ADVERTISEMENT

ಡೆಲ್ಲಿ ಕ್ಯಾಪಿಟಲ್ಸ್‌ ಉತ್ತಮ ಸಾಧನೆಯ ನಿರೀಕ್ಷೆಯಲ್ಲಿ ರಿಕಿ ಪಾಂಟಿಂಗ್

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 9:38 IST
Last Updated 16 ಸೆಪ್ಟೆಂಬರ್ 2021, 9:38 IST
ಶ್ರೇಯಸ್ ಅಯ್ಯರ್ ಮತ್ತು ರಿಕಿ ಪಾಂಟಿಂಗ್ 
ಶ್ರೇಯಸ್ ಅಯ್ಯರ್ ಮತ್ತು ರಿಕಿ ಪಾಂಟಿಂಗ್    

ದುಬೈ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಮೊದಲಾರ್ಧದಲ್ಲಿ ನಾವೇನು ಸಾಧನೆ ಮಾಡಿದ್ದೆವು ಎನ್ನುವುದು ಮುಖ್ಯವಲ್ಲ. ಮುಂದಿನ ಹಂತದಲ್ಲಿ ಮಾಡುವ ಸಾಧನೆಯೇ ಮಹತ್ವದ್ದಾಗಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ.

ಭಾನುವಾರ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ದ್ವಿತೀಯಾರ್ಧದ ಟೂರ್ನಿಯು ಆರಂಭವಾಗಲಿದೆ. ಕಳೆದ ಏಪ್ರಿಲ್‌–ಮೇನಲ್ಲಿ ಭಾರತದಲ್ಲಿ ಆಯೋಜನೆಗೊಂಡಿದ್ದ ಟೂರ್ನಿಯಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಿದ್ದರಿಂದ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಇದೀಗ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ನಲ್ಲಿ ಟೂರ್ನಿಯ ಉಳಿದ ಭಾಗವು ನಡೆಯಲಿದೆ.

‘ಮೊದಲಾರ್ಧದ ಟೂರ್ನಿ ನಡೆದು ನಾಲ್ಕು ತಿಂಗಳುಗಳು ಗತಿಸಿವೆ. ಈ ಅವಧಿಯಲ್ಲಿ ಒಂದಿಷ್ಟು ಉತ್ತಮ ಕ್ರಿಕೆಟ್ ಆಡುವ ಅವಕಾಶ ಆಟಗಾರರಿಗೆ ಲಭಿಸಿದೆ. ಆದ್ದರಿಂದ ಈಗ ಉತ್ತಮ ಆರಂಭ ಮಾಡುವ ಭರವಸೆ ಇದೆ’ ಎಂದು ಪಾಂಟಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಡೆಲ್ಲಿ ತಂಡವು ಮೊದಲಾರ್ಧದ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎಂಟು ಪಂದ್ಯಗಳನ್ನು ಆಡಿ ಆರರಲ್ಲಿ ಗೆದ್ದಿದೆ.

‘ಈ ಬಾರಿಯ ಪೂರ್ವಸಿದ್ಧತಾ ಶಿಬಿರದಲ್ಲಿ ತಂಡದ ಆಟಗಾರರು ಉತ್ತಮ ಸಾಮರ್ಥ್ಯ ತೋರಿದ್ದಾರೆ. ಅಲ್ಲದೇ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಉತ್ಸುಕರಾಗಿದ್ದಾರೆ. ತಂಡದೊಂದಿಗೆ ಕಾರ್ಯನಿರ್ವಹಿಸಲು ಹರ್ಷವೆನಿಸುತ್ತಿದೆ. ಇದು ವೃತ್ತಿಜೀವನದ ಸುಮಧುರ ಸಮಯಗಳಲ್ಲಿ ಒಂದು’ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

‘ಶ್ರೇಯಸ್‌ ಅಯ್ಯರ್ ಗಾಯದಿಂದ ಚೇತರಿಸಿಕೊಂಡು ಮರಳಿದ್ದಾರೆ. ತರಬೇತಿ ಶಿಬಿರದಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಅವರೊಬ್ಬ ವಿಶ್ವದರ್ಜೆಯ ಆಟಗಾರ. ಈ ಋತುವಿನಲ್ಲಿ ಹೆಚ್ಚು ರನ್‌ಗಳನ್ನು ಪೇರಿಸುವ ನಿರೀಕ್ಷೆ ಮೂಡಿಸಿದ್ದಾರೆ’ ಎಂದರು.

ಸೆ 22ರಂದು ಡೆಲ್ಲಿ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅಭಿಯಾನ ಆರಂಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.