ADVERTISEMENT

ಕೃಷಿ ಮಂಥನ

ಎಲ್‌.ನಾರಾಯಣ ರೆಡ್ಡಿ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

 ಆರ್.ಎಂ.ಅಶೋಕ, ರಾಮಪುರ, ಮೊಳಕಾಲ್ಮೂರು.
ತೆಂಗಿನಗಿಡ, ಕಾಯಿ ಚೆನ್ನಾಗಿವೆ. ಆದರೆ ದೊಡ್ಡದಾಗುತ್ತಾ ಇಲ್ಲ. ಉದುರುತ್ತಾ ಇವೆ. ಏನು ಪರಿಹಾರ?

ಕಾಯಿ ಬಿಡುವ ಪ್ರತಿ ತೆಂಗಿನ ಮರಕ್ಕೆ 45 ಲೀಟರು ನೀರು ದಿನವೊಂದಕ್ಕೆ ಬೇಕು ನೆನಪಿರಲಿ. ಜೊತೆಗೆ ತೆಂಗಿನ ಮರವೊಂದಕ್ಕೆ ವರ್ಷಕ್ಕೆ 100 ಕೆ.ಜಿ. ಹಸಿರೆಲೆ ಗೊಬ್ಬರ, 30 ಕೆ.ಜಿ. ತಿಪ್ಪೆಗೊಬ್ಬರ ಮತ್ತು 10 ಕೆ.ಜಿ. ಒಲೆ ಬೂದಿ ಒದಗಿಸಿ.

 ಚಿಕ್ಕಮರಿಯಪ್ಪ ಶಂಕರಯ್ಯ, ಬೆಂಗಳೂರು
ಕೆಂಪು ಮಣ್ಣಿನಲ್ಲಿ ಸಾವಯವ ಪದ್ಧತಿ ಮೂಲಕ ಉತ್ತಮ ಗುಲಾಬಿ ಹೂ ಬೆಳೆಯಬೇಕು. ಬೆಂಗಳೂರಿನ ಹವಾಗುಣ ಇದಕ್ಕೆ ಯೋಗ್ಯವೆ? ಗುಲಾಬಿ ಕೃಷಿಯ ಮಾಹಿತಿ ನೀಡಿ.

ನೀರು ಇಂಗುವ ಎಲ್ಲಾ ಮಣ್ಣುಗಳಲ್ಲೂ ಗುಲಾಬಿ ಹೂವು ಬೆಳೆಯಬಹುದು. ಕೆಂಪು ಮಣ್ಣು ಉತ್ತಮ. ಇಡೀ ಭಾರತದಲ್ಲಿ ಬೆಂಗಳೂರು ಮತ್ತು ಪುಣೆ ಪ್ರದೇಶ ಅತ್ಯುತ್ತಮ. ಗುಲಾಬಿ ತಳಿಗಳು ನೂರಾರು ಇದ್ದು, ಕೆಲವು ತಳಿಗಳನ್ನು ತೆರೆದ ಜಾಗದಲ್ಲೂ ಬೆಳೆಯಬಹುದು. ಇನ್ನು ಕೆಲ ತಳಿಗಳನ್ನು ಹಸಿರು ಮನೆ (ಗ್ಲಾಸ್ ಹೌಸ್ ಅಥವಾ ಪ್ಲಾಸ್ಟಿಕ್ ಹಾಳೆ ಹೊದಿಸಿದ ಗ್ರೀನ್ ಹೌಸ್)ನಲ್ಲಿ ಬೆಳೆಯ ಬೇಕಾಗುತ್ತದೆ.

ತೆರೆದ ಜಾಗದಲ್ಲಿ ಬೆಳೆಯಲು 1 ಎಕರೆಗೆ ಸುಮಾರು 75 ಸಾವಿರ ರೂಪಾಯಿ ಬೇಕು. ಹಸಿರು ಮನೆಯಲ್ಲಿ ಬೆಳೆಯಲು 1 ಕೋಟಿ ರೂಪಾಯಿ ಬೇಕಾಗಬಹುದು. ಹೆಚ್ಚಿನ ಮಾಹಿತಿ ತೋಟಗಾರಿಕೆ ಇಲಾಖೆ ಮತ್ತು ಮಾರುಕಟ್ಟೆ ವಿವರಗಳಿಗೆ ಬೆಂಗಳೂರಿನ ಹೆಬ್ಬಾಳದ ಹೂವು ಹರಾಜು ಕಟ್ಟೆಯಲ್ಲಿ ವಿಚಾರಿಸಿ.

 ಜಯಮ್ಮ, ಆರುಂಡಿ ಹೊನ್ನಾಳಿ, ದಾವಣಗೆರೆ
5-6 ವರ್ಷಗಳಿಂದ ಮೆಕ್ಕೆ ಜೋಳ ಬೆಳೆಯುತ್ತಾ ಇದ್ದೇವೆ. ಈ ಬಾರಿ ಕೊಳವೆ ಬಾವಿ ಕೊರೆಸಿದ್ದರಿಂದ ನೀರಿನ ಅನುಕೂಲ ಇದೆ. ಕಲ್ಲಂಗಡಿ ಬೆಳೆಯಬೇಕು. ಬೆಳೆಯಬಹುದಾ? ಸಾವಯವ ಪದ್ಧತಿಯಲ್ಲಿ ಹೇಗೆ ಬೆಳೆಯಬೇಕು?

ನೀರಿನ ಅನುಕೂಲವಿರುವುದರಿಂದ ಕಲ್ಲಂಗಡಿ ಬೆಳೆಯಬಹುದು. ನಿಮ್ಮ ತಾಲ್ಲೂಕಿನ ತೋಟಗಾರಿಕೆ ಅಧಿಕಾರಿಗಳಿಂದ ಸಲಹೆ ಮತ್ತು ಸರ್ಕಾರದಿಂದ ದೊರೆಯುವ ಸಹಾಯ ಧನ ಮೊದಲಾದ ವಿವರ ಪಡೆಯಿರಿ.

ADVERTISEMENT

 ಮನೋಜ ಎಸ್.ಎನ್. ಶಿವಮೊಗ್ಗ
ಟೊಮೆಟೊ ಸಸಿಯ ನಾಟಿಯನ್ನು ಯಾವಾಗ ಮಾಡಬಹುದು?

ಮಡಿಯಲ್ಲಿ ಬೆಳೆಸಿದ ಸಸಿಯಾದರೆ 30–-35 ದಿನದ್ದು ಹಾಗೂ ಪ್ಲಾಸ್ಟಿಕ್ ಟ್ರೇನಲ್ಲಿ ಬೆಳೆಸಿದ್ದರೆ 20 ದಿನದ ಸಸಿ ನಾಟಿಗೆ ಯೋಗ್ಯವಾದದ್ದು. ಇವುಗಳನ್ನು ಸಂಜೆ ನಾಲ್ಕು ಗಂಟೆ ನಂತರ ನೆಟ್ಟರೆ ಒಳಿತು. ಅನಿವಾರ್ಯ ಕಾರಣಗಳಿಂದ ಬೆಳಗಿನಿಂದ ಸಂಜೆಯವರೆಗೂ ನೆಡುವ ಪರಿಸ್ಥಿತಿ ಎದುರಾದಲ್ಲಿ, ಮಧ್ಯೆ ಪ್ರತಿ ಮೂರು ಗಂಟೆಗಳಿಗೊಮ್ಮೆ ಲಘುವಾಗಿ ನೀರನ್ನು ಸಿಂಪಡಿಸಿ ಬಾಡುವುದನ್ನು ತಡೆಯಬಹುದು. ಫೆಬ್ರುವರಿಯಿಂದ ಏಪ್ರಿಲ್‌ವರೆಗೆ ಸಸಿ ನೆಡುವುದು ಯೋಗ್ಯವಲ್ಲ.

ಶೀಲಾ ರೊಡ್ರಿಗಸ್, ಮಂಗಳೂರು
ಬೆಂಡೆ ಗಿಡಗಳಿಗೆ ಒಂದು ರೀತಿಯ ರೋಗ ತಗುಲಿದೆ. ಹೆಚ್ಚಾಗಿ ವೈರಸ್ ತಗುಲಿದೆ. ಇದನ್ನು ತಡೆಯುವುದು ಹೇಗೆ?

ಉ: ಬೆಂಡೆ ಬೀಜಗಳನ್ನು ನಾಟಿ ಮಾಡುವ ಮೊದಲು ನಾಲ್ಕು ಲೀಟರ್ ಗಂಜಲ, ನಾಲ್ಕು ಕೆ.ಜಿ ಹಸುವಿನ ಸಗಣಿ ಹಾಗೂ 10ಲೀಟರ್ ನೀರಿನಲ್ಲಿ ಕಲೆಸಿಟ್ಟುಕೊಳ್ಳಿ. ನಾಲ್ಕು ದಿನಗಳ ನಂತರ ಹೊರತೆಗೆದು ಇದಕ್ಕೆ ಸುಣ್ಣ ಬೆರೆಸಿರಿ. 6-8 ಗಂಟೆ ನೆನೆಸಿದ ಈ ಬೀಜಗಳನ್ನು ನೆರಳಿನಲ್ಲಿ ಆರಿಸಿ ನಾಟಿ ಮಾಡಿ. ಹೀಗೆ ಮಾಡಿದರೆ ಬಹುಮಟ್ಟಿನ ನಂಜು ಬಾಧೆ ಕಡಿಮೆಯಾಗುತ್ತದೆ. ರೋಗ ತಗುಲಿದ ಗಿಡಗಳನ್ನು ಕಿತ್ತು ನಾಶಪಡಿಸಿ. ಅತಿಯಾಗಿ ಹುಳಿಯಿರುವ ಒಂದು ಲೀಟರ್ ಮಜ್ಜಿಗೆಯನ್ನು 10 ಲೀಟರ್ ನೀರು ಬೆರೆಸಿ ಸಿಂಪಡಿಸಲೂಬಹುದು.

ಮನೋಹರಿ ಎಂ. ಶಿರಸಿ
ತೆಂಗಿನ ಗಿಡ ಉತ್ತಮವಾಗಿ ಫಲ ನೀಡಲು ಏನು ಮಾಡಬೇಕು?

ಉ: ಒಂದು ತೆಂಗಿನ ಮರಕ್ಕೆ ಫಲ ನೀಡುವ ಸಮಯದಲ್ಲಿ ಕನಿಷ್ಠ 45 ಲೀಟರ್ ನೀರು ದಿನಕ್ಕೆ ಬೇಕಾಗುತ್ತದೆ. ಮರ ಒಂದಕ್ಕೆ ವರ್ಷಕ್ಕೆ 20 ಕೆ.ಜಿ ಕೊಟ್ಟಿಗೆ ಗೊಬ್ಬರ ಅಥವಾ 200 ಕೆ.ಜಿ ಹಸಿರೆಲೆ ಗೊಬ್ಬರ ಒದಗಿಸಿ.

ಶಾಲಿನಿ ಪೈ, ಚಿಕ್ಕಮಗಳೂರು
ಕಬ್ಬಿಗೆ ಸುಳಿ ರೋಗ ಬಂದಿದೆ. ತಡೆಗಟ್ಟಲು ಪರಿಹಾರ ಏನು?


ಉ: ಸುಳಿ ಹುಳು ನಿಯಂತ್ರಣಕ್ಕೆ ಪರಾವಲಂಬಿ ಕೀಟಗಳು ಸಿಗುತ್ತವೆ. ಇವು ಕೃಷಿ ಇಲಾಖೆಯಲ್ಲಿ ಸಿಗುತ್ತವೆ. ಹತ್ತಿರ ಇರುವ ಇಲಾಖೆಯಲ್ಲಿ ಇದನ್ನು ಪಡೆದು ಕಬ್ಬಿನ ಗದ್ದೆಯಲ್ಲಿ ಬಿಡಿ. 0.5 ತಳಿಯ ಬೇವಿನ ಬೀಜದ ಕಷಾಯವನ್ನು ಸುಳಿಗೆ ಸೇರುವಂತೆ ಸಿಂಪಡಿಸಿ. ರಾಸಾಯನಿಕ ಪರಿಹಾರವೆಂದರೆ ಎರಡು ಕಾಳು ಪ್ಯೂರಾಡಾನ್ ಹಾಕಿ.

ಗಂಗಾಧರ ಹನಿವಾಳ, ಮೂಡುಬಿದಿರೆ
ಅಡಿಕೆ ತೋಟದಲ್ಲಿ ಮಿಶ್ರ ಬೆಳೆಯಾಗಿ ಯಾವೆಲ್ಲ ಬೆಳೆಗಳನ್ನು ಬೆಳೆಯಬಹುದು?

: ಅಡಿಕೆ ಮರಗಳಿಗೆ ವೀಳ್ಯೆದೆಲೆ ಅಥವಾ ಕಾಳು ಮೆಣಸು ಬಳ್ಳಿ ಹಬ್ಬಿಸಬಹುದು. ನಾಲ್ಕು ಅಡಿಕೆ ಮರಗಳ ಮಧ್ಯೆ ಕೋಕೋ ಬೆಳೆಸಬಹುದು.

ಕೃಷಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರಸಿದ್ಧ ಸಾವಯವ ಕೃಷಿಕ ಎಲ್‌. ನಾರಾಯಣ ರೆಡ್ಡಿ ಉತ್ತರಿಸುತ್ತಾರೆ. ನಿಮ್ಮ ಪ್ರಶ್ನೆಗಳನ್ನು ‘ಸಂಪಾದಕರು, ಕೃಷಿ ಮಂಥನ ವಿಭಾಗ, ಕರ್ನಾಟಕ ದರ್ಶನ, ಪ್ರಜಾವಾಣಿ, ನಂ 75, ಎಂ.ಜಿ.ರಸ್ತೆ, ಬೆಂಗಳೂರು–1 ಈ ವಿಳಾಸಕ್ಕೆ ಕಳುಹಿಸಬಹುದು. ಇ–ಮೇಲ್‌ ಮೂಲಕ ನುಡಿ ಇಲ್ಲವೇ ಬರಹ ಅಕ್ಷರಗಳಲ್ಲಿ darshana@prajavani.co.in ಗೆ ಕಳುಹಿಸಬಹುದು. ಮಾಹಿತಿಗೆ: ದೂ: 080 25880616.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.