ADVERTISEMENT

'ಇ–ನ್ಯಾಮ್‌' ಬಳಕೆಗೆ ರೈತರ ಆಸಕ್ತಿ

ಪಿಟಿಐ
Published 28 ಜನವರಿ 2018, 19:30 IST
Last Updated 28 ಜನವರಿ 2018, 19:30 IST
'ಇ–ನ್ಯಾಮ್‌' ಬಳಕೆಗೆ ರೈತರ ಆಸಕ್ತಿ
'ಇ–ನ್ಯಾಮ್‌' ಬಳಕೆಗೆ ರೈತರ ಆಸಕ್ತಿ   

ನವದೆಹಲಿ (ಪಿಟಿಐ): ಅಂತರ್ಜಾಲದಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ–ಎನ್‌ಎಎಂ) ಬಳಕೆಗೆ ರೈತರು ಹೆಚ್ಚು ಗಮನ ನೀಡುತ್ತಿದ್ದಾರೆ.

ತಾವು ಬೆಳೆದ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಹರಾಜು ಹಾಕಲು, ಉತ್ತಮ ಬೆಲೆ ಪಡೆಯಲು ಮತ್ತು ಸಕಾಲಕ್ಕೆ ಪಾವತಿ ಮಾಡಲು
‘ಇ–ಎನ್‌ಎಎಂ’ ಬಳಸುತ್ತಿದ್ದಾರೆ ಎಂದು ಕೃಷಿ ಮಂಡಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಗಟು ಮಂಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕೃತ ಕಮಿಷನ್ ಏಜೆಂಟ್‌ರ ಮೂಲಕ ರೈತರು ಆನ್‌ಲೈನ್‌ ಬಿಡ್ಡಿಂಗ್‌ ನಡೆಸುತ್ತಿದ್ದಾರೆ. ಈ ಸೌಲಭ್ಯದ ಬಗ್ಗೆ ರೈತರಲ್ಲಿ ಹೆಚ್ಚಿನ ಅರಿವು ಮೂಡುತ್ತಿದ್ದಂತೆಯೇ ಬಳಕೆ ಪ್ರಮಾಣ ಹೆಚ್ಚಾಗಲಿದೆ’.

ADVERTISEMENT

‘ವ್ಯವಸ್ಥೆಯ ಬಗ್ಗೆ ವಿಶ್ವಾಸ ಹೆಚ್ಚು ಮೂಡಲಿದ್ದು, ಏಜೆಂಟ್‌ರ ನೆರವಿಲ್ಲದೆ ತಾವೇ ಖುದ್ದಾಗಿ ಬಿಡ್ಡಿಂಗ್‌ ನಡೆಸಲಿದ್ದಾರೆ. ಇದಕ್ಕಾಗಿ ಹಲವು ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

‘ತೆಲಂಗಾಣದ ಸೂರ್ಯಪೇಟೆ ಮಂಡಿಯಲ್ಲಿ ಈಗ ಸಂಪೂರ್ಣವಾಗಿ ಆನ್‌ಲೈನ್‌ ಮೂಲಕವೇ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಉತ್ತಮ ಬೆಲೆ ಸಿಗುತ್ತದೆ ಎನ್ನುವ ಕಾರಣಕ್ಕಷ್ಟೇ ಅಲ್ಲದೆ ತಕ್ಷಣವೇ ಹಣವೂ ಸಿಗುತ್ತದೆ ಎನ್ನುವ ಉದ್ದೇಶದಿಂದ ಹೆಚ್ಚಿನ ರೈತರು ಈ ಸೌಲಭ್ಯ ಬಳಸುತ್ತಿದ್ದಾರೆ’ ಎಂದು ಸೂರ್ಯಪೇಟೆಯ ಸಗಟು ಮಂಡಿಯ ಕಾರ್ಯದರ್ಶಿ ಎಲ್ಲಯ್ಯ ತಿಳಿಸಿದ್ದಾರೆ.

‘ಇ–ನ್ಯಾಮ್‌’ಗೆ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರೈತರಲ್ಲಿ ಅರಿವು ಮೂಡುತ್ತಿದ್ದಂತೆಯೇ ಸ್ವತಂತ್ರವಾಗಿ ಭಾಗವಹಿಸುವ ವಿಶ್ವಾಸ ಮೂಡಲಿದೆ’ ಎಂದು ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕರ್ನಾಟಕ ಮಾದರಿ

ಕರ್ನಾಟಕದ ಎಪಿಎಂಸಿ ಮಾರುಕಟ್ಟೆಗಳಲ್ಲಿ ಜಾರಿಗೆ ತಂದಿರುವ ಇ–ಮಾರುಕಟ್ಟೆ ವ್ಯವಸ್ಥೆಯನ್ನೇ ಮಾದರಿಯಾಗಿಟ್ಟುಕೊಂಡು, ‘ನ್ಯಾಷನಲ್‌ ಅಗ್ರಿಕಲ್ಚರಲ್‌ ಮಾರ್ಕೆಟ್‌’ (ಎನ್‌ಎಎಂ)ಅನ್ನು ರಾಷ್ಟ್ರವ್ಯಾಪಿ ಜಾರಿಗೆ ತರಲಾಗಿದೆ. ಇಂಥದ್ದೊಂದು ವ್ಯವಸ್ಥೆ ಯನ್ನು ಮೊದಲ ಬಾರಿಗೆ ಪರಿಚಯಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.