ADVERTISEMENT

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಡಿಜಿಟಲ್‌ಮಯ: ಪೋರ್ಟಲ್ ಮೂಲಕವೇ ಯೋಜನೆ ನಿರ್ವಹಣೆ

ಪಿಟಿಐ
Published 12 ಜೂನ್ 2020, 12:17 IST
Last Updated 12 ಜೂನ್ 2020, 12:17 IST
ರಾಷ್ಟ್ರೀಯ ಹೆದ್ದಾರಿ -ಸಾಂದರ್ಭಿಕ ಚಿತ್ರ
ರಾಷ್ಟ್ರೀಯ ಹೆದ್ದಾರಿ -ಸಾಂದರ್ಭಿಕ ಚಿತ್ರ    

ನವದೆಹಲಿ: ಕೊರೊನಾ ವೈರಸ್‌ ಸಾಂಕ್ರಾಮಿಕದ ಸಮಯದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಪೂರ್ಣ ಡಿಜಿಟಲ್‌ ಕಾರ್ಯಾಚರಣೆ ಅಳವಡಿಸಿಕೊಂಡಿರುವುದಾಗಿ ಶುಕ್ರವಾರ ಹೇಳಿದೆ.

ಕ್ಲೌಡ್‌ ಆಧಾರಿತ 'ಡೇಟಾ ಲೇಕ್‌ ಸಾಫ್ಟ್‌ವೇರ್‌' ಅಳವಡಿಸಿಕೊಳ್ಳುವ ಮೂಲಕ ನಿರ್ಮಾಣ ಕ್ಷೇತ್ರದಲ್ಲಿ ಪೂರ್ಣ ಡಿಜಿಟಲ್‌ ಆಗಿರುವ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅತ್ಯಾಧುನಿಕ ವಿಶ್ಲೇಷಣಾತ್ಮಕ ಸಾಮರ್ಥ್ಯ ಹೊಂದಿರುವ ಡೇಟಾ ಲೇಕ್‌ ಸಾಫ್ಟ್‌ವೇರ್‌, ಕಾಮಗಾರಿ ನಿಧಾನವಾಗಿರುವುದು, ಸಂಭವಿಸಬಹುದಾದ ವಿವಾದಗಳ ಕುರಿತು ಮುಂಚಿತವಾಗಿ ಎಚ್ಚರಿಕೆ ರವಾನಿಸುತ್ತದೆ. ಇದರಿಂದಾಗಿ ಸೂಕ್ತ ನಿರ್ಧಾರ ಕೈಗೊಳ್ಳಲು ಅನುವಾಗುತ್ತದೆ.

ADVERTISEMENT

ಹಿಂದಿನ ಮಾಹಿತಿ ಆಧರಿಸಿ ಹಣಕಾಸು ಪರಿಣಾಮಗಳ ಕುರಿತು ಅಂದಾಜಿಸುತ್ತದೆ. 'ಬಹುದೊಡ್ಡ ಪರಿವರ್ತನೆಯೊಂದಿಗೆ ಎನ್‌ಎಚ್‌ಎಐ ಪೂರ್ಣ ಡಿಜಿಟಲೀಕರಣಗೊಂಡಿದೆ. ಕೌಡ್‌ ಆಧಾರಿತ ಮತ್ತು ಕೃತಕ ಬುದ್ಧಿಮತ್ತೆ ಸಾಮರ್ಥ್ಯ ಹೊಂದಿರುವ ವಿಶ್ಲೇಷಣಾ ವ್ಯವಸ್ಥೆ–ಡೇಡಾ ಲೇಕ್‌ ಮತ್ತು ಯೋಜನೆ ನಿರ್ವಹಣಾ ಸಾಫ್ಟ್‌ವೇರ್‌' ಎಂದು ಹೇಳಿದೆ.

ಯೋಜನೆಗೆ ಸಂಬಂಧಿಸಿದ ದಾಖಲೆಗಳು, ಒಪ್ಪಂದ (ಗುತ್ತಿಗೆ) ನಿರ್ಧಾರಗಳು ಹಾಗೂ ಅನುಮತಿಗಳಿಗೆ ಸಂಬಂಧಿಸಿದ ಕಾರ್ಯಗಳು ಪೋರ್ಟಲ್‌ ಮೂಲಕ ಮಾತ್ರವೇ ನಡೆಯಲಿದೆ.

ಪ್ರಸ್ತುತ ಬಗೆಹರಿಯಬೇಕಾದ ದೊಡ್ಡ ಮೊತ್ತದ ಪ್ರಕರಣಗಳು ಉಳಿದಿವೆ. ಸಾಫ್ಟ್‌ವೇರ್‌ ಎಲ್ಲ ದಾಖಲೆಗಳನ್ನು ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸಿಡುವುದು ಹಾಗೂ ಪ್ರತಿ ಯೋಜನೆಗೆ ಪ್ರತ್ಯೇಕ ಐಡಿ ನೀಡುವುದರಿಂದ ಅಗತ್ಯವಿದ್ದಾಗ ಸುಲಭವಾಗಿ ಯೋಜನೆ ವಿವರ ಪಡೆದುಕೊಳ್ಳಬಹುದು. ನಿಗದಿತ ಸಮಯದಲ್ಲಿ ಯೋಜನೆ ಪೂರ್ಣಗೊಳ್ಳುವುದನ್ನು ಗಮನಿಸುವುದರಿಂದ ವಿವಾದಗಳು ಹಾಗೂ ದೂರುಗಳ ಸಾಧ್ಯತೆ ಕಡಿಮೆಯಾಗುವ ಭರವಸೆ ವ್ಯಕ್ತವಾಗಿದೆ.

ಈಗಾಗಲೇ ಎನ್‌ಎಚ್‌ಎಐ ಷೇರುದಾರರು, ಗುತ್ತಿಗೆದಾರರು, ಎಂಜಿನಿಯರ್‌ಗಳು ಡಿಜಿಟಲ್‌ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ. ಕೋವಿಡ್‌–19 ಪರಿಸ್ಥಿತಿಯಲ್ಲಿ ಭೌತಿಕ ಫೈಲ್‌ಗಳ ರವಾನೆ ನಡೆಸದೆ, ಸ್ಥಳದಿಂದ ಸ್ಥಳಕ್ಕೆ ಓಟಾಟ ನಡೆಸದೆಯೇ ಬಹುತೇಕ ಎನ್‌ಎಚ್‌ಎಐ ಸಿಬ್ಬಂದಿ ಕಾರ್ಯಾಚರಣೆ ನಡೆಸಬಹುದಾಗಿದೆ. ಡೇಟಾ ಲೇಕ್‌ ಸಾಫ್ಟ್‌ವೇರ್‌ ಬಳಕೆ ಕುರಿತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.