ADVERTISEMENT

ಸಂದರ್ಶನ | ಕಾರ್ಪೊರೇಟ್ ಹಿತವೇ ಸೆಬಿಗೆ ಮುಖ್ಯ: ಡಾ.ಆರ್. ಬಾಲಸುಬ್ರಹ್ಮಣ್ಯಂ‌

ಉಮೇಶ್‌ ಆನಂದ್
Published 24 ಜುಲೈ 2020, 19:32 IST
Last Updated 24 ಜುಲೈ 2020, 19:32 IST
ಡಾ.ಆರ್.ಬಾಲಸುಬ್ರಹ್ಮಣ್ಯಂ
ಡಾ.ಆರ್.ಬಾಲಸುಬ್ರಹ್ಮಣ್ಯಂ   

ಗ್ರಾಸ್‌ರೂಟ್‌ ರಿಸರ್ಚ್‌ ಅಂಡ್‌ ಅಡ್ವೋಕಸಿ ಮೂವ್‌ಮೆಂಟ್‌ನ (ಗ್ರಾಮ್‌) ಸ್ಥಾಪಕ ಡಾ.ಆರ್.ಬಾಲಸುಬ್ರಹ್ಮಣ್ಯಂ‌ ಸಾಮಾಜಿಕ ಷೇರು ವಿನಿಮಯದ ಕುರಿತು ವಿಶೇಷವಾಗಿ ಅಧ್ಯಯನ ನಡೆಸಿದವರು. ಈ ಸಂಬಂಧ ಕೇಂದ್ರ ಸರ್ಕಾರಕ್ಕೂ ವರದಿ ಕೊಟ್ಟವರು. ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ...

lಸಾಂಪ್ರದಾಯಿಕ ಷೇರು ವಿನಿಮಯದ ರೀತಿಯಲ್ಲಿಯೇ ಸಾಮಾಜಿಕ ಷೇರುಗಳ ಮಾರಾಟ ಮತ್ತು ಖರೀದಿ ವ್ಯವಹಾರವೂ ನಡೆಯುವುದೇ?

– ಹೌದು, ಕೆಲವು ವಿಷಯಗಳನ್ನೂ ನಾವಿಲ್ಲಿ ಗಮನಿಸಬೇಕು. ಜಗತ್ತಿನಲ್ಲಿ ಈಗ 14 ಸಾಮಾಜಿಕ ಷೇರು ವಿನಿಮಯ ಮಾರುಕಟ್ಟೆಗಳು ವಿಕಾಸಗೊಳ್ಳುತ್ತಿವೆ. ಎಲ್ಲವೂ ಬೆಳವಣಿಗೆಯ ವಿವಿಧ ಹಂತದಲ್ಲಿವೆ. ಇದು ವರೆಗೆ ಪರಿಪೂರ್ಣವಾಗಿ ಹಾಗೂ ಯಶಸ್ವಿಯಾಗಿ ಕಾರ್ಯ
ನಿರ್ವಹಿಸುತ್ತಿರುವ ಒಂದು ಮಾರುಕಟ್ಟೆಯೂ ಇಲ್ಲ.

ADVERTISEMENT

ವಿನಿಮಯ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಮುಖ್ಯ ಉದ್ದೇಶವೇ ಷೇರುಗಳ ವಹಿವಾಟು. ಉದಾಹರಣೆಗೆ ನೀವು ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ನಲ್ಲಿ ಹಣ ಹೂಡಿಕೆ ಮಾಡಿ, ಷೇರು ಖರೀದಿ ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ನಾಳೆ ಯಾರಾದರೂ ಆ ಷೇರುಗಳನ್ನು ನಿಮ್ಮಿಂದ ಖರೀದಿಗೆ ಮನಸ್ಸು ಮಾಡಬಹುದು. ಹೀಗೆ ವ್ಯವಹಾರ ಕುದುರುತ್ತಾ ಹೋದರೆ ಅದು ಚೆನ್ನಾಗಿ ಕಾರ್ಯನಿರ್ವಹಿಸುತ್ತಿರುವ ವಿನಿಮಯ ಮಾರುಕಟ್ಟೆ ಎನಿಸಿಕೊಳ್ಳುತ್ತದೆ. ಈ ಅರ್ಥದಲ್ಲಿ ಕೆನಡಾದ ಸಾಮಾಜಿಕ ಷೇರು ವಿನಿಮಯ ಮಾರುಕಟ್ಟೆ ಮಾತ್ರ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ. ಬೇರೆ ಕಡೆ ಅಷ್ಟೊಂದು ವಿಕಾಸವಾಗಿಲ್ಲ.

lಹಾಗಾದರೆ ಆರ್ಥಿಕ ನೆರವು ಹಾಗೂ ಬೆಂಬಲಕ್ಕಾಗಿ ಹಾತೊರೆಯುತ್ತಿರುವ ಉದ್ದೇಶಗಳಿಗೆ ಬಂಡವಾಳವನ್ನು ಸೆಳೆಯುವುದೇ ಸಾಮಾಜಿಕ ಷೇರು ವಿನಿಮಯದ ಉದ್ದೇಶವೇ?

– ಸಾಮಾಜಿಕ ವಲಯದ ಅಭಿವೃದ್ಧಿ ವಿಷಯವು ಯಾವಾಗಲೂ ಹಣದ ಹಸಿವಿನಿಂದ ಕೂಡಿರುತ್ತದೆ ಎನ್ನುವುದು ನಿಜ. ಆದರೆ, ಇಲ್ಲಿನ ಸಂಗತಿಯನ್ನು ಬೇರೊಂದು ದೃಷ್ಟಿಕೋನದಿಂದ ನಿಮ್ಮ ಮುಂದಿಡುತ್ತೇನೆ. ವಿಶ್ವಸಂಸ್ಥೆಯ ಸಾಮಾಜಿಕ ಅಭಿವೃದ್ಧಿಯ ಗುರಿ (ಎಸ್‌ಡಿಜಿ) ಈಡೇರಿಕೆ ಪತ್ರಕ್ಕೆ ಭಾರತ ಕೂಡ ಸಹಿ ಹಾಕಿದೆ. 2030ರೊಳಗೆ ನಾವು 17 ಗುರಿಗಳನ್ನು ತಲುಪಬೇಕಿದೆ. ಅದಕ್ಕಾಗಿ ಸಾಮಾಜಿಕ ವಲಯದಲ್ಲಿ ಪ್ರತಿವರ್ಷ ಲಕ್ಷಾಂತರ ಕೋಟಿ ರೂಪಾಯಿಗಳ ಹೂಡಿಕೆ ಅಗತ್ಯವಿದೆ. ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆ ವಲಯದಲ್ಲಿ ವ್ಯಯಿಸಲು ಅಷ್ಟೊಂದು ಹಣವಿಲ್ಲ. ಹೀಗಾಗಿ ಖಾಸಗಿ ಸಹಭಾಗಿತ್ವ ಅನಿವಾರ್ಯ.

lಸಾಂಪ್ರದಾಯಿಕ ಷೇರು ವಿನಿಮಯ ಮಾರುಕಟ್ಟೆಗಳು ಅಷ್ಟೊಂದು ಸದ್ದು ಮಾಡುತ್ತಾ, ಉದ್ವೇಗದ ಅಲೆ ಎಬ್ಬಿಸುತ್ತಾ, ಗೂಳಿಯ ಓಟಕ್ಕೆ ಕಾರಣವಾಗುತ್ತಾ ವಹಿವಾಟು ನಡೆಸುವಾಗ, ಸಾಮಾಜಿಕ ಷೇರು ವಿನಿಮಯವು ಯಾರನ್ನು ಆಕರ್ಷಣೆ ಮಾಡೀತು?

– ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಕಾರ್ಯಪಡೆ ಸಹ ಸಾಮಾಜಿಕ ಷೇರು ವಿನಿಮಯದ ಕುರಿತು ಕೆಲಸ ಮಾಡುತ್ತಿದೆ. ಆದರೆ, ಈ ಹೊಸ ಪರಿಕಲ್ಪನೆ ಕುರಿತು ಅದರ ಮೂಲಗ್ರಹಿಕೆಯೇ ತಪ್ಪಾಗಿದೆ. ಮೂರು ದೃಷ್ಟಿಕೋನದಿಂದ ನಾವು ಈ ಪರಿಕಲ್ಪನೆಯನ್ನು ನೋಡಬೇಕಿದೆ. ಮೊದಲನೆಯದು, ಬಂಡವಾಳ ಹೂಡಿಕೆದಾರನ ದೃಷ್ಟಿ. ಹೂಡಿಕೆದಾರನಿಗೆ ಪ್ರೋತ್ಸಾಹವಂತೂ ಬೇಕೇಬೇಕು.

ಎರಡನೆಯದು, ನಿಯಂತ್ರಣದ ದೃಷ್ಟಿ. ಸೆಬಿ ಕೇವಲ ಷೇರು ವಿನಿಮಯದ ಕಡೆಗೆ ಗಮನಹರಿಸುತ್ತಿದೆ. ಆದರೆ, ಕಂಪನಿಯ ಕಾರ್ಯವೈಖರಿ ಹಾಗೂ ಅದರ ಪರಿಣಾಮಗಳ ಕುರಿತೂ ಜನರಿಗೆ ಮಾಹಿತಿ ಬೇಕು. ಅದಕ್ಕೆ ಪಾರದರ್ಶಕ ವ್ಯವಸ್ಥೆ ಬೇಕು. ಮೂರನೆಯದು, ಬಂಡವಾಳ ಅಗತ್ಯವಿರುವ ಕಂಪನಿಗಳ ದೃಷ್ಟಿ. ಮೂರು ದಶಕಗಳಿಂದ ನಾನು ಇದೇ ವಲಯದಲ್ಲಿ ಇದ್ದೇನೆ. ಸಾಮಾಜಿಕ ವಲಯದಲ್ಲಿ ಇರುವ ನಮ್ಮಂಥವರಿಗೆ ಸಾಮಾಜಿಕ ಬದ್ಧತೆ ಒಂದೇ ಗೊತ್ತು. ಲಾಭ ಮಾಡುವುದು ನಮ್ಮ ಡಿಎನ್‌ಎಯಲ್ಲಿಯೇ ಇಲ್ಲ. ಸಾಮಾಜಿಕ ಷೇರು ವಿನಿಮಯಕ್ಕೆ ರೂಪ ನೀಡುವಾಗ ಈ ಮೂರೂ ದೃಷ್ಟಿಕೋನಗಳನ್ನು ಗಮನದಲ್ಲಿ
ಇಟ್ಟುಕೊಳ್ಳಬೇಕು.

lದೊಡ್ಡ ಎನ್‌ಜಿಒಗಳು ಸಹ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗಳು ಎನ್ನುತ್ತದೆ ಸರ್ಕಾರಕ್ಕೆ ನೀವು ನೀಡಿದ ವರದಿ. ಅವುಗಳಿಗೆ ಎಸ್‌ಎಸ್‌ಇಯಿಂದ ಬಂಡವಾಳವನ್ನು ಆಕರ್ಷಿಸುವುದು ಸಾಧ್ಯವೇ?

– ಖಂಡಿತಾ ಸಾಧ್ಯವಿಲ್ಲ. ಉದಾಹರಣೆಗೆ, ನಮ್ಮದು ಸಹ ತಕ್ಕಮಟ್ಟಿಗೆ ದೊಡ್ಡ ಎನ್‌ಜಿಒ. ಆದರೆ, ಅಗತ್ಯ ಬಂಡವಾಳ ಕ್ರೋಡೀಕರಿಸಲು ನಮ್ಮ ಸಂಸ್ಥೆಗೆ ಸಾಧ್ಯವಾಗುವುದಿಲ್ಲ. ಸಿಬಿಐಯು ಕೋರ್ಟ್‌ಗೆ ಸಲ್ಲಿಸಿದ ವರದಿ ಪ್ರಕಾರ, ದೇಶದಲ್ಲಿ 32 ಲಕ್ಷ ಎನ್‌ಜಿಒಗಳಿವೆ. ಮಾಹಿತಿ ಭಂಡಾರದಲ್ಲಿ ನೋಂದಣಿಯಾದ ಎನ್‌ಜಿಒಗಳ
ನ್ನಷ್ಟೇ ಸೆಬಿ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿದೆ. ಅದರ ಪ್ರಕಾರ, 93 ಸಾವಿರ ಎನ್‌ಜಿಒಗಳು ಮಾತ್ರ ಇವೆ. ಇದನ್ನೇ ಸರ್ಕಾರ ಮಾನ್ಯ ಮಾಡಿದರೆ 31 ಲಕ್ಷ ಎನ್‌ಜಿಒಗಳು ಸಾಮಾಜಿಕ ಷೇರು ವಿನಿಮಯದ ವ್ಯಾಪ್ತಿಯಿಂದಲೇ ಹೊರಗೆ ಉಳಿಯಲಿವೆ. ಅವುಗಳಿಗೆ ಬಂಡವಾಳ ಕ್ರೋಡೀಕರಣದ ಹಾದಿಯೂ ಇಲ್ಲವಾಗಲಿದೆ.

lಸಾಮಾಜಿಕ ಉದ್ಯಮ ಎನ್ನುವುದು ಸಮಾಜ ಮತ್ತು ಉದ್ದಿಮೆ ಎರಡರ ಹೈಬ್ರೀಡ್‌ ಪದವಲ್ಲವೇ? ಸಾಮಾಜಿಕ ಉದ್ಯಮವನ್ನು ನೀವು ಯಾವ ರೀತಿ ಅರ್ಥೈಸುತ್ತೀರಿ?

– ಸಾಮಾಜಿಕ ಉದ್ಯಮದ ಅರ್ಥವ್ಯಾಪ್ತಿಯನ್ನು ಭಾರತೀಯ ಕಾನೂನು ಸಹ ವಿವರಿಸಿಲ್ಲ. ಬಹಳಷ್ಟು ಕಂಪನಿಗಳು ತಮ್ಮದು ಸಾಮಾಜಿಕ ಉದ್ಯಮವೆಂದೇ ಹೇಳಿಕೊಳ್ಳುತ್ತವೆ. ಆದರೆ, ಲಾಭ ಮಾಡುವುದೇ ಅವುಗಳ ಮುಖ್ಯ ಉದ್ದೇಶವಾಗಿರುತ್ತದೆ.

ಹಾಗೆ ನೋಡಿದರೆ ಪ್ರತಿಯೊಂದು ಕಂಪನಿಯೂ ತನ್ನದು ಸಾಮಾಜಿಕ ಉದ್ದಿಮೆ ಎಂದು ಹೇಳಬಹುದು. ಉದಾಹರಣೆಗೆ ಕಾರು ತಯಾರಿಕಾ ಕಂಪನಿಯೊಂದು ತಾನು ಜನರ ಸಾರಿಗೆಗೆ ನೆರವಾಗುವುದರಿಂದ ತನ್ನದು ಸಾಮಾಜಿಕ ಉದ್ದಿಮೆ ಎಂದು ವಾದಿಸಬಹುದು. ಬೇರೆ ಬೇರೆ ದೇಶಗಳು ಬೇರೆ ಬೇರೆ ರೀತಿಯಲ್ಲಿ ಇದನ್ನು ಅರ್ಥೈಸುವ ಪ್ರಯತ್ನ ಮಾಡಿವೆ. ಆ ಪದವನ್ನು ಜಗತ್ತಿನಲ್ಲಿ ಸದ್ಯ 62 ವಿಧದಿಂದ ಅರ್ಥೈಸಲಾಗಿದೆ. ಸಾಮಾಜಿಕ ಉದ್ಯಮಕ್ಕೆ ನಮ್ಮಲ್ಲಿ ಕಾನೂನಿನ ಅರ್ಥ ಕಲ್ಪಿಸುವ ತುರ್ತು ಅಗತ್ಯವಿದೆ. ಆದರೆ, ಸೆಬಿ ವರದಿಯಲ್ಲಿ ಈ ಅಂಶವನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.