ADVERTISEMENT

ಶ್ರಮಿಕರಿಗೆ ₹1,610 ಕೋಟಿ | ಬಿಎಸ್‌ವೈ ಪ್ಯಾಕೇಜ್‌ನ ಪ್ರಮುಖ ಅಂಶಗಳು

​ಪ್ರಜಾವಾಣಿ ವಾರ್ತೆ
Published 7 ಮೇ 2020, 3:06 IST
Last Updated 7 ಮೇ 2020, 3:06 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ   
""

ಬೆಂಗಳೂರು: ಕೋವಿಡ್‌–19 ಲಾಕ್‌ಡೌನ್‌ ಸಂಕಷ್ಟದಿಂದ ಬಳಲಿ ಬೆಂಡಾಗಿರುವ ಶ್ರಮಿಕ ವರ್ಗಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ₹1,610 ಕೋಟಿ ಪ್ಯಾಕೇಜ್‌ ಪ್ರಕಟಿಸುವ ಮೂಲಕ ಸಂಕಷ್ಟದಲ್ಲಿರುವವರ ಕಣ್ಣೀರೊರೆಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಯಡಿಯೂರಪ್ಪ ‘ಒಂದೂವರೆ ತಿಂಗಳಿಂದ ಆದಾಯವಿಲ್ಲದೆ ಪರಿತಪಿಸುತ್ತಿದ್ದ ಲಕ್ಷಾಂತರ ಪುಷ್ಪ ಬೆಳೆಗಾರರು, ಆಟೊ ಮತ್ತು ಟ್ಯಾಕ್ಸಿ ಚಾಲಕರು, ಅಗಸರು, ಕ್ಷೌರಿಕ ವೃತ್ತಿಯವರು, ಕಟ್ಟಡ ಕಾರ್ಮಿಕರು ಮತ್ತು ನೇಕಾರರಿಗೆ ಈ ಪ್ಯಾಕೇಜ್‌ ಆಸರೆಯಾಗಲಿದೆ’ ಎಂದು ತಿಳಿಸಿದರು.

‘ಲಾಕ್‌ಡೌನ್‌ನ ನಿರ್ಬಂಧಗಳು ಇರುವುದರಿಂದ ಎಲ್ಲ ವರ್ಗದ ಜನ ಆದಾಯವಿಲ್ಲದೆ, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಂಕಷ್ಟವನ್ನು ಪರಿಹರಿಸುವ ಉದ್ದೇಶದಿಂದ ಪ್ಯಾಕೇಜ್‌ ಪ್ರಕಟಿಸುತ್ತಿದ್ದೇವೆ. ಫಲಾನುಭವಿಗಳ ಖಾತೆಗೆ ಒಂದು ವಾರದೊಳಗೆ ಹಣ ಪಾವತಿ ಆಗಲಿದೆ’ ಎಂದರು.

ADVERTISEMENT

ಹಣ್ಣು– ತರಕಾರಿಗೆ ಪ್ರತ್ಯೇಕ ಪ್ಯಾಕೇಜ್
‘ಹಣ್ಣು ಮತ್ತು ತರಕಾರಿ ಬೆಳೆದ ರೈತರಿಗೂ ಪ್ಯಾಕೇಜ್‌ ಪ್ರಕಟಿಸಲಾಗುವುದು. ನಷ್ಟದ ಪ್ರಮಾಣದ ಅಧ್ಯಯನ ನಡೆಸಲಾಗುತ್ತಿದೆ. ವರದಿಯ ಬಂದ ಬಳಿಕ ಹಣಕಾಸು ಇಲಾಖೆ ಜತೆ ಚರ್ಚಿಸಿ ಪ್ಯಾಕೇಜ್‌ ಘೋಷಿಸುವುದಾಗಿ’ ತಿಳಿಸಿದರು.

ಚಾಲಕರಿಗೆ ಪರಿಹಾರ: ಶೀಘ್ರ ಮಾರ್ಗಸೂಚಿ
ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ₹5,000 ಪರಿಹಾರ ನೀಡುವ ಸಂಬಂಧ ಮಾರ್ಗಸೂಚಿಯನ್ನು ಪ್ರಕಟಿಸಲಾಗು
ವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

‘ಚಾಲಕರು ಪರಿಹಾರದ ಹಣವನ್ನು ಪಡೆಯಲು ಬೆಂಗಳೂರಿಗೆ ಬರಬಾರದು. ನಮ್ಮ ಕಚೇರಿಗೂ ಅರ್ಜಿ ಹಾಕಬಾರದು. ಮಾರ್ಗಸೂಚಿ ಅನ್ವಯ ಎಲ್ಲ ಚಾಲಕರಿಗೆ ಪರಿಹಾರ ಮೊತ್ತವನ್ನು ತಲುಪಿಸಲಾಗುವುದು. ಯಾರೂ ಆತುರ ಬಿದ್ದು ಹಣ ವ್ಯರ್ಥ ಮಾಡುವುದು ಬೇಡ’ ಎಂದರು.

ನೇಕಾರರಿಗೆ ‘ಸಮ್ಮಾನ್‌’
ನೇಕಾರರ ₹109 ಕೋಟಿಸಾಲಾ ಮನ್ನಾ ಮಾಡಲಾ ಗುವುದು. ನೇಕಾರರ ಸಾಲ ಮನ್ನಾ ಯೋಜನೆಯಡಿ ಕಳೆದ ವರ್ಷವೇ ₹29 ಕೋಟಿ ಬಿಡುಗಡೆ ಮಾಡಲಾಗಿತ್ತು. ಉಳಿದ ₹80 ಕೋಟಿ ತಕ್ಷಣವೇ ಬಿಡುಗಡೆ ಮಾಡಲಾಗುವುದು. ನೇಕಾರರಿಗೆ ಹೊಸ ಸಾಲ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

2019 ರ ಜನವರಿ 1 ರಿಂದ 2019 ರ ಮಾರ್ಚ್‌ 31 ರೊಳಗೆ ₹1 ಲಕ್ಷದವರೆಗಿನ ಸಾಲವನ್ನು ಪಾವತಿಸಿರುವ ನೇಕಾರರಿಗೆ ಸಾಲದ ಮೊತ್ತ ಮರುಪಾವತಿಸಲಾಗುವುದು ಎಂದರು.

ಇದೇ ಮೊದಲ ಬಾರಿಗೆ ‘ನೇಕಾರ್‌ ಸಮ್ಮಾನ್‌’ ಎಂಬ ಹೊಸ ಯೋಜನೆ ಪ್ರಕಟಿಸಿದ್ದು, ಈ ಯೋಜನೆಯಡಿ 54 ಸಾವಿರ ಕೈಮಗ್ಗ ನೇಕಾರರಿಗೆ ಪ್ರತಿ ವರ್ಷ ತಲಾ ₹2,000 ಅವರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಘೋಷಿಸಿದರು.

ಕಟ್ಟಡ ಕಾರ್ಮಿಕರಿಗೆ:15.80 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಲ್ಲಿ 11.80 ಲಕ್ಷ ಕಾರ್ಮಿಕರಿಗೆ ತಲಾ ₹2,000 ನೀಡಲಾಗಿದ್ದು, ಉಳಿದ 4 ಲಕ್ಷ ಕಾರ್ಮಿಕರಿಗೆ ಅಷ್ಟೇ ಮೊತ್ತ ಪಾವತಿ. ಅಲ್ಲದೆ, ಹೆಚ್ಚುವರಿಯಾಗಿ ತಲಾ ₹3,000 ಪರಿಹಾರ ನೀಡಲಾಗುವುದು. ಕಟ್ಟಡ ಕಾರ್ಮಿಕರಿಗೆ ತಲಾ ₹5,000 ಸಿಕ್ಕಂತಾಗುತ್ತದೆ

ವಿದ್ಯುತ್‌ ಶುಲ್ಕ ರಿಯಾಯ್ತಿ
ಸಣ್ಣ, ಅತಿ ಸಣ್ಣ, ಮಧ್ಯಮ ಕೈಗಾರಿಕೆಗಳ ಎರಡು ತಿಂಗಳ ವಿದ್ಯುತ್ ಶುಲ್ಕದ ಫಿಕ್ಸೆಡ್‌ ಚಾರ್ಜ್‌ ಅನ್ನುಮನ್ನಾ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಬೃಹತ್‌ ಕೈಗಾರಿಕೆಗಳು ಫಿಕ್ಸ್‌ ಚಾರ್ಜ್‌ ಪಾವತಿಯನ್ನು ಎರಡು ತಿಂಗಳ ಬಳಿಕ ಮಾಡಬಹುದು. ಬಡ್ಡಿ ಮತ್ತು ದಂಡ ವಿಧಿಸುವುದಿಲ್ಲ ಎಂದರು.

ನಿಗದಿತ ಸಮಯದಲ್ಲಿ ವಿದ್ಯುತ್‌ ಬಿಲ್‌ ಪಾವತಿಸುವವರಿಗೆ ಶೇ 1ರಷ್ಟು ಪ್ರೋತ್ಸಾಹ ರಿಯಾಯ್ತಿ ನೀಡಲಾಗುವುದು. ವಿಳಂಬವಾಗಿ ಪಾವತಿ ಮಾಡುವವರಿಗೆ ವಿದ್ಯುತ್‌ ಬಿಲ್‌ನ ಮೊತ್ತದ ಮೇಲೆ ವಿಧಿಸುವ ಬಡ್ಡಿ ದರ ಕಡಿಮೆ ಮಾಡಲಾಗುವುದು. ಕಂದಾಯ ಬಾಕಿ ಮೊತ್ತವನ್ನು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಲಾಗುವುದು. ಕಂದಾಯ ಮೊತ್ತ ಪಾವತಿಸದಿರುವ ಗ್ರಾಹಕರಿಗೆ ಜೂನ್‌ 30 ರವರೆಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವುದಿಲ್ಲ ಎಂದರು.

ಇಂದಿನಿಂದ ಮದ್ಯ ದುಬಾರಿ: ₹ 2,200 ಕೋಟಿ ಆದಾಯ ನಿರೀಕ್ಷೆ
ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಎರಡೇ ದಿನಗಳಲ್ಲಿ ರಾಜ್ಯ ಸರ್ಕಾರ ಶೇ 11ರಷ್ಟು ಅಬಕಾರಿ ಸುಂಕ ಏರಿಸಿದೆ. ಇದರಿಂದ ಮದ್ಯದ ಬೆಲೆ ಇನ್ನಷ್ಟು ದುಬಾರಿ ಆಗಲಿದ್ದು ಪರಿಷ್ಕೃತ ದರ ಗುರುವಾರದಿಂದಲೇ ಜಾರಿಗೆ ಬರಲಿದೆ.

ಮದ್ಯದ ದರಗಳು 18 ಸ್ಲ್ಯಾಬ್‌ಗಳಲ್ಲಿ ಏರಿಕೆ ಆಗಲಿದೆ. ಶೇ 6 ಏರಿಕೆ ದರದಲ್ಲಿ ₹ 153 ಇದ್ದ ಮೊದಲ ಸ್ಲ್ಯಾಬ್‌ ಹೊಸ ದರದ ಪ್ರಕಾರ ₹ 179 ಆಗಲಿದೆ. ಅದೇ ರೀತಿ ₹ 3,572 ಇದ್ದ ಕೊನೆಯ ಸ್ಲಾಬ್‌ ಈಗ ₹ 4465ಕ್ಕೆ ಏರಲಿದೆ.

ದರಗಳನ್ನು ಶೇ 11ರಷ್ಟು ಏರಿಕೆ ಮಾಡಿರುವುದಾಗಿ ಸರ್ಕಾರ ಹೇಳಿದ್ದರೂ ಮೊದಲ ನಾಲ್ಕು ಸ್ಲ್ಯಾಬ್‌ಗಳು ಶೇ 17ರಷ್ಟು, 5ರಿಂದ 11ರವರೆಗೆ ಶೇ 21 ರಷ್ಟು ಮತ್ತು 12ರಿಂದ 18ರವರೆಗೆ ಶೇ 25ರಷ್ಟು ಏರಿಕೆಯಾಗಲಿದೆ.ಈ ಏರಿಕೆ ಕೇವಲ ಬ್ರಾಂದಿ, ವಿಸ್ಕಿ, ಜಿನ್‌ ರಮ್‌ಗಳಿಗೆ ಅನ್ವಯವಾಗುತ್ತದೆ. ಬಿಯರ್‌, ವೈನ್‌, ಶೇಂದಿ ಮತ್ತು ಫೆನ್ನಿಗಳಿಗೆ ಅನ್ವಯ ಆಗುವುದಿಲ್ಲ. ಒಂದು ಕ್ವಾರ್ಟರ್‌(180 ಎಂಎಲ್‌)ಗೆ ಕನಿಷ್ಠ ₹5 ಹೆಚ್ಚಾಗುತ್ತದೆ ಎಂದು ಮೂಲಗಳು ತಿಳಿಸಿವೆ

ರಾಜ್ಯ ಸರ್ಕಾರ 2020–21ರ ಬಜೆಟ್‌ನಲ್ಲಿ ಶೇ 6 ರಷ್ಟು ಅಬಕಾರಿ ಸುಂಕ ಏರಿಕೆ ಮಾಡಿತ್ತು. ಈಗ ಶೇ 11 ರಷ್ಟು ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿರುವ ಪರಿಣಾಮ ಒಟ್ಟು ಶೇ 17 ರಷ್ಟು ಏರಿಕೆ ಮಾಡಿದಂತಾಗಿದೆ. ಇದರಿಂದ ಒಟ್ಟು ₹2,200 ಕೋಟಿ ಹೆಚ್ಚುವರಿ ಆದಾಯ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.

ದರ ಏರಿಕೆಗೆ ವಿರೋಧ: ‘ಕೋವಿಡ್‌ ಸಂಕಷ್ಟದ ಸಮಯದಲ್ಲಿ ದರ ಏರಿಕೆ ಮಾಡಿರುವುದು ಸರಿಯಲ್ಲ. ಜನರಿಗೆ ದುಡಿಮೆ ಇಲ್ಲ. ಕಿಸೆಯಲ್ಲಿ ಹಣವಿಲ್ಲ. ಈ ಪರಿಸ್ಥಿತಿಯಲ್ಲಿ ಏರಿಕೆ ಮಾಡುವುದರಿಂದ ಅಕ್ರಮ ದಂಧೆ ಹೆಚ್ಚಲಿದೆ. ಕಳ್ಳಭಟ್ಟಿ ಹಾವಳಿ ಶುರುವಾಗಲಿದೆ’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್‌ ಹೆಗ್ಡೆ ಹೇಳಿದ್ದಾರೆ.

**

ಲಾಕ್‌ಡೌನ್‌ ಸಡಿಲಿಕೆ ಮಾಡಿದ ಮೂರೇ ದಿನಗಳಲ್ಲಿ ಇಷ್ಟು ದೊಡ್ಡ ಮೊತ್ತದ ಪರಿಹಾರ ಪ್ಯಾಕೇಜ್‌ ಪ್ರಕಟಿಸಿರುವ ಮೊದಲ ರಾಜ್ಯ ಕರ್ನಾಟಕ.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.