ADVERTISEMENT

ನಾಟಿ ಉಳುಮೆಯ ಸರಿಯಾದ ವಿಧಾನ

ಡಾ.ಆರ್.ಕೃಷ್ಣ ಮೂರ್ತಿ
Published 9 ಜುಲೈ 2012, 19:30 IST
Last Updated 9 ಜುಲೈ 2012, 19:30 IST

ರಾಜ್ಯದಲ್ಲಿ ಮಳೆ ಅಲ್ಲಲ್ಲಿ ಇಣುಕುತ್ತಿದೆ. ನೀರಾವರಿ ಪ್ರದೇಶ ಹಾಗೂ ಮಲೆನಾಡಿನಲ್ಲಿ ಭತ್ತವನ್ನು ಬಿತ್ತುವುದಕ್ಕಿಂತ ನಾಟಿ ಮಾಡುವುದು ಹೆಚ್ಚು ಪ್ರಚಲಿತದಲ್ಲಿದೆ.
 
ಆದರೆ ರೈತರು ಅಧಿಕ ಲಾಭ, ಇಳುವರಿ ಆಸೆಯಿಂದ ಹೆಚ್ಚು ನೀರು ನಿಲ್ಲಿಸಿ ಗದ್ದೆಯಲ್ಲಿ ಕೆಸರು ಮಾಡುವುದರಿಂದ ಮಣ್ಣಿನ ಸವಕಳಿ ಉಂಟಾಗುತ್ತದೆ ಹಾಗೂ ಪೋಷಕಾಂಶಗಳು ಪೋಲಾಗುತ್ತವೆ. ಅಲ್ಲದೆ 15-20 ಸೆಂ.ಮೀ ಆಳದವರೆಗೆ ಮಾತ್ರ ಉಳುಮೆ ಮಾಡುವುದು ಒಳ್ಳೆಯದು.  ಇನ್ನಷ್ಟು ಆಳ ಉಳುಮೆಯಿಂದ ಅಧಿಕ ಹಣ ಖರ್ಚಾಗುತ್ತದೆ, ಇಳುವರಿಯೂ ಕಡಿಮೆಯಾಗುತ್ತದೆ.

ಮಲೆನಾಡ ಪ್ರದೇಶಗಳಲ್ಲಿ ಇಳಿಜಾರಿಗೆ ಅನುಸಾರವಾಗಿ ತಾಕುಗಳನ್ನು ನಿರ್ಮಿಸಿ ಬದುಗಳಿಗೆ ಕೆಸರಿನ ಲೇಪನ ಮಾಡಬೇಕು. ಇಲ್ಲದಿದ್ದಲ್ಲಿ ಪ್ರತಿ ಎಕರೆಗೆ 15-20 ಟನ್ ಮಣ್ಣು ಸವಕಳಿಯಾಗುವ ಸಾಧ್ಯತೆಗಳಿರುತ್ತವೆ. ಹೀಗೆಯೆ ಮುಂದುವರಿದರೆ ಫಲವತ್ತಾದ ಮೇಲ್ಮಣ್ಣು ಕಳೆದುಕೊಂಡು ಇಳುವರಿ ಕಡಿಮೆಯಾಗುತ್ತದೆ.
 
ಭತ್ತವನ್ನು ನಾಟಿ ಮಾಡುವಾಗ ಗದ್ದೆಯಲ್ಲಿ ಹೆಚ್ಚು ಕಳೆಗಳಿದ್ದರೆ ಹಾಗು ಭೂಮಿ ಗಟ್ಟಿಯಿದ್ದರೆ ಎರಡನೆ ಉಳುಮೆ ಅಗತ್ಯ. ಇದನ್ನು ನಾಟಿಗೆ ಒಂದು ವಾರದ ಮುಂಚೆ ಅತೀ ಹೆಚ್ಚು ನೀರು ನಿಲ್ಲಿಸದೇ ಮಾಡಬೇಕು.

ಇದಾದ ನಂತರ ನಾಟಿಗೆ 1-2 ದಿನಗಳ ಮುಂಚೆ ಸುಮಾರು 5 ಸೆಂ.ಮೀ ನೀರನ್ನು ನಿಲ್ಲಿಸಿ ಹದವಾಗಿ ನೇಗಿಲಿನಿಂದ ಕೆಸರು ಉಳುಮೆ ಕೈಗೊಳ್ಳಬೇಕು. ನಾಟಿಗೆ ಮೊದಲು 2-3 ಸೆಂ.ಮೀ ನೀರು ನಿಲ್ಲಿಸಿ ಹಲಗೆಯಿಂದ ಭೂಮಿಯನ್ನು ಸಮತಟ್ಟುಗೊಳಿಸಿ ಕಳೆಗಳನ್ನು ನಿಯಂತ್ರಿಸಬಹುದು.

ಕೆಲವರು ಹಲಗೆಯಿಂದ ಗದ್ದೆಯನ್ನು ಸಮಗೊಳಿಸುವುದಕ್ಕೆ ಹೆಚ್ಚಿನ ನೀರು ಬಳಸುತ್ತಾರೆ. ಇದರಿಂದ ನಾಟಿಯ ಸಮಯದಲ್ಲಿ ತೊಡಕು ಉಂಟಾಗುತ್ತದೆ. ಆ ಬಳಿಕ ಕೆಸರು ನೀರನ್ನು ಹೊರಹಾಕುತ್ತಾರೆ.

ಆಗ ಪೋಷಕಾಂಶ ನಷ್ಟದ ಜತೆಗೆ ಫಲವತ್ತಾದ ಮಣ್ಣು ಸಹ ಗದ್ದೆಯಿಂದ ಹೊರ ಹಾಕಿದಂತಾಗಿ ಇಳುವರಿ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.ಆದ್ದರಿಂದ ಸರಿಯಾದ ಕ್ರಮಗಳನ್ನು ಅನುಸರಿಸಿ ಕೇವಲ 15-20 ಸೆಂ.ಮೀ ನೀರು ನಿಲ್ಲಿಸಿ ಕೆಸರು ಉಳುಮೆ ಮಾಡಬೇಕು. ಮಣ್ಣಿನ ಪೋಷಕಾಂಶ ಕಾಪಾಡಿ ಅಧಿಕ ಇಳುವರಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.