ADVERTISEMENT

ರೋಜರ್ ಫೆಡರರ್ ಫ್ರೆಂಚ್ ಓಪನ್‌ನಿಂದ ಹಿಂದಕ್ಕೆ ಸರಿಯಲಿದ್ದಾರೆಯೇ ?

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 5:42 IST
Last Updated 6 ಜೂನ್ 2021, 5:42 IST
ರೋಜರ್ ಫೆಡರರ್
ರೋಜರ್ ಫೆಡರರ್   

ಪ್ಯಾರಿಸ್: ಪ್ರಸಕ್ತ ಸಾಗುತ್ತಿರುವ ಫ್ರೆಂಚ್ ಓಪನ್ 2021 ಟೆನಿಸ್ ಪಂದ್ಯಾವಳಿಯಲ್ಲಿ ನಾಲ್ಕನೇ ಸುತ್ತಿಗೆ ಪ್ರವೇಶಿಸಿರುವ ಹೊರತಾಗಿಯೂ ದಾಖಲೆಯ 20 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್, ಈ ಬಾರಿಯ ಟೂರ್ನಿಯಿಂದ ಹಿಂಜರಿಯಲು ಸಿದ್ದರಿರುವುದಾಗಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಶನಿವಾರ ರಾತ್ರಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಎಂಟನೇ ಶ್ರೇಯಾಂಕಿತ ಫೆಡರರ್ ಅವರು, ಜರ್ಮನಿಯ ಡೊಮಿನಿಕ್ ಕೂಫರ್ ವಿರುದ್ಧ 7-6(5) 6-7(3) 7-6(4) 7-5ರ ಅಂತರದಲ್ಲಿ ಪ್ರಯಾಸದ ಗೆಲುವು ದಾಖಲಿಸಿದ್ದರು.

ಮೊಣಕಾಲಿನ ಶಸ್ತ್ರಚಿಕಿತ್ಸೆಯ ಬಳಿಕ ಕಳೆದ ಮೂರು ವರ್ಷಗಳಲ್ಲಿ ಫೆಡರರ್, ಆರನೇ ಪಂದ್ಯವನ್ನಾಡಿದ್ದಾರೆ.39ರ ಹರೆಯದಚಾಂಪಿಯನ್ ಆಟಗಾರನೀಗ ಫಿಟ್ನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದು, ತಿಂಗಳಾಂತ್ಯದಲ್ಲಿ ಬಹುನಿರೀಕ್ಷಿತ ವಿಂಬಲ್ಡನ್ ಟೂರ್ನಿಯಲ್ಲಿ ಭಾಗವಹಿಸುವುದನ್ನು ಎದುರು ನೋಡುತ್ತಿದ್ದಾರೆ.

ಮುಂದಿನ ಪಂದ್ಯ ಆಡಲು ಸಾಧ್ಯವೋ ಇಲ್ಲವೋ ಎಂಬುದು ತಿಳಿದಿಲ್ಲ. ನನ್ನ ದೈಹಿಕ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಈ ಹಂತದಲ್ಲಿ ಆಡುವುದನ್ನು ಮುಂದುವರಿಸಬೇಕೋ ಅಥವಾ ವಿಶ್ರಾಂತಿ ತೆಗೆದುಕೊಳ್ಳಬೇಕೇ ಎಂಬುದರ ಕುರಿತಾಗಿ ನಾನು ನಿರ್ಧರಿಸಬೇಕಿದೆ. ವಿಂಬಲ್ಡನ್ ಟೂರ್ನಿಗೂ ಇನ್ನು ಹೆಚ್ಚಿನ ಸಮಯವಿಲ್ಲ. ಹಾಗಾಗಿ ಅಪಾಯವನ್ನು ಆಹ್ವಾನಿಸದೇ ಎಚ್ಚರಿಕೆ ವಹಿಸಬೇಕಿದೆ ಎಂದಿದ್ದಾರೆ.

ತಮ್ಮ ವೃತ್ತಿ ಜೀವನದಲ್ಲಿ ಒಂದೇ ಒಂದು ಬಾರಿ ಮಾತ್ರ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಕಿರೀಟ (2009ರಲ್ಲಿ) ಗೆದ್ದಿರುವ ಫೆಡರರ್, ಈ ಬಾರಿಯ ನಾಲ್ಕನೇ ಸುತ್ತಿನ ಹೋರಾಟದಲ್ಲಿ ಒಂಬತ್ತನೇ ಶ್ರೇಯಾಂಕದ ಇಟಲಿಯ ಮ್ಯಾಟ್ಟೊ ಬೆರೆಟ್ಟಿನಿ ವಿರುದ್ಧ ಹೋರಾಟ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.