ADVERTISEMENT

ಒಳನೋಟ: ಕಳಪೆ ಬಿತ್ತನೆ ಬೀಜಗಳ ಹಾವಳಿ, ಬೀಜೋತ್ಪಾದನೆಯ ಮೇಲೆ ಕರಿನೆರಳು

ರೈತರು–ಕಂಪನಿಗಳ ಒಪ್ಪಂದದಲ್ಲಿ ಬಿರುಕು

ಸಿದ್ದು ಆರ್.ಜಿ.ಹಳ್ಳಿ
Published 21 ಮೇ 2022, 19:31 IST
Last Updated 21 ಮೇ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಣೆಬೆನ್ನೂರು (ಹಾವೇರಿ): ಮಣ್ಣಿನ ಫಲವತ್ತತೆ, ಅಧಿಕ ಇಳುವರಿಯಿಂದ ಗುಣಮಟ್ಟದ ಬಿತ್ತನೆ ಬೀಜಗಳಿಗಾಗಿ ಏಷ್ಯಾ ಖಂಡದಲ್ಲೇ ಹೆಸರುವಾಸಿಯಾಗಿರುವ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ‘ಬೀಜೋತ್ಪಾದನೆಯ ತೊಟ್ಟಿಲು’ ಎನಿಸಿದೆ.

ಏಳೆಂಟು ವರ್ಷಗಳ ಹಿಂದೆ 300ಕ್ಕೂ ಅಧಿಕ ಬೀಜೋತ್ಪಾದನಾ ಕಂಪನಿಗಳು ರಾಣೆಬೆನ್ನೂರಿನಲ್ಲಿ ನೆಲೆಯೂರಿದ್ದವು. ವರ್ಷದಿಂದ ವರ್ಷಕ್ಕೆ ಅವುಗಳ ಸಂಖ್ಯೆ ಕಡಿಮೆಯಾಗಿ ಪ್ರಸ್ತುತ 100ರಿಂದ 120 ಕಂಪನಿಗಳು ಮಾತ್ರ ಸಕ್ರಿಯವಾಗಿವೆ.

ಬೀಜೋತ್ಪಾದನಾ ಕಂಪನಿಗಳು ರೈತರೊಂದಿಗೆ ಒಪ್ಪಂದ ಮಾಡಿಕೊಂಡು ‘ಫೌಂಡೇಶನ್‌ ಸೀಡ್ಸ್‌’ (ತಾಯಿ ಬೀಜ) ಕೊಟ್ಟು, ಫಸಲು ಬಂದ ನಂತರ ಬೀಜಗಳನ್ನು ಖರೀದಿಸುತ್ತವೆ. ರೈತರು 10–20 ಗುಂಟೆ ಜಮೀನಿನಲ್ಲಿ ಲಕ್ಷಗಟ್ಟಲೆ ರೂಪಾಯಿ ಲಾಭ ಪಡೆಯಬಹುದು ಎಂಬ ಆಮಿಷವನ್ನು ಕಂಪನಿಗಳು ಒಡ್ಡುತ್ತವೆ. ಕೆಲವು ರೈತರು ಬೀಜೋತ್ಪಾದನೆ ಮಾಡಿ ಲಾಭ ಮಾಡಿಕೊಂಡಿದ್ದೂ ಇದೆ.

ADVERTISEMENT

ಮಣ್ಣಿನ ಫಲವತ್ತತೆ ನಾಶ: ‘ಹವಾಮಾನ ವೈಪರೀತ್ಯ, ಮಣ್ಣಿನ ಫಲವತ್ತತೆ ನಾಶ, ಕಾರ್ಮಿಕರ ಕೊರತೆ ಮುಂತಾದ ಕಾರಣಗಳಿಂದ ಗುಣಮಟ್ಟದ ಬೀಜೋತ್ಪಾದನೆ ಕಡಿಮೆಯಾಗಿದೆ. ಅತಿಯಾದ ರಸಗೊಬ್ಬರ, ಕೀಟನಾಶಕಗಳ ಬಳಕೆ ಹಾಗೂ ಏಕಬೆಳೆ ಪದ್ಧತಿಯಿಂದ ಮಣ್ಣಿನ ಸತ್ವ ನಾಶವಾಗುತ್ತಿದೆ. ಅವೈಜ್ಞಾನಿಕ ನೀರಿನ ಬಳಕೆಯಿಂದ ಭೂಮಿ ಸವಳಾಗುತ್ತಿದೆ. ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆಯಿಂದ ಬೆಳೆಗಳು ರೋಗ ಮತ್ತು ಕೀಟಬಾಧೆಗೆ ತುತ್ತಾಗುತ್ತಿವೆ. ಎರೆ ಗೊಬ್ಬರ ಮತ್ತು ಸಾವಯವ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು’ ಎನ್ನುತ್ತಾರೆ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಪಿ.ಅಶೋಕ.

ರೈತರಿಗೆ ವಂಚನೆ: ‘ಕೆಲವು ಕಂಪನಿಗಳು ಒಪ್ಪಂದದಂತೆ ನಡೆದುಕೊಳ್ಳದೆ, ಉತ್ತಮ ದರ ನೀಡದೇ ವಂಚಿಸಿದವು. ಖರೀದಿಸಿದ ಬೀಜಗಳ ಹಣವನ್ನು ಕೊಡದೇ ಸತಾಯಿಸಿದವು. ಈ ಎಲ್ಲ ಕಾರಣಗಳಿಂದ ರೈತರು ಬೀಜೋತ್ಪಾದನೆ ಕಂಪನಿಗಳ ವಿರುದ್ಧ ಹೋರಾಟಕ್ಕೆ ಇಳಿದರು. ಕೆಲವು ಕಂಪನಿಗಳು ಬಾಗಿಲು ಮುಚ್ಚಿದವು. ಮತ್ತಷ್ಟು ಕಂಪನಿಗಳು ಬೇರೆ ಕಡೆ ಸ್ಥಳಾಂತರಗೊಂಡವು’ ಎನ್ನುತ್ತಾರೆ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ.

‘ಕೇಂದ್ರ ಸರ್ಕಾರದ ಮಟ್ಟದಲ್ಲಿ ನೋಂದಣಿ ಮಾಡಿಕೊಂಡು ರಾಜ್ಯಕ್ಕೆ ಬರುವ ಬೀಜೋತ್ಪಾದನಾ ಕಂಪನಿಗಳ ಮೇಲೆ ಸ್ಥಳೀಯ ಕೃಷಿ ಇಲಾಖೆಗಳಿಗೆ ನಿಯಂತ್ರಣವಿಲ್ಲ. ಇಂಥ ಕಂಪನಿಗಳ ಅಂಕಿಅಂಶ ಜಿಲ್ಲಾಡಳಿತದ ಬಳಿಯೂ ಲಭ್ಯವಿಲ್ಲ. ರಾಜ್ಯ ಸರ್ಕಾರದ ಮಟ್ಟದಲ್ಲೂ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಬೇಕು. ಆಗ ರೈತರು ತಮಗೆ ಅನ್ಯಾಯವಾದರೆ ಪರಿಹಾರ ಕೇಳಬಹುದು’ ಎನ್ನುತ್ತಾರೆ ರೈತ ಮುಖಂಡರು.

‘ಬೀಜೋತ್ಪಾದನೆಯಲ್ಲಿ ಹಾವೇರಿ ಜಿಲ್ಲೆ ರಾಜ್ಯದಲ್ಲಿಯೇ ಮೊದಲನೇ ಸ್ಥಾನದಲ್ಲಿತ್ತು. ಈಗ ಐದನೇ ಸ್ಥಾನಕ್ಕೆ ಕುಸಿದಿದೆ. ಶೇ 50ರಷ್ಟು ಉತ್ಪಾದನೆ ಕಡಿಮೆಯಾಗಿದೆ. ವಿಜ್ಞಾನಿಗಳಿಗಿಂತ ಉತ್ತಮ ಪ್ರಾಯೋಗಿಕ ಜ್ಞಾನ ಹೊಂದಿರುವ ರೈತರು ನಮ್ಮಲ್ಲಿದ್ದಾರೆ. ಸರ್ಕಾರ ರೈತರ ಸಮಸ್ಯೆಗಳನ್ನು ನಿವಾರಿಸಿ, ಪ್ರೋತ್ಸಾಹ ನೀಡಿದರೆ ಬೀಜೋತ್ಪಾದನೆಯಲ್ಲಿ ಪುನಃ ಅಗ್ರಸ್ಥಾನ ಪಡೆಯುವಲ್ಲಿ ಸಂದೇಹವಿಲ್ಲ’ ಎನ್ನುತ್ತಾರೆ ಕೃಷಿ ಪದವೀಧರರ ಸಂಘದ ಅಧ್ಯಕ್ಷ ದೇವಕುಮಾರ ಎಚ್‌.ಎನ್‌.

ಕಳಪೆ ಬೀಜ ಮಾರಾಟ: ‘ಸರ್ಕಾರ ಹಾಗೂ ಕೃಷಿ ಇಲಾಖೆಯಿಂದ ಬೀಜಗಳ ಮೊಳಕೆ ಪ್ರಮಾಣದ (ಜೆರ್ಮಿನೇಶನ್‌ ಕೌಂಟ್‌) ಪ್ರಯೋಗ ಪರೀಕ್ಷೆ (ಲ್ಯಾಬ್‌ ಟೆಸ್ಟಿಂಗ್‌) ನಡೆಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಕೂಡ ತಿರಸ್ಕೃತ ಬೀಜಗಳನ್ನು ಮಾರಾಟ ಮಾಡುವ ಮಾಫಿಯಾದಿಂದ ಜಿಲ್ಲೆಗೆ ಕೆಟ್ಟ ಹೆಸರು ಬಂದಿದೆ. ಕಳಪೆ ಬೀಜ ಮಾರಾಟಕ್ಕೆ ಮುಂದಾಗಿರುವುದು ದುರಂತದ ಸಂಗತಿ. ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ರೈತ ಮುಖಂಡ ರವೀಂದ್ರಗೌಡ ಪಾಟೀಲ.

ಹಳಸಿದ ಸಂಬಂಧ: ಬೀಜೋತ್ಪಾದನೆ ಕಂಪನಿಗಳ ಅಧಿಕಾರಿಗಳು ಮತ್ತು ಏಜೆಂಟರು, ರೈತರಿಂದ ಬಿತ್ತನೆ ಬೀಜಗಳನ್ನು ಉಪಾಯದಿಂದ ತೆಗೆದುಕೊಂಡು ಹೋಗಿ ನಿಮ್ಮಿಂದ ಪಡೆದ ಬಿತ್ತನೆ ಬೀಜಗಳು ತಿರಸ್ಕೃತವಾಗಿವೆ ಎಂದು ಮೋಸ ಮಾಡುತ್ತಾರೆ. ಅವೇ ಬೀಜಗಳನ್ನು ಬೇರೆ ಕಂಪನಿಗೆ ಮಾರುತ್ತಾರೆ. ಮತ್ತೆ ಬೀಜ ವಾಪಸ್‌ ಕೊಡುವುದಿಲ್ಲ. ಇದನ್ನು ತಿಳಿದ ರೈತರು ತಾವು ಬೆಳೆದ ಎಲ್ಲ ಬೀಜಗಳನ್ನು ಕಂಪನಿಗೆ ಕೊಡುವುದಿಲ್ಲ. ಅರ್ಧದಷ್ಟನ್ನು ಬೇರೆಯವರಿಗೆ ಮಾರುತ್ತಾರೆ. ರೈತರು ಮತ್ತು ಬೀಜೋತ್ಪಾದನೆ ಕಂಪನಿಗಳ ನಡುವೆ ಸಂಬಂಧ ಹಳಸಿದ್ದರಿಂದ ಬೀಜೋತ್ಪಾದನೆ ಮೇಲೆ ಕರಿನೆರಳು ಕವಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.