ADVERTISEMENT

ಚುರುಮುರಿ: ಕುರ್ಚಿ ಕ್ವಾಟ್ಲೆಗಳು

ಲಿಂಗರಾಜು ಡಿ.ಎಸ್
Published 28 ಜೂನ್ 2021, 19:06 IST
Last Updated 28 ಜೂನ್ 2021, 19:06 IST
   

ನಮ್ಮ ಕಾಲೋನೀಲಿ ಕರ್ನಾಟಕ ಸಂಘ ಒಂದದೆ. ಕಾರ್ಯಕಾರಿ ಸಮಿತೀಗೆ ಈ ಸಾರಿ ಕಮಲಕ್ಕನ ಗುಂಪಿನ ರಾಜಾವುಲಿ ಅದ್ಯಕ್ಸರಾಗ್ಯವರೆ. ಹೋದ್ಸಾರಿ ಸೋನಕ್ಕನ ಗುಂಪಿಂದ ಹುಲಿರಾಮಣ್ಣ ಅದ್ಯಕ್ಸರಾಗಿದ್ರು. ಮೂರನೇ ಗುಂಪು ಯಾತಾವ ಪಸಲು ಚೆನ್ನಾಗದೋ ಆತಾವ್ಕೆ ಸಾಂದರ್ಭಿಕವಾಗಿ ಕಡದೋಯ್ತದೆ.

‘ಹಾಲಿ ಅದ್ಯಕ್ಸರು ನಮಗೆ ಬ್ಯಾಡಿ! ನಮ್ಮ ಕೆಲಸ ಒಂದೂ ಆಯ್ತಿಲ್ಲ. ಎಲ್ಲಾ ಅದ್ಯಕ್ಸರ ಮಗಂದೇ ಯವಾರ. ನಮ್ಮುನ್ನ ಕೆಲಸಕ್ಕೆ ಮಾತ್ರ ಕರೀತರೆ, ಊಟಕ್ಕೆ ಮರೆತೋಯ್ತರೆ’ ಅಂತ ಒಂದಷ್ಟು ಜನ ಕ್ಯಾತೆ ತಗದುದ್ರು. ಇವುರಿಗೆಲ್ಲಾ ಒಳ್ಳೇ ಬುದ್ದಿ ಬರಲಿ ಅಂತ ರಾಜಾವುಲಿ ಏಡೈಕ್ಳೂ ದೊಡ್ಡ ದೇವರಿಗೆ ಹಣ್ಣು-ಕಾಯಿ ಮಾಡ್ಸಕ್ಕೋಗಿದ್ದೋ. ‘ದೇವರು ಬಲಗಡೆ ಹೂವು ಕೊಟ್ಟದೆ. ಇನ್ನೆರಡು ವರ್ಸ ಅಪ್ಪಾರೆ ಅದ್ಯಕ್ಸರು’ ಅಂದ್ಕಂದು ಚರುಪು ಹಂಚತಾವೆ.

‘ಹುಲಿರಾಮಣ್ಣನೇ ಭಾವೀ ಅಧ್ಯಕ್ಸರು. ನಿಮಗಿಷ್ಟ ಆದ್ರೆ ಲೈಕ್ ಮಾಡಿ, ಶೇರ್ ಮಾಡಿ’ ಅಂತ ಮರೀಜಣ್ಣ ‘ನಮ್ಮ ಹುಲಿಯಾ!’ ಅನ್ನೋ ವಾಟ್ಸಪ್ ಗ್ರೂಪ್ ಮಾಡಿತ್ತು. ಈ ಪುಗಸಟ್ಟೆ ಪಾರುಪತ್ಯ ಕಂಡ್ರೂ ಕಾಣ್ದಂಗೆ ಹೊಸ ಸೊಸೆ ಥರ ಹುಲಿರಾಮಣ್ಣ ನುಲೀತಾ ‘ಸುಮ್ಮಗಿರ‍್ರಪ್ಪಾ, ಹಿಂಗೆಲ್ಲಾ ಮಾಡಿದ್ರೆ ನನಗೆ ನಾಚ್ಕೆಯಾಯ್ತದೆ!’ ಅಂದ್ರೂ ಅವರ ಐಲ್ವಾನುಗಳು ಸುಮ್ಮಗಾಗಿಲ್ಲ. ‘ಪರಮೀನೇ ಮುಂದ್ಲ ಅದ್ಯಕ್ಸನಾಗ್ಬೇಕು’ ಅಂಬೋದು ಇನ್ನೊಂದು ಗ್ರೂಪಂತೆ. ‘ನಾನೂ ಇವ್ನಿ ಕಯ್ಯಾ!’ ಅಂತ ವೃದ್ಧಾಶ್ರಮ
ದಲ್ಲಿರೋ ಹಳೇ ಪಂಟ್ರುಗಳೆಲ್ಲಾ ಸೊಂಟಕ್ಕೆ ಎಣ್ಣೆ ನೀವಿಕ್ಯಂದು ಹಲ್ಲುಸೆಟ್ಟು ಇಕ್ಕ್ಯಂದು ಕೂತವಂತೆ.

ADVERTISEMENT

‘ಕಾಲೋನೀಲಿ ಅದ್ಯಕ್ಸರಾಗಕೆ ಯೇಗ್ತೆ ಇರೋರು ಭಾಳಾ ಜನವ್ರೆ. ನಾವೆಲ್ಲಾ ಒಟ್ಟಾಗಿ ಎಲೆಕ್ಷನ್ನಿಗೋಯ್ತಿವಿ’ ಅಂದ ಡಿಕೆಸಣ್ಣ ಹೊಸಾ ಕುರ್ಚಿ ಮಾಡಕಾಕ್ಯದಂತೆ.

‘ಸಂಘದ ಎಲೆಕ್ಸನ್ನಿಗೆ ಇನ್ನೂ ಎರಡೋರ್ಸದೆ, ಇವ್ಯಾಕೆ ಆತುರಗೆಟ್ಟ ಆಂಜನೇಯನ ಥರಾ ಆಡ್ತಾವೆ!’ ಅಂತ ಜನೆಲ್ಲಾ ನಗಾಡಿಕ್ಯತಿದ್ರೂ ಕಮಲಕ್ಕ, ಸೋನಕ್ಕನ ಹುಡ್ರಿಗೆ ಕ್ಯಾಮೆಗಿಂತಾ ಕುರ್ಚಿ ಸೊಕ್ಕಲುತನವೇ ಜಾಸ್ತಿಯಾಗ್ಯದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.