ADVERTISEMENT

ಖ್ಯಾತನಾಮರ ಹೆಸರಿಟ್ಟು ಮೇಲ್ಪಂಕ್ತಿಯಾಗಲಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 19:30 IST
Last Updated 30 ಆಗಸ್ಟ್ 2021, 19:30 IST

ಸರ್ಕಾರ ಏನೇ ಮಾಡಿದರೂ ಅದನ್ನು ವಿವೇಚನೆ ಇಲ್ಲದೆ ಸಮರ್ಥಿಸಲು ಕೆಲವರು ತುದಿಗಾಲಲ್ಲಿ ನಿಂತಿರುತ್ತಾರೆ. ಎ.ಸೂರ್ಯಪ್ರಕಾಶ ಅವರ ಅಂಕಣ ಬರಹ (ಪ್ರ.ವಾ., ಆ. 24) ಇದಕ್ಕೊಂದು ತಾಜಾ ಉದಾಹರಣೆ. ‘ರಾಜೀವ್‌ ಗಾಂಧಿ ಖೇಲ್ ರತ್ನ’ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ‘ಮೇಜರ್ ಧ್ಯಾನಚಂದ್ ಖೇಲ್ ರತ್ನ’ ಎಂದು ಬದಲಿಸಿರುವುದನ್ನು ಅರಗಿಸಿಕೊಳ್ಳಲು ಕಾಂಗ್ರೆಸ್ ಪಕ್ಷಕ್ಕೆ ಕಷ್ಟವಾಗುತ್ತಿದೆ ಎಂದಿದ್ದಾರೆ. ಆದರೆ ಧ್ಯಾನಚಂದ್ ಹೆಸರಿನ ಕ್ರೀಡಾ ಪ್ರಶಸ್ತಿಯೊಂದು ಈಗಾಗಲೇ ಇರುವಾಗ ಇನ್ನೊಂದು ಪ್ರಶಸ್ತಿಗೆ ಅವರ ಹೆಸರಿಡುವ ಅಗತ್ಯವೇನಿತ್ತು?

ನಿಜ, ಕಾಂಗ್ರೆಸ್ ಪಕ್ಷದ ನಿರಂತರ ಆಳ್ವಿಕೆಯಲ್ಲಿ ದೇಶದ ಪ್ರಮುಖ ಸ್ಥಳಗಳಿಗೆ ನೆಹರೂ, ಇಂದಿರಾ ಗಾಂಧಿ ಕುಟುಂಬದ ಹೆಸರುಗಳನ್ನೇ ಇಟ್ಟಿರುವುದು ದುರಂತ. ಆದರೆ ಹೊಸ‌ ಸ್ಥಳ, ಪ್ರಶಸ್ತಿಗಳಿಗೆ ಇತರ ಪ್ರಸಿದ್ಧ ವ್ಯಕ್ತಿಗಳ ಹೆಸರಿಡುವ ಮೂಲಕ ಮೇಲ್ಪಂಕ್ತಿಯಾಗಬೇಕೆ ವಿನಾ ಈ ರೀತಿ ಇರುವ ಹೆಸರುಗಳನ್ನೇ ಬದಲಿಸುವ ಮೂಲಕ ಅಲ್ಲ.

ಸುವರ್ಣ ಚತುಷ್ಪಥ ರಸ್ತೆಗೆ ಇಟ್ಟಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು, ಹೈದರಾಬಾದ್ ವಿಮಾನ ನಿಲ್ದಾಣಕ್ಕಿದ್ದ ಎನ್.ಟಿ.ರಾಮರಾವ್ ಅವರ ಹೆಸರನ್ನು ಕಾಂಗ್ರೆಸ್ ಪಕ್ಷ ಬದಲಿಸಿದ್ದು ಪ್ರಮಾದ. ನಿರಂತರವಾಗಿ ಮುಂದುವರಿಯುವ ಯೋಜನೆ, ಪ್ರಶಸ್ತಿಗಳಿಗೆ ನಿರ್ದಿಷ್ಟ ರಾಜಕೀಯ ಪಕ್ಷದ ನಾಯಕರ ಹೆಸರನ್ನು ಇಡುವುದು ಸರಿಯಲ್ಲ. ಇಟ್ಟರೆ ಅವು ಅನ್ಯ ಪಕ್ಷಗಳ ಆಡಳಿತದಲ್ಲಿ ರೋಗಗ್ರಸ್ತವಾಗುತ್ತವೆ. ಇಂದಿರಾ ಕ್ಯಾಂಟೀನ್‌ ಆ ಗತಿ ಕಂಡಿದೆ. ಗುಜರಾತಿನ ವಲ್ಲಭಭಾಯಿ ಪಟೇಲ್ ಕ್ರೀಡಾಂಗಣಕ್ಕೆ ಈಚೆಗೆ ನರೇಂದ್ರ ಮೋದಿಯವರ ಹೆಸರು ಇಟ್ಟದ್ದು ಏಕೆ ಎಂದು ಸೂರ್ಯಪ್ರಕಾಶ ಅವರು ಉತ್ತರಿಸುವರೇ?

-ಎನ್.ಎಮ್.ಕುಲಕರ್ಣಿ, ಹೆಗ್ಗೋಡು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.