ಆತಂಕಕ್ಕೆ ಕಾರಣಗಳೂ ಸಾಕಷ್ಟಿವೆ. ಆರು ವರ್ಷ ವಯಸ್ಸಿನ ಮಗನ ತಾಯಿಯಾದ ಆಕೆಗೆ ಮುಂದೆ ತನ್ನ ಮಗ ಏನಾಗಿಬಿಡ್ತಾನೋ ಎಂಬ ಚಿಂತೆ.

‘ನಮ್ಮ ಸುತ್ತಮುತ್ತ ನಡೀತಾ ಇರುವ ಘಟನೆಗಳು ಭಯ ಹುಟ್ಟಿಸಿಬಿಟ್ಟಿವೆ. ಒಬ್ಬ ಮನುಷ್ಯಳಾಗಿ ತೊಂದರೆಗೀಡಾದ ಬೇರೆ ಹೆಣ್ಣುಮಕ್ಕಳ ಬಗ್ಗೆ ಕಾಳಜಿ ಒಂದು ಕಡೆಯಾದರೆ, ಒಬ್ಬಳು ತಾಯಿಯಾಗಿ ನನ್ನ ಮಗ ಬೇರೆ ಹೆಣ್ಣುಮಕ್ಕಳನ್ನು ಗೌರವಿಸುವಂತಹ ಉತ್ತಮ ವ್ಯಕ್ತಿಯನ್ನಾಗಿ ಮಾಡಬೇಕಾದ ಹೊಣೆಗಾರಿಕೆ ಇನ್ನೊಂದು ಕಡೆ’ ಎನ್ನುವ ಸೀಮಾ, ಗಂಡುಮಕ್ಕಳಿಗೆ ಲಿಂಗ ಸೂಕ್ಷ್ಮತೆಯನ್ನು ಚಿಕ್ಕಂದಿನಿಂದಲೇ ಬೆಳೆಸಬೇಕಾಗಿದೆ ಎಂಬುದರ ಬಗ್ಗೆ ಖಚಿತ ನಿಲುವನ್ನೂ ಹೊಂದಿದ್ದಾಳೆ.

ADVERTISEMENT

ಹೌದು, ಗಂಡು ಮಕ್ಕಳಿಗೆ ಚಿಕ್ಕಂದಿನಿಂದಲೇ ಮಹಿಳೆಯರನ್ನು ಗೌರವಿಸುವಂತಹ ಸಂಸ್ಕಾರವನ್ನು ತಂದೆ– ತಾಯಿ ನೀಡಿದರೆ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯವನ್ನು ಕೆಲವುಮಟ್ಟಿಗಾದರೂ ಕಡಿಮೆ ಮಾಡಬಹುದು ಎಂಬಂತಹ ಚರ್ಚೆ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ನಮ್ಮ ಸುತ್ತಲೂ ಇರುವ ಪ್ರತಿಯೊಬ್ಬರೂ ಸುರಕ್ಷಿತರಾಗಿರಬೇಕು, ಅವರಲ್ಲಿ ಭದ್ರತೆಯ ಭಾವನೆಯಿರಬೇಕು, ಒಂದು ಉತ್ತಮವಾದ, ಲಿಂಗ ಸಮಾನತೆ ಇರುವ, ಸುಭದ್ರ ಸಮಾಜದ ಸೃಷ್ಟಿಗೆ ಅನುವಾಗುವಂತಹ ಗಂಡು ಮಕ್ಕಳನ್ನು ಬೆಳೆಸಬೇಕು ಎಂಬ ಚಿಂತನೆಗೆ ತಾಯಿ ಮಾತ್ರವಲ್ಲ, ತಂದೆ ಕೂಡ ಪ್ರಮುಖ ಪಾತ್ರ ವಹಿಸಬೇಕು ಎಂಬ ಚಿಂತನೆಗಳು ಗರಿಗೆದರುತ್ತಿವೆ.

ಅವಳ ಮೇಲೇಕೆ ದೂರು?

ಎಂತಹ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆಂದರೆ, ಮಹಿಳೆಯರು ಆಧುನಿಕ ಉಡುಪು ಧರಿಸಿದರೂ, ಕತ್ತಲೆಯಾದ ಮೇಲೆ ಹೊರಗೆ ಅಡ್ಡಾಡಿದರೂ ಅವರನ್ನೇ ಆಕ್ಷೇಪಿಸುವ, ಟೀಕಿಸುವ, ಮೂದಲಿಸುವ ಮಂದಿಯೇ ಹೆಚ್ಚು. ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ, ಅತ್ಯಾಚಾರ ಸಂಭವಿಸಿದರೆ, ಅವಮಾನಿಸಿದರೆ ಅಥವಾ ಅವರನ್ನು ಹಿಂಬಾಲಿಸುತ್ತ ಕಿರುಕುಳ ನೀಡಿದರೆ ಹಲವರು ನಿರ್ಲಿಪ್ತವಾಗಿದ್ದರೆ, ಇನ್ನು ಕೆಲವರು ಹೆಣ್ಣುಮಕ್ಕಳದ್ದೇ ತಪ್ಪು ಎಂದು ಬಿಂಬಿಸಿಬಿಡುತ್ತಾರೆ. ‘ಆಕೆ ಅಷ್ಟೊತ್ತಿನಲ್ಲಿ ಒಂಟಿಯಾಗಿ ಅಲ್ಲಿಗೆ ಹೋಗಿದ್ದೇಕೆ?’, ‘ಬಾಯ್‌ಫ್ರೆಂಡ್‌ ಜೊತೆ ಹೊತ್ತಲ್ಲದ ಹೊತ್ತಿನಲ್ಲಿ ತಿರುಗಿದರೆ ಇನ್ನೇನಾಗುತ್ತದೆ?’, ‘ಶಿಸ್ತಾಗಿ ಬಟ್ಟೆ ಹಾಕದೆ, ಲಂಗುಲಗಾಮಿಲ್ಲದೇ ಓಡಾಡಿದರೆ ಹುಡುಗರಾದರೂ ಏನು ಮಾಡುತ್ತಾರೆ?’... ಎಂಬಂತಹ ತರಹೇವಾರಿ ಮಾತುಗಳು, ಸೂಕ್ಷ್ಮತೆ ಇಲ್ಲದ ಹೇಳಿಕೆಗಳು ರಾರಾಜಿಸುತ್ತವೆ.

‘ಪೋಷಕರು ತಾವು ಹೇಳಿದಂತೆ ಮಕ್ಕಳು ಕೇಳಬೇಕು, ಅದರಂತೆ ಆಗಬೇಕು ಎಂಬುದನ್ನು ಬಿಟ್ಟು ತಮ್ಮಂತೆಯೇ ಅಂದರೆ ಮಕ್ಕಳಿಗೆ ತಾವೇ ಆದರ್ಶಪ್ರಾಯರಾಗಬೇಕು ಎಂದುಕೊಂಡರೆ ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯ. ಹೆಂಡತಿ, ತಾಯಿ, ಸಹೋದರಿ, ಇತರ ಮಹಿಳೆಯರನ್ನು ಗೌರವಿಸುವುದು, ಅವರೂ ಸಮಾನರು ಎಂಬುದನ್ನು ಮನಗಾಣುವುದು, ದೈಹಿಕವಾಗಿ ತಾವು ಬಲಾಢ್ಯರು ಎಂಬ ಅಹಂ ಬಿಟ್ಟು ಕರುಣೆಯಿಂದ ವರ್ತಿಸಿದರೆ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಖಂಡಿತ ಕಡಿಮೆಯಾಗುತ್ತ ಹೋಗುತ್ತದೆ’ ಎನ್ನುತ್ತಾರೆ ಆಪ್ತ ಸಮಾಲೋಚಕಿ ಪ್ರಮೀಳಾ ಎಸ್‌.

ನಾವೆಷ್ಟೇ ಪ್ರಗತಿಪರರು ಎಂದುಕೊಂಡರೂ ಮಕ್ಕಳ ಎದುರು ಪ್ರೀತಿ– ಪ್ರೇಮ, ಲೈಂಗಿಕ ವಿಷಯಗಳ ಬಗ್ಗೆ ಮಾತನಾಡಲು ಹಿಂಜರಿಯುತ್ತೇವೆ; ಗುಟ್ಟು ಮಾಡುತ್ತೇವೆ. ಆದರೆ ತಂತ್ರಜ್ಞಾನವೆಂಬುದು ಇವನ್ನೆಲ್ಲ ಮಕ್ಕಳ ಅಂಗೈಯಲ್ಲಿ ತಂದಿರಿಸಿದೆ. ಇಂತಹ ಮಾಹಿತಿಗಳನ್ನು, ಕೆಲವೊಮ್ಮೆ ಪೋಷಕರಿಗೆ ಗೊತ್ತಿರುವುದಕ್ಕಿಂತ ಹೆಚ್ಚು ವಿವರಗಳನ್ನು ತಿಳಿದುಕೊಂಡುಬಿಡುತ್ತಾರೆ. ಅಂತರ್ಜಾಲ, ವಿವಿಧ ಮಾಧ್ಯಮಗಳ ಮೂಲಕ ಯಾವುದು ಸಹಜ, ಯಾವುದನ್ನು ಒಪ್ಪಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಬಹುದು, ನಿಜ.

ಮಕ್ಕಳ ಜೊತೆ ಮುಕ್ತವಾಗಿ ಮಾತನಾಡಿ

‘ಆದರೆ ಮಕ್ಕಳು ಅಂತರ್ಜಾಲದಲ್ಲಿ ಓದುವಂತಹ, ನೋಡುವಂತಹ ವಿಷಯಗಳು, ಮಾಹಿತಿ ಹೆಚ್ಚಾಗಿ ಸಿದ್ಧಮಾದರಿಯಾದ ಲಿಂಗ ಅಸೂಕ್ಷ್ಮತೆ ಮನೋಭಾವವನ್ನು ಉದ್ದೀಪಿಸುವಂತಹವು’ ಎನ್ನುವ ಪ್ರಮೀಳಾ, ‘ಮಕ್ಕಳ ಜೊತೆ ಹೆಚ್ಚು ಹೆಚ್ಚಾಗಿ ಮಾತುಕತೆ ನಡೆಸಿ. ನಿಮ್ಮ ಗಂಡು ಮಕ್ಕಳ ಜೊತೆ ಪ್ರೀತಿ– ಪ್ರೇಮ, ಡೇಟಿಂಗ್‌, ದೈಹಿಕ ಸಾಮೀಪ್ಯ ಅದೂ ಒಪ್ಪಿತ ಲೈಂಗಿಕ ಸಂಬಂಧದ ಬಗ್ಗೆ ಮಾತನಾಡಿ. ಅಂತರ್ಜಾಲದಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ವೈಭವೀಕರಿಸುವ ಲೈಂಗಿಕ ವಿಷಯಗಳ ಹಿಂದಿನ ನಿಜಾಂಶದ ಬಗ್ಗೆ ವಿವರಿಸಿ. ಮಹಿಳೆಯರು ಭೋಗದ ವಸ್ತುಗಳಲ್ಲ, ಅವರನ್ನು ಸಮಾನವಾಗಿ ಕಾಣಬೇಕು ಎಂದು ತಿಳಿಹೇಳಿ’ ಎಂದು ಸಲಹೆ ನೀಡುತ್ತಾರೆ.

ಹೆಣ್ಣುಮಕ್ಕಳನ್ನು ಗೌರವಿಸುವುದು ಎಂದರೆ ಲಿಂಗ ಸೂಕ್ಷ್ಮತೆ ಬೆಳೆಸಿಕೊಳ್ಳುವುದು, ಆಕ್ರಮಣಕಾರಿ ಮನೋಭಾವ ತ್ಯಜಿಸುವುದು, ಅವರು ಎರಡನೇ ದರ್ಜೆ ನಾಗರಿಕರಲ್ಲ ಎಂದು ಮನದಟ್ಟು ಮಾಡುವುದು. ಹಾಗೆಯೇ ಇಂತಹ ಮನೋಭಾವದಿಂದ ಬೀಗುವುದು, ಮೇಲರಿಮೆ ಬೆಳೆಸಿಕೊಳ್ಳುವುದೂ ಸರಿಯಲ್ಲ. ಇದನ್ನು ಗಂಡು ಮಕ್ಕಳಿಗೆ ಚಿಕ್ಕಂದಿನಿಂದಲೇ ಕಲಿಸಿದರೆ ಸೂಕ್ತ. ಹೆಣ್ಣುಮಕ್ಕಳಿಗೆ ಅಗೌರವ ತೋರಿದರೆ ಗಂಡುಮಕ್ಕಳನ್ನು ಖಂಡಿಸಿದರೆ ತಪ್ಪೇನಿಲ್ಲ. ತಾಯಿ, ಸಹೋದರಿ ಹಾಗೂ ಇತರ ಮಹಿಳೆಯರ ಜೊತೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ಅವಲೋಕಿಸಿ, ಅವರ ನಡವಳಿಕೆ ತಪ್ಪೆನಿಸಿದರೆ ಸರಿಪಡಿಸಿ. ಚಿಕ್ಕಂದಿನಲ್ಲಿ ಅವರ ನಡವಳಿಕೆಯು ಮುಂದೆ ಅವರು ಮಹಿಳೆಯರ ಜೊತೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಸಂಕೇತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.