ADVERTISEMENT

ಭಿತ್ತಿಪತ್ರ ಅಂಟಿಸಿದವರ ಬಂಧನ: ಪ್ರಶ್ನೆಗಳನ್ನು ಸಹಿಸಲಾಗದ ನಡೆ

​ಪ್ರಜಾವಾಣಿ ವಾರ್ತೆ
Published 19 ಮೇ 2021, 19:30 IST
Last Updated 19 ಮೇ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋವಿಡ್‌ ಲಸಿಕೆಯ ರಫ್ತಿಗೆ ಅವಕಾಶ ಮಾಡಿಕೊಟ್ಟಿರುವುದನ್ನು ಪ್ರಶ್ನಿಸಿ ಭಿತ್ತಿಪತ್ರ ಅಂಟಿಸಿದವರ ವಿರುದ್ಧ ದೆಹಲಿ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯು ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನಿಸುವವರ ದನಿಯನ್ನು ಅಧಿಕಾರದ ಬಲ ಬಳಸಿ ಹತ್ತಿಕ್ಕುತ್ತಿರುವುದಕ್ಕೆ ಉದಾಹರಣೆಯಂತಿದೆ. ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ದೆಹಲಿ ಪೊಲೀಸ್‌ ಇಲಾಖೆಯು ಕೇಂದ್ರ ಸರ್ಕಾರದ ಟೀಕಾಕಾರರನ್ನು ಮಣಿಸಲು ಹಿಂದೆಯೂ ಇಂತಹ ಪ್ರಯತ್ನ ನಡೆಸಿದ ನಿದರ್ಶನಗಳು ಯಥೇಚ್ಛವಾಗಿವೆ. ಲಸಿಕೆಯ ರಫ್ತಿಗೆ ಅವಕಾಶ ಕಲ್ಪಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ದೆಹಲಿಯ ವಿವಿಧೆಡೆ ಭಿತ್ತಿ‍ಪತ್ರಗಳನ್ನು ಅಂಟಿಸಿದವರ ವಿರುದ್ಧ ಕ್ರಿಮಿನಲ್‌ ಅಪರಾಧ ಪ್ರಕರಣ ದಾಖಲಿಸಿರುವ ದೆಹಲಿ ನಗರ ಪೊಲೀಸರು, 25 ಜನರನ್ನು ಬಂಧಿಸಿದ್ದಾರೆ. ದೇಶದಾದ್ಯಂತ ಈಗ ಕೋವಿಡ್‌ ಲಸಿಕೆಗಳ ಕೊರತೆ ಉಂಟಾಗಿದೆ. ಈ ಸಮಯದಲ್ಲೇ ಕೇಂದ್ರ ಸರ್ಕಾರವನ್ನು, ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಪ್ರಶ್ನಿಸುವ ಭಿತ್ತಿಪತ್ರಗಳು ರಾಜ್ಯ ರಾಜಧಾನಿಯ ವಿವಿಧೆಡೆ ಕಂಡುಬಂದಿದ್ದವು. ‘ಮೋದಿಜಿ, ನಮ್ಮ ಮಕ್ಕಳಿಗಾಗಿ ಇದ್ದ ಲಸಿಕೆಗಳನ್ನು ವಿದೇಶಗಳಿಗೆ ಏಕೆ ಕಳಿಸಿದ್ದೀರಿ’ ಎಂಬ ಪ್ರಶ್ನೆಯನ್ನು ಭಿತ್ತಿಪತ್ರಗಳಲ್ಲಿ ಕೇಳಲಾಗಿತ್ತು. ದೆಹಲಿಯ ಹಲವು ಪ್ರದೇಶಗಳಲ್ಲಿ ಗೋಡೆಗಳ ಮೇಲೆ ಇಂತಹ ಭಿತ್ತಿಪತ್ರಗಳು ಕಾಣಿಸಿಕೊಳ್ಳುತ್ತಿದ್ದಂತೆ ಕಾರ್ಯಪ್ರವೃತ್ತರಾದ ದೆಹಲಿ ನಗರ ಪೊಲೀಸರು, 13 ಠಾಣೆಗಳಲ್ಲಿ ಎಫ್‌ಐಆರ್‌ಗಳನ್ನು ದಾಖಲು ಮಾಡಿದ್ದಾರೆ. ಭಿತ್ತಿಪತ್ರಗಳನ್ನು ಅಂಟಿಸಿದವರ ವಿರುದ್ಧ ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸುವುದನ್ನು ನಿಯಂತ್ರಿಸುವ ಕಾಯ್ದೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಸರ್ಕಾರಿ ಅಧಿಕಾರಿ ಹೊರಡಿಸಿದ ಆಜ್ಞೆಯನ್ನು ಉಲ್ಲಂಘಿಸಿರುವ ಆರೋಪಕ್ಕೆ ಸಂಬಂಧಿಸಿದ ಸೆಕ್ಷನ್‌ ಕೂಡ ಬಳಸಲಾಗಿದೆ. ಭಿತ್ತಿಪತ್ರ ಅಂಟಿಸಿದ ಆರೋಪದ ಮೇಲೆ ಆಟೊ ಚಾಲಕರು, ದಿನಗೂಲಿ ನೌಕರರು, ನಿರುದ್ಯೋಗಿ ಯುವಕರನ್ನು ಬಂಧಿಸಲಾಗಿದೆ. ಕೆಲವರನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಕೆಲವರನ್ನು ವಶದಲ್ಲಿ ಇರಿಸಿಕೊಂಡಿರುವ ಪೊಲೀಸರು, ‘ಭಿತ್ತಿಪತ್ರಗಳನ್ನು ಅಂಟಿಸಲು ಯಾವುದಾದರೂ ಪ್ರಚೋದನೆ ಇತ್ತೇ’ ಎಂಬುದರ ಕುರಿತು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಭಿತ್ತಿಪತ್ರಗಳನ್ನು ಮುದ್ರಿಸಿರುವ ಮುದ್ರಣಾಲಯಗಳ ಪತ್ತೆಗೂ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ದೆಹಲಿಯಲ್ಲಿ ಅಂಟಿಸಲಾದ ಭಿತ್ತಿಪತ್ರಗಳಲ್ಲಿ ಹಿಂಸೆ ಅಥವಾ ಗಲಭೆಗೆ ಪ್ರಚೋದನೆ ನೀಡುವಂತಹ ಯಾವ ಅಂಶಗಳೂ ಇರಲಿಲ್ಲ. ವಿದೇಶಗಳಿಗೆ ಲಸಿಕೆ ರಫ್ತು ಮಾಡಿದ ವಿಚಾರದಲ್ಲಿ ಕೇಂದ್ರ ಸರ್ಕಾರ ತಪ್ಪು ಹೆಜ್ಜೆ ಇರಿಸಿದೆ ಎಂಬುದನ್ನಷ್ಟೆ ಭಿತ್ತಿಪತ್ರಗಳಲ್ಲಿ ಹೇಳಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಭಿತ್ತಿಪತ್ರಗಳ ಹಾವಳಿ ಅತಿಯಾಗಿದ್ದ ಸಂದರ್ಭದಲ್ಲಿ ಯಾವತ್ತೂ ಇಂತಹ ಕ್ರಮ ಕೈಗೊಳ್ಳದ ಪೊಲೀಸರು, ಈಗ ಪ್ರಧಾನಿಯನ್ನು ಪ್ರಶ್ನಿಸುವ ಭಿತ್ತಿಪತ್ರಗಳು ಕಾಣಿಸಿಕೊಂಡ ತಕ್ಷಣದಲ್ಲೇ ಭಾರಿ ಕಾರ್ಯಾಚರಣೆ ನಡೆಸಿರುವುದರ ಹಿಂದೆ ಬೇರೆ ಕಾರಣಗಳಿವೆ ಎಂಬುದು ಸ್ಪಷ್ಟ. ಲಾಕ್‌ಡೌನ್‌ ಜಾರಿ ಸೇರಿದಂತೆ ಗಂಭೀರವಾದ ಕೆಲಸಗಳು ಇರುವ ವೇಳೆಯಲ್ಲಿ ಪೊಲೀಸರು ಭಿತ್ತಿಪತ್ರದ ವಿಷಯಕ್ಕೆ ಪ್ರಾಮುಖ್ಯ ನೀಡಿರುವುದನ್ನು ನೋಡಿದರೆ ಕೇಂದ್ರ ಗೃಹ ಸಚಿವಾಲಯದ ಆಣತಿಯಂತೆಯೇ ಎಲ್ಲವೂ ನಡೆಯುತ್ತಿವೆ ಎಂಬುದು ಸ್ಪಷ್ಟ. ಕೇಂದ್ರ ಸರ್ಕಾರದ ನೀತಿ, ನಿರ್ಧಾರ ಮತ್ತು ತೀರ್ಮಾನಗಳನ್ನು ಪ್ರಶ್ನಿಸುವ ಹಕ್ಕು ದೇಶದ ಎಲ್ಲ ಪ್ರಜೆಗಳಿಗೂ ಇದೆ. ಪ್ರಶ್ನಿಸುವವರನ್ನು ಪೊಲೀಸ್‌ ಪಡೆ ಬಳಸಿಕೊಂಡು ಬೆದರಿಸುವುದು ಸರ್ವಾಧಿಕಾರಿ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯಾಗುತ್ತದೆ. ಕೇಂದ್ರ ಸರ್ಕಾರದ ಇಂತಹ ನಡೆಯು ಆಡಳಿತದ ಚುಕ್ಕಾಣಿ ಹಿಡಿದಿರುವವರು ಜನರ ಪ್ರಶ್ನೆಗಳಿಗೆ ಹೆದರುತ್ತಾರೆ ಮತ್ತು ಅದೇ ಕಾರಣಕ್ಕಾಗಿ ಜನರು ಪ್ರಶ್ನೆ ಕೇಳದಂತೆ ತಡೆಯಲು ಎಲ್ಲ ಮಾರ್ಗಗಳನ್ನೂ ಬಳಸುತ್ತಾರೆ ಎಂಬ ಮಾತಿಗೆ ಪೂರಕವಾದಂತೆ ಇದೆ. ಗಂಭೀರವಾದ ಪ್ರಶ್ನೆಗಳನ್ನು ಎತ್ತುವವರ ಧ್ವನಿಯನ್ನು ಪೊಲೀಸ್‌ ಮತ್ತು ಇತರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಹತ್ತಿಕ್ಕಲು ಕೇಂದ್ರ ಸರ್ಕಾರ ಯತ್ನಿಸಿರುವುದು ಇದು ಮೊದಲೇನೂ ಅಲ್ಲ. ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆ ಸೇರಿದಂತೆ ಹಲವು ಬಾರಿ ಅಂತಹ ಪ್ರಯತ್ನ ನಡೆದಿದೆ. ಕೋವಿಡ್‌ ನಿಯಂತ್ರಣದಲ್ಲಿ ತನ್ನ ವೈಫಲ್ಯಗಳನ್ನು ಒಪ್ಪಿಕೊಳ್ಳದ ಕೇಂದ್ರ ಸರ್ಕಾರ, ಅದೇ ಕಾರಣಕ್ಕಾಗಿ ಟೀಕಾಕಾರರ ಮಾತುಗಳನ್ನು ಕೇಳಿಸಿಕೊಳ್ಳಲು ಸಿದ್ಧವಿಲ್ಲ ಎಂಬ ಆರೋಪಗಳಿಗೆ ಈ ಪ್ರಕರಣ ಪುಷ್ಟಿ ನೀಡುತ್ತದೆ. ಲಸಿಕೆ ಕೊರತೆಗೆ ಸಂಬಂಧಿಸಿದಂತೆ ಪ್ರಧಾನಿಯವರನ್ನು ಪ್ರಶ್ನಿಸುವ ಭಿತ್ತಿಪತ್ರಗಳನ್ನು ಅಂಟಿಸಿದ್ದಾರೆ ಎಂಬ ಆರೋಪಕ್ಕಾಗಿ ದೇಶದ ಪ್ರಜೆಗಳನ್ನು ಬಂಧಿಸುವುದು ಯಾವುದೇ ದೃಷ್ಟಿಕೋನದಲ್ಲೂ ಪ್ರಜಾಸತ್ತಾತ್ಮಕ ನಡೆ ಆಗಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT