ADVERTISEMENT

ಅನ್ನದ ಅರಿವು

ವಿ.ಬಾಲಕೃಷ್ಣ ಶಿರ್ವ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST
ಅನ್ನದ ಅರಿವು
ಅನ್ನದ ಅರಿವು   

ಸುಮಾರು ಐದು ವರ್ಷಗಳ ಹಿಂದೆ `ಸಾವಯವ ಕೃಷಿ ಪರಿವಾರ~ ಪ್ರಯೋಗದ ಮುಖ್ಯಸ್ಥ ಅರುಣ್ ಅವರು ವೈಶಿಷ್ಟ್ಯಪೂರ್ಣ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರು. ಅದರ ಹೆಸರು `ಭತ್ತದ ತೊರೆ~. ಆ ಕಾರ್ಯಕ್ರಮದಲ್ಲಿ ಹತ್ತಾರು ಹಳ್ಳಿಗಳಿಗೆ ಪರಿವಾರದ ಕಾರ್ಯಕರ್ತರು ಹೋಗಿ 45ಕ್ಕೂ ಹೆಚ್ಚು ವಿವಿಧ ಬಗೆಯ ಬಿತ್ತನೆಯ ಬೀಜಗಳನ್ನು ಸಂಗ್ರಹಿಸಿದ್ದರು.

ಎರಡು ವಾರಗಳ ಹಿಂದೆ ಹಮ್ಮಿಕೊಂಡ ಮತ್ತೊಂದು ಅಭಿಯಾನದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ 20 ಪ್ರೌಢ ಶಾಲೆಗಳ 1000ಕ್ಕೂ  ಹೆಚ್ಚು ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.
 
ಈ ಅಭಿಯಾನದಲ್ಲಿ ಬೇಸಾಯ ಮೂಲದ ಗಾದೆಗಳು, ಒಗಟುಗಳ ಜೊತೆ ಹತ್ತಾರು ಭತ್ತದ ದೇಸಿ ತಳಿಗಳ ಬೀಜಗಳನ್ನು ಸಂಗ್ರಹಿಸಿದ್ದರು. ಈ ಪ್ರಯತ್ನಗಳಿಂದ 341ಕ್ಕೂ ಹೆಚ್ಚು ಭತ್ತದ ತಳಿಗಳನ್ನು ಸಂಗ್ರಹಿಸಲಾಗಿದೆ. ನಿಜಕ್ಕೂ ಇದು ಅತ್ಯುತ್ತಮ ಕಾರ್ಯ.

 ಕೃಷಿ ಪರಿವಾರ ಇತ್ತೀಚೆಗೆ ಹಮ್ಮಿಕೊಂಡ ಕಾರ್ಯಕ್ರಮದ ಹೆಸರು `ಅನ್ನದ ಅರಿವು~. ಬದುಕಿಗೆ ಆಧಾರವಾಗಿರುವ ಬೇಸಾಯದ ಶಿಕ್ಷಣವನ್ನು ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ನೀಡುವುದು  ಅದರ ಉದ್ದೇಶ.

ಹಳ್ಳಿಗಳಿಂದ ಉದ್ಯೋಗ ಹುಡುಕಿಕೊಂಡು ಪಟ್ಟಣ ಪ್ರದೇಶಗಳತ್ತ ಬರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಹಳ್ಳಿಯಲ್ಲಿ ಬೇಸಾಯ  ಮಾಡುವವರ  ಸಂಖ್ಯೆ ಕಡಿಮೆಯಾಗಿದೆ.   ವಿದ್ಯಾವಂತರು ಈಗ ಹಳ್ಳಿಗಳಿಗೆ ಹೋಗಿ ಬೇಸಾಯ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ `ಅನ್ನದ ಅರಿವು~ ನಂತಹ ಕಾರ್ಯಕ್ರಮ ಪ್ರಸ್ತುತ ಎಂದರು ಮಾಜಿ ಶಾಸಕ ಅರಗ ಜ್ಞಾನೇಂದ್ರ.

 ಪಟ್ಟಣದ ಮಕ್ಕಳಿಗೆ  ಬೇಸಾಯದ  ಬಗ್ಗೆ ತಿಳುವಳಿಕೆ ಮೂಡಿಸಲು ಇಂತಹ ಅಭಿಯಾನಗಳು ನೆರವಾಗುತ್ತವೆ. ಶಾಲಾ ಮಕ್ಕಳನ್ನು ಗದ್ದೆಗೆ ಕರೆದುಕೊಂಡು ಹೋಗಿ ಅವರಿಂದ ಭತ್ತದ ನಾಟಿ (ನೆಟ್ಟಿ) ಮಾಡಿಸುವ ಪ್ರಯೋಗ ನಡೆಯಿತು. ಅನೇಕ ಶಾಲಾ ಮಕ್ಕಳು ಭತ್ತದ ಸಸಿಗಳನ್ನು ಹಿಡಿದು ಗದ್ದೆಯಲ್ಲಿ ನಾಟಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಪ್ರಜ್ಞಾ ಭಾರತೀಯ ಪ್ರೌಢಶಾಲೆ ಹಾಗೂ ಸೇವಾ ಭಾರತಿ ಪ್ರಾಥಮಿಕ ಶಾಲೆಯ ಮತ್ತು ಕುರುವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 100ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಗದ್ದೆಗೆ ಭಾಗವಹಿಸಿದ್ದರು. ಅತ್ಯಂತ ಉತ್ಸಾಹದಿಂದ ಗದ್ದೆಗಳಲ್ಲಿ ಓಡಾಡಿ ಭತ್ತದ ಸಸಿಗಳನ್ನು ಕಿತ್ತು, ಇನ್ನೊಂದು ಗದ್ದೆಯಲ್ಲಿ ನಾಟಿ ಮಾಡಿದರು. ಅವರ ಅವರ ಮುಖದಲ್ಲಿ ಸಾರ್ಥಕ್ಯದ ಭಾವನೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಇಂತಹ ಕಾರ್ಯಕ್ರಮಗಳು ರಾಜ್ಯಾದ್ಯಂತ ನಡೆಯಬೇಕು. ಎಲ್ಲೆಲ್ಲೂ ಸಾವಯವ ಬೇಸಾಯದ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಇಂತಹ ಕಾರ್ಯಕ್ರಮಗಳಿಂದ ರೈತರ ಕಷ್ಟಗಳು ಮಕ್ಕಳಿಗೆ ಅರ್ಥವಾಗುತ್ತವೆ. ಅನ್ನದ ಅರಿವು ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.