ADVERTISEMENT

ಸಂಗತ: ತುಂತುರು... ಪ್ರೀತಿ ಹನಿಯ ಕಾರುಬಾರು

ಮಲೆನಾಡಿನಲ್ಲೀಗ ಮಳೆಗಾಲದ ಸೊಗಸು, ಭೂಮಿಗಿಳಿದ ಈ ಮಾಯಾ ಲೋಕದಲ್ಲಿ ಕಾಮನಬಿಲ್ಲಿಗೆ ಬಣ್ಣಗಟ್ಟುವ ಸಂಭ್ರಮ

ಸತೀಶ್ ಜಿ.ಕೆ. ತೀರ್ಥಹಳ್ಳಿ
Published 30 ಜೂನ್ 2021, 21:23 IST
Last Updated 30 ಜೂನ್ 2021, 21:23 IST
   

ಮತ್ತೆ ಶುರುವಾಗಿದೆ ಮುಂಗಾರು, ಮತ್ತೊಮ್ಮೆ ತೋಯುತ್ತಿದೆ ಮಲೆನಾಡು... ಅದು ಮಾನ್ಸೂನ್ ಮಾರುತಗಳು ನೈರುತ್ಯ ದಿಕ್ಕಿನಿಂದ ಹೊತ್ತು ತಂದ ಮಳೆರಾಯನ ಸಂದೇಶ, ಮಳೆಕಾಡಿನಲ್ಲೀಗ ಅದರದೇ ಚಿಟಪಟ... ಒಮ್ಮೊಮ್ಮೆ ಭೋರ್ಗರೆತ...

ಮಳೆಯೆಂದರೆ ಅದು ಆಕಾಶ- ಭೂಮಿ ನಡುವಿನ ಆಪ್ತ ಅನುಸಂಧಾನ. ಭೂರಮೆಗೀಗ ಮಳೆಯೆಂಬ ಅಮೃತಧಾರೆಯ ಹನಿಹನಿ ಸಿಂಚನ. ಅಲ್ಲಿ ಜಲಬಿಂದುವಿನ ಸ್ಪರ್ಶಕ್ಕೆ ನೆಲದ ಬೇರುಗಡ್ಡೆಗಳಿಗೆಲ್ಲಾ ಹಸಿರಾಗುವ ಹರುಷ. ಮುಂಗಾರಿಗೆ ಕಾತರಿಸುವ ಮನಸುಗಳ ಪಾಲಿಗದು ಮುಗಿಯದ ಹಬ್ಬ, ಮಳೆವೈಭವದಲ್ಲಿ ಮಿಂದೇಳುವ ಮೈಮನಸುಗಳಿಗೆ ಹಿತಾನುಭವ. ಕಾಡಂಚಲ್ಲಿ ಕಿವಿಗಳ ಮೇಲೆ ಜೀರುಂಡೆ ಗಳ ಮುಗಿಯದ ತೋಂ... ತನನ ಗಾನ... ನಿಜಕ್ಕೂ ಮಳೆಯೆಂಬುದು ಪ್ರಕೃತಿಯ ಜೀವಂತಕಾವ್ಯ.

ಮಲೆನಾಡಿನಲ್ಲಂತೂ ಮಳೆಗಾಲದ ಸೊಗಸೇ ಚಂದ. ವರ್ಷಾಭಿಷೇಕಕ್ಕಾಗಿ ವರ್ಷಗಟ್ಟಲೆ ಕಾಯುವ, ಮಾಯುವ, ಬೀಗುವ ಬೆರಗು ಮಳೆಕಾಡಿನದ್ದು. ಇಲ್ಲೀಗ ವಾರದಿಂದಲೂ ಪೂರ್ತಿ ಹಗಲುಗತ್ತಲು, ಆವತ್ತಿಂದ ಕಳೆದುಹೋದ ಸೂರ್ಯನ ಸುಳಿವಿಲ್ಲ. ಮೇ ತಿಂಗಳು ಕಳೆದರೆ ಸಾಕು, ಶುರುವಾಗುತ್ತದೆ ಋತುಮಾನಗಳ ಚಲನೆಯ ರುಜುವಾಗಿ ಪ್ರಕೃತಿಯಲ್ಲೊಂದು ಗುರುತರ ಸ್ಥಿತ್ಯಂತರ. ಅಲ್ಯಾವುದೋ ಜೀವಜಂತುವಿಗೆ ಮುದುಡಿಕೊಂಡು ಬೆಚ್ಚನೆಯ ಬಿಲದೊಳಗೆ ಸೇರಿಕೊಳ್ಳುವ ಅವಸರ, ಇನ್ಯಾವುದಕ್ಕೋ ಗೂಡಿನಿಂದ ಮೈಮುರಿದು ಹೊರಬರಲು ಕಾತರ, ಹೋದವರ್ಷ ಕಣ್ಮರೆಯಾಗಿದ್ದ ಬೇಲಿಸಾಲಿನ ಡೇಲಿಯ ಗಡ್ಡೆಗಳಿಗೆ ಮತ್ತೆ ಜೀವತಳೆಯುವ ಕಾಲ...

ADVERTISEMENT

ಹೌದು, ಮುಂಗಾರಿನಲ್ಲಿ ಮುಗಿಲ ತುಂತುರು ನೆಲತಾಕುವ ಹೊತ್ತಿಗೆ ಹೊಲದ ರೈತಾಪಿ ಮೈಮನಸ್ಸು ಗಳಲ್ಲೊಂದು ವಿದ್ಯುತ್‌ಸಂಚಾರ ಶುರುವಾಗಿರುತ್ತದೆ. ತಾವು ಹದಗೊಳಿಸುವ ನೆಲದಲ್ಲಿ ಊರುವ ಭರವಸೆಯ ಬೀಜಗಳು ತೇವವುಂಡು ಮೊಳಕೆಯೊಡೆಯುವ ಹೊತ್ತಿದು. ಆಗುಂಬೆ ಎಂಬ ಪಶ್ಚಿಮಘಟ್ಟದ ನಿತ್ಯಬೆರಗು ಈಗ ಮುಂಗಾರಿನ ದೃಶ್ಯವೈಭವಕ್ಕೆ ಸಾಕ್ಷಿಯಾಗಿದೆ. ಮಳೆಯ ಚೆಲುವು ಒಂದು ಬಗೆಯಾದರೆ ಮಳೆಹೊಯ್ದು ಹೋದ ಮೇಲಿನದ್ದು ನಗು ನಿಲ್ಲಿಸಿ ಕಣ್ಣು ಮಿಟುಕಿಸುವ ಮಗುವಿನ ಹಾಗೆ, ಎದುರಿನವರನ್ನು ಕಾಣಲಾಗದ ಮಂಜಿನ ಮುಸುಕು. ಜೋರುಮಳೆಯಲ್ಲಿ ನಿತ್ಯಹರಿದ್ವರ್ಣವನ್ನು ಹಾಸಿಹೊದ್ದ ಅಪ್ಪಟ ಚೆಲುವೆ ಆಗುಂಬೆಯ ಘಾಟಿಯೊಳಗೆ ನಾನು ದಿನಂಪ್ರತಿ ಎರಡೆರಡು ಬಾರಿ ನುಸುಳುವಾಗೆಲ್ಲಾ ತಣ್ಣನೆಯ ರೋಮಾಂಚನ. ಮೌನವನ್ನೂ ಧ್ಯಾನವನ್ನೂ ಆರಾಧಿಸುವ ಮನಸಿಗೆ ಅದು ಹಿತಕರ ಸಮಯ. ಅಲ್ಲಿಯ ಗೂಡಂಗಡಿಯಲ್ಲಿ ಹಬೆಯಾಡುವ ಕಾಫಿ ಹೀರಿ ಮಂಜಿನಹಾದಿಯಲ್ಲಿ ಮಂದಾನಿಲದೊಟ್ಟಿಗೆ ನಡೆದು ಹೋಗುವ ಮಜವೇ ಬೇರೆ. ಹಾವು ಸರಿದಂತಿರುವ ದಾರಿಯಲ್ಲಿ ವಕ್ರತೆಯೇ ಸೌಂದರ್ಯ!

ಕಾಡುಮೇಡು, ಗುಡ್ಡಬೆಟ್ಟಗಳನ್ನು ಸುತ್ತಿಬಳಸಿ ಏದುಸಿರಲ್ಲಿ ಬಸ್ಸು-ಕಾರುಗಳು ಮೇಲೇರುವ ಹಸಿರು ಹಾದಿಯದು. ಗಿರಿಶೃಂಗವನ್ನು ಚುಂಬಿಸುವ ಮುಗಿಲು. ಅಂಕುಡೊಂಕಿನ ಹಾದಿಗುಂಟ ಸಾಗುವ ಹೊತ್ತಲ್ಲಿ, ನೆತ್ತಿಮೇಲಿಂದ ಹತ್ತಾರು ನೀರಝರಿ... ಜುಳುಜುಳು ನಿನಾದ. ವರಕವಿಯನ್ನು ತೋಯ್ದಂತಹ ‘ಜಲಲ ಜಲಲ ಜಲಧಾರೆ...’ ಹೀಗೆ ಎಲ್ಲವೂ ಚೆಂದವೇ ಎಲ್ಲವೂ ಸ್ಫುಟವೇ. ಕಣ್ಣಳತೆಗೆ ನಿಲುಕದ ದಕ್ಷಿಣ ಕಾಶ್ಮೀರದ ಮಂಜು ಮುಸುಕಿದಾ ಕಾಡು.

ಮರವನ್ನಪ್ಪಿಕೂತ ಅಪರೂಪದ ಸಿಂಹಬಾಲದ ಕೋತಿಗಳು. ಮೈಕೊರೆಯುವ ಸುಳಿಗಾಳಿ, ಮುತ್ತಿಕ್ಕುವ ಮೋಡಗಳು, ಝುಮ್ಮೆನಿಸುವಾ ಚಳಿ, ಎದೆಯೊಳಗೆ ಎದ್ದುಕೂರುವ ಬೆಚ್ಚನೆ ನೆನಪು, ಕಣ್ತುಂಬಾ ತೇವಭಾವ...

ಇಂತಹದ್ದೊಂದು ಮಳೆಗಾಲವೆಂಬ ನೈಸರ್ಗಿಕ ದೃಶ್ಯವೈಭವದ ಬೆರಗಿಗೆ ಮನಸೋಲದವರ‍್ಯಾರು? ಹಸಿ ನೆಲಕ್ಕಿದು ಹಸಿರೂಡುವ ಕಾಲ, ಪಶುಪಕ್ಷಿಗಳಿಗೆಲ್ಲಾ ಶೃಂಗಾರದ ಸಮಯ. ಹಾದಿಬದಿಯಲ್ಲಿ ತತ್ತಿಯೊಡೆದು ಮೆರವಣಿಗೆ ಹೊರಡುವ ಥರಥರದ ಹುಳುಜಂತುಗಳು, ಬೆಳಗಾಗುವಷ್ಟರಲ್ಲಿ ಪೊದೆಯೊಳಗೆ ಪುಟಿದೇಳುವ ರಾಶಿ ಅಣಬೆ. ಈ ಮಳೆಯೆಂಬ ಮಾಯಾವಿಗೆ ಅಲ್ಲೆಲ್ಲೋ ನೆಲವ ಹದಗೊಳಿಸಿ ಬೀಜದೊಳಗೆ ಮೊಳೆವ ಕಾತರ. ಮತ್ತೆಲ್ಲೋ ಚಿಪ್ಪಿನೊಳಗೆ ಮುತ್ತಾಗುವ ಸಡಗರ. ಹೊಂಬಿಸಿಲಿಗೊಂದು ಹೂಮಳೆ ಚೆಲ್ಲಿ ಕಾಮನಬಿಲ್ಲಿಗೆ ಬಣ್ಣಗಟ್ಟುವ ಸಂಭ್ರಮ... ಒಟ್ಟಾರೆ ನಿಜಕ್ಕೂ ಮಳೆಗಾಲ ಅನ್ನುವುದು ಭೂಮಿಗಿಳಿದ ಮಾಯಾಲೋಕ.

ಬದುಕು ನಿಂತ ನೀರಲ್ಲ ಅನ್ನುವ ಮಾತಿದೆ. ಅಂದಹಾಗೆ ನೀರು ಎಂದೂ ಒಂದೆಡೆ ನಿಂತು ಕೊಂಡಿಲ್ಲ! ಕಡಲ ನೀರಿಗೆ ಮೇಗಡೆ ಹಾರಿ ಮುಗಿಲಾಗುವಾಸೆ. ಮುಗಿಲಿಗೋ... ಜಾರಿ ಮಳೆಯಾಗಿ ಹನಿಯಾಗಿ ನೆಲತಾಕುವಾಸೆ. ನೆಲದ ಹನಿಹನಿಗೂ ಓಡಿಓಡಿ ಕಡಲಾಗುವಾಸೆ. ಚಮತ್ಕಾರವೆನಿಸುತ್ತದೆ ಈ ಚಕ್ರೀಯ ಚಲನೆ. ಶಾಖದೊಟ್ಟಿಗೆ ನೀರಿನದ್ದು ಸ್ಥಿತ್ಯಂತರ ಗೊಳ್ಳುವ ಜಮಾನ. ಹಿಮಗಲ್ಲಾಗಿ ಘನೀಭವಿಸುವ, ಕರಗಿ ಹರಿದು ನದಿಯಾಗಿ ಸಾಗಿ, ಆರಿ ಆವಿಯಾಗಿ ಮೇಲೇರುವಂಥಾ ಬಹುವಿಧದ ಯಾನ. ಸೃಷ್ಟಿ ಸಂದೇಶವೂ ಅದೇ. ಚಲನೆಯೇ ಬದುಕು.

ಹಾಗಾಗಿ ಮಳೆಯಲ್ಲಿ ಮುದಗೊಳ್ಳುವಾಗೆಲ್ಲಾ ಮನಸು ಬಯಸುವುದು... ಎಲ್ಲಿಯದೋ ಮಾರುತಗಳು ನಮ್ಮೂರಿಗೆ ಹೊತ್ತುತರುವ ಮುಂಗಾರಿನ ಸೊಬಗು ಹೀಗೇ ಹಸಿಹಸಿಯಾಗಿರಲಿ. ಮಲೆನಾಡು, ಮಳೆಕಾಡು ಎಂದಿಗೂ ಹಸಿರಾಗಿಯೇ ಇರಲಿ. ಪ್ರಕೃತಿಪ್ರೀತಿಯ ಭವ್ಯ ಕುರುಹಾಗಿ ಮುಂಗಾರು ತುಂತುರು ಎಲ್ಲೆಡೆಯೂ ಹನಿಸುತಿರಲಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.