ADVERTISEMENT

ಸಂಗತ: ಹಿತಾಸಕ್ತಿ ಮತ್ತು ವೈಚಾರಿಕತೆ

ತಾರ್ಕಿಕವಾಗಿ ಆಲೋಚಿಸುವವರು, ವೈಚಾರಿಕ ಮನೋಭಾವ ಹೊಂದಿದವರು ಇಂದು ಸಮಾಜಕ್ಕೆ ಅಪಥ್ಯ ಆಗತೊಡಗಿದ್ದಾರೆಯೇ?

ಎಚ್.ಕೆ.ಶರತ್
Published 6 ಸೆಪ್ಟೆಂಬರ್ 2021, 19:30 IST
Last Updated 6 ಸೆಪ್ಟೆಂಬರ್ 2021, 19:30 IST
ಸಂಗತ
ಸಂಗತ   

ಆತ್ಮೀಯರೊಬ್ಬರು ಇತ್ತೀಚೆಗೆ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದರಿಂದ, ಅವರ ಯೋಗಕ್ಷೇಮ ನೋಡಿಕೊಳ್ಳುವ ಸಲುವಾಗಿ ಅವರೊಂದಿಗೆ ಆಸ್ಪತ್ರೆಯಲ್ಲೇ ಒಂದು ದಿನ ಕಳೆಯಬೇಕಾಗಿ ಬಂತು. ನಾವಿದ್ದ ಕೊಠಡಿಯಲ್ಲೇ ದಾಖಲಾಗಿದ್ದ ಗರ್ಭಿಣಿಯೊಬ್ಬರು ಮರುದಿನ ಸಿಜೇರಿಯನ್ ಹೆರಿಗೆ ಮಾಡಿಸಿಕೊಳ್ಳುವವರಿದ್ದರು. ಮಗುವಿನ ಗಾತ್ರ ದೊಡ್ಡದಿರುವ ಕಾರಣ ಸಹಜ ಹೆರಿಗೆ ಸಾಧ್ಯವಿಲ್ಲವೆಂದು ತಿಳಿಸಿದ್ದ ವೈದ್ಯರು, ದಂಪತಿ ತಿಳಿಸುವ ಸಮಯಕ್ಕೆ ಹೆರಿಗೆ ಮಾಡಿಸುವುದಾಗಿ ಹೇಳಿದ್ದರು.

ವೈದ್ಯರ ಮಾತು ಕೇಳಿದ ಕೂಡಲೇ ಗರ್ಭಿಣಿ ಯುವತಿ ಒಳ್ಳೆ ಸಮಯ ಯಾವುದೆಂದು ವಿಚಾರಿಸಲು ತನ್ನ ಜೊತೆಗಿದ್ದ ತಾಯಿ ಮತ್ತು ಪತಿಗೆ ಸೂಚಿಸಿದಳು. ತನ್ನ ತಂದೆಗೆ ಕರೆ ಮಾಡಿದ ಪತಿ, ವೈದ್ಯರು ಹೇಳಿದ್ದನ್ನೆಲ್ಲ ಅವರಿಗೆ ತಿಳಿಸಿ, ‘ನಾಳೆ ಯಾವ ಸಮಯಕ್ಕೆ ಮಗು ಜನಿಸಿದರೆ ಸೂಕ್ತವೆಂದು ಕ್ಯಾಲೆಂಡರ್‌ನಲ್ಲಿ ನೋಡಿ ಹೇಳಿ ಅಣ್ಣ’ ಅಂತ ಕೋರಿದರು. ಅತ್ತ ಕಡೆಯಿಂದ ಯುವತಿಯ ಮಾವ ನೀಡಿದ ಪ್ರತಿಕ್ರಿಯೆ ಗಮನಾರ್ಹವಾಗಿತ್ತು.

‘ಮಗು ಯಾವ ಸಮಯದಲ್ಲಿ ಹುಟ್ಟಿದರೂ ತೊಂದರೆ ಇಲ್ಲ. ವೈದ್ಯರಿಗೆ ಯಾವ ಸಮಯ ಅನುಕೂಲವೋ ಆ ಸಮಯಕ್ಕೆ ಹೆರಿಗೆ ಮಾಡಲು ಹೇಳಿ. ರಾಹುಕಾಲ, ಗುಳಿಕಕಾಲ ಅಂತೆಲ್ಲ ನೋಡುತ್ತ ಕೂರಬೇಡಿ. ಹುಟ್ಟಿದ ಮಗು ಹೆಣ್ಣಾದರೂ ಆಗಲಿ, ಗಂಡಾದರೂ ಆಗಲಿ ಚಿಂತಿಸಲು ಹೋಗಬೇಡಿ. ತಾಯಿ-ಮಗು ಆರೋಗ್ಯವಾಗಿದ್ದರೆ ಅಷ್ಟೇ ಸಾಕು’ ಅಂತ ಮಗನಿಗೆ ಬುದ್ಧಿಮಾತು ಹೇಳಿದರು. ಲೌಡ್‌ ಸ್ಪೀಕರ್ ಆನ್ ಮಾಡಿದ್ದರಿಂದ ಈ ಸಂಭಾಷಣೆಯು ಕೊಠಡಿಯಲ್ಲಿದ್ದ ಎಲ್ಲರ ಕಿವಿಗೂ ಬೀಳುತ್ತಿತ್ತು.

ADVERTISEMENT

ಮಾವನ ಮಾತಿಗೆ ಸಹಮತ ವ್ಯಕ್ತಪಡಿಸದ ಯುವತಿ, ಆನಂತರ ಪತಿಗೆ, ‘ನಾವು ಹೇಳಿದ ಸಮಯಕ್ಕೆ ಹೆರಿಗೆ ಮಾಡುವುದಾಗಿ ವೈದ್ಯರೇ ಹೇಳಿರುವಾಗ ಒಳ್ಳೆ ಸಮಯದಲ್ಲೇ ಮಾಡಿಸಿಕೊಳ್ಳುವುದು ಸೂಕ್ತ’ ಎಂಬ ಅಭಿಪ್ರಾಯ ತಿಳಿಸಿ, ಒಳ್ಳೆ ಸಮಯ ಗುರುತಿಸುವ
ಜವಾಬ್ದಾರಿಯನ್ನು ತನ್ನ ತಂದೆಗೆ ನೀಡಿದಳು.

ಮಗಳಿಗೆ ಕರೆ ಮಾಡಿದ ಯುವತಿಯ ತಂದೆ, ನಿರ್ದಿಷ್ಟ ಕಾಲಾವಧಿ ಸೂಚಿಸಿ, ‘ಆ ವೇಳೆಯಲ್ಲಿ ಹೆರಿಗೆ ನಡೆದರೆ ಮಗು ಒಳ್ಳೆಯ ನಕ್ಷತ್ರದಲ್ಲಿ ಜನಿಸಲಿದೆ ಎಂದು ಅಯ್ಯನವರು ತಿಳಿಸಿದ್ದಾರೆ, ವೈದ್ಯರಿಗೆ ಅದೇ ಸಮಯ ತಿಳಿಸಿ’ ಎಂದರು. ‘ಮಾವನಿಗೆ ಇಂಥದ್ದರಲ್ಲೆಲ್ಲ ನಂಬಿಕೆಯಿಲ್ಲ. ಅಪ್ಪ ತಿಳಿಸಿದ ಸಮಯಕ್ಕೆ ಹೆರಿಗೆ ಮಾಡಿಸಿಕೊಳ್ತೀನಿ’ ಎಂದು ಯುವತಿ ಹೇಳಿದಳು.

ಯುವತಿಯ ಮಾವನ ಹಾಗೆ, ತನ್ನ ಬಳಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ತಿಳಿವಳಿಕೆ ಮೂಡಿಸುವ ಜವಾಬ್ದಾರಿ ನಿರ್ವಹಿಸಬಹುದಾಗಿದ್ದ ವೈದ್ಯರು, ಹಾಗೇಕೆ ಮಾಡಲಿಲ್ಲ? ‘ನಾವು ತಿಳಿಸಿದ ಸಮಯಕ್ಕೆ ಸರಿಯಾಗಿ ಮಗು ಹುಟ್ಟುವ ಹಾಗೆ ಈ ಡಾಕ್ಟ್ರು ನೋಡಿಕೊಳ್ತಾರೆ’ ಎನ್ನುವ ಬಾಯಿ ಪ್ರಚಾರದಿಂದ ತಮಗಾಗುವ ಅನುಕೂಲ ಹಾಗೆ ಹೇಳದಿರುವಂತೆ ಅವರನ್ನು ತಡೆಯುತ್ತಿದೆಯೇ? ತಮ್ಮ ಬಳಿ ಚಿಕಿತ್ಸೆಗೆ ಬರುವವರ ನಂಬಿಕೆಗಳಿಗೆ ಗಾಸಿ ಮಾಡದೆ ಹೋದರೂ ಅದನ್ನೇ ಎತ್ತಿ ಹಿಡಿಯುವ ಉತ್ಸಾಹ
ತೋರಬಾರದಲ್ಲವೇ?

ಮೊದಲೆಲ್ಲ ಟಿ.ವಿ. ವಾಹಿನಿಗಳ ಮೂಲಕ ವಾಸ್ತುತಜ್ಞನಾಗಿ ಸರಳ ಮಾರ್ಗದಲ್ಲಿ ಹೊರಹೊಮ್ಮಿದ ವ್ಯಕ್ತಿಯ ಕುರಿತು ಅಸಮಾಧಾನ ಸೂಚಿಸುತ್ತ, ‘ಇವರಿಂದಾಗಿ ಜನರ ನೆಮ್ಮದಿ ಹಾಳು. ಗಾಳಿ-ಬೆಳಕು ಚೆನ್ನಾಗಿ ಬರುವಂತೆ ಮನೆ ವಿನ್ಯಾಸ ಮಾಡಿದರೆ ಸಾಕು. ಅದೇ ವಾಸ್ತು’ ಎನ್ನುತ್ತಿದ್ದ ಸಿವಿಲ್ ಎಂಜಿನಿಯರ್ ಆಗಿರುವ ಸ್ನೇಹಿತ, ಇದೀಗ ತನ್ನದೇ ಗೃಹ ವಿನ್ಯಾಸ ಮತ್ತು ನಿರ್ಮಾಣ ಸಂಸ್ಥೆ ಹೊಂದಿದ್ದಾನೆ. ಅವನ ಕಚೇರಿಯ ಗೋಡೆಯ ಮೇಲೆ ಎದ್ದು ಕಾಣುವ ವಾಕ್ಯ ‘ವಾಸ್ತು ಪ್ರಕಾರ ಮನೆ ವಿನ್ಯಾಸ ಮಾಡಿಕೊಡುತ್ತೇವೆ’ ಎನ್ನುವುದೇ ಆಗಿದೆ. ಈ ಬದಲಾವಣೆಗೆ ಕಾರಣ ವೇನೆಂದು ವಿಚಾರಿಸಿದರೆ, ‘ನಮ್ಮ ಬುದ್ಧಿಮಾತು ಕೇಳುವ ಸ್ಥಿತಿಯಲ್ಲಿ ಜನ ಇಲ್ಲ. ಹಾಗಾಗಿ ನಾವೂ ಈ ಢೋಂಗಿ ವಾಸ್ತು ತಜ್ಞರನ್ನೇ ಹಿಂಬಾಲಿಸುತ್ತಿದ್ದೇವೆ’ ಅನ್ನುವ ಸಬೂಬು ನೀಡುತ್ತಾನೆ.

ಸಿಜೇರಿಯನ್ ಹೆರಿಗೆಗೆ ಒಳ್ಳೆ (?) ದಿನ ಮತ್ತು ಸಮಯ ಆಯ್ದುಕೊಳ್ಳಲು ಗರ್ಭಿಣಿ ಹಾಗೂ ಆಕೆಯ ಕಡೆಯವರಿಗೆ ಅವಕಾಶ ಕಲ್ಪಿಸುವ ವೈದ್ಯರು, ವಾಸ್ತು ಪ್ರಕಾರ ವಿನ್ಯಾಸ ಮಾಡುವುದಾಗಿ ಆಶ್ವಾಸನೆ ನೀಡುವ ಸಿವಿಲ್ ಎಂಜಿನಿಯರ್‌ಗಳು ಗ್ರಾಹಕರನ್ನು ಸಂತೃಪ್ತಗೊಳಿಸುವುದರಲ್ಲಿ ತಮ್ಮ ಹಿತ ಅಡಗಿದೆ ಎನ್ನುವ ಮಾರುಕಟ್ಟೆ ಸೂತ್ರಕ್ಕೆ ತಲೆಬಾಗುತ್ತಿರುವರೇ? ಹಾಗಾದರೆ ತರ್ಕಕ್ಕೆ ಮಾರುಕಟ್ಟೆ ಇಲ್ಲವೇ?

ತನ್ನ ಸಹಜ ತಿಳಿವಳಿಕೆಯಿಂದಾಗಿಯೇ ವೈಜ್ಞಾನಿಕ ವಾಗಿ ಆಲೋಚಿಸಬಲ್ಲ ಮಾವನ ಮಾತು ಗರ್ಭಿಣಿ ಯುವತಿಗೆ ಅಪಥ್ಯವಾದಂತೆ, ಇಂದು ತಾರ್ಕಿಕವಾಗಿ ಆಲೋಚಿಸುವವರು, ವೈಚಾರಿಕ ಮನೋಭಾವ ಹೊಂದಿದವರು ಸಮಾಜಕ್ಕೆ ಅಪಥ್ಯ ಆಗತೊಡಗಿ
ದ್ದಾರೆಯೇ? ‘ಬುದ್ಧಿಜೀವಿ’ ಎಂಬ ಪದಕ್ಕೆ ಕಳೆದ ಒಂದು ದಶಕದಿಂದೀಚೆಗೆ ದಕ್ಕಿರುವ ಕುಖ್ಯಾತಿ ಗಮನಿಸಿದರೆ, ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಕಷ್ಟವೇನಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.