ADVERTISEMENT

ಸ್ನೇಹಿತರ ದಿನದಂದು ವಿಡಿಯೋ ಹಂಚಿದ ಯುವಿ: ಧೋನಿ, ಕೊಹ್ಲಿ ಎಲ್ಲಿ ಎಂದ ನೆಟ್ಟಿಗರು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2021, 10:54 IST
Last Updated 1 ಆಗಸ್ಟ್ 2021, 10:54 IST
ಜಾಹೀರ್ ಖಾನ್ ಜತೆ ಯುವರಾಜ್ ಸಿಂಗ್ (ಚಿತ್ರ ಕೃಪೆ – ಯುವರಾಜ್ ಸಿಂಗ್ ಪೋಸ್ಟ್ ಮಾಡಿರುವ ವಿಡಿಯೊದ ಸ್ಕ್ರೀನ್‌ಗ್ರ್ಯಾಬ್)
ಜಾಹೀರ್ ಖಾನ್ ಜತೆ ಯುವರಾಜ್ ಸಿಂಗ್ (ಚಿತ್ರ ಕೃಪೆ – ಯುವರಾಜ್ ಸಿಂಗ್ ಪೋಸ್ಟ್ ಮಾಡಿರುವ ವಿಡಿಯೊದ ಸ್ಕ್ರೀನ್‌ಗ್ರ್ಯಾಬ್)   

ವಿಶ್ವ ಸ್ನೇಹಿತರ ದಿನದ ಪ್ರಯುಕ್ತ ಖ್ಯಾತ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್ ಗೆಳೆಯರ ಜತೆಗಿನ ವಿಡಿಯೋ ಒಂದನ್ನು ಟ್ವೀಟ್ ಮಾಡಿದ್ದಾರೆ.

ಮಾಜಿ ಕ್ರಿಕೆಟಿಗರಾದ ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್, ಆಶಿಶ್ ನೆಹ್ರಾ, ಹರಭಜನ್ ಸಿಂಗ್, ಜಾಹೀರ್ ಖಾನ್, ಮೊಹಮ್ಮದ್ ಕೈಫ್, ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್, ರೋಹಿತ್ ಶರ್ಮಾ, ಇರ್ಫಾನ್ ಪಠಾಣ್ ಸೇರಿದಂತೆ ಹಲವು ಆಟಗಾರರ ಜತೆಗಿನ ಸಂಭ್ರಮದ ಕ್ಷಣಗಳನ್ನು ವಿಡಿಯೋದಲ್ಲಿ ಯುವರಾಜ್ ಹಂಚಿಕೊಂಡಿದ್ದಾರೆ.

ಲಕ್ಷಾಂತರ ಮಂದಿ ವಿಡಿಯೋ ವೀಕ್ಷಿಸಿದ್ದು, ಸಾವಿರಕ್ಕೂ ಹೆಚ್ಚು ಜನ ರಿಟ್ವೀಟ್ ಮಾಡಿದ್ದಾರೆ. 12 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ADVERTISEMENT

2011ರ ವಿಶ್ವಕಪ್ ವಿಜೇತ ತಂಡದ ನಾಯಕ ಎಂ.ಎಸ್. ಧೋನಿ ಮತ್ತು ಟೀಂ ಇಂಡಿಯಾದ ಹಾಲಿ ನಾಯಕ ವಿರಾಟ್ ಕೊಹ್ಲಿ ವಿಡಿಯೋದಲ್ಲಿ ಇಲ್ಲದಿರುವುದನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ.

‘ಉದ್ದೇಶಪೂರ್ವಕವಾಗಿಯೇ ನೀವು ವಿರಾಟ್ ಕೊಹ್ಲಿಯನ್ನು ಬಿಟ್ಟಿದ್ದೀರಿ’ ಎಂದು ತೆವಾಟಿಯನ್‌ ಪ್ಲಸ್ ಎಂಬ ಟ್ವಿಟರ್ ಖಾತೆಯಿಂದ ಪ್ರತಿಕ್ರಿಯಿಸಲಾಗಿದೆ.

‘ವಿಡಿಯೋದಲ್ಲಿ ವಿರಾಟ್ ಮತ್ತು ಮಹಿ ಇಲ್ಲ. ನಿಮ್ಮ ಕಳಪೆ ಫಾರ್ಮ್ ಹೊರತಾಗಿಯೂ 2018–19ರ ವರೆಗೆ ನಿಮ್ಮನ್ನು ತಂಡದಲ್ಲಿ ಉಳಿಸಿಕೊಂಡಿದ್ದವರು ಅವರು’ ಎಂದು ‘ಇಂಟ್ರಾಡೇ ಟ್ರೇಡರ್’ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

‘ಎಂ.ಎಸ್‌.ಧೋನಿ, ವಿರಾಟ್ ಅವರನ್ನು ಯಾಕೆ ಮಿಸ್ ಮಾಡಿದಿರಿ, ಅವರು ಸ್ನೇಹಿತರಲ್ಲವೇ? ನನ್ನ ಕ್ರಿಕೆಟ್ ತಿಳಿವಳಿಕೆ ಪ್ರಕಾರ ಅವರು ನಿಮ್ಮ ಸ್ನೇಹಿತರು. ಯುವರಾಜ್ ಯಾಕೆ ಈ ರೀತಿ ಮಾಡಿದರು?’ ಎಂದು ಹರೀಶ್ ಕುಮಾರ್ ಎಂಬವರು ಟ್ವೀಟ್ ಮಾಡಿದ್ದಾರೆ.

ರೋಹಿತ್ ಎಂಬವರು ಯುವರಾಜ್ ಅವರು ಧೋನಿ ಜತೆ ಬೈಕ್‌ನಲ್ಲಿ ತೆರಳುತ್ತಿರುವ ಚಿತ್ರ ಪ್ರಕಟಿಸಿ, ಇದು ಮಿಸ್ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಯುವರಾಜ್ ಟ್ವೀಟ್‌ಗೆ ನೂರಾರು ಮಂದಿಯಿಂದ ಇಂಥ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.