ADVERTISEMENT

ಒಳನೋಟ: ಆಮ್ಲಜನಕ ದಾಸ್ತಾನಿನ ಮೇಲೆ ಹೈಕೋರ್ಟ್ ನಿಗಾ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 19:45 IST
Last Updated 4 ಸೆಪ್ಟೆಂಬರ್ 2021, 19:45 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಕೋವಿಡ್ ಮೂರನೇ ಅಲೆ ಎದುರಿಸಲು ವಾಸ್ತವವಾಗಿ ಎಷ್ಟು ಪ್ರಮಾಣದ ಆಮ್ಲಜನಕ ಅಗತ್ಯವಿದೆ ಎಂಬುದರ ಕುರಿತು ಅಂದಾಜು ಸಿದ್ಧಪಡಿಸುವಂತೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ತುರ್ತು ಪರಿಸ್ಥಿತಿ ಎದುರಿಸಲು ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಆಮ್ಲಜನಕವನ್ನು ಹೆಚ್ಚುವರಿಯಾಗಿ ದಾಸ್ತಾನು ಮಾಡಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಇತ್ತೀಚೆಗೆ ಹೈಕೋರ್ಟ್‌ ಹೇಳಿದೆ. ಖಾಸಗಿ ಆಸ್ಪತ್ರೆಗಳಲ್ಲಿ 4,709 ಟನ್ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ 147.4 ಟನ್ ಆಮ್ಲಜನಕ ಹೆಚ್ಚುವರಿಯಾಗಿ ದಾಸ್ತಾನಿದೆ ಎಂಬ ಮಾಹಿತಿಯನ್ನು ಸರ್ಕಾರ ನೀಡಿದೆ. ದಿನಕ್ಕೆ 1,200 ಟನ್ ಆಮ್ಲಜನಕ ಬೇಕಾಗಲಿದೆ ಎಂದು ತಜ್ಞರ ಸಮಿತಿ ವರದಿ ನೀಡಿರುವುದರಿಂದ, ದಾಸ್ತಾನಿರುವ ಆಮ್ಲಜನಕ ಸಾಕಾಗಲಿದೆಯೇ ಎಂದೂ ಕೋರ್ಟ್‌ ಪ್ರಶ್ನಿಸಿದ್ದು, ಈ ಕುರಿತು ವಿಚಾರಣೆ ಇದೇ 8ರಂದು ನಿಗದಿಯಾಗಿದೆ.

ಕೊರತೆ ನಿವಾರಣೆಗೆ ಕ್ರಮ: ಕೋವಿಡ್‌ನ ಸಂಭವನೀಯ ಮೂರನೇ ಅಲೆ ಸಂದರ್ಭದಲ್ಲಿ ಆಮ್ಲಜನಕದ ಕೊರತೆ ಉಂಟಾಗಬಾರದೆಂಬ ಕಾರಣಕ್ಕೆ ಸಮನ್ವಯದಿಂದ ಕಾರ್ಯನಿರ್ವಹಿಸಲು ಆಮ್ಲಜನಕ ಉತ್ಪಾದಕ ಕಂಪನಿಗಳ ಪ್ರತಿನಿಧಿಗಳೊಂದಿಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಸಮಾಲೋಚನೆ ನಡೆಸಿದ್ದಾರೆ.

ADVERTISEMENT

ಸದ್ಯ ಏಳು ಕಂಪನಿಗಳು ಪ್ರತಿದಿನ 812 ಟನ್‌ಗಳಷ್ಟನ್ನು ಆಮ್ಲಜನಕ ಉತ್ಪಾದಿಸುತ್ತಿವೆ. ಆಕ್ಸಿಜನ್‌ ರೀಫಿಲ್ಲಿಂಗ್‌ ಘಟಕಗಳು 64 ಇವೆ. ಗದಗ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೀದರ್‌, ಯಾದಗಿರಿ, ಚಾಮರಾಜನಗರ, ಕೊಡಗು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ರೀಫಿಲ್ಲಿಂಗ್‌ ಘಟಕಗಳು ಇಲ್ಲ. ಮುಂದಿನ ದಿನಗಳಲ್ಲಿ ಎಲ್ಲ ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ಆಮ್ಲಜನಕ ಘಟಕಗಳನ್ನು ನಿರ್ಮಿಸಲು ಈಗಾಗಲೇ ಯೋಜನೆ ಸಿದ್ಧವಾಗಿದೆ. ಹೊಸ ಘಟಕಗಳ ಸ್ಥಾಪನೆ, ಟೆಂಡರ್‌ ಕರೆಯುವುದು, ಜಂಬೊ ಸಿಲಿಂಡರ್‌ ಖರೀದಿ, ಹೆಚ್ಚುವರಿ ದಾಸ್ತಾನು ಕೇಂದ್ರ, ಸರಬರಾಜು ವ್ಯವಸ್ಥೆ ಸಹಿತ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ವಿಶೇಷ ಪ್ರೋತ್ಸಾಹ: ಆಮ್ಲಜನಕ ಉತ್ಪಾದನಾ ಘಟಕ ಆರಂಭಿಸುವವರಿಗೆ ವಿಶೇಷ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಘಟಕ ಸ್ಥಾಪನೆ ಮಾಡುವವರಿಗೆ ಶೇ 25ರಷ್ಟು ಬಂಡವಾಳ ಸಬ್ಸಿಡಿ, ವಿದ್ಯುತ್‌ ಶುಲ್ಕದಿಂದ ಮೂರು ವರ್ಷಗಳವರೆಗೆ ಪೂರ್ಣ ವಿನಾಯಿತಿ, ಮುದ್ರಾಂಕ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲೂ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.