ADVERTISEMENT

ರಕ್ತಬೀಜಾಸುರ ವೈರಸ್ಸೂ ಮತ್ತು ಗಾಳಿಸುದ್ದಿಯೂ

ಡಾ.ಕಿರಣ್ ಪೇಟ್ಕರ್
Published 13 ಏಪ್ರಿಲ್ 2020, 5:55 IST
Last Updated 13 ಏಪ್ರಿಲ್ 2020, 5:55 IST
   

ರಕ್ತಬೀಜಾಸುರನೆಂಬ ರಾಕ್ಷಸನಿದ್ದನಂತೆ. ಆತನಿಗಿದ್ದ ವರವೇನೆಂದರೆ, ಅವನ ಒಂದು ಹನಿ ರಕ್ತ ನೆಲಕ್ಕೆ ತಾಗಿದರೂ, ಅದರಿಂದ ಸಾವಿರ ರಕ್ತಬೀಜಾಸುರರು ಮತ್ತೆ ಹುಟ್ಟಿ ಬರುತ್ತಿದ್ದರಂತೆ. ಆ ಪ್ರತಿರೂಪದಿಂದ ಸುರಿವ ಪ್ರತಿ ರಕ್ತದ ಹನಿಯಿಂದ ಮತ್ತೆ ಸಾವಿರ ಪ್ರತಿರೂಪುಗಳು.

ವಿಜ್ಙಾನವೇ ಬೆಳೆದಿರಲಿಲ್ಲವೆಂದು ನಾವಂದುಕೊಳ್ಳುವ ಕಾಲದಲ್ಲಿ ಹುಟ್ಟಿದ ಇಂಥ ಪುರಾಣ ಕಥೆಗಳು ಅಚ್ಚರಿ ಮೂಡಿಸದಿರವು. ಏಕೆಂದರೆ, ಇಂದು ಜಗತ್ತನ್ನೆಲ್ಲ ವಿನಾಶದಂಚಿಗೆ ನೂಕಿ ಭಯಬೀಳಿಸುತ್ತಿರುವ ವೈರಸ್ ಕೂಡ ಇದೇ ರೀತಿಯ ಶಕ್ತಿಯಿಂದಾಗಿಯೇ ಹಾಹಾಕಾರವೆಬ್ಬಿಸಿರುವುದು.

ವೈರಸ್ಸೆನ್ನುವುದು ಒಂದು ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಜೈವಿಕ ಕಣ.ಎಷ್ಟು ಸಣ್ಣದೆಂದರೆ, ಅದನ್ನು ‘ಜೈವಿಕ’ ಅನ್ನಲೂ ಸಂಕೋಚ ಬರುವಷ್ಟು.ಅದಕ್ಕೆ ಸ್ವಂತಕ್ಕೊಂದು ಜೀವಕೋಶ ಇಲ್ಲ. ಬ್ಯಾಕ್ಟೀರಿಯಾ, ಫಂಗಸ್ಸಿನಂತೆ ತಾನಾಗೇ ವಂಶವೃದ್ಧಿ ಕೂಡ ಮಾಡದು. ಯಾಕೆಂದರೆ, ಅದೊಂದು ವಂಶವಾಹಿನಿಯ (ಡಿಎನ್‌ಎ) ತುಣುಕು ಮಾತ್ರ. ಅದಕ್ಕೆಂದೇವಿಜ್ಞಾನ ಸದ್ಯಕ್ಕೆ ಅದನ್ನು ಸಜೀವಿ ಮತ್ತು ನಿರ್ಜೀವಿಗಳ ನಡುವಿನ ತ್ರಿಶಂಕು ಗುಂಪಿನಲ್ಲಿರಿಸಿದೆ. ಅಂತಹ ಯಕಃಷ್ಚಿತ್ ರೇಣು, ವೈರಸ್! ಆದರೆ, ಒಮ್ಮೆ ನಮ್ಮ ದೇಹದೊಳಕ್ಕೆ ಹೊಕ್ಕಿತೋ, ನಮ್ಮದೇ ಜೀವಕೋಶದೊಳಕ್ಕೆ ಸೇರಿಕೊಂಡು ತನ್ನ ಲಕ್ಷಾಂತರ ಪ್ರತಿಗಳನ್ನು ತಾನೇ ಪ್ರಿಂಟು ಮಾಡಿಸತೊಡಗುತ್ತದೆ. ಆ ಪ್ರತಿಗಳು ನಮ್ಮ ಕೋಶಕೋಶದೊಳಗೆ ಪಸರಿಸಿಕೊಂಡು ಮತ್ತದೇ ಝರಾಕ್ಸು ಕೆಲಸ ಮುಂದುವರಿಸುತ್ತವೆ. ನಿಜವಾದ ಅರ್ಥದಲ್ಲಿ ರಕ್ತಬೀಜಾಸುರನೇ ಅಲ್ಲವೇ?

ADVERTISEMENT

ಕಣ್ಣಿಗೆ ಕಾಣದ ಸೂಕ್ಷ್ಮಲೋಕದಲ್ಲಿ ನಡೆಯುವ ಈ ವಿದ್ಯಮಾನವಲ್ಲದೇ, ಭೌತಿಕ ಪ್ರಮಾಣದಲ್ಲೂ ಕೂಡ ಇದೇ ಪ್ರಕ್ರಿಯೆ ಮುಂದುವರೆಯುತ್ತದೆ. ವೈರಸ್ಸಿಗೆ ಆಶ್ರಯ ನೀಡಿದ ಮನುಷ್ಯ, ಗೊತ್ತಿದ್ದೋ, ಗೊತ್ತಿಲ್ಲದೆಯೋ ಇನ್ನಿತರರಿಗೆ ವೈರಸ್ಸನ್ನು ಪಸರಿಸುತ್ತ ಹೋಗುತ್ತಾನೆ. ಆತನ ರೋಗನಿರೋಧಕ ಶಕ್ತಿಯೋ ಅಥವಾ ವೈರಸ್ಸೋ ಎರಡರಲ್ಲಿ ಒಂದು ಗೆಲ್ಲಲು ವಾರಗಳೇ ತಗಲುತ್ತವೆ. ಅಲ್ಲಿಯವರೆಗೆ ಒಬ್ಬ ವ್ಯಕ್ತಿ ನೇರವಾಗಿ ಅಥವಾ ಪರೋಕ್ಷವಾಗಿ ತನ್ನ ಸಂಪರ್ಕಕ್ಕೆ ಬರುವ ನೂರಾರು ಜನರಿಗೆ ವೈರಸ್ಸನ್ನು ಹರಡಬಲ್ಲವನಾಗಿರುತ್ತಾನೆ. ಆ ನೂರಾರು ಜನರು ತಲಾ ನೂರಾರು ಜನರಿಗೆ ವೈರಸ್ಸು ಹರಡುವ ಸಾಮರ್ಥ್ಯ ಹೊಂದಿರುತ್ತಾರೆ.
ಕೊರೊನಾ ಸೋಂಕಿನ ಇಷ್ಟು ದಿನಗಳಲ್ಲಿ ವೈರಸ್ ಹರಡುವ ರೀತಿಯ ಬಗ್ಗೆ, ಈ ಮಾಹಿತಿ ಇಷ್ಟರಲ್ಲಿ ನಿಮಗೆ ಸಿಕ್ಕಿರಲಿಕ್ಕೂ ಸಾಕು. ಆದರೆ, ರಕ್ತಬೀಜಾಸುರ ಗುಣದ ಇನ್ನೊಂದು ಅಪಾಯಕಾರಿ ಪ್ರಕ್ರಿಯೆಯು ಇದೇ ಸಮಯದಲ್ಲಿ ನಮ್ಮ ಸಮಾಜವನ್ನು ಕಾಡುತ್ತಿದೆ. ಅದೇ ಹದ್ದು ಮೀರಿ ಹರಿದಾಡುವ ಗಾಳಿಸುದ್ದಿಗಳು ಮತ್ತು ಸುಳ್ಳು ಸುದ್ದಿಗಳು. ತಂತ್ರಜ್ಞಾನವು ಸಾಮಾಜಿಕ ಸಂಪರ್ಕಮಾಧ್ಯಮದಿಂದ ಜಗತ್ತನ್ನು ಕುಗ್ಗಿಸಿ ಗ್ರಾಮವನ್ನಾಗಿಸಿ, ಜಾಗತಿಕ ಸಂಪರ್ಕ ಸಂವಹನವನ್ನು ಚಾವಡಿಕಟ್ಟೆಯಷ್ಟು ಚಿಕ್ಕದಾಗಿಸಿ ಬಿಟ್ಟಿದೆ. ಹೀಗಾಗಿ, ಮಾಹಿತಿಯೆಂಬುವುದು ಕೇವಲ ಬೆರಳತುದಿಯ ಮುಖಾಂತರ ಸಾವಿರಾರು ಜನರಿಗೆ ತಲುಪಿ, ಅಲ್ಲಿಂದ ಮತ್ತೆ ತಲಾ ಸಾವಿರ ಸಾವಿರ ಪ್ರತಿಗಳಾಗಿ ಕ್ಷಣಮಾತ್ರದಲ್ಲಿ ಪಸರಿಸಬಹುದಾಗಿದೆ. ಅದಕೆಂದೇ ಯಾರೋ ತಿಳಿದವರು ಅದನ್ನು ‘ವೈರಲ್’ ಆಗುವ ಪ್ರಕ್ರಿಯೆಯೆಂದೇ ಸರಿಯಾಗಿ ಹೆಸರಿಟ್ಟಿದ್ದಾರೆ.

ದುರಾದೃಷ್ಟವಶಾತ್, ಇದರಿಂದಾಗಿ ಲಾಭದ ಜೊತೆ ಸಾಕಷ್ಟು ಅಪಾಯವೂ ಎದುರಾಗಿದೆ. ಈಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಗಳಲ್ಲಿ ಸತ್ಯ ಮಾಹಿತಿಗಳಿಗಿಂತ ಸುಳ್ಳು ಸುದ್ದಿಗಳೇ ಜಾಸ್ತಿ ರಾರಾಜಿಸುತ್ತಿವೆ. ಇರುವುದನ್ನು ತಿರುಚಿ ಅಥವಾ ಪೂರ್ತಿ ಸುಳ್ಳನ್ನೇ ನಿಜವೆಂದು ಬಿಂಬಿಸಿ ಹರಿಯಬಿಡುವ ಕಿಡಿಗೇಡಿಗಳೂ ವಿಕೃತರೂ ಒಂದೆಡೆಯಾದರೆ, ಸಂದರ್ಭವನ್ನು ದುರುಪಯೋಗ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವವರು ಇನ್ನೊಂದೆಡೆ. ನಿಮಗೆ ಗೊತ್ತೇ? ವಾಟ್ಸಾಪು, ಇನ್ಸಾಟಾಗ್ರಾಮು ಥರದಸೋಷಿಯಲ್ ಮೀಡಿಯಾಗಳ ಮುಖಾಂತರ ಜನಾಭಿಪ್ರಾಯವನ್ನು ತಿರುಚುವ ಕೆಲಸ ಇದೀಗ ಒಂದು ಉದ್ಯಮದ ರೂಪವನ್ನೇ ಪಡೆದುಕೊಂಡಿದೆ. ಅದರ ಬಲಿಪಶುಗಳು ಅದನ್ನು ಕಣ್ಣುಮುಚ್ಚಿ ನಂಬುವ ನಮ್ಮ-ನಿಮ್ಮಂತವರು. ಜಾಗತಿಕ ಮಹಾಮಾರಿ ಬಂದೆರಗಿರುವ ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ಈ ಪಿಡುಗು ಮರೆಯಾಗುವುದರ ಬದಲು ಇನ್ನೂ ಜಾಸ್ತಿಯಾಗಿದೆ. ಹಾಗೆಂದೇ, ರೋಗದ ಬಗ್ಗೆ, ಸರ್ಕಾರದ ಕ್ರಮಗಳ ಬಗ್ಗೆ ಹಾಗೂ ಧರ್ಮ-ಆಚರಣೆಗಳ ಬಗ್ಗೆ ಸುಳ್ಳುಗಳೂ, ತಪ್ಪು ಗ್ರಹಿಕೆಗಳೂ ಪುಂಖಾನುಪುಂಖವಾಗಿ ನಮ್ಮ ಮೊಬೈಲುಗಳಲ್ಲಿ ಹಾರಿಬರುತ್ತಲೇ ಇವೆ; ನಮ್ಮಿಂದ ಮುಂದೆ ನೂರಾರು ಜನರಿಗೆ ಬಿತ್ತರಗೊಳ್ಳುತ್ತಲೇ ಇವೆ. ಥೇಟು ರಕ್ತಬೀಜಾಸುರನಂತೆ.

ಆತಂಕದ ಸನ್ನಿವೇಶದಲ್ಲಿ, ಮಾನವನ ಗ್ರಹಿಕೆ ತತ್ಕಾಲ ಬದಲಾಗಿರುತ್ತದೆ. ಆಗ ಹಗ್ಗವೂ ಹಾವಾಗಿ ತೋರುತ್ತದೆ. ಇದೀಗ ಇಡೀ ವಿಶ್ವವೇ ಕೊರೊನಾ ಸಂಕ್ರಮಣದಿಂದಾಗಿ ಆತಂಕದಲ್ಲಿರುವಾಗ ನಮ್ಮ ಸಾಮೂಹಿಕ ಗ್ರಹಿಕೆ ಡೋಲಾಯಮಾನವಾಗುವುದು ಅಚ್ಚರಿಯೇನಲ್ಲ.
ಅದರಿಂದಾಗಿ ನಾವು, ನಮ್ಮೆಡೆಗೆ ಬರುವ ಪ್ರತಿ ಸುದ್ದಿಯನ್ನೂ ನಿಜವೆಂದೇ ನಂಬಿಬಿಡುತ್ತೇವೆ. ಅದು ಹೆಚ್ಚು ಕಳವಳಕಾರಿಯಾದಷ್ಟೂ ಇನ್ನೂ ಬೇಗ ನಾವು ಅದರಿಂದ ಪ್ರಭಾವಿತರಾಗುತ್ತೇವೆ. ಯೋಚನೆಯೇ ಮಾಡದೇ, ಸುದ್ದಿಯನ್ನು ಮುಂದೆ ದಾಟಿಸಿಬಿಡುತ್ತೇವೆ. ಇದೊಂಥರ ಸಮೂಹ ಸನ್ನಿಯಂತಹ ಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ. ಇಂತಹ ‘ವೈರಲ್’ ಸುಳ್ಳುಗಳೂ, ಅರ್ಧಸತ್ಯಗಳೂ ಮಾಡುವ ಹಾವಳಿ ಅಷ್ಟಿಷ್ಟಲ್ಲ. ಇಂತಹ ಗಾಳಿಸುದ್ದಿಗಳಿಂದಾಗಿಯೇ ಕೆಲವರು ಸೋಂಕನ್ನು ಮರೆಮಾಚಿದರೆ, ಇನ್ನು ಕೆಲ ಗುಂಪುಗಳು ಸೋಂಕು ನಿಯಂತ್ರಣ ಕಾರ್ಯದಲ್ಲಿ ಅಸಹಕಾರ ತೋರುತ್ತಿವೆ. ಜಾತಿ-ಧರ್ಮದ ಬಗ್ಗೆ ಕೆಲ ನಿರ್ದಿಷ್ಟಗುಂಪುಗಳಲ್ಲಿ ಹರಿದಾಡುತ್ತಿರುವ ತಪ್ಪು ಸುದ್ದಿಗಳು ಸಮಾಜದ ಸಾಮರಸ್ಯವನ್ನು ಕೆಡಿಸುವುದರಲ್ಲಿ ಸಾಕಷ್ಟು ಯಶಸ್ವಿಯಾಗಿವೆ.

ಒಂದೆಡೆ ಗುಂಪುಗಾರಿಕೆ ಶುರುವಾದರೆ, ಇನ್ನೊಂದೆಡೆ ಪರಸ್ಪರ ಅಪನಂಬಿಕೆ ಬೆಳೆಯುತ್ತಿದೆ. ಭಯದ ವಾತಾವರಣ ಉಂಟಾಗಿ ಸಮಾಜದಲ್ಲಿನ ಬಿರುಕುಗಳು ಆಳವಾಗುತ್ತಿವೆ.

ವಿಶ್ವ ಹಿಂದೆಂದೂ ಕಾಣದ ವಿಶಿಷ್ಟ ಸವಾಲನ್ನೆದುರಿಸುತ್ತಿರುವ ಸಂಕಟದ ಸಮಯದಲ್ಲಿ, ಈ ತರಹ ದಾರಿತಪ್ಪಿಸುವ ವಿದ್ಯಮಾನವೂ ಕೂಡ ಒಂದು ಸಾಮಾಜಿಕ ವ್ಯಾಧಿಯೇ ಸರಿ. ಹಾಗಾಗಿ, ಇದನ್ನು ಸಮರೋಪಾದಿಯಲ್ಲಿ ತಡೆಗಟ್ಟುವ ಅವಶ್ಯಕತೆಯಿದೆ. ಆಡಳಿತ ಯಂತ್ರವು ಅವಿವೇಕದ ಸಂದೇಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸುಶಿಕ್ಷಿತರಾದ ನಾವು-ನೀವು, ನಮಗೆ ಬಂದ ಪ್ರತಿಯೊಂದು ಸಂದೇಶವನ್ನೂ ಮರಾಮರ್ಶಿಸಿ ನೋಡಬೇಕು. ವಿಶೇಷವಾಗಿ, ಅದನ್ನು ಇನ್ನೊಬ್ಬರಿಗೆ ದಾಟಿಸುವ ಮುನ್ನ ನಾವು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಖಚಿತಪಡಿಸಿಕೊಂಡಿರಬೇಕು. ಪ್ರತಿ ಸಂದೇಶದ ಹಿಂದಿನ ಉದ್ಧೇಶದ ಬಗ್ಗೆ ಯೋಚಿಸಬೇಕು. ಅದರ ಪರಿಣಾಮದ ಬಗ್ಗೆ ಕೂಡ.

ಸುದ್ದಿಯ ಮೂಲ ಯಾವುದು ಎಂದು ಪ್ರಶ್ನಿಸಬೇಕು, ಮತ್ತು ನಿಗದಿತ ಮೂಲಗಳಿಂದ ಬಂದ ಸುದ್ದಿಗಳಿಗೆ ಮಾತ್ರ ಪ್ರಾಮುಖ್ಯತೆ ಕೊಡಬೇಕು. ಸಂಶಯವಿದ್ದಲ್ಲಿ, ಆಯಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರ ಸಲಹೆ ಕೇಳಬೇಕು. ಒಟ್ಟಿನಲ್ಲಿ, ಗಾಳಿಗಿಂತ ವೇಗವಾಗಿ ಹರಡುವ ಗಾಳಿಸುದ್ದಿಯ ಬಿತ್ತರಕ್ಕೆ ನಾವು ಸಾಧನವಾಗುವುದನ್ನು ತಡೆಯಬೇಕು.

ಇಷ್ಟಕ್ಕೂಭವಾನಿ ಮತ್ತು ಕಾಳಿಕಾದೇವಿ ಸೇರಿ ರಕ್ತಬೀಜಾಸುರ ಸೈನ್ಯವನ್ನು ಸಂಹರಿಸಲು ಹೂಡಿದ ರಣನೀತಿ ಏನು ಗೊತ್ತಾ? ಯುದ್ಧದಲ್ಲಿ ಹರಿದ ಪ್ರತಿ ರಾಕ್ಷಸನ ರಕ್ತವನ್ನು ಒಂದು ಹನಿಯೂ ಹರಡದಂತೆ ಕಲೆಹಾಕಿ ಕುಡಿದುಹಾಕಿದ್ದು! ಇದೀಗ ಜಗತ್ತನ್ನು ಕೊರೊನಾ ವೈರಸ್ ಮತ್ತು ಗಾಳಿಸುದ್ದಿಯೆಂಬ ರಾಕ್ಷಸರಿಂದ ರಕ್ಷಿಸಲು ನಾವೂ ಕೂಡ ಮಾಡಬೇಕಾಗಿರುವುದು ಅದನ್ನೇ. ಪಿಡುಗನ್ನು ತೊಡೆಯುವುದು; ಹರಡುವುದನ್ನು ತಡೆಯುವುದು.

(ಲೇಖಕರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕನ್ಸಲ್‌ಟೆಂಟ್ ಪ್ಲಾಸ್ಟಿಕ್ ಸರ್ಜನ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.