ADVERTISEMENT

ಒಳನೋಟ: ಬಿತ್ತನೆ ಬೀಜ ಉತ್ಪಾದನೆಗೆ ರಾಜ್ಯದ ನೆರವು ಇಲ್ಲ

​ಪ್ರಜಾವಾಣಿ ವಾರ್ತೆ
Published 21 ಮೇ 2022, 19:45 IST
Last Updated 21 ಮೇ 2022, 19:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಬೀಜೋತ್ಪಾದನೆ ಪ್ರೋತ್ಸಾಹಕ್ಕೆಂದು ರಾಜ್ಯ ಸರ್ಕಾರ ಯಾವುದೇ ವಿಶೇಷ ಕಾರ್ಯಕ್ರಮ ಅಥವಾ ಯೋಜನೆಗಳನ್ನು ಹಮ್ಮಿಕೊಂಡಿಲ್ಲ. ಆದರೆ, ಬೀಜ ವಿತರಣೆಗಾಗಿ ಸಹಾಯಧನವನ್ನಷ್ಟೇ ನೀಡುತ್ತಿದೆ.

‘ಕೇಂದ್ರ ಸರ್ಕಾರ ‘ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌’ ಅಡಿ ವಿಶೇಷವಾಗಿ ಬೇಳೆ–ಕಾಳುಗಳಿಗೆ ದ್ವಿದಳ ಯೋಜನೆಯಡಿ ನೆರವು ನೀಡುತ್ತದೆ. ಕರ್ನಾಟಕ ರಾಜ್ಯ ಬೀಜ ಉತ್ಪಾದನಾ ನಿಗಮ ಮತ್ತು ಕರ್ನಾಟಕ ಆಯಿಲ್‌ ಫೆಡರೇಷನ್‌ ಜತೆ ನೋಂದಣಿ ಮಾಡಿಕೊಂಡ ಬೀಜೋತ್ಪಾದನೆ ಮಾಡುವ ರೈತರಿಗೆ ನೆರವು ನೀಡಲಾಗುತ್ತದೆ’ ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಲದೆ, ಕರ್ನಾಟಕ ರಾಜ್ಯ ಬೀಜ ನಿಗಮವೂ ಬೀಜ ತಯಾರಿಸುವ ರೈತರನ್ನು ಗುರುತಿಸಿ ಅವರ ಮೂಲಕ ಬೀಜ ಉತ್ಪಾದನೆ ಮಾಡುತ್ತಿದೆ. ಇದರಲ್ಲಿ ರೈತರು ಪಾಲುದಾರರಾಗಿರುತ್ತಾರೆ. ರೈತರು ಬೆಳೆದ ಬೀಜವನ್ನು ನಿಗಮವೇ ಖರೀದಿಸಿ ಮಾರಾಟಕ್ಕೆ ವ್ಯವಸ್ಥೆ ಮಾಡುತ್ತದೆ. ಉದಾಹರಣೆಗೆ ನಿರ್ದಿಷ್ಟ ಬಿತ್ತನೆ ಬೀಜ ಕ್ವಿಂಟಲ್‌ಗೆ ₹3,000 ದರ ಇದ್ದರೆ ಅಷ್ಟೂ ಮೊತ್ತವನ್ನು ನೀಡಿ ಖರೀದಿಸುತ್ತದೆ. ಅದನ್ನು ಪ್ಯಾಕಿಂಗ್‌ ಮಾಡಿ ಕಳುಹಿಸುತ್ತದೆ ಎನ್ನುತ್ತಾರೆ ಅವರು.

ADVERTISEMENT

ಕೇಂದ್ರ ಸರ್ಕಾರದ ‘ಬೀಜಗ್ರಾಮ’ ಯೋಜನೆ ಹೆಚ್ಚು ಜನಪ್ರಿಯವಾಗಿದೆ. ಪರಂಪರಾಗತವಾಗಿ ರೈತರು ಬಿತ್ತನೆಗಾಗಿ ಸಂಗ್ರಹಿಸುವ ಬೀಜದ ಗುಣಮಟ್ಟವನ್ನು ಹೆಚ್ಚಿಸಲು ಪ್ರೋತ್ಸಾಹಿಸುವುದಕ್ಕಾಗಿಯೇ ರೈತರಿಗೆ ನೆರವು ನೀಡಲಾಗುತ್ತದೆ. ಶೇ 80 ರಿಂದ ಶೇ 85 ರಷ್ಟನ್ನು ಕೃಷಿ ಉತ್ಪಾದನೆ ಕಾರ್ಯಕ್ರಮದಲ್ಲಿ ಇದನ್ನು ಬಳಸಲಾಗುತ್ತದೆ. ತರಬೇತಿ, ತಯಾರಿಕೆ ಮತ್ತು ವಿತರಣೆಗೆ ಕೇಂದ್ರ ಸರ್ಕಾರ ನೆರವು ನೀಡುತ್ತದೆ. ಬೀಜಗ್ರಾಮಗಳಲ್ಲಿ ತಯಾರಿಸಿದ ಬೀಜಗಳನ್ನು ಸಂಗ್ರಹಿಸಿ, ಸಂರಕ್ಷಿಸಲಾಗುತ್ತದೆ. ಈ ರೀತಿ ಸಂಗ್ರಹಿಸಿದ ಬಿತ್ತನೆ ಬೀಜವನ್ನು ಮುಂದಿನ ಹಂಗಾಮಿಗೆ ಬಳಸಲಾಗುತ್ತದೆ. ಬೀಜ ಉತ್ಪಾದನೆಗೆ ಖಾಸಗಿ ಕಂಪನಿಯವರಿಗೂ ಉತ್ತೇಜನ ನೀಡಲಾಗುತ್ತದೆ.

ಇದಲ್ಲದೇ ‘ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌’ ಅಡಿ ರಾಜ್ಯದಲ್ಲಿ ವಿವಿಧ ರೀತಿಯ ಬೇಳೆ– ಕಾಳುಗಳು, ಎಣ್ಣೆಕಾಳುಗಳು ಮತ್ತು ಭತ್ತದ ಉತ್ಪಾದನೆ ಹೆಚ್ಚಿಸುವುದರ ಭಾಗವಾಗಿ ಕೇಂದ್ರ ಸರ್ಕಾರ ನೆರವು ನೀಡುತ್ತದೆ.

ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಬೆಳೆಯುವವರನ್ನು ಗುರುತಿಸಿ, ಅವರಿಂದ ಹೆಸರು, ಉದ್ದು, ಕಡ್ಲೆಕಾಳು, ಕಡ್ಲೆ ಬೇಳೆ, ಶೇಂಗಾ ಮತ್ತು ಭತ್ತದ ಬಿತ್ತನೆ ಬೀಜಗಳನ್ನು ಬೆಳೆಯಲು ರಾಜ್ಯದ ರೈತರಿಗೆ ನೆರವು ನೀಡಲಾಗುತ್ತಿದೆ. ಬಿತ್ತನೆ ಬೀಜವನ್ನು ಉತ್ಪಾದಿಸುತ್ತಿದೆ. 2021–22 ರ ಸಾಲಿಗಾಗಿ ಕರ್ನಾಟಕ ಸರ್ಕಾರ ಕಳುಹಿಸಿದ ₹114.08 ಕೋಟಿ ಕ್ರಿಯಾ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದರಲ್ಲಿ ಕೇಂದ್ರ ಸರ್ಕಾರ₹ 68.45 ಕೋಟಿ ಮತ್ತು ರಾಜ್ಯ ಸರ್ಕಾರ ₹45.63 ಕೋಟಿ ನೀಡಲಿವೆ. ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌ ಯೋಜನೆಯಡಿ ಇಳುವರಿಯನ್ನು ಹೆಚ್ಚಿಸಲು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಬಿತ್ತನೆ ಬೀಜ ಉತ್ಪಾದನೆಯೂ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.