ADVERTISEMENT

ಸಂಪಾದಕೀಯ | ಖಾಸಗಿ ಶಾಲಾ ಶಿಕ್ಷಕರಿಗೆ ನೆರವು; ಸರ್ಕಾರದ ಜಿಗುಟುತನ ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 19:30 IST
Last Updated 7 ಜೂನ್ 2021, 19:30 IST
ಸಂಪಾದಕೀಯ
ಸಂಪಾದಕೀಯ   

ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ನೆರವಾಗುವ ದಿಸೆಯಲ್ಲಿ ರಾಜ್ಯ ಸರ್ಕಾರ ಜಿಗುಟುತನ ತೋರುತ್ತಿದೆ. ಜೀವನೋಪಾಯಕ್ಕೆ ತೊಂದರೆ ಎದುರಿಸುತ್ತಿರುವ ಶಿಕ್ಷಕರಿಗೆ ನೆರವು ನೀಡಬೇಕಾಗಿದ್ದ ಸರ್ಕಾರ, ತನ್ನ ಹೊಣೆಗಾರಿಕೆಯನ್ನು ಸರ್ಕಾರಿ ಶಾಲಾ ಶಿಕ್ಷಕರಿಗೆ ವರ್ಗಾಯಿಸಲು ನಡೆಸಿದ ಪ್ರಯತ್ನ ಅಸಮಂಜಸ ಹಾಗೂ ಅವಾಸ್ತವಿಕ. ಐದು ದಿನಗಳ ವೇತನ ನೀಡುವ ಮೂಲಕ ಖಾಸಗಿ ಶಾಲೆಗಳ ಶಿಕ್ಷಕರ ಸಹಾಯಕ್ಕೆ ಬರುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಮಾಡಿಕೊಂಡಿದ್ದ ಮನವಿಯನ್ನು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸ್ಪಷ್ಟವಾಗಿ ನಿರಾಕರಿಸಿದೆ. ಕನಿಷ್ಠ ಒಂದು ದಿನದ ವೇತನವನ್ನಾದರೂ ನೀಡಿ ಎನ್ನುವ ಸಚಿವರ ಮನವಿಯನ್ನೂ ಸಂಘ ಒಪ್ಪಿಕೊಂಡಿಲ್ಲ. ಶಿಕ್ಷಕರು ಮಾತ್ರವಲ್ಲ, ಯಾವುದೇ ಸರ್ಕಾರಿ ನೌಕರ ಮತ್ತೊಬ್ಬರ ನೆರವಿಗೆ ತನ್ನ ದುಡಿಮೆಯ ಪಾಲನ್ನು ನೀಡಬೇಕೆಂದು ಸರ್ಕಾರ ನಿರೀಕ್ಷಿಸುವುದು ಅತಾರ್ಕಿಕ. ಸಮಾಜದ ಇತರ ವರ್ಗಗಳಿಗೆ ನೆರವು ನೀಡಲು ಸರ್ಕಾರಕ್ಕೆ ಸಾಧ್ಯವಿರುವಾಗ, ಖಾಸಗಿ ಶಾಲಾ ಶಿಕ್ಷಕರಿಗೆ ನೆರವಾಗುವ ಹೊಣೆಯನ್ನು ಸರ್ಕಾರಿ ಶಾಲಾ ಶಿಕ್ಷಕರ ಹೆಗಲಿಗೇರಿಸುವ ಪ್ರಯತ್ನ ಸಮರ್ಥನೀಯವಲ್ಲ. ಜಾತಿ ಆಧಾರಿತ ನಿಗಮಗಳಿಗೆ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ಅನುದಾನ ನೀಡಲು ಬಾಧಿಸದ ಹಣಕಾಸಿನ ಕೊರತೆ, ಶಿಕ್ಷಕರಿಗೆ ಸಹಾಯ ಮಾಡುವ ಸಂದರ್ಭದಲ್ಲಿ ಉಂಟಾಗುವುದು ಆಶ್ಚರ್ಯಕರ. ನೆರವು ನೀಡುವ ವಿಷಯದಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಎಳೆದು ತರುವ ಮೂಲಕ, ಖಾಸಗಿ ಶಾಲಾ ಶಿಕ್ಷಕರ ಘನತೆಗೆ ಕುಂದು ತರುವ ಕೆಲಸವನ್ನೂ ಸರ್ಕಾರ ಮಾಡಿದೆ. ನೆರವು ನೀಡುವ ವಿಷಯದಲ್ಲಿ ಸರ್ಕಾರಿ ಶಾಲಾ ಶಿಕ್ಷಕರನ್ನು ಮಧ್ಯೆ ತರಬೇಡಿ ಎಂದು ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ ಮಾಡಿಕೊಂಡಿರುವ ಮನವಿಯು ವಿವೇಚನಾಯುತವಾದುದು.

ಪೋಷಕರಿಗೆ ಹೊರೆಯಾಗುತ್ತದೆನ್ನುವ ಕಾರಣದಿಂದಾಗಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಸರ್ಕಾರವು ಶಾಲಾ ಶುಲ್ಕದಲ್ಲಿ ವಿನಾಯಿತಿ ಕಲ್ಪಿಸಿತ್ತು. ರಿಯಾಯಿತಿ ಶುಲ್ಕವನ್ನು ಕಟ್ಟಲು ಕೂಡ ಕೆಲವು ಪೋಷಕರು ಹಿಂಜರಿದಿದ್ದರು. ಇದರ ಪರಿಣಾಮವು ಖಾಸಗಿ ಶಾಲೆಗಳ, ಮುಖ್ಯವಾಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿಯ ಮೇಲೆ ಉಂಟಾಗಿದೆ. ಕೆಲವರ ಸಂಬಳ ಕಡಿತವಾಗಿದ್ದರೆ, ಬಹಳಷ್ಟು ಜನ ಕೆಲಸವನ್ನೇ ಕಳೆದುಕೊಂಡಿದ್ದಾರೆ. ಕೊರೊನಾ ಬಿಕ್ಕಟ್ಟು ತಲೆದೋರಿದಾಗಿನಿಂದಲೂ ಖಾಸಗಿ ಶಾಲೆಗಳ ಶಿಕ್ಷಕರು ಸರ್ಕಾರದ ನೆರವಿಗೆ ಬೇಡಿಕೆ ಸಲ್ಲಿಸುತ್ತಲೇ ಇದ್ದಾರೆ. ಹೊಟ್ಟೆಪಾಡಿಗಾಗಿ ಕೆಲವು ಶಿಕ್ಷಕರು ಹಣ್ಣು– ತರಕಾರಿ ಮಾರಾಟ ಮಾಡಿದ್ದಾರೆ; ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ದುಡಿದಿದ್ದಾರೆ. ಮಕ್ಕಳ ನಾಳೆಗಳನ್ನು ರೂಪಿಸುವ ಶಿಕ್ಷಕವೃಂದ ಜೀವನೋಪಾಯಕ್ಕಾಗಿ ಪಡುವ ಪಡಿಪಾಟಲುಗಳನ್ನು ಸರ್ಕಾರ ಈವರೆಗೆ ಮೂಕಪ್ರೇಕ್ಷಕನಂತೆ ನೋಡಿದ ನಂತರ, ತನ್ನ ಜವಾಬ್ದಾರಿಯನ್ನು ಸರ್ಕಾರಿ ಶಾಲಾ ಶಿಕ್ಷಕರಿಗೆ ವರ್ಗಾಯಿಸಲು ಪ್ರಯತ್ನಿಸಿದೆ. ಅವರು ಕೈಚೆಲ್ಲಿದ ನಂತರ ಬೇರೆ ದಾರಿಯಿಲ್ಲದೆ ಅನುದಾನರಹಿತ ಶಾಲಾ ಶಿಕ್ಷಕರಿಗೆ ತಲಾ ₹ 5 ಸಾವಿರ ನೆರವನ್ನು ಪ್ರಕಟಿಸಿದೆ. ಹದಿನಾಲ್ಕು ತಿಂಗಳ ನಂತರ ಘೋಷಿಸಿರುವ ಈ ನೆರವಿನ ಮೊತ್ತ ತೀರಾ ಕನಿಷ್ಠವಾದುದು. ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕಾದ ಶಿಕ್ಷಕರೇ ಬದುಕಿನ ಬಗ್ಗೆ ಭರವಸೆ ಕಳೆದುಕೊಳ್ಳುವ ಪರಿಸ್ಥಿತಿ ತಲೆದೋರಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಹೊಸ ಶೈಕ್ಷಣಿಕ ವರ್ಷದಲ್ಲೂ ಶಿಕ್ಷಕರ ಸಂಕಷ್ಟಗಳು ಮುಂದುವರಿಯುವ ನಿರೀಕ್ಷೆಯಿದೆ. ಪ್ರಸಕ್ತ ವರ್ಷ ಕೂಡ ಖಾಸಗಿ ಶಾಲೆಗಳು ಪೋಷಕರ ಬೆಂಬಲವನ್ನು ನಿರೀಕ್ಷಿಸುವುದು ಕಷ್ಟ. ಇಂಥ ಸಂದಿಗ್ಧ ಸಂದರ್ಭದಲ್ಲಿ, ಬಾಯಿಮಾತಿನ ಉಪಚಾರವನ್ನು ಕೈಬಿಟ್ಟು ಖಾಸಗಿ ಶಾಲಾ ಶಿಕ್ಷಕರ ಹಿತಾಸಕ್ತಿ ರಕ್ಷಣೆಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಹಾಗೂ ಶಿಕ್ಷಕರನ್ನು ಘನತೆಯಿಂದ ನಡೆಸಿಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT